ಹಾಸನ ಜಿಲ್ಲೆಯಲ್ಲಿ ಲಂಚದ ಹಾವಳಿ ಹೆಚ್ಚಾಗಿದ್ದು, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಉಸ್ತುವಾರಿ ಸಚಿವರಿಗೆ 75 ಲಕ್ಷ ರೂ. ಲಂಚ ನೀಡಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ವಾಟ್ಸಾಪ್ ಚಾಟ್ಗಳನ್ನು ಸಾಕ್ಷಿಯಾಗಿ ನೀಡಿ ಸಮಗ್ರ ತನಿಖೆಗೆ ಅವರು ಆಗ್ರಹಿಸಿದ್ದಾರೆ.
ಹಾಸನ: ‘ಹಾಸನ ಜಿಲ್ಲೆಯಲ್ಲಿ ಲಂಚದ ಹಾವಳಿ ಹೆಚ್ಚಾಗಿದೆ. ಈಗಿನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರು ಜಿಲ್ಲೆಯಲ್ಲಿ, ಅದೇ ಹುದ್ದೆಯಲ್ಲಿ ಉಳಿದುಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರಿಗೆ 75 ಲಕ್ಷ ರು. ಲಂಚ ನೀಡಿದ್ದಾರೆ. ಅಲ್ಲದೆ, ಅವರು ಹಲವು ಅಕ್ರಮಗಳನ್ನು ಎಸಗಿದ್ದು, ಅದಕ್ಕೆ ಅವರದೇ ಸಿಬ್ಬಂದಿಯ ವಾಟ್ಸಾಪ್ ಚಾಟ್ಗಳು ಸಾಕ್ಷಿಯಾಗಿವೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಗಂಭೀರ ಆರೋಪ ಮಾಡಿದ್ದಾರೆ.
ಭಾನುವಾರ ಹಾಸನಾಂಬ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಯವರ ಆಪ್ತ ಸಹಾಯಕನಿಗೆ ಸಂಬಂಧಿಸಿದ್ದು ಎನ್ನಲಾದ ವಾಟ್ಸಾಪ್ ಚಾಟ್ಗಳಲ್ಲಿನ ಸಂಭಾಷಣೆಗಳನ್ನು ಓದಿದರು. ಆ ಮೂಲಕ ತಮ್ಮ ಆರೋಪಗಳಿಗೆ ಸಾಕ್ಷ್ಯ ಒದಗಿಸಿದರು.
75 ಲಕ್ಷ ರು.ನೀಡಿ ವರ್ಗಾವಣೆ
‘ಜಿಲ್ಲಾಧಿಕಾರಿಗಳ ವರ್ಗಾವಣೆ ವಿಚಾರವೂ ಈ ಚಾಟ್ ಸಂಭಾಷಣೆಯಲ್ಲಿ ಪ್ರಸ್ತಾಪವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡರು ಜಿಲ್ಲಾಧಿಕಾರಿಯನ್ನು ಬದಲಾಯಿಸಬೇಕು ಎಂಬ ನಿಲುವು ಹೊಂದಿದ್ದರು. ನಂತರ, ಅರಸೀಕೆರೆ ತಹಶೀಲ್ದಾರ್ ಸಂತೋಷ್ ಅವರ ಮೂಲಕ ಮಾತುಕತೆ ನಡೆಸಿ, 75 ಲಕ್ಷ ರು.ನೀಡಿ ವರ್ಗಾವಣೆ ತಡೆಯಲಾಗಿದೆ ಎಂಬ ಸಂದೇಶ ಚಾಟ್ ಸಂಭಾಷಣೆಯಲ್ಲಿದೆ’ ಎಂದು ಕುಮಾರಸ್ವಾಮಿ ಆರೋಪಿಸಿದರು. ಆ ಹಣವನ್ನು ತಾವೇ ವಿವಿಧ ಕಡೆಗಳಿಂದ ಹೊಂದಿಸಿ ನೀಡಿರುವುದಾಗಿ ಸಂಭಾಷಣೆಯಲ್ಲಿ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ ಎಂದು ತಿಳಿಸಿದರು.
ಅಲ್ಲದೆ, ಮೂರು ಕ್ರಷರ್ಗಳಿಗೆ ಸಂಬಂಧಿಸಿದ ಕಡತಗಳ ವಿಲೇವಾರಿಗೆ ಒಟ್ಟು 60 ಲಕ್ಷ ರು. ನೀಡುವಂತೆ ಬೇಡಿಕೆ ಇಟ್ಟಿರುವ ಬಗ್ಗೆ ಚಾಟ್ನಲ್ಲಿ ಉಲ್ಲೇಖವಿದೆ. ಈ ಪೈಕಿ 50 ಲಕ್ಷ ರು.ಗಳನ್ನು ಜಿಲ್ಲಾಧಿಕಾರಿಗೆ ನೀಡಬೇಕಾಗುತ್ತದೆ. ಉಳಿದ 10 ಲಕ್ಷವನ್ನು ಸಿಬ್ಬಂದಿ, ಚಾಲಕರು, ಗನ್ಮ್ಯಾನ್ ಸೇರಿದಂತೆ ಇತರರಿಗೆ ಹಂಚ ಬೇಕಾಗುತ್ತದೆ ಎನ್ನುವ ಸಂಭಾಷಣೆ ನಡೆದಿರುವುದು ಚಾಟ್ನಲ್ಲಿನ ಸಂಭಾಷಣೆಯಿಂದ ಗೊತ್ತಾಗುತ್ತದೆ ಎಂದು ಅವರು ಆರೋಪಿಸಿದರು.
ಚಾಟ್ ಸಂಭಾಷಣೆ
ಹಣದ ಬೇಡಿಕೆ ಕುರಿತು ಮಾತುಕತೆ ನಡೆಸುವಾಗ ಮಧ್ಯವರ್ತಿಯೊಬ್ಬರು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿರುವುದೂ ಚಾಟ್ ಸಂಭಾಷಣೆಯಲ್ಲಿದೆ. ಈಗಾಗಲೇ ಹಲವು ಕಡೆ ಹಣ ಹೊಂದಿಸಿ ನೀಡಬೇಕಾಗಿದೆ. ಇಷ್ಟೆಲ್ಲಾ ಹಣ ನೀಡಿದರೆ ತಮ್ಮ ಕೈಯಲ್ಲಿ ಏನೂ ಉಳಿಯುವುದಿಲ್ಲ. ಕುಟುಂಬದ ಆಭರಣಗಳನ್ನು ಅಡವಿಟ್ಟು ಅಥವಾ ಮಾರಾಟ ಮಾಡಿ ಹಣ ಹೊಂದಿಸುವ ಪರಿಸ್ಥಿತಿ ಬಂದಿದೆ ಎಂಬ ಅರ್ಥದ ಸಂದೇಶಗಳು ಈ ಚಾಟ್ ಸಂಭಾಷಣೆಯಲ್ಲಿವೆ ಎಂದು ಅವರು ವಿವರಿಸಿದರು.
ಕೆಲಸಗಳ ಹೆಸರಿನಲ್ಲಿ ವಿವಿಧ ಹಂತಗಳಲ್ಲಿ ಹಣದ ವ್ಯವಹಾರ
ಇದೇ ವೇಳೆ, ಅರಸೀಕೆರೆ ತಹಶೀಲ್ದಾರ್ ಸಂತೋಷ್, ತಹಶೀಲ್ದಾರ್ ಗೀತಾ, ಸಹಾಯಕ ಆಯುಕ್ತ ಜಗದೀಶ್ ಗಂಗಣ್ಣವರ ಸೇರಿದಂತೆ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಹೆಸರುಗಳನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ಕಡತಗಳ ವಿಲೇವಾರಿ ಹಾಗೂ ಇತರ ಕೆಲಸಗಳ ಹೆಸರಿನಲ್ಲಿ ವಿವಿಧ ಹಂತಗಳಲ್ಲಿ ಹಣದ ವ್ಯವಹಾರ ನಡೆದಿದೆ. ಮಧ್ಯವರ್ತಿಗಳ ಮೂಲಕ ಹಣ ಸಂಗ್ರಹಿಸಿ, ಯಾರಿಗೆ ಎಷ್ಟು ಹಂಚಿಕೆ ಮಾಡಬೇಕು ಎಂಬುದರ ಬಗ್ಗೆಯೂ ಚಾಟ್ಗಳಲ್ಲಿ ಚರ್ಚೆಯಾಗಿದೆ ಎಂದು ಅವರು ಹೇಳಿದರು.
ಮಧ್ಯವರ್ತಿಗಳು ಯಾರು? ಹಣ ಯಾರಿಗೆ ತಲುಪಿದೆ?
ವಾಟ್ಸಾಪ್ ಸಂಭಾಷಣೆಗಳಲ್ಲಿರುವ ಮೊಬೈಲ್ಗಳನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪರೀಕ್ಷೆ ನಡೆಸಬೇಕು. ಸಂದೇಶಗಳು ನೈಜವೇ, ಎಡಿಟ್ ಮಾಡಲಾಗಿದೆಯೇ, ಹಣದ ವ್ಯವಹಾರ ನಡೆದಿದೆಯೇ ಎಂಬುದರ ಸಮಗ್ರ ತನಿಖೆ ನಡೆಸಬೇಕು. ಮಧ್ಯವರ್ತಿಗಳು ಯಾರು? ಹಣ ಯಾರಿಗೆ ತಲುಪಿದೆ? ಎಂಬುದನ್ನು ಪತ್ತೆ ಹಚ್ಚಬೇಕು. ಪೊಲೀಸ್ ಮಹಾನಿರ್ದೇಶಕರು ಹಾಗೂ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.














