Asianet Suvarna News Asianet Suvarna News

ಮತ್ತೆ ಶುರುವಾಯ್ತು ಮಂಗನ ಕಾಯಿಲೆ ಆತಂಕ..!

ಜನೆವರಿ ತಿಂಗಳ ಬಳಿಕ ವಿವಿಧೆಡೆ ಮೃತಪಟ್ಟ ಹದಿನಾರು ಮಂಗಗಳು| ಜನರು ಕೂಡಾ ಮಂಗನ ಕಾಯಿಲೆ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ| ಮಂಗ ಮೃತಪಟ್ಟಲ್ಲಿ ಕೂಡಲೇ ಮಾಹಿತಿ ನೀಡಬೇಕು| ಆ ಭಾಗಕ್ಕೆ ತೆರಳುವುದನ್ನು ನಿಲ್ಲಿಸಬೇಕು| 
 

Uttara Kannada District Peopel Anxiety for KFD Disease grg
Author
Bengaluru, First Published Feb 25, 2021, 9:51 AM IST

ಕಾರವಾರ(ಫೆ.25): ಉತ್ತರ ಕನ್ನಡದಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಆತಂಕ ಪುನಃ ಆರಂಭವಾಗಿದೆ. ಇದರಿಂದ ಕಾಡಂಚಿನ ಪ್ರದೇಶದಲ್ಲಿ ತಲ್ಲಣ ಶುರುವಾಗಿದೆ.

ವರ್ಷದ ಮೊದಲ ಪ್ರಕರಣ ಕಳೆದ ಕೆಲವು ದಿನದ ಹಿಂದೆ ಸಿದ್ದಾಪುರದಲ್ಲಿ ಪತ್ತೆಯಾಗಿದೆ. ಜನೆವರಿ ತಿಂಗಳ ಬಳಿಕ ವಿವಿಧೆಡೆ 16 ಮಂಗಗಳು ಮೃತಪಟ್ಟಿವೆ. ಮನುಷ್ಯರಿಗೆ ಮೃತಪಟ್ಟ ಮಂಗನ ಉಣ್ಣೆಯೇ ಮಾರಕವಾಗಿದ್ದು, ಇದರಿಂದಲೇ ಕಾಯಿಲೆ ಹರಡುತ್ತದೆ. ಕಳೆದ ವರ್ಷ ಒಬ್ಬರು, 2019ರಲ್ಲಿ ಮೂರು, 2012ರಲ್ಲಿ ಒಬ್ಬರು ಈ ಸೋಂಕಿನಿಂದ ಮೃತಪಟ್ಟಿದ್ದರು.

ಸಿದ್ದಾಪುರ, ಹೊನ್ನಾವರ, ಶಿರಸಿ, ಜೊಯಿಡಾ, ಕುಮಟಾ, ಅಂಕೋಲಾ, ಭಟ್ಕಳ ತಾಲೂಕಿನಲ್ಲಿ ಕೆಎಫ್‌ಡಿ ಸೋಂಕು ಜನರನ್ನು ಕಾಡುತ್ತಿದೆ. ಸಿದ್ದಾಪುರ ಭಾಗದಲ್ಲಿ ಅತಿಹೆಚ್ಚು ಮಂಗನ ಕಾಯಿಲೆ ಆತಂಕವಿದೆ. ಆರೋಗ್ಯ ಇಲಾಖೆ ಸಾಕಷ್ಟು ಎಚ್ಚರಿಕಾ ಕ್ರಮ ತೆಗದುಕೊಂಡಿದ್ದು, ಗ್ರಾಮೀಣ ಭಾಗದ ಜನರು ಕೂಡಾ ಮುಂಜಾಗೃತೆ ವಹಿಸಬೇಕಾಗಿದೆ.

ಮಾಹಿತಿ, ಶಿಕ್ಷಣ, ಸಂಪರ್ಕ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸ್ಥಳೀಯ ಆಶಾ, ಎಎನ್‌ಎಂ ಕಾರ್ಯಕರ್ತರನ್ನು ಬಳಸಿಕೊಂಡು ಪ್ರತಿ ಮನೆ ಮನೆಗೆ ತೆರಳಿ ಕರಪತ್ರ ವಿತರಣೆ ಮಾಡಲಾಗುತ್ತಿದೆ. ಇದರ ಜತೆಗೆ ಜ್ವರ ಸಮೀಕ್ಷೆ, ಮಾಹಿತಿ ಕಾರ್ಯಾಗಾರ ನಡೆಸಲಾಗುತ್ತಿದೆ. ಆರೋಗ್ಯ ಕಾರ್ಯಕರ್ತರು ಮನೆಗೆ ಬಂದಾಗ ಜ್ವರ ಅಥವಾ ಇನ್ನಾವುದೇ ರೀತಿ ಆರೋಗ್ಯ ಸಮಸ್ಯೆ ಇದ್ದಲ್ಲಿ ಮಾಹಿತಿ ನೀಡಬೇಕು. ಬೇರೆಬೇರೆ ಆರೋಗ್ಯ ಸಮಸ್ಯೆ ಇದ್ದವರಿಗೂ ಕೆಎಫ್‌ಡಿ ಮಾರಕವಾಗಿದೆ. ಹೀಗಾಗಿ ಸಾರ್ವಜನಿಕರು ಸಂಪೂರ್ಣ ಮಾಹಿತಿ ನೀಡಬೇಕಿದೆ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ಉತ್ತರ ಕನ್ನಡಕ್ಕೆ ಮತ್ತೆ ವಕ್ಕರಿಸಿ ಮಂಗನ ಕಾಯಿಲೆ.. ಪರಿಹಾರ ಯಾವ ಕಾಲಕ್ಕೋ!

ಗ್ರಾಪಂನಿಂದ ಧ್ವನಿವರ್ಧಕ ಬಳಕೆ ಮಾಡಿ ತಮ್ಮ ಪಂಚಾಯಿತಿ ವ್ಯಾಪ್ತಿಯ ಈ ಭಾಗದಲ್ಲಿ ಮಂಗ ಮೃತಪಟ್ಟಿದೆ. ಸಾರ್ವಜನಿಕರು 1 ತಿಂಗಳು ಮಂಗ ಮೃತಪಟ್ಟ ಸ್ಥಳಕ್ಕೆ ತೆರಳಬಾರದು ಎನ್ನುವ ಮಾಹಿತಿ ನೀಡಲು ಕೆಎಫ್‌ಡಿ ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ. ಮಂಗ ಮೃತಪಟ್ಟಮಾಹಿತಿ ಬಂದ ಕೂಡಲೇ ಸ್ಥಳೀಯ ಪಿಡಿಒ, ಅರಣ್ಯ, ಆರೋಗ್ಯ, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಕೂಡಲೇ ಆ ಸ್ಥಳಕ್ಕೆ ಭೇಟಿ ನೀಡಲು ಸೂಚನೆ ನೀಡಲಾಗಿದ್ದು, 50 ಮೀ. ದೂರದವರೆಗೆ ಉಣ್ಣೆ ಸಾಯುವ ಔಷಧ ಸಿಂಪಡಣೆ ಮಾಡಲು ತಿಳಿಸಲಾಗಿದೆ. ಮಂಗ ಮೃತಪಟ್ಟಿದೆ ಎಂದು ನಾಮಫಲಕ ಅಳವಡಿಕೆ ಮಾಡಲು ಕೂಡಾ ಕ್ರಮ ತೆಗೆದುಕೊಳ್ಳಲಾಗಿದೆ.

ಮಾರಕ ಕಾಯಿಲೆಗಳಲ್ಲಿ ಒಂದಾದ ಕೆಎಫ್‌ಡಿ ಪ್ರಸಕ್ತ ವರ್ಷ ಕೂಡಾ ಕಾಣಿಸಿಕೊಂಡಿದ್ದು, ಅರಣ್ಯ ಪ್ರದೇಶಕ್ಕೆ ತೆರಳುವವರು ಸಾಕಷ್ಟುಎಚ್ಚರಿಕೆಯಿಂದಲೇ ಇರಬೇಕಿದೆ. ನಿರ್ಲಕ್ಷ್ಯ ತಾಳದೇ ಆರೋಗ್ಯ ಇಲಾಖೆಯ ಮಾರ್ಗಸೂಚಿ ಪಾಲಿಸಬೇಕಿದೆ.

ಮಂಗನ ಕಾಯಿಲೆ ಹರಡದಂತೆ ಎಲ್ಲಾ ಎಚ್ಚರಿಕೆ ತೆಗೆದುಕೊಳ್ಳಲಾಗಿದೆ. ಸಾರ್ವಜನಿಕರಿಗೆ ಡಿಎಂಪಿ ತೈಲ ವಿತರಣೆ ಮಾಡಲಾಗುತ್ತದೆ. ಇದನ್ನು ಹಚ್ಚಿಕೊಂಡೇ ಅರಣ್ಯ ಪ್ರದೇಶಕ್ಕೆ ಹೋಗಬೇಕು. ಜತೆಗೆ ಮಂಗ ಮೃತಪಟ್ಟಿರುವುದು ಕಂಡು ಬಂದರೆ ಕೂಡಲೇ ಗ್ರಾಪಂಗೆ ಅಥವಾ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಬೇಕು. ಜ್ವರವಿದ್ದಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದು ಕೆಎಫ್‌ಡಿ ಅಧಿಕಾರ ಡಾ. ಸತೀಶ ಶೇಟ್‌ ತಿಳಿಸಿದ್ದಾರೆ.

ಏಳು ತಾಲೂಕುಗಳಲ್ಲಿ ಕಾಯಿಲೆ:

ಜನರು ಕೂಡಾ ಮಂಗನ ಕಾಯಿಲೆ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ. ಜಿಲ್ಲೆಯ 7 ತಾಲೂಕಿನಲ್ಲಿ ಈ ಕಾಯಿಲೆಯಿದೆ ಎಂದು ಗುರುತಿಸಲಾಗಿದ್ದು, ಮಂಗ ಮೃತಪಟ್ಟಲ್ಲಿ ಕೂಡಲೇ ಮಾಹಿತಿ ನೀಡಬೇಕು. ಈ ಭಾಗಕ್ಕೆ ತೆರಳುವುದನ್ನು ನಿಲ್ಲಿಸಬೇಕು.

ಅರಣ್ಯ ಪ್ರದೇಶಕ್ಕೆ ಹೋಗುವ ಪೂರ್ವದಲ್ಲಿ ಆರೋಗ್ಯ ಇಲಾಖೆ ನೀಡುವ ಡಿಎಂಪಿ ತೈಲವನ್ನು ಕಡ್ಡಾಯವಾಗಿ ಹಚ್ಚಿಕೊಳ್ಳಬೇಕು. ಅರಣ್ಯದಿಂದ ವಾಪಸ್‌ ಬಂದ ಬಳಿಕ ಕೂಡಾ ಸ್ನಾನ ಮಾಡುವುದು, ಸೋಪ್‌, ಹ್ಯಾಂಡ್‌ವಾಶ್‌ ಬಳಕೆ ಮಾಡಿ ಕೈಕಾಲು ಮುಖ ತೊಳೆದುಕೊಳ್ಳುವುದು ಮಾಡಬೇಕು.
 

Follow Us:
Download App:
  • android
  • ios