ಮಂಗಳೂರು(ಸೆ.08): ಕೇಂದ್ರ ಹೊಸ ಮೋಟಾರು ವಾಹನ ಕಾಯ್ದೆ ದ.ಕ. ಜಿಲ್ಲೆಯಲ್ಲಿ ಜಾರಿಗೊಂಡಿದೆ. ಇನ್ನು ಮುಂದೆ ಸಂಚಾರ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ತೆರುವುದು ಅನಿವಾರ್ಯ. ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸೆ.7ರಿಂದಲೇ ಜಾರಿಗೆ ಬಂದಿದೆ. ಆದರೆ ಗ್ರಾಮಾಂತರ ವ್ಯಾಪ್ತಿಯಲ್ಲಿ ಸೆ.9ರಿಂದ ಅನುಷ್ಠಾನಕ್ಕೆ ಬರಲಿದೆ.

ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳಿಗೆ ವಿಧಿಸುವ ದಂಡದ ಮೊತ್ತ ಐದು ಪಟ್ಟು ಹೆಚ್ಚಳವಾಗಿದೆ. ಲೈಸೆನ್ಸ್‌ ಇಲ್ಲದಿದ್ದರೆ 500 ರು. ಇದ್ದ ದಂಡ 5 ಸಾವಿರ ರು., ಡ್ರಿಂಕ್‌ ಅಂಡ್‌ ಡ್ರೈವ್‌ 2 ಸಾವಿರ ರು.ನಿಂದ 10 ಸಾವಿರ ರು., ಆ್ಯಂಬುಲೆನ್ಸ್‌ಗೆ ದಾರಿ ನೀಡದಿದ್ದರೆ 10 ಸಾವಿರ ರು., ಪರ್ಮಿಟ್‌ ಇಲ್ಲದಿದ್ದರೆ 5 ಸಾವಿರ ರು.ನಿಂದ 10 ಸಾವಿರ ರು., ಅತಿ ವೇಗದ ಚಾಲನೆಗೆ 400 ರು.ನಿಂದ 1,000 ರು., ಸೀಟ್‌ ಬೆಲ್ಟ್‌ ಹಾಕದಿದ್ದರೆ 100 ರು.ನಿಂದ 1,000 ರು., ಓವರ್‌ ಲೋಡಿಂಗ್‌ಗೆ 2 ಸಾವಿರ ರು.ನಿಂದ 20 ಸಾವಿರ ರು., ಪ್ರಯಾಣಿಕರ ಓವರ್‌ ಲೋಡಿಂಗ್‌ಗೆ 1 ಸಾವಿರ ರು., ದ್ವಿಚಕ್ರ ವಾಹನದಲ್ಲಿ ಓವರ್‌ ಲೋಡಿಂಗ್‌ 100 ರು.ನಿಂದ 2 ಸಾವಿರ ರು., ವೇಗದ ಚಾಲನೆಗೆ 1,000 ರು.ನಿಂದ 2 ಸಾವಿರ ರು. ಹೊಸ ಮೋಟಾರು ವಾಹನ ತಿದ್ದುಪಡಿ ಕಾಯಿದೆಯಲ್ಲಿ ದಂಡ ವಿಧಿಸಬಹುದಾಗಿದೆ.

ದಂಡ ಕಟ್ಟು ಎಂದಿದ್ದಕ್ಕೆ ಎಎಸ್‌ಐಗೆ ಪಂಚ್‌!

ಕುಡಿದು ವಾಹನ ಚಾಲನೆ ಪುನರಾವರ್ತನೆಯಾದರೆ 15 ಸಾವಿರ ರು. ಮತ್ತು 2 ವರ್ಷ ಜೈಲು ಶಿಕ್ಷೆ, ಪ್ರಯಾಣಿಕರ ಓವರ್‌ ಲೋಡಿಂಗ್‌ಗೆ ಪ್ರತಿ ಪ್ರಯಾಣಿಕರಿಗೆ 1 ಸಾವಿರ ರು., ದ್ವಿಚಕ್ರ ವಾಹನದಲ್ಲಿ ಓವರ್‌ ಲೋಡಿಂಗ್‌ ಮಾಡಿದರೆ 3 ತಿಂಗಳು ಚಾಲನಾ ಪರವಾನಗಿ ರದ್ದು, ಸೀಟ್‌ಬೆಲ್ಟ್‌ ಹಾಕದಿದ್ದರೆ 3 ತಿಂಗಳು ಪರವಾನಗಿ ರದ್ದು ಮಾಡಲು ಆದೇಶದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡುವ ಭಿತ್ತಿಪತ್ರಗಳನ್ನು ಮುದ್ರಿಸಿ ಸಂಚಾರಿ ಪೊಲೀಸರು ಪ್ರಚಾರ ಮಾಡುತ್ತಿದ್ದಾರೆ. ನಗರದ ಪ್ರಮುಖ ವೃತ್ತಗಳಲ್ಲಿ ನಾಮಫಲಕ ಪ್ರದರ್ಶಿಸಿ ಜಾಗೃತಿ ಮೂಡಿಸಿದ್ದಾರೆ.

ಮೊದಲ ದಿನ 17 ಸಾವಿರ ರು. ದಂಡ

ಮಂಗಳೂರು ನಗರದಲ್ಲಿ ಪರಿಷ್ಕೃತ ದಂಡ ಜಾರಿಗೊಂಡ ಮೊದಲ ದಿನವೇ ಮದ್ಯ ಸೇವಿಸಿ ನಿರ್ಲಕ್ಷ್ಯತನ ಮತ್ತು ಅತಿ ವೇಗದದಿಂದ ವಾಹನ ಚಲಾಯಿಸಿದ ಚಾಲಕ ಹೇಮಂತ್‌ ಎಂಬವರಿಗೆ ಪೊಲೀಸರು ಮೂರು ಸೆಕ್ಷನ್‌ಗಳಡಿ ಒಟ್ಟು 17 ಸಾವಿರ ರು. ದಂಡ ವಿಧಿಸಿದ್ದಾರೆ. ನಗರದ ಎರಡನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಂಡ ಮೊತ್ತವನ್ನು ಪಾವತಿಸಿದ್ದಾರೆ.

ಆ್ಯಪ್‌ ಮೂಲಕವೂ ದಾಖಲೆ ತೋರಿಸಿ

ಡಿಜಿ ಲಾಕರ್‌ ಮತ್ತು ಎಂ ಪರಿವಾಹನ್‌ ಆ್ಯಪ್‌ ಮೂಲಕ ಸಲ್ಲಿಸುವ ದಾಖಲೆಗಳನ್ನು ಮೋಟಾರು ವಾಹನ ಕಾಯ್ದೆಯ ಪ್ರಕಾರ ಮಾನ್ಯವೆಂದು ಹಾಗೂ ಸಾರಿಗೆ ಅಧಿಕಾರಿಗಳು ನೀಡಿದ ಪ್ರಮಾಣಪತ್ರಗಳಿಗೆ ಸಮಾನವೆಂದು ಪರಿಗಣಿಸುವುದರಿಂದ ಇಲಾಖೆಯು ದಾಖಲೆಗಳನ್ನು ಪರಿಶೀಲಿಸುವಾಗ ವಾಹನದ ದಾಖಲೆಗಳನ್ನು ಮತ್ತು ಚಾಲನಾ ಪರವಾನಗಿಗಳನ್ನು ಈ ಆ್ಯಪ್‌ ಮೂಲಕ ಸಲ್ಲಿಸಬಹುದು ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ಟ್ರಾಫಿಕ್ ನಲ್ಲಿ ಯಾವ ದಾಖಲೆ ತೋರಿಸಬೇಕು?

ಮೋಟಾರು ವಾಹನ ನಿಯಮ ಉಲ್ಲಂಘನೆಗೆ ಪರಿಷ್ಕೃತ ದರ ವಿಧಿಸಲು ಸಾಫ್ಟ್‌ವೇರ್‌ ಅಪ್ಡೇಟ್‌ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಸೆ.9ರಿಂದ ಜಿಲ್ಲೆಯಲ್ಲಿ ಹೊಸ ದಂಡ ದರ ಕಾರ್ಯಗತಗೊಳ್ಳಲಿದೆ. ಈಗಾಗಲೇ ವಿವಿಧ ಕಡೆಗಳಲ್ಲಿ ಸಾರ್ವಜನಿಕರಿಗೆ ಈ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಸಭೆ-ಸಮಾರಂಭಗಳನ್ನು ಆಯೋಜನೆ ಮಾಡಿ ಜಾಗೃತಿ ಮೂಡಿಸಲಾಗುವುದು ಎಂದು ಎಸ್‌ಪಿ ಲಕ್ಷ್ಮೀ ಪ್ರಸಾದ್‌ ಹೇಳಿದ್ದಾರೆ.