ಕೋಮಾ ಸ್ಥಿತಿಯಲ್ಲಿ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ: ರೋಗಿಗಳ ಪರದಾಟ
ಕೋಮಾ ಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆ| ಕಾಯಂ ವೈದ್ಯರೇ ಇಲ್ಲದೆ ನಡೆದಿದೆ ತಾಲೂಕಾಸ್ಪತ್ರೆ | ಗುತ್ತಿಗೆ ವೈದ್ಯರಿಂದ ನಿರೀಕ್ಷಿತ ಚಿಕಿತ್ಸೆ ಇಲ್ಲ|ಇಲ್ಲಿನ ಸಿಬ್ಬಂದಿ ರೋಗಿಗಳೊಂದಿಗೆ ಹಾಗೂ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ| ಬೇಜವಾಬ್ದಾರಿ ಯಾಗಿ ವರ್ತನೆ ಮಾಡುತ್ತಿದ್ದಾರೆ|
ಜೆ.ಎನ್. ಮಾಯಾಚಾರಿ
ಮುದ್ದೇಬಿಹಾಳ(ಡಿ.22): ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ 100 ಹಾಸಿಗೆಯುಳ್ಳ ಆಸ್ಪತ್ರೆ ಇದೆ. ಆದರೆ, ಒಬ್ಬರೂ ಕಾಯಂ ವೈದ್ಯರಿಲ್ಲ. ಹೀಗಾಗಿ ಇಲ್ಲಿರುವ ಆಸ್ಪತ್ರೆಯೇ ಕೋಮಾ ಸ್ಥಿತಿಗೆ ತಲುಪುವ ಹಂತಕ್ಕೆ ಬಂದು ನಿಂತಿದೆ.
ಕಾಯಂ ವೈದ್ಯರ ಕೊರತೆ ನೀಗಿಸಬೇಕು ಎಂದು ಐವರು ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದ್ದು, ಅವರು ಕೂಡ ಬೇಕಾದಾಗ ಮಾತ್ರ ಬರುತ್ತಾರೆ. ಬೇಡವೆಂದಾಗ ಹೋಗುತ್ತಾರೆ. ಮನಸೋ ಇಚ್ಛೆ ವೈದ್ಯವೃತ್ತಿ ನಿರ್ವಹಿಸುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಹೀಗಾಗಿ ಇಲ್ಲಿನ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗದೆ ಮತ್ತಷ್ಟು ನರಳಾಡುವಂತಾಗಿದೆ. ಇದರ ಪರಿಣಾಮವೇ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವಂತಾಗಿದೆ. ಇದರ ಜತೆಗೆ ಬಡವರ ಪಾಡಂತೂ ಹೇಳತೀರದ್ದಾಗಿದೆ.
ಇಲ್ಲಿ ವಿವಿಧ ವಿಭಾಗದ 11 ಕಾಯಂ ವೈದ್ಯರು ಇರ ಬೇಕು. ಆದರೆ ಒಬ್ಬರೂ ಇಲ್ಲ. 32 ಜನ ಡಿ ವರ್ಗ, 20 ಜನ ಶುಶ್ರೂಷಕರು, ಇಬ್ಬರು ವಾಹನ ಚಾಲಕರು, 1 ನೇತ್ರಾಧಿಕಾರಿ, 1 ಹಿರಿಯ ಮತ್ತು ಕಿರಿಯ ಪ್ರ ಯೋಗಾಲದ ತಂತ್ರಜ್ಞರು ಸೇರಿದಂತೆ ಒಟ್ಟು 82 ಜನ ಕಾಯಂ ಸಿಬ್ಬಂದಿ ಇರಬೇಕಿತ್ತು. ಆಸ್ಪತ್ರೆಗೆ ಬರು ವ ಎಲ್ಲ ರೋಗಿಗಳನ್ನು ಆರೈಕೆ ಮಾಡಬೇಕು. ಆದರೆ ಇಲ್ಲಿರುವುದು 15 ಜನ ಶುಶ್ರೂಷಕರು, ಇಬ್ಬರು ಎಕ್ಸರೇ, 6 ಜನ ಡಿ ದರ್ಜೆ ನೌಕರರು, 2 ಫಾರ್ಮಾಸಿಸ್ಟ್, 2 ಲ್ಯಾಬ್ ಟೆಕ್ನಿಷಿಯನ್, 2 ಜನ ಕ್ಲರ್ಕ್, 1 ಎಫ್‌ಡಿಸಿ ಸೇರಿ 30 ಜನ ಸಿಬ್ಬಂದಿ ಮಾತ್ರ ಕಾರ್ಯನಿ ರ್ವಹಿಸುತ್ತಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸರಿಯಾಗಿ ಅರ್ಧದಷ್ಟೂ ಇರದ ಇಷ್ಟು ಸಿಬ್ಬಂದಿಯಿಂದ ರೋಗಿಗಳಿಗೆ ತಕ್ಕಮಟ್ಟಿಗೆ ಚಿಕಿತ್ಸೆ ನೀಡಲು ಸಾಧ್ಯವೆ ಎಂಬ ಪ್ರಶ್ನೆ ಕೂಡ ಮತ್ತೊಂದೆಡೆ ಉದ್ಭವವಾಗಿದೆ. ಮುದ್ದೇಬಿಹಾಳ ತಾಲೂಕು ಒಟ್ಟು 101 ಗ್ರಾಮಗಳನ್ನು ಹೊಂದಿದೆ. ಇಷ್ಟೂ ಗ್ರಾಮಗಳಿಂದ ನಿತ್ಯ ಕನಿಷ್ಠವೆಂದರೂ 500 ಕ್ಕೂ ಅಧಿಕ ರೋಗಿಗಳು ವಿವಿಧ ಚಿಕಿತ್ಸೆಗೆಂದು ಆಸ್ಪತ್ರೆಗೆ ಬರುತ್ತಾರೆ. ಆದರೆ ಇಲ್ಲಿ ವೈದ್ಯರಿಲ್ಲದಿರುವುದರಿಂದ ರೋಗಿಗಳು ಮತ್ತಷ್ಟು ನೋವು ಅನುಭವಿಸುವಂತಾಗಿದೆ. ಇಲ್ಲಿಂದ ಜಿಲ್ಲಾ ಕೇಂದ್ರ ವಿಜಯಪುರಕ್ಕೆ ಹೋಗಬೇಕೆಂದರೆ 80 ಕಿಮೀ ದೂರವಿದೆ.
ಬಾಗಲಕೋಟೆಗೆ ಹೋಗಬೇಕೆಂದರೆ ಅದು 85 ಕಿಮೀ ದೂರ. ಇಷ್ಟು ದೂರ ಕ್ರಮಿಸಿ ತುರ್ತು ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಹತ್ತಿರದಲ್ಲಿಯೂ ಸಹಿತ ಯಾವುದೇ ಆಸ್ಪತ್ರೆಗಳು ಇಲ್ಲ. ಇದರಿಂದ ರೋಗಿಗಳಿಗೆ ತಾಲೂಕು ಆಸ್ಪತ್ರೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಆದರೆ, ಅಲ್ಲಿ ಸಿಬ್ಬಂದಿ ಮತ್ತು ವೈದ್ಯರ ಕೊರತೆಯಿಂದಾಗಿ ಜನರಿಗೆ ದಿಕ್ಕೇ ತೋಚ ದಂತಾಗಿದೆ.
ಗರ್ಭಿಣಿಯರ ಸ್ಥಿತಿಯಂತೂ ಹೇಳುವಂತಿಲ್ಲ. ಹಾವು ಕಚ್ಚಿದಾಗ, ವಿಷ ಸೇವಿಸಿದಾಗ, ಅಪಘಾತ ಸಂಭವಿಸಿದಾಗ ಮತ್ತಿತರೆ ತುರ್ತು ಸಂದರ್ಭದಲ್ಲಿ ಈ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುವುದೇ ದುಸ್ತರ ಎಂಬ ಆರೋಪಗಳು ಕೇಳಿಬರುತ್ತಿವೆ. ಮುಖ್ಯ ವೈದ್ಯಾಧಿಕಾರಿ, ಚಿಕ್ಕಮಕ್ಕಳ ತಜ್ಞರು, ಶಸ್ತ್ರ ಚಿಕಿತ್ಸೆ ವೈದ್ಯರು, ಎಲುಬು ಮತ್ತು ಕೀಲು ತಜ್ಞರು, ಸ್ತ್ರೀರೋಗ ತಜ್ಞರು, ಅರವಳಿಕೆ, ನೇತ್ರ, ಕಿವಿ ಮೂಗು ಗಂಟಲು, ಹಿರಿಯ ವೈದ್ಯರು ಸೇರಿದಂತೆ 11 ಜನ ಅಗತ್ಯ ಕಾಯಂ ವೈದ್ಯರು ನೇಮಕವಾಗಬೇಕು.
ಇದರೊಟ್ಟಿಗೆ ಗುಣಮಟ್ಟದ ಚಿಕಿತ್ಸೆಯೂ ಸಿಗಬೇಕಿದೆ. ಗುತ್ತಿಗೆ ವೈದ್ಯರಿಂದ ನಿರೀಕ್ಷಿತ ಸೇವೆ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದೆ. ಅಲ್ಲದೆ ಇಲ್ಲಿನ ಸಿಬ್ಬಂದಿ ರೋಗಿಗಳೊಂದಿಗೆ ಹಾಗೂ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಬೇಜವಾಬ್ದಾರಿ ಯಾಗಿ ವರ್ತನೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಇವೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಂಡು ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಿದೆ.
ತಾಲೂಕು ಸರ್ಕಾರಿ ಆಸ್ಪತ್ರೆಗೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, 5 ಜನ ಹಿರಿಯ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿ ಅವರಿಂದ ಚಿಕಿತ್ಸೆ ಕೊಡಲಾಗುತ್ತಿದೆ. ಆದರೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಲು ಎಲ್ಲ ವಿಭಾಗದ ವೈದ್ಯಾಧಿಕಾರಿಗಳ ನೇಮಕ ಅಗತ್ಯವಿದೆ. ಆದರೆ ಸರ್ಕಾರದಿಂದ ನೇಮಕ ಪ್ರಕ್ರಿಯೆ ಆಗಬೇಕಿದೆ. ಸದ್ಯ ಈ ಬಗ್ಗೆ ಇನ್ನಷ್ಟು ಕಾಯಂ ವ್ಯೆದ್ಯಾಧಿಕಾರಿಗಳನ್ನು ನೇಮಿಸುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಮುದ್ದೇಬಿಹಾಳ ತಾಲೂಕು ಆರೋಗ್ಯ ಅಧಿಕಾರಿ ಡಾ. ಸತೀಶ ತಿವಾರಿ ಅವರು ಹೇಳಿದ್ದಾರೆ.
ತಾಲೂಕಾಸ್ಪತ್ರೆಗೆ ಅವಶ್ಯಕ ವೈದ್ಯರಿಲ್ಲದೆ ಗ್ರಹಣ ಹಿಡಿದಂತಾಗಿದೆ. ಸರ್ಕಾರಿ ಆಸ್ಪತ್ರೆಗೆ ಅಂಬಂಧಿಸಿದ ಬಗ್ಗೆ ವಿಶೇಷ ಅನುದಾನ ಮೀಸಲಿರಿಸಿದರೆ ಸಾಲದು ಅಗತ್ಯ ಯೋಗ್ಯ ತಜ್ಞ ವೈದ್ಯರನ್ನು ನೇಮಿಸಿ ವಿವಿಧ ಯಂತ್ರೋಪಕರಣ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಬೇಕು. ಇದರಿಂದ ಸಾರ್ವಜನಿಕರಿಗೆ ಆರೋಗ್ಯ ರಕ್ಷಣೆ ನೀಡಿದಂತಾಗುತ್ತದೆ ಎಂದು ಮುದ್ದೇಬಿಹಾಳದ ಮಾಜಿ ಪುರಸಭೆ ಸದಸ್ಯ ಕಾಮರಾಜ ಬಿರಾದಾರ ತಿಳಿಸಿದ್ದಾರೆ.
ಯೋಗ್ಯ ತಜ್ಞವೈದ್ಯರನ್ನು ನೇಮಿಸಿಕೊಳ್ಳಲು ರಾಜ್ಯ ಸರ್ಕಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಪೂರ್ಣ ಜವಾಬ್ದಾರಿ ನೀಡಿದೆ. ಆದರೆ ಎಂಬಿಬಿಎಸ್, ಎಂಡಿ, ಎಂಎಸ್ ವೈದ್ಯರ‌್ಯಾರೂ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಮುಂದೆ ಬರುತ್ತಿಲ್ಲ. ಇದರಿಂದ ವೈದ್ಯರ ಕೊರೆತೆಯಾಗಿದೆ. ಆದಷ್ಟು ಬೇಗ ತಾಲೂಕಿನ ಆಸ್ಪತ್ರೆಗೆ ತಜ್ಞ ವೈದ್ಯರ ನೇಮಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಂದ್ರ ಕಾಪ್ಸೆ ತಿಳಿಸಿದ್ದಾರೆ. (ಚಿತ್ರ: ಸಾಂದರ್ಭಿಕ ಚಿತ್ರ)