ಮಂಗಳೂರು(ಜ.31): ನನ್ನನ್ನು ಟೀಕೆ ಮಾಡಿದವರೇ ನನ್ನ ದೇವರು ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಮಂಗಳೂರು ಫ್ಲೈಓವರ್ ಉದ್ಘಾಟಿಸಿ ಮಾತನಾಡಿದ ಅವರು ಟ್ರೋಲ್ ಮಾಡಿದವರನ್ನು ಅಭಿನಂದಿಸಿದ್ದಾರೆ.

ನನ್ನನ್ನ ಟೀಕೆ ಮಾಡಿದವರೆಲ್ಲಾ ನನ್ನ ದೇವರು. ನನ್ನನ್ನು ಟ್ರೋಲ್ ಮಾಡಿದ ಎಲ್ಲರಿಗೂ ಅಭಿನಂದನೆ ‌ಸಲ್ಲಿಸುತ್ತೇನೆ. ಇವತ್ತು ನನ್ನನ್ನು ಇಡೀ ದೇಶದಲ್ಲಿ ಫೇಮಸ್‌ ಮಾಡಿದ್ದಾರೆ. ಈ ಕಾರಣಕ್ಕೆ ಅಂಥವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

'ಬಲೆ ಪಂಪ್‌ವೆಲ್‌ಗೇ' BJPಯಿಂದ ತುಳುವಿನಲ್ಲೇ ಆಹ್ವಾನ..!

ನನ್ನನ್ನು ಚುಚ್ಚಿ ಕೆಲಸ ಮಾಡಲು ಸಾಥ್‌ ನೀಡಿದವರಿಗೆ ಧನ್ಯವಾದಗಳು. ವಿರೋಧ ಮಾಡುವ ಎಲ್ಲರೂ ಅಭಿಮಾನಿಗಳು. ಅವರು ವಿರೋಧ ಮಾಡಿದ ಕಾರಣಕ್ಕೆ ಈ ಕೆಲಸ ವೇಗವಾಗಿ ಆಗಿದೆ ಎಂದು ಅವರು ಹೇಳಿದ್ದಾರೆ.

10 ವರ್ಷಗಳಿಂದ ನಡೆಯುತ್ತಿದ್ದ ಪಂಪ್‌ವೆಲ್ ಫ್ಲೈ ಓವರ್ ಬಗ್ಗೆ ಮಂಗಳೂರಿನ ಟ್ರೋಲ್ ಪೇಜ್‌ಗಳು ಸಾಕಷ್ಟು ಟ್ರೋಲ್ ಮಾಡಿತ್ತು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪಂಪ್‌ವೆಲ್ ಉದ್ಘಾಟನೆಗೆ ಹಲವು ಡೆಡ್‌ಲೈನ್‌ಗಳನ್ನು ಕೊಟ್ಟಿದ್ದರು.

2010ರಲ್ಲಿ ಪಂಪ್‌ವೆಲ್‌ ಫ್ಲೈಓವರ್ ಕಾಮಗಾರಿ ಆರಂಭವಾಗಿತ್ತು. ಸುಮಾರು 10 ವರ್ಷಗಳ ಕಾಲ ನಡೆದ ಕಾಮಗಾರಿ ಹಲವು ಬಾರಿ ಡೆಡ್‌ಲೈನ್‌ ನೀಡಿದರೂ ಕೆಲಸ ಮಾತ್ರ ಪೂರ್ತಿಯಾಗಿರಲಿಲ್ಲ. ಈ ಸಂಬಂಧ ಸಂಸದ ನಳಿನ್ ಅವರನ್ನು ಮಂಗಳೂರು ಫೇಸ್‌ಬುಕ್ ಟ್ರೋಲ್ ಪೇಜ್‌ಗಳು ಬಹಳಷ್ಟು ಟ್ರೋಲ್ ಮಾಡಿತ್ತು. ಈ ಹಿಂದೆಯೂ ಡಿಸೆಂಬರ್ ಕೊನೆಗೆ ಕಾಮಗಾರಿ ಕೊನೆಗೊಳ್ಳುತ್ತದೆ ಎಂದು ಹೇಳಿದ್ದರೂ, ಕೆಲಸ ಮಾತ್ರ ಪೂರ್ತಿಯಾಗಿರಲಿಲ್ಲ. ಇದೀಗ ಕೊನೆಗೂ ಕಾಮಗಾರಿ ಪೂರ್ಣವಾಗಿದ್ದು, ಭರ್ಜರಿಯಾಗಿ ಉದ್ಘಾಟನೆಯಾಗಿದೆ. 600 ಮೀಟರ್ ಉದ್ದದ ಫ್ಲೈಓವರ್‌ನಲ್ಲಿ ಮೆರವಣಿಗೆಯೂ ನಡೆದಿತ್ತು.