ಹುಬ್ಬಳ್ಳಿಯಲ್ಲಿ ಚಿರತೆ ಕಂಡು ಬೆಚ್ಚಿಬಿದ್ದ ಜನತೆ

*  ನೃಪತುಂಗ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ-ವದಂತಿ
*  ಸಂಜೆವರೆಗೂ ಹುಡುಕಾಟ ನಡೆಸಿದರೂ ಹೆಜ್ಜೆ ಗುರುತು ಸಿಗಲಿಲ್ಲ
*  ಕಾಡಬೆಕ್ಕನ್ನು ನೋಡಿ ಚಿರತೆ ಎಂದುಕೊಂಡಿರುವ ಸಾಧ್ಯತೆಯೂ ಇದೆ 
 

People of startled for Leopard Visible in Hubballi grg

ಹುಬ್ಬಳ್ಳಿ(ಸೆ.17): ಇಲ್ಲಿನ ನೃಪತುಂಗ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಸಂಜೆವರೆಗೂ ತಪಾಸಣೆ ನಡೆಸಿದರೂ ಸಹ ಹೆಜ್ಜೆ ಗುರುತು ಮಾತ್ರ ಕಂಡು ಬರಲಿಲ್ಲ. 

ಬುಧವಾರ ರಾತ್ರಿ ನೃಪತುಂಗ ಬೆಟ್ಟದ ಬಳಿ ಚಿರತೆಯೊಂದು ಪ್ರದೀಪ ಶೆಟ್ಟಿ ಎನ್ನುವವರಿಗೆ ಕಂಡಿದೆ. ಕೂಡಲೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ರಾತ್ರಿಯಾದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸದ ಅರಣ್ಯ ಇಲಾಖೆ, ಬೆಳಗ್ಗೆ 6 ಗಂಟೆಯಿಂದಲೇ ನೃಪತುಂಗ ಬೆಟ್ಟದ ಬಳಿ ಚಿರತೆ ಓಡಾಟ ಹೆಜ್ಜೆ ಗುರುತು ಪತ್ತೆಗೆ ಹುಡುಕಾಟ ನಡೆಸಿತು.

ಬಳಿಕ 11ರ ಸುಮಾರಿಗೆ ಚಿರತೆ ನೋಡಿದ್ದೇನೆ ಎಂದು ಕರೆ ಮಾಡಿ ತಿಳಿಸಿದ್ದ ಪ್ರದೀಪ ಶೆಟ್ಟಿಅವರನ್ನು ಕರೆತಂದು ಪರಿಶೀಲನೆ ನಡೆಸಲಾಯಿತು. ಸಂಜೆವರೆಗೂ ನೃಪತುಂಗ ಬೆಟ್ಟ, ಶಿರಡಿ ನಗರ, ರಾಜನಗರ, ಶಕ್ತಿ ಕಾಲನಿ ಸುತ್ತಮುತ್ತಲೆಡೆ ಗಿಡಮರಗಳು ಜಾಸ್ತಿ ಇರುವ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದರು. ಆದರೂ ಹೆಜ್ಜೆ ಗುರುತು ದೊರೆಯಲಿಲ್ಲ.

ಬಳಿಕ ಡ್ರೋಣ ಕ್ಯಾಮೆರಾ ಬಳಸಿ ಸುಮಾರು ಏಳೆಂಟು ಕಿಮೀ ವ್ಯಾಪ್ತಿಯಲ್ಲಿ ತಪಾಸಣೆ ನಡೆಸಲಾಯಿತು. ಸಂಜೆವರೆಗೂ ಪ್ರಯತ್ನಿಸಿದರೂ ಚಿರತೆ ಆಗಮನದ ಸುಳಿವು ಮಾತ್ರ ದೊರೆಯಲಿಲ್ಲ. ಕೊನೆಗೆ ಸಂಜೆ 6ಕ್ಕೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಶುಕ್ರವಾರ ಮತ್ತೆ ಕಾರ್ಯಾಚರಣೆ ಮುಂದುವರಿಸಲು ನಿರ್ಧರಿಸಿದರು.

ದಾವಣಗೆರೆ: ಹೊನ್ನಾಳಿಯಲ್ಲಿ ಚಿರತೆ ಪ್ರತ್ಯಕ್ಷ, ಆತಂಕದಲ್ಲಿ ಜನತೆ

ವಾಯುವಿಹಾರಕ್ಕೂ ಬ್ರೇಕ್‌:

ಚಿರತೆ ಕಂಡು ಬಂದಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಗುರುವಾರ ವಾಯುವಿಹಾರಕ್ಕೆ ಅರಣ್ಯ ಇಲಾಖೆ ಬ್ರೇಕ್‌ ಹಾಕಿತ್ತು. ಬೆಳಗ್ಗೆ 6ರಿಂದಲೇ ನೃಪತುಂಗ ಬೆಟ್ಟದ ಬಳಿ ನಿಂತು ವಾಯುವಿಹಾರಕ್ಕೆ ಆಗಮಿಸುತ್ತಿದ್ದ ಜನತೆಯನ್ನು ಮರಳಿ ಕಳುಹಿಸುತ್ತಿತ್ತು. ಹೀಗಾಗಿ 500ಕ್ಕೂ ಹೆಚ್ಚು ಜನ ವಾಯುವಿಹಾರಕ್ಕೆ ಬಂದವರು ಮರಳಿದರು.

ಇಂದು ಕಾರ್ಯಾಚರಣೆ:

ವಲಯ ಅರಣ್ಯಾಧಿಕಾರಿ ಶ್ರೀಧರ ತೆಗ್ಗಿನಮನಿ ನೇತೃತ್ವದಲ್ಲಿ ನೃಪತುಂಗ ಬೆಟ್ಟಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ನಡೆಸಲಾಯಿತು. ಗುರುವಾರ ಹೆಜ್ಜೆ ಗುರುತು ಕಂಡು ಬಂದಿಲ್ಲ. ಶುಕ್ರವಾರ ಮತ್ತೆ ಕಾರ್ಯಾಚರಣೆ ಮುಂದುವರಿಸಲಾಗುವುದು. ಬಳಿಕವಷ್ಟೇ ಎಂದು ಚಿರತೆ ಬಂದಿರುವ ಕುರಿತು ಖಚಿತವಾಗಲಿದೆ ಎಂದರು.

ಕಳೆದ ಹತ್ತು ದಿನಗಳ ಹಿಂದೆ ಅಂಚಟಗೇರಿ ಹಾಗೂ ಬುಡನಾಳ ಮಧ್ಯೆ ಚಿರತೆ ಕಂಡು ಬಂದಿತ್ತು. ಆಗ ಅಲ್ಲಿ ಕ್ಯಾಮೆರಾ ಅಳವಡಿಸಿ, ಬೋನ್‌ ಕೂಡ ಇಡಲಾಗಿತ್ತು. ಆದರೆ ಚಿರತೆ ಆ ಬೋನ್‌ನಲ್ಲಿ ಸಿಲುಕಿರಲಿಲ್ಲ. ಅಲ್ಲಿನ ಚಿರತೆ ಇಲ್ಲಿಗೆ ಬಂದಿದೆ ಎಂದು ಹೇಳುವುದು ಕಷ್ಟ. ಏಕೆಂದರೆ ಅಂಚಟಗೇರಿ ಆದ ಬಳಿಕ ಸಂಪೂರ್ಣ ಹೈವೆ ಬರುತ್ತದೆ. ಜನನಿಬಿಡ ಪ್ರದೇಶಗಳೇ ಇವೆ. ಅವುಗಳನ್ನೆಲ್ಲ ದಾಟಿಕೊಂಡು ಬರುವುದು ಅನುಮಾನ. ಆದರೂ ಪೂರ್ಣ ಪ್ರಮಾಣದಲ್ಲಿ ಪರಿಶೀಲನೆ ನಡೆಸುತ್ತೇವೆ. ನಾಳೆ ಕೂಡ ಕಾರ್ಯಾಚರಣೆ ಮುಂದುವರಿಸುತ್ತೇವೆ ಎಂದು ನುಡಿದರು.

ಕಾಡು ಬೆಕ್ಕಿರಬಹುದು:

ಚಿರತೆ ಜಾತಿಗೆ ಸೇರಿರುವ ಕಾಡು ಬೆಕ್ಕು ಕೂಡ ಅಡ್ಡಾಡಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಅದು ಚಿರತೆಯಂತೆ ಕಂಡು ಬರುತ್ತದೆ. ಹೀಗಾಗಿ ಕಾಡಬೆಕ್ಕನ್ನು ನೋಡಿ ಚಿರತೆ ಎಂದುಕೊಂಡಿರುವ ಸಾಧ್ಯತೆ ಇದೆ ಎಂಬ ಸಂಶಯ ಅರಣ್ಯ ಇಲಾಖೆಯದ್ದು. ಒಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಚಿರತೆ ಬಂದಿರುವ ಸುದ್ದಿ ಮಾತ್ರ ಕಾಡ್ಗಿಚ್ಚಿನಂತೆ ಹಬ್ಬಿ ನೃಪತುಂಗ ಬೆಟ್ಟದತ್ತ ಹೆಜ್ಜೆ ಹಾಕುವವರ ಸಂಖ್ಯೆ ಕೂಡ ಜಾಸ್ತಿಯಾಗಿದ್ದು ಕಂಡು ಬಂತು.
 

Latest Videos
Follow Us:
Download App:
  • android
  • ios