ಹುಬ್ಬಳ್ಳಿ: ಚಿರತೆ ಪತ್ತೆಗೆ ಅರಣ್ಯಾಧಿಕಾರಿಗಳ ಹರಸಾಹಸ

*   ಜನತೆಯ ಸಹಕಾರ ಮುಖ್ಯ: ಡಿಎಫ್‌ಒ
*   ನಿನ್ನೆಯೂ ತಡರಾತ್ರಿವರೆಗೆ ಮುಂದುವರಿದ ಕಾರ್ಯಾಚರಣೆ
*   ಕಾರ್ಯಾಚರಣೆಗೆ ತಜ್ಞರ ನೆರವು 
 

Operation Cheetah Still Continue in Hubballi grg

ಹುಬ್ಬಳ್ಳಿ(ಸೆ.20):  ನೃಪತುಂಗ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಚಿರತೆಯ ಪತ್ತೆಗೆ ಹರಸಾಹಸ ಮುಂದುವರಿದಿದೆ. ತಜ್ಞರ ನೆರವು ಪಡೆದಿರುವ ಅರಣ್ಯ ಇಲಾಖೆ ‘ಶಾಂತ ವಾತಾವರಣ’ ರೂಪಿಸಿ ವನ್ಯಜೀವಿಯ ಸೆರೆ-ರಕ್ಷಣೆ ಕಾರ್ಯಾಚರಣೆ ನಡೆಸಲು ಹರಸಾಹಸ ಪಡುತ್ತಿದೆ.

ಭಾನುವಾರವೂ ತಡರಾತ್ರಿ ವರೆಗೆ ಕಾರ್ಯಾಚರಣೆ ಮುಂದುವರಿದಿತ್ತು. ರಾತ್ರಿ ವೇಳೆ ರಾಜನಗರ, ಶಕ್ತಿ ಕಾಲನಿ, ಶಿರಡಿ ನಗರ, ಉಣಕಲ್‌ ಟಿಂಬರ್‌ ಯಾರ್ಡ್‌ ಸೇರಿ ಸುತ್ತಲಿನ ಜನತೆ ರಸ್ತೆಗಿಳಿಯದಂತೆ ಪೊಲೀಸ್‌ ನೆರವಲ್ಲಿ ಕಠಿಣ ಕ್ರಮ ಜರುಗಿಸಲಾಗಿತ್ತು. ಶಾಂತ ವಾತಾವರಣ ನಿರ್ಮಾಣವಾಗುವಂತೆ ಮಾಡಿ ಚಿರತೆ ಗೊಂದಲಕ್ಕೆ ಒಳಗಾಗದಂತೆ ನೋಡಿಕೊಂಡು ಬಲೆಗೆ ಬೀಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಬೆಳಗ್ಗೆ ಕೇಂದ್ರೀಯ ವಿದ್ಯಾಲಯ, ನೃಪತುಂಗ ಬೆಟ್ಟ, ಚಿಕ್ಕು ತೋಟ ಹಾಗೂ ಇತರೆಡೆ ಅಧಿಕಾರಿಗಳು ಸಿಬ್ಬಂದಿ ಜತೆಗೂಡಿ ಪತ್ತೆ ಕಾರ್ಯ ನಡೆಸಿದರು. ಡಿಸಿಪಿ ಆರ್‌.ಬಿ. ಬಸರಗಿ ಆಗಮಿಸಿ ಪೊಲೀಸ್‌ ಇಲಾಖೆಯಿಂದ ಜಂಟಿ ಕಾರ್ಯಾಚರಣೆಗೆ ಸಹಕಾರ ನೀಡುವುದಾಗಿ ತಿಳಿಸಿದರು. ಜತೆಗೆ ಆದಷ್ಟುಬೇಗ ಚಿರತೆ ಪತ್ತೆ ಮಾಡಿ ಸ್ಥಳೀಯರ ಆತಂಕ ನಿವಾರಿಸುವುದಾಗಿ ತಿಳಿಸಿದರು.

ಉಪಟಳ ಕೊಡುತ್ತಿದ್ದ ಚಿರತೆಯನ್ನು ಉಪಾಯದಿಂದ ಸೆರೆಹಿಡಿದ ಗ್ರಾಮಸ್ಥರು

ವನ್ಯ ಪ್ರೇಮಿಗಳ ಸಂತಸ!

ಚಿರತೆಯಿಂದ ದಾಳಿ ಆಗಬಹುದು ಎಂಬ ಅಂಶವನ್ನು ಹೊರಗಿಟ್ಟು ನೋಡಿದರೆ ಒಂದರ್ಥದಲ್ಲಿ ಇಲ್ಲಿಗೆ ಚಿರತೆ ಆಗಮಿಸಿದೆ ಎನ್ನುವುದು ಸಂತಸದ ವಿಚಾರ. ಆಹಾರ ಹುಡುಕಿಕೊಂಡು ಚಿರತೆ ಬರಬೇಕಾದರೆ ಗ್ರೀನ್‌ ಕಾರಿಡಾರ್‌ ಎನ್ನುವುದು ಬೇಕಾಗುತ್ತದೆ. ಚಿರತೆ ಇಲ್ಲಿಗೆ ಬಂದಿದೆ ಎಂದರೆ ಅದಕ್ಕೆ ಪೂರಕ ಪರಿಸರವಿದೆ ಎಂದರ್ಥ, ಹೀಗಾಗಿ ಇದು ಖುಷಿ ವಿಚಾರ. ಅರಣ್ಯವನ್ನು ನಾವು ಅತಿಕ್ರಮಿಸಿದ ಕಾರಣಕ್ಕೆ ವನ್ಯಜೀವಿ ಇಲ್ಲಿಗೆ ಬಂದಿದೆ. ಅದನ್ನು ಸುರಕ್ಷಿತವಾಗಿ ಆವಾಸ ಸ್ಥಾನಕ್ಕೆ ಸೇರಿಸುವ ಕೆಲಸ ಆಗಬೇಕು. ಜತೆಗೆ ನೃಪತುಂಗ ಬೆಟ್ಟದಲ್ಲಿ ಈಚೆಗೆ ಮುಳ್ಳುಹಂದಿ ಇರುವ ಕುರುಹು ಕೂಡ ಸಿಕ್ಕಿದೆ. ಅದನ್ನು ಬೇಟೆಯಾಡಲು ಹೋದ ನಾಯಿಗೆ ಹಂದಿಯ ಮುಳ್ಳು ಹೊಡೆದಿದೆ. ಒಟ್ಟಾರೆ ಈ ಪ್ರದೇಶ ಹಸಿರುಮಯು ಆಗುತ್ತಿರುವುದು ಒಂದಿಷ್ಟುನೆಮ್ಮದಿ ತಂದಿದೆ ಎನ್ನುತ್ತಾರೆ ಪರಿಸರ ಪ್ರೇಮಿ, ಗ್ರೀನ್‌ ಕಮಾಂಡೊ ಎನ್‌ಜಿಒದ ಮುರಳಿ.

ಹೇಗೆ ಬಂದಿರಬಹುದು?:

ಬಹುತೇಕ ಈ ಚಿರತೆ ಧಾರವಾಡ ಮಾರ್ಗವಾಗಿ ಬಂದಿರಬಹುದು. ರೈಲ್ವೆ ಹಳಿಗೂಂಟ ಇರುವ ಜಮೀನುಗಳನ್ನು ದಾಟಿ ಬಂದಿದೆ ಎಂಬುದು ನಮ್ಮ ಲೆಕ್ಕಾಚಾರ. ಅಲ್ಲದೆ ಸುಳ್ಳ ಸೇರಿ ಇಲ್ಲಿನ ಇತರ ಪ್ರದೇಶದಲ್ಲಿ ಕೃಷ್ಣಮೃಗ ಹೆಚ್ಚಿರುವ ಕಾರಣ ಅದರ ಬೆನ್ನುಬಿದ್ದು ಬಂದಿರುವ ಸಾಧ್ಯತೆ ಹೆಚ್ಚಿದೆ ಎಂದು ಪರಿಸರ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹತ್ತು ದಿನದ ಹಿಂದೆ:

ಅಲ್ಲದೆ ಕಳೆದ ಹತ್ತು ದಿನಗಳ ಹಿಂದೆಯೆ ಚಿರತೆ ಪ್ರವೇಶ ಆಗಿರಬಹುದು. ತುಂಬಾ ನಾಚಿಕೆ ಸ್ವಭಾವದ ಪ್ರಾಣಿ ಆಗಿರುವ ಕಾರಣ ತನ್ನ ಇರುವಿಕೆಯನ್ನು ಅದು ಸಾರುವುದಿಲ್ಲ. ನೃಪತುಂಗ ಬೆಟ್ಟಪ್ರದೇಶದ ಸುಮಾರು 40 ಎಕರೆ, ಕೇಂದ್ರೀಯ ವಿದ್ಯಾಲಯದ 18 ಎಕರೆ ಹಾಗೂ ಸನಿಹದ ಚಿಕ್ಕು ತೋಟದ ನಾಲ್ಕೈದು ಎಕರೆ ಸೇರಿ ಚಿರತೆ ಓಡಾಟಕ್ಕೆ ಒಂದಿಷ್ಟುಕಂಫರ್ಟ್‌ ಝೋನ್‌ ಸಿಕ್ಕಿರಬಹುದು. ಕಾರ್ಯಾಚರಣೆಯಲ್ಲಿ ಸ್ವಲ್ಪ ಎಡವಿದರೂ, ತರಾತುರಿ ಮಾಡಿದರೂ ಈ ಪ್ರದೇಶ ದಾಟಿ ಜನನಿಬಿಡ ಪ್ರದೇಶಕ್ಕೆ ಚಿರತೆ ಹೋಗುವ ಸಾಧ್ಯತೆ ಹೆಚ್ಚು. ಹೀಗಾಗಿ ಆದಷ್ಟುಸೂಕ್ಷ್ಮವಾಗಿ ಯೋಜನೆ ರೂಪಿಸಿಕೊಂಡು ಸೆರೆಯಾಗಿಸಬೇಕು ಎಂದು ಪರಿಸರ ತಜ್ಞರು ಅರಣ್ಯಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಅಧಿಕಾರಿಗಳ ಬಗ್ಗೆ ಅಸಮಾಧಾನ

ಇನ್ನು, ಚಿರತೆ ಕಳೆದ ಬುಧವಾರ ಕಾಣಿಸಿಕೊಂಡಿದೆ. ಮೂರ್ನಾಲ್ಕು ದಿನಗಳಿಂದ ನಮಗೆ ತೀವ್ರ ಆತಂಕ ಕಾಡುತ್ತಿದೆ ಎಂದು ಸ್ಥಳೀಯ ಶಿರಡಿ ನಗರ ನಿವಾಸಿಗಳು ಪ್ರತಿಭಟಿಸಿ ಅಸಮಾಧಾನ ಹೊರಹಾಕಿದರು. ಕಾಲಹರಣ ಮಾಡುವುದು ಬಿಟ್ಟು ಚಿರತೆಯನ್ನು ಶೀಘ್ರ ಸೆರೆಹಿಡಿದು ಆತಂಕ ನಿವಾರಿಸಬೇಕು ಎಂದು ಒತ್ತಾಯಿಸಿದರು. ಸಾವಿತ್ರಿ ಮುದ್ದೆಬಿಹಾಳ, ಶಂಸಾದ ಕೊಳಚಿ, ಪುಟ್ಟರಾಜ ಹುಣಸಿಮರದ, ಶಾರದಾ ರಾಠೋಡ, ರತ್ನಾ ಅಶೋಕ ಕುಂದಗೋಳ, ಗಾಯತ್ರಿ ಭಜಂತ್ರಿ, ರಾಧಾ ಮಿಸ್ಕಿನ್‌ ಸೇರಿ ಹಲವರಿದ್ದರು.

ಭಾರ​ತ​ದಲ್ಲಿ ಚೀತಾ ಸಂತ​ತಿ ಮರು ಅಭಿ​ವೃ​ದ್ಧಿ!

ಶಾಂತರಾಗಿರಿ, ಕಾರ್ಯಾಚರಣೆಗೆ ಸಹಕರಿಸಿ; ಡಿಎಫ್‌ಒ

ಚಿರತೆ ಯಾವ ರೀತಿ ಶಾಂತ ವಾತಾವರಣದಲ್ಲಿ ನಗರಕ್ಕೆ ಪ್ರವೇಶ ಮಾಡಿದೆಯೊ ಅದರ ರಕ್ಷಣಾ ಕಾರ್ಯವೂ ಹಾಗೆ ಶಾಂತ ರೀತಿಯಲ್ಲೆ ಆಗಬೇಕಿದೆ ಎನ್ನುತ್ತಾರೆ ಡಿಎಫ್‌ಒ ಯಶಪಾಲ್‌ ಕ್ಷೀರಸಾಗರ. ಈಗ ನಮ್ಮೆದುರು ಚಿರತೆಯನ್ನು ಪಂಜರದಲ್ಲಿ ಬಂಧಿಸುವ ಹಾಗೂ ಕಣ್ಣಳತೆ ದೂರದಲ್ಲಿ ಕಂಡುಬಂದರೆ ಅರವಳಿಕೆ ನೀಡಿ ಬಳಿಕ ಕಾಡಿಗೆ ಬಿಟ್ಟು ರಕ್ಷಣೆ ಮಾಡುವ ಆಯ್ಕೆಗಳಿವೆ. ಅದಕ್ಕಾಗಿ ಸುತ್ತಲಿನ ಪ್ರದೇಶದಲ್ಲಿ ಯಾರೊಬ್ಬ ಸಾರ್ವಜನಿಕರೂ ಕುತೂಹಲಕ್ಕೆ ಬರುವುದು, ಓಡಾಡುವುದು ಮಾಡಬಾರದು. ಆ ಮೂಲಕ ಕಾರ್ಯಚರಣೆಗೆ ಸಹಕಾರ ನೀಡಬೇಕು.

ಕಾರ್ಯಾಚರಣೆಗೆ ತಜ್ಞರ ನೆರವು ಪಡೆದಿದ್ದೇವೆ. ನಾಗರಹೊಳೆ, ಬಂಡಿಪುರದಲ್ಲಿ ಇಂತಹ ಆಪರೇಷನ್‌ನಲ್ಲಿ ಪಾಲ್ಗೊಂಡು ಅನುಭವ ಪಡೆದ ಜಿಲ್ಲೆಯ ಗಾರ್ಡ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅರವಳಿಕೆ ತಜ್ಞ ನಿಖಿಲ್‌ ಈಗಾಗಲೆ ಹಲವು ಕಾರ್ಯಾಚರಣೆ ನಡೆಸಿದ ಅನುಭವ ಹೊಂದಿದ್ದಾರೆ. ಸದ್ಯ ಮೂರು ಕಡೆ ಪಂಜರ ಇಡಲಾಗಿದೆ. ಅಗತ್ಯ ಬಿದ್ದರೆ ಮತ್ತೆರಡು ತರಿಸುತ್ತೇವೆ. ಒಟ್ಟಾರೆ ಜನರ ಸಹಕಾರ ಇದಕ್ಕೆ ಮುಖ್ಯ ಎಂದರು.

ಅರಣ್ಯ ಇಲಾಖೆ ಕೇಳುವ ಎಲ್ಲ ಸಹಕಾರವನ್ನು ತಾಲೂಕು ಮತ್ತು ಜಿಲ್ಲಾಡಳಿತದಿಂದ ಒದಗಿಸಲಾಗುವುದು. ಸಮರ್ಪಕವಾಗಿ ಸೆರೆ ಕಾರ್ಯಾಚರಣೆ ನಡೆಸಿ ಪುನಃ ಕಾಡಿಗೆ ಸೇರಿಸುತ್ತೇವೆ ಎಂದು ತಹಸೀಲ್ದಾರ್‌ ಶಶಿಧರ ಮಾಡ್ಯಾಳ ತಿಳಿಸಿದ್ದಾರೆ.  

ಸೂಕ್ತ ಯೋಜನೆ ರೂಪಿಸಿಕೊಂಡು ಚಿರತೆ ರಕ್ಷಣೆ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಸ್ಥಳೀಯರ ಸಹಕಾರ ಹೆಚ್ಚು ಮುಖ್ಯ ಎಂದು ಧಾರವಾಡ ಡಿಎಫ್‌ಒ ಯಶಪಾಲ್‌ ಕ್ಷೀರಸಾಗರ ಹೇಳಿದ್ದಾರೆ.  

Latest Videos
Follow Us:
Download App:
  • android
  • ios