ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಹಾಗೂ ಸಚಿವ ಶಿವಲಿಂಗೇಗೌಡ ವಿರುದ್ಧ ಕೇಳಿಬಂದಿರುವ ಲಂಚದ ಆರೋಪಕ್ಕೆ ಸಂಬಂಧಿಸಿದ ವಾಟ್ಸಾಪ್ ಚಾಟ್ ನಕಲಿ ಎಂದು ಡಿಸಿ ಸಹಾಯಕ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಹಾಸನ: ಜಿಲ್ಲಾಧಿಕಾರಿ (ಡಿಸಿ) ಲತಾಕುಮಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರ ವಿರುದ್ಧ ಕೇಳಿಬಂದಿರುವ ಲಂಚದ ಆರೋಪ ಪ್ರಕರಣ ಹಾಸನ ಸೇರಿದಂತೆ ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ. ಮೂರು ಕ್ರಷರ್ ಅನುಮತಿಗಾಗಿ ಡಿಸಿಗೆ 60 ಲಕ್ಷ ರೂಪಾಯಿ ಹಾಗೂ ಡಿಸಿ ಲತಾ ಕುಮಾರಿ ಅವರು ಹಾಸನದಲ್ಲೇ ಮುಂದುವರಿಯಲು ಉಸ್ತುವಾರಿ ಸಚಿವರಿಗೆ 75 ಲಕ್ಷ ರೂಪಾಯಿ ಲಂಚ ನೀಡಲಾಗಿದೆ ಎಂಬ ಆರೋಪವಿರುವ ಸುಮಾರು 15 ಪುಟಗಳ ವಾಟ್ಸಾಪ್ ಸ್ಕ್ರೀನ್ಶಾಟ್ಗಳನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಿದ್ದರು. ಈ ಬೆಳವಣಿಗೆಯಿಂದಾಗಿ ಆಡಳಿತ ಯಂತ್ರದಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆ ಹಾಗೂ ಬಿಕ್ಕಟ್ಟು ವ್ಯಕ್ತವಾಗಿತ್ತು.
ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿರುವ ಹಾಸನ ಡಿಸಿ ಪಿಎ ಹಾಗೂ ದ್ವಿತೀಯ ದರ್ಜೆ ಸಹಾಯಕ ಶಶಿಕಿರಣ್ ಅವರು, ಈ ವಾಟ್ಸಾಪ್ ಸಂದೇಶಗಳು ಸಂಪೂರ್ಣ ಸುಳ್ಳು ಮತ್ತು ನಕಲಿ ಎಂದು ಆರೋಪಿಸಿ ಹಾಸನ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವೈಯಕ್ತಿಕ ವರ್ಚಸ್ಸಿಗೆ ಹಾಗೂ ಆಡಳಿತಾತ್ಮಕವಾಗಿ ದೊಡ್ಡ ಧಕ್ಕೆ
ತಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು, ತಾವೇ ಸಂದೇಶ ಕಳುಹಿಸಿದಂತೆ ನಕಲಿ ವಾಟ್ಸಾಪ್ ಚಾಟ್ಗಳನ್ನು ಸೃಷ್ಟಿಸಿ ಹರಡಲಾಗಿದೆ ಎಂದು ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಸಂದೇಶಗಳಲ್ಲಿ ಡಿಸಿ, ಉಸ್ತುವಾರಿ ಸಚಿವರು, ಹಾಸನ ಹಾಗೂ ಅರಸೀಕೆರೆ ತಹಸೀಲ್ದಾರ್ಗಳು, ಎಸಿ, ಎಡಿಸಿ ಮತ್ತು ಅವರ ಕಚೇರಿ ಸಿಬ್ಬಂದಿಯ ಹೆಸರುಗಳನ್ನು ದುರುದ್ದೇಶಪೂರ್ವಕವಾಗಿ ಉಲ್ಲೇಖಿಸಲಾಗಿದ್ದು, ಇದರಿಂದ ತಮ್ಮ ವೈಯಕ್ತಿಕ ವರ್ಚಸ್ಸಿಗೆ ಹಾಗೂ ಆಡಳಿತಾತ್ಮಕವಾಗಿ ದೊಡ್ಡ ಧಕ್ಕೆಯಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಶಶಿಕಿರಣ್ ಅವರು ನೀಡಿದ ದೂರಿನ ಆಧಾರದ ಮೇಲೆ ಹಾಸನ ನಗರ ಠಾಣೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 335 ಮತ್ತು 336(4) ಅಡಿಯಲ್ಲಿ ಎಫ್ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಪ್ರತಿಷ್ಠೆಗೆ ಹಾನಿ ಮಾಡುವ ದುರುದ್ದೇಶದಿಂದ ಸುಳ್ಳು ಸಂದೇಶಗಳನ್ನು ಸೃಷ್ಟಿಸಲಾಗಿದೆ ಹಾಗೂ ಅದು ನಕಲಿ ಎಂದು ತಿಳಿದಿದ್ದರೂ intentionally ಹಂಚಿಕೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಇದೇ ವೇಳೆ ಪೊಲೀಸರು ಶಶಿಕಿರಣ್ ಅವರ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹೆಚ್ಡಿಕೆ ಆರೋಪಕ್ಕೆ ಜಿಲ್ಲಾಧಿಕಾರಿಗಳ ತಿರುಗೇಟು
ಆಪ್ತ ಸಹಾಯಕರ (PA) ವಾಟ್ಸಾಪ್ನಲ್ಲಿ ನಮ್ಮ ವಿರುದ್ಧ ಸುಳ್ಳು ಹಾಗೂ ಆಧಾರರಹಿತ ಮಾಹಿತಿಗಳನ್ನು ಹರಡಲಾಗುತ್ತಿದೆ. ಆದರೆ, ನಾವು ಯಾವುದೇ ರೀತಿಯ ಅನಧಿಕೃತ ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದಿಲ್ಲ. ಈ ಸಂಬಂಧ ಸಮಗ್ರ ತನಿಖೆ ನಡೆಸಿ, ಸತ್ಯಾಸತ್ಯತೆಯನ್ನು ಬಹಿರಂಗಪಡಿಸುವಂತೆ ಸೈಬರ್ ಕ್ರೈಂ ವಿಭಾಗಕ್ಕೆ ಅಧಿಕೃತವಾಗಿ ದೂರು ಸಲ್ಲಿಸಲಾಗಿದ್ದು, ಈ ಕುರಿತು FIR ಕೂಡ ದಾಖಲಿಸಲಾಗಿದೆ.
ಈ ಪ್ರಕರಣದ ನಿಷ್ಪಕ್ಷಪಾತ ತನಿಖೆಯ ಮೂಲಕ ಸತ್ಯಾಂಶ ಹೊರಬಂದು, ಸುಳ್ಳು ಹಾಗೂ ಆಧಾರರಹಿತ ಮಾಹಿತಿಗಳನ್ನು ಹರಡಿರುವ ತಪ್ಪಿತಸ್ಥರನ್ನು ಗುರುತಿಸಿ, ಅವರ ವಿರುದ್ಧ ಕಾನೂನು ರೀತ್ಯಾ ಸೂಕ್ತ ಕ್ರಮ ಜರುಗಿಸಬೇಕು ಎಂಬುದೇ ನಮ್ಮ ಆಶಯವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾಧಿಕಾರಿಗಳು ಬರೆದುಕೊಂಡಿದ್ದಾರೆ.














