ಬೆಂಗಳೂರು [ಸೆ.06]:  ಸಂಚಾರ ನಿಯಮ ಉಲ್ಲಂಘಿಸಿದ ಸವಾರನಿಗೆ ದಂಡ ಕಟ್ಟುವಂತೆ ಸೂಚಿಸಿದ ಸಹಾಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಮೇಲೆ ಸವಾರನೊಬ್ಬ ಹಲ್ಲೆ ನಡೆಸಿರುವ ಘಟನೆ ಸಿ.ಕೆ.ಅಚ್ಚುಕಟ್ಟು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬನಶಂಕರಿ ಸಂಚಾರಿ ಪೊಲೀಸ್‌ ಠಾಣೆಯ ಎಎಸ್‌ಐ ಬಿ.ಲಿಂಗಯ್ಯ (58) ಹಲ್ಲೆಗೊಳಗಾದವರು. ಈ ಸಂಬಂಧ ಭುವನೇಶ್ವರಿ ನಗರದ ನಿವಾಸಿ ಲಿಂಗರಾಜು (40) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಎಎಸ್‌ಐ ಬಿ.ಲಿಂಗಯ್ಯ ಅವರು ಸೆ.3ರಂದು ಇಟ್ಟಮಡು ಜಂಕ್ಷನ್‌ ಜನತಾ ಬಜಾರ್‌ ಸಮೀಪ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಸಂಜೆ 5.30ರ ಸುಮಾರಿಗೆ ಜನತಾ ಬಜಾರ್‌ ಕಡೆಯಿಂದ ನಾಯಂಡಹಳ್ಳಿ ಕಡೆಗೆ ಮೂವರು ವ್ಯಕ್ತಿಗಳು ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಎಎಸ್‌ಐ ಜತೆಗಿದ್ದ ಕಾನ್‌ಸ್ಟೇಬಲ್‌ ಸಂಚಾರ ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನ ತಡೆದು ದಂಡ ಕಟ್ಟುವಂತೆ ಸೂಚಿಸಿದರು. 

ಮೂವರ ಪೈಕಿ ಆರೋಪಿ ಲಿಂಗರಾಜು ತನ್ನ ಮಾವ ಹೈಗ್ರೌಂಡ್ಸ್‌ ಠಾಣೆಯಲ್ಲಿ ಪೊಲೀಸ್‌, ಅವರ ಬಳಿ ಮಾತನಾಡಿ ಎಂದಿದ್ದ. ಇದಕ್ಕೆ ಸೊಪ್ಪು ಹಾಕದ ಎಎಸ್‌ಐ ಲಿಂಗಯ್ಯ ಅವರು ದಂಡ ಕಟ್ಟಲೇಬೇಕು ಎಂದು ಹೇಳಿದ್ದಾರೆ. ಈ ವೇಳೆ ಆರೋಪಿ ಮತ್ತು ಎಎಸ್‌ಐ ನಡುವೆ ಮಾತಿನ ಚಕಮಕಿ ನಡೆದಿದೆ. ಕುಪಿತಗೊಂಡ ಆರೋಪಿ ಏಕಾಏಕಿ ಎಎಸ್‌ಐ ಅವರನ್ನು ಅವಾಚ್ಯ ಶಬ್ದದಿಂದ ನಿಂದಿಸಿ ಮುಖಕ್ಕೆ ಗುದ್ದಿ, ಕಾಲಿನಿಂದ ಹೊಟ್ಟೆಗೆ ಒದ್ದಿದ್ದಾನೆ. 

ಹಲ್ಲೆಯಿಂದಾಗಿ ಎಎಸ್‌ಐ ಮೂಗಿನಲ್ಲಿ ರಕ್ತ ಸ್ರಾವವಾಗಿದ್ದು, ಕೂಡಲೇ ಗಾಯಾಳುವನ್ನು ಜತೆಗಿದ್ದ ಕಾನ್‌ಸ್ಟೇಬಲ್‌ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಎಎಸ್‌ಐ ಕೊಟ್ಟದೂರಿನ ಮೇರೆಗೆ ಆರೋಪಿ ಲಿಂಗರಾಜುನನ್ನು ಬಂಧಿಸಿ ಹಲ್ಲೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಚಾಲಕನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.