Covid vaccination : ‘ಮಂತ್ರಕ್ಕೆ ತಿರುಮಂತ್ರ’ ಕಡೆಗೂ ದೇವಿ ಮೈಮೇಲೆ ಬಂದಿದ್ದ ಅಜ್ಜಿಗೆ ಲಸಿಕೆ
- ಜಡೆಯಲ್ಲ ಇದು ಸರ್ಪದ ಹೆಡೆ ಅಂದಿದ್ದ ಅಜ್ಜಿಗೆ ಕೊನೆಗೂ ಲಸಿಕೆ!
- ಅಜ್ಜಿ ಮೈಮೇಲೆ ಬಂದಿದ್ದ ದೇವಿ ಒಲ್ಲೆ ಅಂದ್ರೆ, ತಹಸೀಲ್ದಾರ್ ಕನಸಲ್ಲಿ ಬಂದ ದೇವಿ ಹಾಕ್ಸು ಅಂದ್ರಂತೆ
ದಾವಣಗೆರೆ (ನ.30): ಕೋವಿಡ್ ಲಸಿಕೆ (Covid vaccine) ಹಾಕಲು ಬಂದ ಅಧಿಕಾರಿ, ಸಿಬ್ಬಂದಿಗೆ ಮೈಮೇಲೆ ದೇವಿ ಬಂದಿದ್ದಾಳೆಂದು ಹೇಳಿ ಲಸಿಕೆ ಹಾಕಿಸಿಕೊಳ್ಳದೆ ವಾಪಸ್ ಕಳಿಸಿದ್ದ ಅಜ್ಜಿಗೆ (Old Lady) ತಹಸೀಲ್ದಾರ್ ಬಿ.ಎನ್.ಗಿರೀಶ, ಗ್ರಾಪಂ ಪಿಡಿಓ ಐ.ಸಿ.ವಿದ್ಯಾವತಿ, ಆರೋಗ್ಯಾಧಿಕಾರಿ(Health Officer) ಡಾ.ಧನಂಜಯ ನೇತೃತ್ವದ ತಂಡ ಹರಸಾಹಸ ಮಾಡಿ, ಮನವೊಲಿಸಿ ಕಡೆಗೂ ಲಸಿಕೆ ಹಾಕಿಸುವಲ್ಲಿ ಸಫಲವಾಗಿದೆ. ತಾಲೂಕಿನ ಕೈದಾಳೆ ಗ್ರಾಮದ ವೃದ್ಧೆಯೊಬ್ಬರು ಕೋವಿಡ್ ಲಸಿಕೆ ಪಡೆದಿರಲಿಲ್ಲ. ಭಾನುವಾರ ಹದಡಿ ಪಿಎಚ್‌ಸಿ (PHC) ಡಾ.ಧನಂಜಯ, ಗ್ರಾಪಂ ಕಾರ್ಯದರ್ಶಿ ಎ.ಎಚ್.ಜಯಪ್ಪ, ಗ್ರಾಮಲೆಕ್ಕಾಧಿಕಾರಿಗಳಾದ ಸುವರ್ಣ, ವೀರೇಶ ಹಾಗೂ ಸಿಬ್ಬಂದಿ ವೃದ್ಧೆಯ ಮನೆ ಬಳಿ ಹೋಗಿದ್ದರು. ಈ ವೇಳೆ ಮೈಮೇಲೆ ಕುಕ್ಕುವಾಡೇಶ್ವರಿ ಬಂದಿದ್ದಾಳೆ, ಮುಟ್ಟುತ್ತೀರಾ ಮುಟ್ಟಿನೋಡೋಣ ಎಂದು ತನ್ನ ಜಡೆಯನ್ನು ಎಳೆದು, ಇದು ಜಡೆಯಲ್ಲ. ಸರ್ಪದ ಹೆಡೆ ಎಂದು ಅಬ್ಬರಿಸಿದ್ದರಿಂದ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಲಸಿಕೆ ಹಾಕದೇ ಅಲ್ಲಿಂದ ವಾಪಸ್ಸಾಗಿದ್ದರು.
ಲಸಿಕೆ ಹಾಕಲು ಹೋದಾಗ ಆದ ಬೆಳವಣಿಗೆ ಬಗ್ಗೆ ಕನ್ನಡಪ್ರಭದಲ್ಲಿ ಗಮನಿಸಿದ ತಹಸೀಲ್ದಾರ್ ಬಿ.ಎನ್.ಗಿರೀಶ ಸೋಮವಾರ ಬೆಳಗ್ಗೆ ಕೈದಾಳೆ ಗ್ರಾಪಂ ಪಿಡಿಓ ವಿದ್ಯಾವತಿ, ವೈದ್ಯ ಡಾ.ಧನಂಜಯ, ಗ್ರಾಪಂ ಕಾರ್ಯದರ್ಶಿ ಜಯಪ್ಪ, ಬಿಲ್‌ಕಲೆಕ್ಟರ್ ಕೆ.ಎಂ.ಉಮೇಶ, ತಿಮ್ಮಣ್ಣ, ಕೆ.ರವಿಶಂಕರ್, ಎ.ಎನ್.ಕೊಟ್ರೇಶ, ಕೆ.ಎಚ್.ಮಲ್ಲಪ್ಪ, ಎಂ.ಪಿ.ತಿಮ್ಮಪ್ಪ, ಶುಶ್ರೂಷಕರ ಜೊತೆಗೆ ಅಜ್ಜಿ ಮನೆ ಬಳಿಗೆ ಹೋದಾಗ, ಅಜ್ಜಿಗೆ ಕೋವಿಡ್ ಲಸಿಕೆ (covid Vaccine) ಹಾಕಿಸಿಕೊಳ್ಳುವಂತೆ ಮನವೊಲಿಸಲು ಹರಸಾಹಸಪಡಬೇಕಾಯಿತು.
ಅಜ್ಜಿ ಮನೆ ಬಳಿ ತಿರುವಿಗೆ ಬಂದು ನಿಂತ ತಹಸೀಲ್ದಾರ್ ಗಿರೀಶ, ಪಿಡಿಓ ವಿದ್ಯಾವತಿ ಸಾಕಷ್ಟು ಮನವೊಲಿಸಿದರೂ, ಅಜ್ಜಿ (Old lady) ಕಿವಿಗೊಡಲಿಲ್ಲ. ಪಿಡಿಓಗೆ ಮಾತನಾಡಲು ಅವಕಾಶ ಕೊಡದ ಅಜ್ಜಿ, ನಿನ್ನ ಗುರಿ ಗೆಲ್ತೀನೋ..ನಿನ್ನ ಗುರಿ ನಾನು ಗೆಲ್ತೀನೋ...ನಿನ್ನ ನಾನು ಉಡಿಗೆ ಹಾಕ್ಕೊಳ್ತಿನೋ...ಬೆಳಕಾಗಿ ನಿನಗೆ ನಿಲ್ತೀನೋ.. ನಿನ್ನ ಗುರಿಗೆ ನಾನಾ ಬಾಣ ಹೊಡೆಯದಿದ್ದರೆ ಕುಕ್ಕುವಾಡೇಶ್ವರಿನೇ ಅಲ್ಲ. ನಾನು ಮಗಳ ಮನೆಗಿದ್ದೀನೋ.. ಬಾರೋ ಮಗನೇ ಎಂದೆಲ್ಲಾ ತಹಸೀಲ್ದಾರ್ ಕೈ ಹಿಡಿದು, ಲಸಿಕೆ ಹಾಕುವುದೇ ಬೇಡ ಎಂಬಂತೆ ಹೇಳಿತು.
ನೀನು ನನಗೆ ಗಜ್ಗುಗದ ಪಪ್ಪಾ ತಂದಿದ್ದೀಯಾ ಮಗನೇ? ನನ್ನ ಆತ್ಮದಲ್ಲಿ ದೇವಿಗೆ ಗಜ್ಜುಗದ ಪಾಪದ ಹಾಕೋಕೆ ಬಂದಿದ್ದೀಯೇನೋ ನಿನ್ನ ಬಲಗೈ ಬೇಕೋ ಬೇಡವೋ ನಿನಗೆ ಎಂದೆಲ್ಲಾ ಅಜ್ಜಿ ಮೈಮೇಲೆ ದೇವಿ ಬಂದಂತೆ ವರ್ತಿಸತೊಡಗಿದ್ದರು. ಅಷ್ಟೆಲ್ಲಾ ಆದರೂ, ತಾಳ್ಮೆ ಕಳೆದುಕೊಳ್ಳದ ತಹಸೀಲ್ದಾರ್ (Tahasildar) ಗಿರೀಶ ತಮ್ಮನ್ನು ಏಕವಚನದಲ್ಲಿ ಮಾತನಾಡಿದ ಅಜ್ಜಿ ಬಳಿ ತಾಳ್ಮೆಯಿಂದ ಮಾತನಾಡುತ್ತಾ, ‘ನಿನ್ನೆ ರಾತ್ರಿ ದೇವಿ ನನ್ನ ಕನಸ್ಸಲ್ಲಿ ಬಂದು ನನ್ನ ಮಗಳಿಗೆ ಕೊರೋನಾ ಲಸಿಕೆ ಹಾಕಿಸು, ಆಕೆ ನೂರು ವರ್ಷ ಬಾಳಬೇಕು ಅಂತಾ ಹೇಳಿದ್ದಾಳೆ. ದೇವಿ ಹೇಳಿದಂತೆ ದೇವಿ ಮಗಳಿಗೆ ನಾವು ಲಸಿಕೆ ಹಾಕಬೇಕಮ್ಮಾ ಅಂತಾ ಹೇಳಿ, ಉಪಾಯದಿಂದ ಅಜ್ಜಿಗೆ ಮನೆ ಬಳಿ ಕರೆದೊಯ್ದಿದ್ದಾರೆ.
ಕಡೆಗೆ ಏನೇ ಮಾಡಿದರೂ ಅಧಿಕಾರಿಗಳು, ಸಿಬ್ಬಂದಿ ಪಟ್ಟು ಸಡಿಲಿಸಲಿಲ್ಲ. ಅಂತಿಮವಾಗಿ ಅಜ್ಜಿ ಮೈಮೇಲೆ ದೇವಿ ಇದ್ದಂತೆಯೇ ಅಜ್ಜಿಯ ಮೌನ ಸಮ್ಮತಿ ಮೇರೆಗೆ ಲಸಿಕೆ ಹಾಕಲಾಯಿತು. ಅಷ್ಟರಲ್ಲಿ ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಲಸಿಕೆ ಬೇಡವೆಂದರೂ ಯಾಕೆ ಹಾಕ್ತಿರಿ ಎಂದು ಆಕ್ಷೇಪಿಸಿದಾಗ ಎಲ್ಲೆಡೆ ಕೊರೋನಾ (Corona) 3ನೇ ಅಲೆ ಶುರುವಾಗಿದೆ. ನಾವು ಇಂದು ಲಸಿಕೆ ಹಾಕದೇ ಹೋಗುತ್ತೇವೆ. ನಾಳೆ ಏನಾದರೂ ಆದರೆ ನೀವು ಹೊಣೆ ಹೊರುತ್ತೀರಾ ಎಂದು ಅಧಿಕಾರಿಗಳು ಪ್ರಶ್ನಿಸಿದರು. ಈ ಮಾತಿಗೆ ಅವರೂ ಸುಮ್ಮನಾದರು. ಕಡೆಗೆ ತಹಸೀಲ್ದಾರ್ ಗಿರೀಶ್ ತಮ್ಮ ಕನಸಿನಲ್ಲಿ ದೇವಿ ಹೇಳಿದ್ದ ಮಾತುಗಳನ್ನು ಅಜ್ಜಿಗೆ ತಿಳಿ ಹೇಳಿ, ಲಸಿಕೆ ಕೊಡಿಸಿ ಪ್ರಕರಣ ಸುಖಾಂತ್ಯಗೊಳಿಸಿದರು. ಬಳಿಕ ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಲಸಿಕೆ ಪಡೆಯದವರನ್ನು ಹುಡುಕಿ, ಲಸಿಕೆ ಹಾಕಿಸಿದರು. ಅದರಲ್ಲೂ ಒಬ್ಬ ರೈತ(Farmer) ಕಬ್ಬಿನ ಗದ್ದೆಯಲ್ಲೇ ಓಡಿ ತಪ್ಪಿಸಿಕೊಂಡು ಹೋದ ಘಟನೆಯೂ ನಡೆಯಿತು.