ಬೆಂಗಳೂರು [ಸೆ.06]:  ಸಂಚಾರ ನಿಯಮ ಉಲ್ಲಂಘನೆ ದಂಡ ಪರಿಷ್ಕರಣೆ ಹಿನ್ನಲೆಯಲ್ಲಿ ಚಾಲನಾ ಪರವಾನಗಿ ಹಾಗೂ ವಾಹನ ದಾಖಲಾತಿಗಳನ್ನು ಮೂಲ (ಒರಿಜಿನಲ್‌) ಪ್ರತಿ ಮಾತ್ರ ಸ್ವೀಕರಿಸುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಜೆರಾಕ್ಸ್‌ ಪತ್ರಿ ಸ್ವೀಕರಿಸುವುದಿಲ್ಲ:

ಚಾಲನಾ ಪರವಾನಿಗೆ, ವಾಹನ ನೋಂದಣಿ ಹಾಗೂ ವಿಮಾ ಪ್ರಮಾಣ ಪತ್ರ ಸೇರಿದಂತೆ ವಾಹನ ದಾಖಲಾತಿಗಳ ಜೆರಾಕ್ಸ್‌ ಪ್ರತಿಯನ್ನು ಸ್ವೀಕರಿಸುವುದಿಲ್ಲ ಎಂದು ಪೂರ್ವ ವಿಭಾಗದ (ಸಂಚಾರ) ಡಿಸಿಪಿ ಡಾ.ಕೆ.ಜಿ.ಜಗದೀಶ್‌ ಹೇಳಿದ್ದಾರೆ.

ಡಿಎಲ್‌ ಮತ್ತು ಆರ್‌ಸಿ ಪ್ರಮಾಣ ಪತ್ರಗಳು ಸರ್ಕಾರದ ಇಲಾಖೆ ನೀಡುತ್ತದೆ. ಆದರೆ ವಿಮಾ ಕಂಪನಿಗಳು ಖಾಸಗಿಯಾಗಿರುವ ಕಾರಣ ವಿಮಾ ದಾಖಲೆಗಳನ್ನು ಕೆಲವರು ನಕಲಿ ಮಾಡಬಹುದು. ಹೀಗಾಗಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಒರಿಜಿನಲ್‌ ದಾಖಲೆಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ ಎಂದು ಡಿಸಿಪಿ ಸ್ಪಷ್ಟಪಡಿಸಿದ್ದಾರೆ.

ಡಿಜಿ ಲಾಕರ್‌ ಮತ್ತು ಇ ಫಾರ್ಮೆಟ್‌ ಸ್ವೀಕಾರ:

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಡಿಜಿ ಲಾಕರ್‌ ಮತ್ತು ಇ.ಫಾರ್ಮೆಟ್‌ನಲ್ಲಿರುವ ದಾಖಲೆಗಳನ್ನು ಸಾರ್ವಜನಿಕರು ತೋರಿಸಿದರೆ ಸಮ್ಮಿತಿಸುವುದಾಗಿ ಡಿಸಿಪಿ ಹೇಳಿದ್ದಾರೆ. ಕೇಂದ್ರ ಸರ್ಕಾರದ ಅಧಿಕೃತ ‘ಡಿಜಿಲಾಕರ್‌’ ಆ್ಯಪ್‌ನಲ್ಲಿ ಸಂಗ್ರಹಿಸಿಕೊಂಡಿರುವ ಚಾಲನಾ ಪರವಾನಗಿ ಹಾಗೂ ಇತರೆ ದಾಖಲೆಗಳನ್ನು ಪರಿಗಣಿಸಲಾಗುತ್ತದೆ. ಅಲ್ಲದೆ ಸಾರಿಗೆ ಇಲಾಖೆಯಿಂದ ಡೌನ್‌ ಲೋಡ್‌ ಮಾಡಿಕೊಂಡ ದಾಖಲೆಗಳನ್ನು (ಇ ಫಾರ್ಮೆಟ್‌) ಸಹ ಸ್ವೀಕರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

‘ಡಿಜಿ ಲಾಕರ್‌’ ಬಳಸಿ:

‘ಡಿಜಿ ಲಾಕರ್‌’ ಕೇಂದ್ರ ಸರ್ಕಾರ ತಂದಿರುವ ಆ್ಯಪ್‌ ಆಗಿದೆ. ಪ್ಲೇ ಸ್ಟೋರ್‌ನಲ್ಲಿ  ಆ್ಯಪನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಬಳಿಕ ಅಲ್ಲಿ ಆಧಾರ್‌, ಚಾಲನಾ ಪರವಾನಗಿ, ಆರ್‌ಸಿ, ವಿಮೆ ಇನ್ನಿತರ ದಾಖಲೆಗಳು ಇರುತ್ತವೆ. ತಮಗೆ ಅಗತ್ಯವಿರುವ ದಾಖಲೆಗಳನ್ನು ನೋಂದಣಿ ಸಂಖ್ಯೆ ದಾಖಲೆಸಿ ದಾಖಲಾತಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ತಮ್ಮ ಬಳಿ ಯಾವುದೇ ಮೂಲ ದಾಖಲೆಗಳನ್ನು ಕೊಂಡೊಯ್ಯುವ ಬದಲಿಗೆ ಡಿಜಿ ಲಾಕರ್‌ನಲ್ಲಿರುವ ದಾಖಲೆ ತೋರಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರಿಂದ ಮೂಲ ದಾಖಲೆಗಳನ್ನು ಕೊಂಡೊಯ್ಯುವುದು ತಪ್ಪಲಿದೆ. ಜತೆಗೆ ಪೊಲೀಸರ ಪರಿಶೀಲನೆಗೂ ಸುಲಭವಾಗಲಿದೆ.

ಡ್ರಿಂಕ್‌ ಆ್ಯಂಡ್‌ ಡ್ರೈವ್‌ಗೆ 15 ಸಾವಿರ ದಂಡ!

ಪಾನಮತ್ತ ಚಾಲನೆ ಮಾಡಿದ ಆರೋಪದ ಮೇರೆಗೆ ಬಸವರಾಜು ಎಂಬುವವರಿಗೆ ನಗರದ 3ನೇ ಎಎಂಎಂ ನ್ಯಾಯಾಲಯವು .15 ಸಾವಿರ ದಂಡ ವಿಧಿಸಿದೆ. ಯಲಹಂಕ ಸಂಚಾರ ಠಾಣೆ ಪೊಲೀಸರು, ಬಸವರಾಜು ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದ್ದರು.