ದಾವಣಗೆರೆ(ಏ.12): ಕೊರೋನಾ ವೈರಸ್‌ ನಿರ್ಮೂಲನೆಗೆ ಔಷಧಿ ಸಿಂಪಡಣೆ ಮಾಡುತ್ತಿದ್ದ ಗ್ರಾಪಂ ನೌಕರನ ಮೇಲೆ ಹಲ್ಲೆ ಮಾಡಿದ ಘಟನೆ ತಾಲೂಕಿನ ನೀಲಾನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ತಾಲೂಕಿನ ಹಳೆಬಾತಿ ಗ್ರಾಪಂ ಜಾಡಮಾಲಿ ಅಂಜಿನಪ್ಪ ಹಾಗೂ ಇತರರು ಟ್ರ್ಯಾಕ್ಟರ್‌ ಮೂಲಕ ಗ್ರಾಮದಲ್ಲಿ ಔಷಧಿ ಸಿಂಪರಣೆ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ತನಗೆ ಔಷಧಿ ಸಿಡಿಯಿತೆಂಬ ಕಾರಣಕ್ಕೆ ಜಗಳ ಮಾಡಿದ್ದಾರೆ. ಔಷಧಿ ಸಿಂಪರಣೆ ಮಾಡುತ್ತಿದ್ದ ಸಿಬ್ಬಂದಿ ಅಂಜಿನಪ್ಪನನ್ನು ನಿಂದಿಸಿ, ಹಲ್ಲೆ ಮಾಡಲಾಗಿದೆ. ಹಲ್ಲೆಯಿಂದಾಗಿ ಸಿಮೆಂಟ್‌ ರಸ್ತೆ ಮೇಲೆ ಬಿದ್ದ ಜಾಡಮಾಲಿ ಅಂಜಿನಪ್ಪ ತಲೆಯಿಂದ ರಕ್ತ ಸುರಿಯ ತೊಡಗಿತಲ್ಲದೇ ಆತ ಜ್ಞಾನ ತಪ್ಪಿ ಬಿದ್ದಿದ್ದಾನೆ. ತಕ್ಷಣವೇ ಗಾಯಾಳವನ್ನು ಜಿಲ್ಲಾಸ್ಪತ್ರೆಗೆ ಕರೆ ತರಲಾಯಿತು.

ಈಗ ಲಾಕ್‌ಡೌನ್ ನಡುವೆಯೂ ಮೀನು ಸವಿಯಬಹುದು..!

ಜಿಲ್ಲಾಸ್ಪತ್ರೆಯಲ್ಲಿ ಎಕ್ಸ್‌ರೇ ಮಾಡಲು ಸಾಧ್ಯವಿಲ್ಲವೆಂದು, ವೈದ್ಯರು ಸಹ ಇಲ್ಲವೆಂಬ ಕಾರಣಕ್ಕೆ ಸಿಟಿ ಸೆಂಟ್ರಲ್‌ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಲಾಗಿದೆ. ತಕ್ಷಣ ಸಿಟಿ ಸೆಂಟ್ರಲ್‌ ಆಸ್ಪತ್ರೆಗೆ ಗಾಯಾಳು ಅಂಜಿನಪ್ಪಗೆ ಕರೆ ತಂದು, ಎಂಆರ್‌ಐ, ಸಿಟಿ ಸ್ಕಾ್ಯನ್‌ ಮಾಡಿಸಲಾಗಿದ್ದು, ತಲೆಗೆ 8-9 ಹೊಲಿಗೆ ಹಾಕಲಾಗಿದೆ.

ಆಸ್ಪತ್ರೆಗೆ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿದ್ದರು. ಗ್ರಾಪಂ ನೌಕರ ಮೇಲೆ ಹಲ್ಲೆ ಮಾಡಿದ ವ್ಯಕ್ತಿ ವಿರುದ್ಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪಿಡಿಓ ದೂರು ನೀಡಿದ್ದ ರು. ಪಂಚಾಯಿತಿ ನೌಕರನ ಮೇಲೆ ಹಲ್ಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ಆಹಾರ ಕಿಟ್‌ನಲ್ಲಿ ದೊಡ್ಡ ಫೋಟೋ, ಮಾಜಿ ಕೈ ಶಾಸಕನ ವಿರುದ್ಧ ಟೀಕೆ..!

ಕೊರೋನಾ ವೈರಸ್‌ ನಿರ್ಮೂಲನೆಗೆ ಶ್ರಮಿಸುತ್ತಿರುವ ಗ್ರಾಪಂ ಮಟ್ಟದ ಸಿಬ್ಬಂದಿ ಮೇಲೆ ಆಗಿರುವ ದೌರ್ಜನ್ಯದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಈ ಪ್ರಕರಣವನ್ನು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಇಲಾಖೆಗಳೂ ಗಂಭೀರವಾಗಿ ಪರಿಗಣಿಸಿವೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಿದೆ.