ಬಸವಣ್ಣನವರ ಕುರಿತ ವಿವಾದಿತ 'ಬಸವ ಮಂಟಪ' ಕೃತಿಯ ಲೇಖಕ ರವಿ ಹಂಜ್ ಹತ್ಯೆಗೆ 5 ಲಕ್ಷ ರೂ. ಬಹುಮಾನವನ್ನು ಪ್ರಕಾಶ ಮಹಾಜನ ಘೋಷಿಸಿದ್ದಾರೆ. ಇದೇ ವೇಳೆ, ಆಕ್ಷೇಪಾರ್ಹ ಲೇಖನ ಪ್ರಕಟಿಸಿದ ಪತ್ರಕರ್ತ ವಿಶ್ವೇಶ್ವರ ಭಟ್ಟರಿಗೆ ನೀಡಿದ್ದ ಬಸವಭೂಷಣ ಪ್ರಶಸ್ತಿಯನ್ನು ವಾಪಸ್ ಪಡೆಯಲಾಗಿದೆ.

ಬೆಳಗಾವಿ (ನ.22): ‘ಬಸವ ಮಂಟಪ’ ಕೃತಿಯಲ್ಲಿ ಬಸವಣ್ಣನವರ ಕುರಿತ ವಿವಾದಿತ ಬರಹದ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ಆಕ್ರೋಶ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಕೃತಿಯ ಲೇಖಕ ರವಿ ಹಂಜ್‌(Ravi Hanj) ಅವರ ಹತ್ಯೆ ಮಾಡುವವರಿಗೆ ₹5 ಲಕ್ಷ ಬಹುಮಾನ ನೀಡುವುದಾಗಿ ಅಥಣಿಯ ಲಿಂಗಾಯತ ಸಮಾಜದ ಮುಖಂಡ ಪ್ರಕಾಶ ಮಹಾಜನ(Prakash mahajan) ಬಹಿರಂಗವಾಗಿ ಘೋಷಿಸಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.

ರವಿ ಹಂಜ್ ಮುಗಿಸಲು ಸಂಚು?

ಅಥಣಿಯ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ(athani Motagimutt Prabhuchannaswamiji) ನೇತೃತ್ವದಲ್ಲಿ ಅಥಣಿಯಲ್ಲಿ ಶನಿವಾರ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಲಿಂಗಾಯತ ಸಮಾಜದ ಮುಖಂಡ ಪ್ರಕಾಶ ಮಹಾಜನ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.-

ಇದನ್ನೂ ಓದಿ: ಬಸವ ಮಂಟಪ ಪುಸ್ತಕ ವಿವಾದ: ಲೇಖಕ ರವಿ ಹಂಜ್ ವಿರುದ್ಧ ಎಫ್‌ಐಆರ್, ನಿನ್ನೆ ಸಂಪುಟ ಚರ್ಚೆಯಲ್ಲಿ ಏನೇನಾಯ್ತು?

ವಿಶ್ವೇಶ್ವರ ಭಟ್ಟರಿಗೆ ನೀಡಿದ್ದ ಬಸವಭೂಷಣ ಪ್ರಶಸ್ತಿ ವಾಪಸ್‌

ಅಥಣಿಯ ಮೋಟಗಿ ಮಠದ ವತಿಯಿಂದ ಪ್ರತಿ ವರ್ಷ ನೀಡಲಾಗುವ ‘ಬಸವಭೂಷಣ’ ಪ್ರಶಸ್ತಿಗೆ ಭಾಜನರಾಗಿದ್ದ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ಟ(Vishwesh bhat)ರಿಗೆ ನೀಡಿದ್ದ ಪ್ರಶಸ್ತಿಯನ್ನು ಹಿಂಪಡೆಯುವುದಾಗಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಈ ವೇಳೆ ಘೋಷಿಸಿದರು.

ಬಸವಣ್ಣನವರ ಕುರಿತು ಲೇಖಕ ರವಿ ಹಂಜ್ ಬರೆದ ಆಕ್ಷೇಪಾರ್ಹ ಲೇಖನಗಳನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ಬಸವಣ್ಣನವರಿಗೆ ಅವಮಾನಿಸಲಾಗಿದೆ. ಹೀಗಾಗಿ, ಲೇಖಕ ಹಾಗೂ ಪ್ರಕಾಶಕರನ್ನು ಸರ್ಕಾರ ಕೂಡಲೇ ಬಂಧಿಸಬೇಕು. ಈ ಹಿನ್ನೆಲೆಯಲ್ಲಿ ಮೋಟಗಿ ಮಠದಿಂದ ವಿಶ್ವೇಶ್ವರ ಭಟ್ಟರಿಗೆ ನೀಡಲಾಗಿದ್ದ ಬಸವಭೂಷಣ ಪ್ರಶಸ್ತಿಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ರವಿ ಹಂಜ್‌ರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ತೇವೆ: ಸಚಿವ ತಂಗಡಗಿ

ಕೊಪ್ಪಳ: ವಿಶ್ವಗುರು ಬಸವಣ್ಣ ಅವರ ಕುರಿತು ಅವಹೇಳನಕಾರಿಯಾಗಿ ಬರೆದಿರುವ ವ್ಯಕ್ತಿಯನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದರು. ಕನಕಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಾಂತಿಕಾರಿ ಬಸವಣ್ಣ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಇದೆಯೇ ಎಂಬುದನ್ನು ಇಂತಹವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಸವಣ್ಣ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜತೆಗೆ, ಅಂತಹ ವಿಚಾರಗಳನ್ನು ಒಳಗೊಂಡಿರುವ ಪುಸ್ತಕವನ್ನು ನಿಷೇಧಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ನಾಡಿನ ಮಹನೀಯರ ಬಗ್ಗೆ ಅಲ್ಲೊಬ್ಬರು, ಇಲ್ಲೊಬ್ಬರು ಅವಿವೇಕದಿಂದ ಮಾತನಾಡುವ ಪ್ರವೃತ್ತಿ ತೋರುತ್ತಿದ್ದಾರೆ. ಇಂತಹ ಹೇಳಿಕೆಗಳು ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವುದಲ್ಲದೆ, ಮಹನೀಯರ ಆದರ್ಶಗಳಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಹೇಳಿದರು.

. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರೂ ಇತಿಹಾಸ ಪುರುಷರು ಹಾಗೂ ಸಮಾಜ ಸುಧಾರಕರ ಗೌರವಕ್ಕೆ ಧಕ್ಕೆ ತರುವುದನ್ನು ಸಹಿಸಲು ಸಾಧ್ಯವಿಲ್ಲ. ಇಂತಹವರ ವಿರುದ್ಧ ಸರ್ಕಾರ ಕಾನೂನುಬದ್ಧವಾಗಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.