ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಲಂಚದ ಆರೋಪಕ್ಕೆ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ವಾಟ್ಸಪ್ ಸ್ಟೇಟಸ್ ಮೂಲಕ ಮಾರ್ಮಿಕ ತಿರುಗೇಟು ನೀಡಿದ್ದಾರೆ. 'ಪ್ರತಿಯೊಂದು ಧ್ವನಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ' ಎಂದು ಬರೆದುಕೊಂಡಿದ್ದು, ಅವರ ಆಪ್ತ ಸಹಾಯಕರು ನಕಲಿ ವಾಟ್ಸಾಪ್ ಚಾಟ್ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದಾರೆ.

ಹಾಸನ: ಭಾನುವಾರ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ಹಾಸನದ ಜಿಲ್ಲಾಧಿಕಾರಿ ಲತಾ ಕುಮಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಲಂಚದ ಆರೋಪ ಮಾಡಿದ್ದರು. ಈ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಜಿಲ್ಲಾಧಿಕಾರಿಗಳು, ಮಾಧ್ಯಮಗಳ ಮುಂದೆ ಕುಳಿತು ಆರೋಪ ಮಾಡುವ ಮುನ್ನ ಎಫ್‌ಐಆರ್ ದಾಖಲಿಸಲಿ ಎಂದು ತಿರುಗೇಟು ನೀಡಿದ್ದರು. ಇದೀಗ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ತಮ್ಮ ವಾಟ್ಸಪ್ ಸ್ಟೇಟಸ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಸಿಂಹದ ಮುಂದೆ ನಾಯಿ ಬೊಗಳ್ತಿರೋ ಕಾರ್ಟೂನ್!

ಲತಾ ಕುಮಾರಿ ತಮ್ಮ ವಾಟ್ಸಪ್ ಸ್ಟೇಟಸ್‌ನಲ್ಲಿ ಸಿಂಹದ ಮುಂದೆ ನಾಯಿಗಳು ಬೊಗಳುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದ ಮೇಲೆ ಪ್ರತಿಯೊಂದು ಧ್ವನಿಗೆ ಪ್ರತಿಕ್ರಿಯಿಸುವ ಅಗತ್ಯತೆ ಇಲ್ಲ (Not Every Voice Deserves A Response) ಎಂದು ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ. ಇದೇ ಸಾಲು ಎಲ್ಲಾ ಧ್ವನಿಗಳು ಪ್ರತಿಕ್ರಿಯಿಸುವ ಅರ್ಹತೆಯನ್ನು ಹೊಂದಿರಲ್ಲ ಎಂಬರ್ಥವನ್ನು ಒಳಗೊಂಡಿದೆ.

ಈ ಹಿಂದೆಯೂ ಕೇಂದ್ರ ಸಚಿವ ಕುಮಾರಸ್ವಾಮಿ ಜೊತೆಗಿನ ವಾಗ್ವಾದದ ಬಳಿಕ ಇದೇ ರೀತಿಯಲ್ಲಿಯೇ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದರು. 'ನೀವು ನನ್ನ ಮೇಲೆ ಸುಳ್ಳುಗಳಿಂದ ದಾಳಿ ಮಾಡಬಹುದು, ಆದರೆ ಸುಳ್ಳುಗಳಿಂದ ನನ್ನನ್ನು ಒಡೆಯಲಾಗದು. 'ಸುಳ್ಳು ದಾಳಿ ಮಾಡುತ್ತವೆ, ಸತ್ಯ ಉಳಿಸುತ್ತದೆ' (You can attack me with lies, But you cannot break me with lies. Lies attack, truth protect) ಎಂದು ಬರೆದುಕೊಂಡಿದ್ದರು. ಇದೀಗ ಅದೇ ರೀತಿಯಲ್ಲಿ ಮತ್ತೊಂದು ಸ್ಟೇಟಸ್ ಹಾಕಿಕೊಂಡಿದ್ದಾರೆ.

ದೂರು ದಾಖಲಿಸಿದ ಶಶಿಕಿರಣ್

ಹೆಚ್‌ ಡಿ ಕುಮಾರಸ್ವಾಮಿ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಶಶಿಕಿರಣ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೇಂದ್ರ ಸಚಿವರ ಆರೋಪಗಳಿಂದ ತಮ್ಮ ವೈಯಕ್ತಿಕ ವರ್ಚಸ್ಸಿಗೆ ಹಾಗೂ ಆಡಳಿತಾತ್ಮಕವಾಗಿ ದೊಡ್ಡ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು, ತಾವೇ ಸಂದೇಶ ಕಳುಹಿಸಿದಂತೆ ನಕಲಿ ವಾಟ್ಸಾಪ್ ಚಾಟ್‌ಗಳನ್ನು ಸೃಷ್ಟಿಸಿ ಹರಡಲಾಗಿದೆ ಎಂದು ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಸಂದೇಶಗಳಲ್ಲಿ ಡಿಸಿ, ಉಸ್ತುವಾರಿ ಸಚಿವರು, ಹಾಸನ ಹಾಗೂ ಅರಸೀಕೆರೆ ತಹಸೀಲ್ದಾರ್‌ಗಳು, ಎಸಿ, ಎಡಿಸಿ ಮತ್ತು ಅವರ ಕಚೇರಿ ಸಿಬ್ಬಂದಿಯ ಹೆಸರುಗಳನ್ನು ದುರುದ್ದೇಶಪೂರ್ವಕವಾಗಿ ಉಲ್ಲೇಖಿಸಲಾಗಿದೆ ಎಂದು ಶಶಿಕಿರಣ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಹೆಚ್‌ಡಿ ಕುಮಾರಸ್ವಾಮಿ ಆರೋಪ ಏನು?

ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರು ಜಿಲ್ಲೆಯಲ್ಲಿ, ಅದೇ ಹುದ್ದೆಯಲ್ಲಿ ಉಳಿದುಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರಿಗೆ 75 ಲಕ್ಷ ರು. ಲಂಚ ನೀಡಿದ್ದಾರೆ. ಅಲ್ಲದೆ, ಅವರು ಹಲವು ಅಕ್ರಮಗಳನ್ನು ಎಸಗಿದ್ದು, ಅದಕ್ಕೆ ಅವರದೇ ಸಿಬ್ಬಂದಿಯ ವಾಟ್ಸಾಪ್‌ ಚಾಟ್‌ಗಳು ಸಾಕ್ಷಿಯಾಗಿವೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ಗಂಭೀರ ಆರೋಪ ಮಾಡಿದ್ದಾರೆ.