Hubballi-Ankola Line: 25 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಶೀಘ್ರ! ಹುಬ್ಬಳ್ಳಿ-ಅಂಕೋಲಾ ಜೋಡಿ ವಿದ್ಯುತ್ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆಗೆ ನೈರುತ್ಯ ರೈಲ್ವೆ ವಲಯ ಅಧಿಸೂಚನೆ ಹೊರಡಿಸಿದೆ. 25 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಇದೀಗ ಮರುಜೀವ.
ಶಂಕರ ಭಟ್ಟ ತಾರೀಮಕ್ಕಿ
ಯಲ್ಲಾಪುರ ಅ.20): ಹುಬ್ಬಳ್ಳಿ- ಅಂಕೋಲಾ ೧೬೩ ಕಿಮೀ ಉದ್ದದ ಜೋಡಿ ವಿದ್ಯುತ್ ರೈಲು ಮಾರ್ಗಕ್ಕೆ ನೈರುತ್ಯ ರೈಲ್ವೆ ವಲಯ ಅಧಿಸೂಚನೆ ಹೊರಡಿಸಿದ ಪರಿಣಾಮ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ದೊರೆತಂತಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಹಿರಿಯ ಕೆಎಎಸ್ ಅಧಿಕಾರಿಯೊಬ್ಬರನ್ನು ಭೂಸ್ವಾಧೀನ ಪ್ರಕ್ರಿಯೆಗೆ ನೇಮಿಸಿದ ಕುರಿತು ಮಾಹಿತಿ ಲಭಿಸಿದೆ. ಇದರಿಂದ ಶತಮಾನದ ಯೋಜನೆ ಶೀಘ್ರದಲ್ಲಿ ಜಾರಿಯಾಗಬಹುದೆಂಬ ಕನಸು ನನಸಾಗುವ ಲಕ್ಷಣ ಕಂಡುಬಂದಿದೆ.
25 ವರ್ಷಗಳ ಕಾಯುವಿಕೆಗೆ ಸಿಕ್ತು ಮುಕ್ತಿ!
1997-98ರಲ್ಲಿ ಮಂಜೂರಾಗಿದ್ದ ಈ ಯೋಜನೆಯನ್ನು ಅಂದಿನ ಪ್ರಧಾನಿ ವಾಜಪೇಯಿಯವರು ೨೦೦೦ರಲ್ಲಿ ಶಿಲಾನ್ಯಾಸ ನೆರವೇರಿಸಿ ಕಲಘಟಗಿವರೆಗೆ ಕಾಮಗಾರಿ ಪ್ರಾರಂಭಗೊಂಡಿತ್ತು. ಆದರೆ ಅನೇಕ ಪರಿಸರವಾದಿಗಳು ಮತ್ತು ಹಲವರು ಸೇರಿ ನ್ಯಾಯಾಲಯದಲ್ಲಿ ತಕರಾರು ಸಲ್ಲಿಸಿದ ಪರಿಣಾಮ ಇತ್ಯರ್ಥವಾಗದೇ ಕಳೆದ 25 ವರ್ಷಗಳ ಕಾಲ ಆಗಾಗ ಚರ್ಚೆಯಾಗುತ್ತಲೇ ಇತ್ತು.
ಭೂಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ
ಆದರೆ, ಯೋಜನೆ ಕಾರ್ಯರೂಪಕ್ಕೆ ಬರುವ ಯಾವ ಲಕ್ಷಣವೂ ಇಲ್ಲವಾಗಿತ್ತು. ಆದರೆ ಕೆಲವು ವರ್ಷಗಳ ಹಿಂದೆ ನ್ಯಾಯಾಲಯ ಅನುಮತಿ ನೀಡಿದ ಪರಿಣಾಮ ಪುನಃ ಯೋಜನೆಯ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. ಸಣ್ಣಪುಟ್ಟ ಕಾರಣಗಳಿಂದ ವಿಳಂಬವಾಗುತ್ತಲೇ ಸಾಗಿತ್ತು. ಈಗ ಭೂಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ನೀಡಿರುವುದರಿಂದ ಹೊಸ ಭರವಸೆ ಈ ಪ್ರದೇಶದ ಜನರಿಗೆ ಮೂಡಿದೆ.
ಪ್ರಾರಂಭದಲ್ಲಿ ಈ ಯೋಜನೆಗೆ ₹483 ಕೋಟಿ ವೆಚ್ಚ ತಗುಲಬಹುದೆಂದು ಅಂದಾಜಿಸಲಾಗಿತ್ತು. ಆದರೆ ಅದೀಗ ₹16,435 ಕೋಟಿಗೆ ತಲುಪಿದೆ. ಇದಕ್ಕಾಗಿ 596 ಎಕರೆ ಖಾಸಗಿ ಜಮೀನು, 470 ಎಕರೆ ಸರ್ಕಾರಿ ಜಮೀನು, 1466 ಎಕರೆ ಅರಣ್ಯ ಪ್ರದೇಶ ಈ ಯೋಜನೆಗೆ ಅಗತ್ಯವಾಗಿದ್ದು, ಈ ಜಮೀನನ್ನು ಭೂಸ್ವಾದೀನ ಪ್ರಕ್ರಿಯೆ ಮೂಲಕ ರೈಲ್ವೆ ಮಂಡಳಿ ಪಡೆಯಲಿದೆ. ಈ ಅಧಿಸೂಚನೆಯ ಕುರಿತು ನೈರುತ್ಯ ವಲಯ ರೈಲ್ವೆ ಮಂಡಳಿ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ಮಾಹಿತಿ ನೀಡಿದ್ದಾರೆ.
ಹುಬ್ಬಳ್ಳಿ-ಕರಾವಳಿಗೆ ಏಕೆ ಮುಖ್ಯ
ಹುಬ್ಬಳ್ಳಿ ಮತ್ತು ಕರಾವಳಿಗೆ ಈ ಯೋಜನೆಯಿಂದ ಉದ್ಯೋಗ, ವ್ಯವಹಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಕಲಘಟಗಿ, ಯಲ್ಲಾಪುರ, ಅಂಕೋಲಾ ಈ ಮೂರೂ ತಾಲೂಕಿನ ಮೂಲಕ ಮಾರ್ಗ ಸಾಗಿದ್ದು, ಹುಬ್ಬಳ್ಳಿ, ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ಮೇಲೆ ಸಂಚರಿಸುವ ಜನರೂ ನಿಟ್ಟುಸಿರು ಬಿಡುವಂತಾಗಿದೆ.
ದಿನನಿತ್ಯ ಈ ಹೆದ್ದಾರಿಯಲ್ಲಿ ೧೦ರಿಂದ ೧೫ ಸಾವಿರ ವಾಹನ ಅದರಲ್ಲೂ ಸಿಲಿಂಡರ್, ಭಾರೀ ವಾಹನ ಸೇರಿದಂತೆ ನಿತ್ಯವೂ ಸಾವಿರಾರು ಭಾರೀ ವಾಹನಗಳು ಸಂಚರಿರುವುದರಿಂದ ಸದಾ ಈ ರಸ್ತೆ ಅಪಘಾತದ ಕೇಂದ್ರವಾಗಿ ಪರಿಣಮಿಸಿತ್ತು. ಪೊಲೀಸರಿಗೆ ಸದಾ ರಸ್ತೆ ತೆರವು ಮಾಡುವ ಪ್ರಕ್ರಿಯೆಯೇ ದೊಡ್ಡ ಸವಾಲಾಗಿತ್ತು. ಈ ರೈಲ್ವೆ ಯೋಜನೆಯಿಂದ ಭಾರೀ ವಾಹನಗಳು ಸಂಚರಿಸುವುದು ಕಡಿಮೆಯಾಗುತ್ತದೆಂಬ ವಿಶ್ವಾಸ ಯಲ್ಲಾಪುರದ ನಾಗರಿಕರಿಗೆ ಮೂಡಿದೆ.


