ಹುಬ್ಬಳ್ಳಿ: ನಿಮಗೆ ಸಾಧ್ಯವಾಗದಿದ್ರೆ ಹೇಳಿ; ನಾವೇ ಚಿರತೆ ಹಿಡಿತೀವಿ, ಜನಾಕ್ರೋಶ
* ಸತ್ತರೆ ಚಿರತೆಗೆ ಆಹಾರವಾಗುತ್ತೇವೆ
* ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶ
* ಗಸ್ತು ಮಾಡದ ಅರಣ್ಯ ಇಲಾಖೆ ಸಿಬ್ಬಂದಿ
ಹುಬ್ಬಳ್ಳಿ(ಸೆ.22): 'ನಿಮಗೆ ಚಿರತೆ ಹಿಡಿಯಲು ಸಾಧ್ಯವಾಗದಿದ್ದಲ್ಲಿ ಹೇಳಿ, ನಾವೇ ಗುಂಪುಗೂಡಿಕೊಂಡು ಹಿಡಿದು ತರುತ್ತೇವೆ. ಸಿಕ್ಕರೆ ಹಿಡಿದು ತರುತ್ತೇವೆ. ಸತ್ತರೆ ಅದಕ್ಕೆ ಆಹಾರವಾಗುತ್ತೇವೆ’! ಇದು ನೃಪತುಂಗ ಬೆಟ್ಟದ ತಪ್ಪಲಿನಲ್ಲಿ ಪ್ರತ್ಯಕ್ಷವಾಗಿರುವ ಚಿರತೆ ಸೆರೆ ಹಿಡಿಯುವ ಕುರಿತು ಜಿಲ್ಲಾಡಳಿತ ಆಯೋಜಿಸಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ವ್ಯಕ್ತವಾದ ಸಾರ್ವಜನಿಕರ ಆಕ್ರೋಶ.
ರಾಜನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಕುರಿತು ಅರಣ್ಯ, ಪೊಲೀಸ್, ಮಹಾನಗರ ಪಾಲಿಕೆ, ಜನಪ್ರತಿನಿಧಿಗಳ ಹಾಗೂ ಸ್ಥಳೀಯ ನಿವಾಸಿಗಳ ಸಭೆ ನಡೆಸಲಾಯಿತು. ಜಿಲ್ಲಾಧಿಕಾರಿ ನಿತೇಶ ಪಾಟೀಲ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಚಿರತೆ ಕಂಡು ಬೆಚ್ಚಿಬಿದ್ದ ಜನತೆ
ಸಭೆ ಆರಂಭವಾಗುತ್ತಿದ್ದಂತೆ ಧಾರವಾಡ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ಯಶಪಾಲ ಕ್ಷೀರಸಾಗರ, ತಮ್ಮ ಇಲಾಖೆ ಯಾವ ಬಗೆಯ ಕಾರ್ಯಾಚರಣೆ ನಡೆಸುತ್ತಿದೆ ಎಂಬ ಬಗ್ಗೆ ವಿವರಿಸಿದರು. ಈ ವೇಳೆ ಸಾರ್ವಜನಿಕರು, ಅರಣ್ಯ ಇಲಾಖೆ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಲಾಖೆ ಸಿಬ್ಬಂದಿ ಸರಿಯಾಗಿ ಕೆಲಸವನ್ನೇ ಮಾಡುತ್ತಿಲ್ಲ. ನಮಗೆ ಪದೇ ಪದೇ ಕಾಣುತ್ತಿರುವ ಚಿರತೆ ನಿಮಗೇಕೆ ಕಾಣುತ್ತಿಲ್ಲ? ಚಿರತೆ ಕಂಡಿದೆ ಎಂದು ಹೇಳಿದ ಮೊದಲ ದಿನದಿಂದಲೇ ಬರೀ ಕಾಟಾಚಾರಕ್ಕೆಂಬಂತೆ ಕೆಲಸ ನಿರ್ವಹಿಸುತ್ತಿದ್ದೀರಿ. ನಿನ್ನೆ ರಾತ್ರಿ ಶಿರಡಿನಗರದಲ್ಲಿ ಕಂಡಿದೆ. ಹಂದಿಯನ್ನೇ ಹೊತ್ತೊಯ್ದಿದೆ. ಕಣ್ಣಾರೆ ಕಂಡಿದ್ದೇವೆ. ಜೀವನ ನಡೆಸಲು ಭಯವಾಗಿದೆ. ಅದನ್ನು ಈವರೆಗೂ ಸೆರೆ ಹಿಡಿಯಲು ಏಕೆ ಸಾಧ್ಯವಾಗಿಲ್ಲ ಎಂದು ಕಿಡಿಕಾರಿದರು. ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ನಿವಾಸಿಗಳು, ನೀವು ಹಿಡಿಯಿರಿ. ಇಲ್ಲವೇ ನಾವು ಬೆಟ್ಟದೊಳಗೆ ನುಗ್ಗುತ್ತೇವೆ ನೋಡಿ ಎನ್ನುವ ಎಚ್ಚರಿಕೆ ನೀಡಿದರು.
ಈ ವೇಳೆ ಪಾಲಿಕೆ ನೂತನ ಸದಸ್ಯ ವೀರಣ್ಣ ಸವಡಿ ಮಾತನಾಡಿ, ಮನುಷ್ಯರಾರಯರಾದ್ರೂ ಚಿರತೆ ದಾಳಿಗೆ ಬಲಿಯಾದಾಗಲೇ ಅದನ್ನು ಸೆರೆ ಹಿಡಿಯುತ್ತೀರಾ? ನಿಮ್ಮಲ್ಲಿ ನುರಿತ ಸಿಬ್ಬಂದಿ ಇಲ್ಲವೇ? ಇಲ್ಲದಿದ್ದಲ್ಲಿ ಮೈಸೂರು, ಬಂಡಿಪುರ, ನಾಗರಹೊಳೆ ಸೇರಿದಂತೆ ಮತ್ತಿತರ ಪ್ರದೇಶಗಳಿಂದ ಕರೆಯಿಸಿ. ತಕ್ಷಣವೇ ಕಾರ್ಯಾಚರಣೆ ತೀವ್ರಗೊಳಿಸಿ ಸೆರೆ ಹಿಡಿಯಿರಿ ಎಂದು ಆಗ್ರಹಿಸಿದರು
ಬಿಜೆಪಿ ಮುಖಂಡ ಸಿದ್ದು ಮೊಗಲಿಶೆಟ್ಟರ, ಅರಣ್ಯ ಇಲಾಖೆ ಚಿರತೆ ಪ್ರತ್ಯಕ್ಷವಾಗಿದ್ದನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಹೀಗಾಗಿ ಈವರೆಗೆ ಸೆರೆ ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಶಿರಡಿನಗರ ನಿವಾಸಿ ಸುನಿಲ ಮಾತನಾಡಿ, ನಮ್ಮ ನಗರದಲ್ಲಿ 300ರಿಂದ 400 ಹಂದಿಗಳಿವೆ. ನೂರಾರು ಬೀದಿ ನಾಯಿಗಳಿವೆ. ಹೀಗಾಗಿ ಚಿರತೆ ಆಹಾರಕ್ಕೆ ಸಮಸ್ಯೆಯಾಗಿಲ್ಲ. ಆದರೆ, ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ಮಾಡುತ್ತಿಲ್ಲ. ಯಾವುದೇ ಬಗೆಯ ಭದ್ರತೆಯನ್ನೂ ನೀಡುತ್ತಿಲ್ಲ. ನಿಮಗೆ ಸಾಧ್ಯವಾಗದಿದ್ದಲ್ಲಿ ಹೇಳಿ ನಾವು ಬೆಟ್ಟದೊಳಗೆ ನುಗ್ಗುತ್ತೇವೆ. ಅದನ್ನು ಸೆರೆ ಹಿಡಿದು ತರುತ್ತೇವೆ ಎಂದರು.
ಹುಬ್ಬಳ್ಳಿ: ಚಿರತೆ ಪತ್ತೆಗೆ ಅರಣ್ಯಾಧಿಕಾರಿಗಳ ಹರಸಾಹಸ
ಕೊನೆಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಅರಣ್ಯಾಧಿಕಾರಿ ಮಂಜುನಾಥ ಚವ್ಹಾಣ, ಆ ರೀತಿ ಮಾಡಲು ಬರುವುದಿಲ್ಲ. ಆತುರ ಬೇಡ, ನಾವು ಕಾರ್ಯಾಚರಣೆಯನ್ನು ಕ್ಷಿಪ್ರಗೊಳಿಸುತ್ತೇವೆ. ಅಗತ್ಯ ಬಿದ್ದರೆ ಇನ್ನಷ್ಟುಸಿಬ್ಬಂದಿಯನ್ನು ತರಿಸುತ್ತೇವೆ. ಚಿರತೆಯನ್ನು ಹಿಡಿದೇ ತೀರುತ್ತೇವೆ. ಸ್ವಲ್ಪ ಸಹಕಾರ ನೀಡಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಕೃಷ್ಣ ರಾಜೇಶ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಮಾಜಿ ಮೇಯರ್ ವಿಜಯಾನಂದ ಹೊಸಕೋಟಿ, ಸೇರಿದಂತೆ ಹಲವರಿದ್ದರು.
ಎಲ್ಲರೂ ಒಂದು ದಿನ ಸಾಯಲೇಬೇಕು. ಅಂಥ ಕೊರೋನಾದಾಗ ಪಾರಾಗಿದ್ದೇವೆ. ಇದೀಗ ಚಿರತೆ ಸಮಸ್ಯೆ ಎದುರಾಗಿದೆ. ಅರಣ್ಯ ಇಲಾಖೆ ಒಂದು ವಾರದಿಂದ ಬರೀ ಕಥೆ ಹೇಳುತ್ತಿದೆ. ನಾವೇ ಎಲ್ಲರೂ ಗಂಡಸರು, ಹೆಂಗಸರು ನುಗ್ಗಿ ಚಿರತೆ ಹಿಡಿದು ನಮ್ಮ ಮಕ್ಕಳು, ಮರಿಗಳನ್ನು ಕಾಪಾಡಿಕೊಳ್ಳುತ್ತೇವೆ. ಸತ್ತರೆ ಅದಕ್ಕೆ ಆಹಾರವಾಗುತ್ತೇವೆ. ಎಷ್ಟು ದಿನಾಂತ ಈ ರೀತಿ ಭಯದಲ್ಲಿ ಜೀವನ ಕಳೆಯೋದು ಎಂದು ಶಿರಡಿನಗರ ನಿವಾಸಿ ಸೋಮವ್ವ ನಾಗರಳ್ಳಿ ತಿಳಿಸಿದ್ದಾರೆ.