ಪಂಪ್‌ವೆಲ್ ಮೇಲ್ಸೇತುವೆಯಲ್ಲಿ ಭೀಕರ ಅಪಘಾತ: ಒಬ್ಬ ಸಾವು, ಐವರು ಗಂಭೀರ
ಪಂಪ್‌ವೆಲ್ ಮೇಲ್ಸೇತುವೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಒಬ್ಬರು ಮೃತಪಟ್ಟರೆ ಐದು ಮಂದಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಲ್ಟೋ ಮತ್ತು ಡಸ್ಟರ್ ಕಾರುಗಳ ನಡುವೆ ಅಪಘಾತ ನಡೆದ ಬಳಿಕ ಆಲ್ಟೋ ಕಾರು ಮೇಲ್ಸೇತುವೆಯಿಂದ ಕೆಳಗೆ ಸರ್ವಿಸ್ ರಸ್ತೆಗೆ ಉರುಳಿ ಈ ಅವಘಡ ಸಂಭವಿಸಿದೆ. ವಾರದ ಹಿಂದೆಯಷ್ಟೆ ಉದ್ಘಾಟನೆಗೊಂಡಿರುವ ಪಂಪ್‌ವೆಲ್ ಮೇಲ್ಸೇತುವೆಯಲ್ಲಿ ಇದು ಮೊದಲ ಅಪಘಾತವಾಗಿದೆ.
ಮಂಗಳೂರು(ಫೆ.09): ಪಂಪ್‌ವೆಲ್ ಮೇಲ್ಸೇತುವೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಒಬ್ಬರು ಮೃತಪಟ್ಟರೆ ಐದು ಮಂದಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಲ್ಟೋ ಮತ್ತು ಡಸ್ಟರ್ ಕಾರುಗಳ ನಡುವೆ ಅಪಘಾತ ನಡೆದ ಬಳಿಕ ಆಲ್ಟೋ ಕಾರು ಮೇಲ್ಸೇತುವೆಯಿಂದ ಕೆಳಗೆ ಸರ್ವಿಸ್ ರಸ್ತೆಗೆ ಉರುಳಿ ಈ ಅವಘಡ ಸಂಭವಿಸಿದೆ. ವಾರದ ಹಿಂದೆಯಷ್ಟೆ ಉದ್ಘಾಟನೆಗೊಂಡಿರುವ ಪಂಪ್‌ವೆಲ್ ಮೇಲ್ಸೇತುವೆಯಲ್ಲಿ ಇದು ಮೊದಲ ಅಪಘಾತವಾಗಿದೆ.
ಅಪಘಾತಕ್ಕೀಡಾದ ಡಸ್ಟರ್ ಕಾರಿನಲ್ಲಿದ್ದ ನಗರದ ಗ್ಯಾರೇಜ್‌ವೊಂದರ ಮುಖ್ಯಸ್ಥ, ಬಜಾಲ್ ನಿವಾಸಿ ಪ್ರವೀಣ್ ಫರ್ನಾಂಡಿಸ್ (45) ಮೃತರು. ಆಲ್ಟೋ ಕಾರಿನಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಟ್ರೋಲಿಗರನ್ನು ಅಭಿನಂದಿಸಿದ ಸಂಸದ ನಳಿನ್.
ಶನಿವಾರ ಸಂಜೆ ಸುಮಾರು 5 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66ರ ನಂತೂರು ಕಡೆಯಿಂದ ಉಳ್ಳಾಲ ಕಡೆಗೆ ತೆರಳುತ್ತಿದ್ದ ಮಾರುತಿ ಆಲ್ಟೋ 800 ಕಾರು ಮೇಲ್ಸೇತುವೆ ಮೂಲಕ ಸಾಗುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉಳ್ಳಾಲ ಕಡೆಯಿಂದ ನಂತೂರು ಕಡೆಗೆ ತೆರಳುತ್ತಿದ್ದ ರೆನಾಲ್ಟ್ ಡಸ್ಟರ್ ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಡಸ್ಟರ್ ಕಾರಿನಲ್ಲಿದ್ದ ಪ್ರವೀಣ್ ಫರ್ನಾಂಡಿಸ್ ಮಾರಣಾಂತಿಕವಾಗಿ ಗಾಯಗೊಂಡರು. ಸ್ಥಳೀಯ ಆಸ್ಪತ್ರೆಗೆ ಅವರನ್ನು ಕೊಂಡೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅಪಘಾತಕ್ಕೆ ಕಾರಣವಾದ ಆಲ್ಟೋ ಕಾರು ಮೇಲ್ಸೇತುವೆ ಮೇಲಿನಿಂದ ಕೆಳಗೆ ಸರ್ವಿಸ್ ರಸ್ತೆಗೆ ಉರುಳಿ ಬಿತ್ತು. ಅದರಲ್ಲಿದ್ದ ಐವರೂ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಆಲ್ಟೋ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಬಳಿಕ ಕ್ರೇನ್ ಮೂಲಕ ಕಾರು ಪಕ್ಕಕ್ಕೆ ಸರಿಸಲಾಯಿತು.
ಮಂಗಳೂರು ಪಂಪ್‌ವೆಲ್ ಫ್ಲೈಓವರ್‌ಗೆ ಕೊನೆಗೂ ಸಿಕ್ತು ಉದ್ಘಾಟನೆ ಭಾಗ್ಯ
ಮೃತ ಪ್ರವೀಣ್ ಫರ್ನಾಂಡಿಸ್ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರ (ನಾಗುರಿ) ಠಾಣೆಯಲ್ಲಿ ದೂರು ದಾಖಲಾಗಿದೆ. ಮೇಲ್ಸೇತುವೆ ಮೇಲೆ ಅಪಘಾತ ನಡೆದ ಸುದ್ದಿ ತಿಳಿಯುತ್ತಿದ್ದಂತೆ ಕುತೂಹಲಿಗರ ದಂಡೇ ನೆರೆದಿತ್ತು. ಕೆಲ ಸಮಯದವರೆಗೆ ಟ್ರಾಫಿಕ್ ಜ್ಯಾಂ ಏರ್ಪಟ್ಟಿತ್ತು.