ಮಳೆಗಾಲದಲ್ಲಿ ಸಾಮಾನ್ಯ ಕಾಯಿಲೆಗಳಾದ ಜ್ವರ, ಶೀತ, ಕೆಮ್ಮು ಕಾಣಿಸಿಕೊಳ್ಳಲಾರಂಭಿಸಿವೆ| ಆದರೆ ಈ ಲಕ್ಷಣಗಳೇ ಕೊರೋನಾ ಕಾಯಿಲೆಯ ಲಕ್ಷಣಗಳಾಗಿರುವುದರಿಂದ ಸಾಮಾನ್ಯ ರೋಗಿಗಳಿಗೆ ತಕ್ಷಣಕ್ಕೆ ಚಿಕಿತ್ಸೆ ಸಿಗುತ್ತಿಲ್ಲ| ಅನಿವಾರ್ಯವಾಗಿ ಮನೆ ಮದ್ದಿಗೆ ಶರಣಾಗುತ್ತಿರುವ ಜನರು|

ಶಿವಾನಂದ ಗೊಂಬಿ

ಹುಬ್ಬಳ್ಳಿ(ಜೂ.19): ಮುಂಗಾರು ಋುತು ಆರಂಭವಾಗಿದ್ದು, ಕಳೆದ ಎಂಟ್ಹತ್ತು ದಿನಗಳಿಂದ ಜಿಲ್ಲಾದ್ಯಂತ ಜಿಟಿಜಿಟಿ ಮಳೆ ಸುರಿಯುತ್ತಿದೆ. ಋುತುಮಾನ ಬದಲಾಗುತ್ತಿದ್ದಂತೆ ವಾತಾವರಣದಲ್ಲಿ ಉಂಟಾದ ವ್ಯತ್ಯಾಸದಿಂದಾಗಿ ಸಾಮಾನ್ಯ ಕಾಯಿಲೆಯಾದ ನೆಗಡಿ, ಜ್ವರ, ಕೆಮ್ಮು ಕಾಣಿಸಲಾರಂಭಿಸಿವೆ. ಆದರೆ ಈ ರೋಗಿಗಳಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸಕಾಲಕ್ಕೆ ಸರಿಯಾದ ಚಿಕಿತ್ಸೆ, ಮಾತ್ರೆಗಳು ಸಿಗದೇ ಪರದಾಡುವಂತಾಗಿದೆ.

ಬೇಸಿಗೆ ಕಳೆದು ಮಳೆಗಾಲ ಶುರುವಾಗುತ್ತಿದ್ದಂತೆ ವಾತಾವರಣದಲ್ಲಿ ಬದಲಾಗುವುದು ಸಹಜ. ಅದರಂತೆ ಮನುಷ್ಯನ ದೇಹವೂ ಹೊಸ ಋುತುಮಾನಕ್ಕೆ ಹೊಂದಿಕೊಳ್ಳುವ ಮುನ್ನ ಕೊಂಚ ಆರೋಗ್ಯದಲ್ಲೂ ಏರುಪೇರಾಗುವುದು ಸಹಜ. ಮಳೆಗಾಲದಲ್ಲಿ ಸಾಮಾನ್ಯ ಕಾಯಿಲೆಗಳಾದ ಜ್ವರ, ಶೀತ, ಕೆಮ್ಮು ಕಾಣಿಸಿಕೊಳ್ಳಲಾರಂಭಿಸಿವೆ. ಆದರೆ ಈ ಲಕ್ಷಣಗಳೇ ಕೊರೋನಾ ಕಾಯಿಲೆಯ ಲಕ್ಷಣಗಳಾಗಿರುವುದರಿಂದ ಸಾಮಾನ್ಯ ರೋಗಿಗಳಿಗೆ ತಕ್ಷಣಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ಅನಿವಾರ್ಯವಾಗಿ ಮನೆ ಮದ್ದಿಗೆ ಶರಣಾಗುತ್ತಿದ್ದಾರೆ.

ಧಾರವಾಡ: ಮತ್ತೆ 8 ಕೊರೋನಾ ಕೇಸ್‌ ಪತ್ತೆ

ಖಾಸಗಿ ಕ್ಲಿನಿಕ್‌:

ಈ ರೀತಿ ಸಾಮಾನ್ಯ ಕಾಯಿಲೆಗಳಿಗೆ ಗಲ್ಲಿ ಗಲ್ಲಿಗಳಲ್ಲಿರುವ ಖಾಸಗಿ ಕ್ಲಿನಿಕ್‌ಗಳನ್ನೇ ಜನತೆ ನೆಚ್ಚುವುದು ಜಾಸ್ತಿ. ಆದರೆ ಖಾಸಗಿ ಕ್ಲಿನಿಕ್‌ಗಳು ಕೊರೋನಾ ಭಯದಿಂದ ಈ ಲಕ್ಷಣವಿರುವ ರೋಗಿಗಳು ಬಂದರೆ ನಾವು ತಪಾಸಣೆ ಮಾಡುವುದಿಲ್ಲ. ಕೊರೋನಾ ಇದ್ದರೂ ಇರಬಹುದು, ನೀವು ಕಿಮ್ಸ್‌ಗೆ ಹೋಗಿ ಎಂದು ಹೇಳಿ ಸಾಗ ಹಾಕುತ್ತಿದ್ದಾರಂತೆ.

ಮತ್ತೊಂದೆಡೆ ಜ್ವರ, ಕೆಮ್ಮು ನೆಗಡಿಗಳಂತಹ ರೋಗಗಳಿಗೆ ಮೆಡಿಕಲ್‌ ಶಾಪ್‌ಗಳಲ್ಲಿ ಪ್ಯಾರಾಸಿಟಿಮಲ್‌ ಅಂಶವಿರುವ ಮಾತ್ರೆಗಳನ್ನು ಜನತೆ ಖರೀದಿಸುತ್ತಿದ್ದರು. ಮುಂಚೆ ಇದಕ್ಕೆ ಯಾವುದೇ ನಿರ್ಬಂಧವಿರಲಿಲ್ಲ. ಆದರೆ ಇದೀಗ ಅದಕ್ಕೂ ಸಂಚಕಾರ ಬಂದಿದೆ. ವೈದ್ಯರ ಚೀಟಿಯಿಲ್ಲದೇ ಯಾವ ಮೆಡಿಕಲ್‌ ಶಾಪ್‌ಗಳು ಈ ಮಾತ್ರೆಗಳನ್ನು ಕೊಡುತ್ತಿಲ್ಲ. ಹೀಗಾಗಿ ಸಾಮಾನ್ಯ ಜ್ವರದಿಂದ ಸಾಕಷ್ಟು ಜನರು ಬಳಲುತ್ತಿದ್ದಾರೆ. ಇನ್ನು ಕೆಲ ಮೆಡಿಕಲ್‌ ಶಾಪ್‌ಗಳು ಮಾತ್ರೆಗಳನ್ನು ಕೊಟ್ಟರೂ ನೂರೆಂಟು ಪ್ರಶ್ನೆ ಕೇಳಿಯೇ ಕೊಡುತ್ತವೆ. ವಿಳಾಸ, ಮೊಬೈಲ್‌ ನಂಬರ್‌ಗಳನ್ನು ದಾಖಲಿಸಿಕೊಂಡೇ ಕೊಡಲಾಗುತ್ತಿದೆ. ಹೆಚ್ಚಿಗೆ ಕೇಳಿದರೆ ಕೊಡುವುದಿಲ್ಲ. ಎಲ್ಲರನ್ನೂ ಕೊರೋನಾ ಸೋಂಕಿತರಂತೆ ನೋಡುತ್ತಿದ್ದಾರೆ ಎನ್ನುವುದು ರೋಗಿಗಳ ಅಳಲು.

ಖಾಸಗಿ ಕ್ಲಿನಿಕ್‌ಗಳಿಗೆ ಲಾಭವಿಲ್ಲ:

ರೋಗಿಗಳ ಪರದಾಟ ಒಂದೆಡೆಯಾದರೆ, ಇನ್ನೊಂದೆಡೆ ಖಾಸಗಿ ಕ್ಲಿನಿಕ್‌ಗಳು ಸಹ ಸಂಕಷ್ಟ ಎದುರಿಸುವಂತಾಗಿದೆ. ಕ್ಲಿನಿಕ್‌ಗಳಲ್ಲಿ ಶೇ.70ರಷ್ಟು ರೋಗಿಗಳು ಬರುವುದೇ ಇಂತಹ ಸಾಮಾನ್ಯ ಕಾಯಿಲೆಯವರು. ಆದರೆ ಇದೀಗ ಜ್ವರ, ಶೀತ, ಕೆಮ್ಮುಗಳಿಂದ ಬಳಲುವವರನ್ನು ಪರೀಕ್ಷಿಸಲು ಅವಕಾಶವಿಲ್ಲ. ಅವಕಾಶ ಕೊಟ್ಟರೂ ಕೊರೋನಾದಿಂದ ವೈದ್ಯರು ಹಿಂಜರಿಯುವುದು ಗ್ಯಾರಂಟಿ. ಹೀಗಾಗಿ ಅವರಿಗೂ ಲಾಭವಿಲ್ಲದಂತಾಗಿದೆ.

ಸರ್ಕಾರವೇ ಜ್ವರ, ಕೆಮ್ಮು, ನೆಗಡಿಯಂತಹ ಕಾಯಿಲೆಗಳಿದ್ದರೆ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂಬ ನಿಯಮ ಮಾಡಿದೆ. ಜತೆಗೆ ಕೊರೋನಾದ ಲಕ್ಷಣಗಳು ಇವೇ ಆಗಿರುವುದರಿಂದ ನಮಗೂ ಇಂಥ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಭಯ. ಹೀಗಾಗಿ ನಾವು ಕಿಮ್ಸ್‌ಗೆ ಕಳುಹಿಸುತ್ತೇವೆ ಎಂದು ಖಾಸಗಿ ಕ್ಲಿನಿಕ್‌ವೊಂದರ ವೈದ್ಯರು ತಿಳಿಸಿದ್ದಾರೆ. 

ಜ್ವರ, ಕೆಮ್ಮು ಹಾಗೂ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುವ ರೋಗಿಗಳ ವಿವರ ಪಡೆಯುವಂತೆ ಸರ್ಕಾರವೇ ಸೂಚಿಸಿದೆ. ನಾವು ಹೆಸರು, ಮೊಬೈಲ್‌ ಹಾಗೂ ಮನೆಯ ವಿಳಾಸ ಪಡೆದು ಪ್ರತಿದಿನ ಸಂಜೆ ಸರ್ಕಾರಕ್ಕೆ ತಿಳಿಸುತ್ತೇವೆ. ಇದರಿಂದ ಕೆಲವರು ಹೆದರಿ, ಮಾತ್ರೆ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮೆಡಿಕಲ್‌ ಶಾಪ್‌ವೊಂದರ ಮಾಲೀಕರು ಹೇಳಿದ್ದಾರೆ. 

ಅತ್ತ ಮೆಡಿಕಲ್‌ ಶಾಪ್‌ಗಳಲ್ಲೂ ಮಾತ್ರೆ ಸಿಗುತ್ತಿಲ್ಲ. ಇತ್ತ ಕ್ಲಿನಿಕ್‌ಗಳಲ್ಲೂ ಕೆಮ್ಮು, ಜ್ವರ ಬಂದರೆ ನೋಡುತ್ತಿಲ್ಲ. ಇನ್ನು ಈ ಲಕ್ಷಣಗಳಿವೆ ಎಂದು ನಾವು ಕಿಮ್ಸ್‌ಗೆ ಹೋದರೆ 15 ದಿನಗಟ್ಟಲೇ ಕ್ವಾರಂಟೈನ್‌ ಎಂದರೆ ಏನು ಮಾಡುವುದು? ಮನೆಯಲ್ಲೇ ಮೆಣಸು, ಶುಂಠಿ ಹಾಕಿ ಕಷಾಯ ಮಾಡಿಕೊಂಡು ಕುಡಿಯುತ್ತಿದ್ದೇವೆ ಎಂದು ನಾಗರಿಕ ಮಂಜುನಾಥ ರಡ್ಡಿ ತಿಳಿಸಿದ್ದಾರೆ. 

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"