ಹುಬ್ಬಳ್ಳಿ: ಕಿಮ್ಸ್‌ನಲ್ಲಿ ಹೊರಜಿಲ್ಲೆ ಬ್ಲ್ಯಾಕ್ ಫಂಗಸ್ ರೋಗಿಗಳು ತ್ರಿಶಂಕು
* ಚಿಕಿತ್ಸೆ ನೀಡಲಾಗದ ಸ್ಥಿತಿಯಲ್ಲಿ ಕಿಮ್ಸ್ ವೈದ್ಯರು
* ಆಯಾ ಜಿಲ್ಲಾಸ್ಪತ್ರೆ, ವೆನ್‌ಲಾಕ್ಸ್ ಆಸ್ಪತ್ರೆಯತ್ತ ರೋಗಿಗಳ ಪಯಣ
* ಜಿಲ್ಲಾ ಕೇಂದ್ರಗಳಲ್ಲಿ ಸೌಲಭ್ಯ ಕೊರತೆ
ಹುಬ್ಬಳ್ಳಿ(ಮೇ.28): ಉತ್ತರ ಕರ್ನಾಟಕದ ಆರೋಗ್ಯದಾಮ ಎನಿಸಿರುವ ಕಿಮ್ಸ್ ನಂಬಿ ಬಂದ ಇತರೆ ಜಿಲ್ಲೆಗಳ ಬ್ಲ್ಯಾಕ್ ಫಂಗಸ್ ಪೀಡಿತರು ಇದೀಗ ತ್ರಿಶಂಕು ಸ್ಥಿತಿಗೆ ತಲುಪಿದ್ದು, ಕಿಮ್ಸ್ ವೈದ್ಯರು ಸಹ ಚಿಕಿತ್ಸೆ ನೀಡದೇ ಕೈಚೆಲ್ಲಿ ಕುಳಿತಿದ್ದಾರೆ.
ಒಂದು ಹಂತದಲ್ಲಿ ಸುತ್ತಲಿನ ಎಲ್ಲ ಜಿಲ್ಲೆಗಳ ರೋಗಿಗಳು ಸೇರಿ ಕಿಮ್ಸ್‌ನಲ್ಲಿ ಮ್ಯುಕುರ್‌ಮೈಕೊಸಿಸ್ ಸೋಂಕು ಉಂಟಾದವರ ಸಂಖ್ಯೆ ಶತಕ ಮೀರಿತ್ತು. ಈಗಲೂ ಹೆಚ್ಚು ಕಡಿಮೆ ಶತಕದ ಆಸುಪಾಸಿದೆ. ಹೊರಜಿಲ್ಲೆಯವರೆ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.
ಕೊರೋನಾ ವೇಳೆಯ ಈ ಕ್ಲಿಷ್ಟಕರ ಸಂದರ್ಭದಲ್ಲಿ ಕಿಮ್ಸ್ ಎಂದರೆ ಉತ್ತರ ಕರ್ನಾಟಕದ ಜಿಲ್ಲೆಗಳ ಪಾಲಿನ ಸಂಜೀವಿನಿ ಎಂಬ ಭಾವನೆ ಇತ್ತು. ಕಿಮ್ಸ್‌ನ್ನು ಬ್ಲ್ಯಾಕ್ ಫಂಗಸ್ ಚಿಕಿತ್ಸೆಯ ಪ್ರಾದೇಶಿಕ ಕೇಂದ್ರವೆಂದೂ ಘೋಷಿಸಲಾಗಿತ್ತು. ಹೀಗಾಗಿ ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ರಾಯಚೂರ, ಹಾವೇರಿ, ತುಮಕೂರ, ಉತ್ತರ ಕನ್ನಡ, ಚಿತ್ರದುರ್ಗ ಜಿಲ್ಲೆಗಳ ರೋಗಿಗಳು ಇಲ್ಲಿಗೆ ದಾಖಲಾಗಿ ಚಿಕಿತ್ಸೆಯಲ್ಲಿದ್ದರು. ಆದರೆ ಬ್ಲ್ಯಾಕ್ ಫಂಗಸ್ ವಿಚಾರದಲ್ಲಿ ಕಿಮ್ಸ್ ಹೊರ ಜಿಲ್ಲೆಗಳ ಪಾಲಿನ ರೋಗಿಗಳಿಗೆ ಉದಾರವಾಗದ ಬಗ್ಗೆ ಸಾಕಷ್ಟು ಅಸಮಾಧಾನ ಕೇಳಿಬರುತ್ತಿದೆ.
ಕೊರೋನಾದಿಂದ ಗುಣಮುಖರಾಗಿ ಬ್ಲ್ಯಾಕ್ ಫಂಗಸ್ ತಗುಲಿದ ಇತರೆ ಜಿಲ್ಲೆಗಳಿಂದ ಬಂದ ರೋಗಿಗಳನ್ನು ತಮ್ಮ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತೆ ಹೇಳಿ ವಾಪಸ್ ಕಳಿಸಲಾಗುತ್ತಿದೆ. ದಾಖಲಾಗಿ ಗಂಭೀರ ಸ್ಥಿತಿಯಲ್ಲಿರುವ ಹೊರ ಜಿಲ್ಲೆಗಳವರು ಚಿಕಿತ್ಸೆಯಲ್ಲಿದ್ದಾರೆ. ಹೊಸದಾಗಿ ಬಂದ ರೋಗಿಗಳನ್ನು ದಾಖಲು ಮಾಡಿಕೊಳ್ಳುತ್ತಿಲ್ಲ. ಇದು ರೋಗಿಗಳ ಆತಂಕಕ್ಕೆ ಕಾರಣವಾಗಿದೆ.
ಕೊರೋನಾ ಸೋಂಕಿಗಿಂತ ಭಯದಿಂದ ಸತ್ತವರೇ ಹೆಚ್ಚು!
ಅಗತ್ಯದಷ್ಟು ಅಂಪೊಟೋರಿಸಿಯನ್ ಬಿ ಔಷಧ ಪೂರೈಕೆ ಇಲ್ಲದಿರುವುದು, ಕಿಮ್ಸ್ ಮೇಲೆ ಬ್ಲ್ಯಾಕ್ ಫಂಗಸ್ ರೋಗಿಗಳ ಹೊರೆ ಹೆಚ್ಚಾಗಿದ್ದು ಹಾಗೂ ಕಿಮ್ಸ್ ಒಂದರಲ್ಲೇ ಶತಕ ಮೀರಿ ಮುಂದೆ ಹೆಚ್ಚುಕಡಿಮೆಯಾದರೆ ಬೇರೆ ರೀತಿ ಸಂದೇಶ ಹೋಗಬಹುದು ಎಂಬ ಕಾರಣಕ್ಕೆ ಜಿಲ್ಲಾಸ್ಪತ್ರೆಗಳಿಗೆ ಹೋಗುವಂತೆ ಕಿಮ್ಸ್ ಅಧಿಕಾರಿಗಳು ಕಳಿಸುತ್ತಿದ್ದಾರೆ ಎನ್ನಲಾಗಿದೆ.
ಜಿಲ್ಲಾ ಕೇಂದ್ರಗಳಲ್ಲಿ ಸೌಲಭ್ಯ ಕೊರತೆ:
ಹೀಗೆ ಜಿಲ್ಲಾಸ್ಪತ್ರೆಗಳಿಗೆ ವಾಪಸ್ ತೆರಳಿದವರು ತ್ರಿಶಂಕು ಸ್ಥಿತಿಗೆ ತಲುಪಿದ್ದಾರೆ. ಬ್ಲ್ಯಾಕ್ ಫಂಗಸ್ ಉಂಟಾದವರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಮೈಕ್ರೋಡಿಬ್ರಾಯಿಡರ್ ಯಂತ್ರ ಬೇಕಾಗುತ್ತದೆ. ಆದರೆ ಈ ಯಂತ್ರಗಳು ಕೆಲ ಜಿಲ್ಲಾಸ್ಪತ್ರೆಗಳಲ್ಲಿ ಲಭ್ಯವಿಲ್ಲ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ನಿವಾಸಿಯೊಬ್ಬರಿಗೆ ಬ್ಲ್ಯಾಕ್ ಫಂಗಸ್ ಉಂಟಾಗಿ ಕಿಮ್ಸ್‌ಗೆ ಬಂದ ವೇಳೆ ವಾಪಸ್ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ. ಆದರೆ ಅಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಯಂತ್ರವಿಲ್ಲ ಎಂದು ವೈದ್ಯರು ಹೇಳಿದ್ದಾಗಿ ಸಂಬಂಧಿಕರು ಟ್ವಿಟ್ಟರ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಅದೇ ರೀತಿ ಉತ್ತರಕನ್ನಡ ಜಿಲ್ಲೆಯಲ್ಲಿ ಒಬ್ಬರಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡ ವೇಳೆ ಅಲ್ಲಿನ ಸಿವಿಲ್ ಆಸ್ಪತ್ರೆಯಲ್ಲಿ ಅಗತ್ಯ ಯಂತ್ರೋಪಕರಣಗಳು ಇಲ್ಲದ ಕಾರಣಕ್ಕೆ ಕಿಮ್ಸ್‌ಗೆ ಸಂಪರ್ಕಿಸಲಾಗಿತ್ತು. ಇಲ್ಲಿಯೂ ದಾಖಲಿಸಿಕೊಳ್ಳದೆ ಬಳಿಕ ಮಂಗಳೂರಿನ ವೆನ್‌ಲಾಕ್‌ಗೆ ತೆಗೆದುಕೊಂಡು ಹೋಗಲಾಗಿದೆ.
ಅದೇ ರೀತಿ ಹಲವರು ತಮ್ಮ ಜಿಲ್ಲಾಸ್ಪತ್ರೆಗಳಲ್ಲಿ ಸಾಧಾರಣ ಚಿಕಿತ್ಸೆಯಲ್ಲಿ ಮುಂದುವರಿದಿದ್ದಾರೆ. ಬ್ಲ್ಯಾಕ್ ಫಂಗಸ್‌ನ ಮೊದಲೆರಡು ಹಂತದಲ್ಲಿ ಇರುವವರು ಹೇಗೋ ಚೇತರಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ನಂತರದ ಮೂರು ಹಾಗೂ ನಾಲ್ಕನೇ ಹಂತಕ್ಕೆ ತಲುಪಿದವರಿಗೆ ಕಷ್ಟ. ಒಂದು ಕಡೆ ಅಗತ್ಯದಷ್ಟು ಅಂಪೊಟೊರಿಸಿಯನ್ ಔಷಧ ಲಭ್ಯವಿಲ್ಲದೆ, ಇನ್ನೊಂದು ಕಡೆ ಶಸ್ತ್ರಚಿಕಿತ್ಸೆಯೂ ಆಗದೆ ಜೀವ ಹಿಡಿದುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ ಎಂದು ವೈದ್ಯಾಧಿಕಾರಿಯೊಬ್ಬರು ತಿಳಿಸಿದರು.
ಇಲ್ಲಿಗೆ ಬಂದಿದ್ದು ಸಾಲ್ತಿಲ್ಲ:
ಇನ್ನು ಕಿಮ್ಸ್‌ನಲ್ಲಿ 96ಕ್ಕೂ ಹೆಚ್ಚಿನ ರೋಗಿಗಳಿದ್ದು, ಸದ್ಯ 6 ಸಾವಿರಕ್ಕೂ ಹೆಚ್ಚಿನ ಅಂಪೊಟೋರಿಸಿಯನ್ ಬಿ ಔಷಧ ಬೇಕಾಗಿದೆ. ಆದರೆ, ಇಲ್ಲಿವರೆಗೆ ಕಿಮ್ಸ್‌ಗೆ ದಕ್ಕಿದ್ದು ಕೇವಲ 155 ವಯಲ್ಸ್ ಮಾತ್ರ. ಇನ್ನೂ 100 ವಯಲ್ಸ್ ಬರುವ ನಿರೀಕ್ಷೆಯಿದೆ. ಆದರೆ ಇವು ಅಗತ್ಯಕ್ಕೆ ಹೋಲಿಸಿದರೆ ತೀರಾ ಕಡಿಮೆ. ಹೀಗಾಗಿ ಹೊರ ಜಿಲ್ಲೆಗಳವರು ಬಂದರೂ ಚಿಕಿತ್ಸೆ ಒದಗಿಸಲಾಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ.