ಸಮಾಜಘಾತುಕ ಶಕ್ತಿಗಳ ಬಗ್ಗೆ ಮೃದು ಧೋರಣೆ ಇಲ್ಲ: ಸಚಿವ ಸುನಿಲ್‌ ಕುಮಾರ್‌ ಮಂಗ್ಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಸ್ಥಳ ಪರಿಶೀಲನೆ, ಗಾಯಾಳು ಅಟೋ ಚಾಲಕನ ಭೇಟಿ

ಮಂಗಳೂರು (ನ.26) : ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಘಟನೆಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ಇದನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಗೆ ಹಸ್ತಾಂತರಿಸುವ ಮೂಲಕ ಪ್ರಕರಣದ ಆಳ ಹೊರಗನ್ನು ತಿಳಿಯಲಾಗುವುದು. ಪಿಎಫ್‌ಐ (ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ) ನಿಷೇಧ ಮಾಡಿದ ಬಳಿಕ ಸಮಾಜ ಘಾತುಕ ಶಕ್ತಿಗಳು ಸಮಾಜದಲ್ಲಿ ಭಯ ಉಂಟು ಮಾಡುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಇಂತಹ ದುಷ್ಟಶಕ್ತಿಗಳ ಬಗ್ಗೆ ನಮ್ಮ ಸರ್ಕಾರ ಮೃದು ಧೋರಣೆ ತೆಗೆದುಕೊಳ್ಳುವುದಿಲ್ಲ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್‌ ಕುಮಾರ್‌ ಹೇಳಿದ್ದಾರೆ.

ರಿಕ್ಷಾದಲ್ಲಿ ಬಾಂಬ್‌ ಸ್ಫೋಟ ನಡೆದ ನಾಗುರಿ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ನಂತರ ಗಾಯಾಳು ಅಟೋ ಚಾಲಕ, ಉಜ್ಜೋಡಿ ನಿವಾಸಿ ಪುರುಷೋತ್ತಮ ಅವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಮಂಗಳೂರು ಬಾಂಬ್‌ ಸ್ಫೋಟ: ಲಷ್ಕರ್‌ ಸಂಪರ್ಕಿಸಿ ಎಕೆ47 ತರಿಸಲು ಶಾರೀಕ್‌ ಯತ್ನ..!

ಈ ಸ್ಫೋಟ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುವ ಮೂಲಕ ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುವುದನ್ನು ಪತ್ತೆ ಹಚ್ಚಲಾಗುವುದು. ಸಮಾಜ ಘಾತುಕ ಶಕ್ತಿಗಳು ದುಷ್ಕೃತ್ಯ ಎಸಗುವ ಮೂಲಕ ಭಯದ ವಾತಾವರಣ ಸೃಷ್ಟಿಸಿ ದೇಶದಲ್ಲಿ ಅಸ್ಥಿರತೆಗೆÜ ಷಡ್ಯಂತರ ನಡೆಸುತ್ತಿರುವುದು ಮಂಗಳೂರಿನಲ್ಲಿ ನಡೆದ ಸ್ಫೋಟದ ಮೂಲಕ ಸ್ಪಷ್ಟವಾಗಿದೆ. ಇಂತಹ ಕೃತ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದರು.

ಪ್ರವೀಣ್‌ ನೆಟ್ಟಾರು ಪ್ರಕರಣ, ಶಿವಮೊಗ್ಗದ ಪ್ರಕರಣಗಳು ಸಮಾಜದಲ್ಲಿ ಭಯದ ವಾತಾವಣರದ ಸೃಷ್ಟಿಸಿದ್ದು, ಅದನ್ನು ವಿಫಲಗೊಳಿಸುವ ಪ್ರಯತ್ನ ಸೇರಿದಂತೆ ಎಲ್ಲ ದಿಟ್ಟಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಈ ಕೃತ್ಯ ಯಾವುದೇ ವ್ಯಕ್ತಿ ಮಾಡಿದ್ದಾನೆ ಎನ್ನುವುದಕ್ಕಿಂತಲೂ ಈ ಮಾನಸಿಕತೆಯ ಚಿಂತನೆಯನ್ನು ದೂರ ಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಬೇಕು ಎಂದರು.

ದುಷ್ಕರ್ಮಿಗಳು ದೇವಸ್ಥಾನಗಳನ್ನು ಟಾರ್ಗೆಟ್‌ ಮಾಡುವ ಯತ್ನ ವಿಫಲವಾಗಿದೆ. ಈ ರೀತಿಯ ಕೃತ್ಯದ ಹಿಂದೆ ದೊಡ್ಡ ಮಟ್ಟದ ಷಡ್ಯಂತರವಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಇಂತಹ ಸಮಾಜ ಘಾತುಕ ಶಕ್ತಿಗಳನ್ನು ರಾಷ್ಟ್ರೀಯ ತನಿಖಾದಳ ಹಾಗೂ ನಮ್ಮ ಪೊಲೀಸರು ಮಟ್ಟಹಾಕುವ ವಿಶ್ವಾಸವಿದೆ ಎಂದರು. ಎನ್‌ಐಎ ಘಟಕ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮಂಗಳೂರು ಎನ್‌ಐಎ ಘಟಕ ಸ್ಥಾಪನೆಗೆ ನಾವು ಮನವಿ ಮಾಡಿದ್ದು, ಕೇಂದ್ರ ಇದಕ್ಕೆ ಪೂರಕ ಸ್ಪಂದನೆ ನೀಡಿದೆ ಎಂದರು.

ಕದ್ರಿ ಸೇರಿ ಮೂರು ಹಿಂದೂ ಮಂದಿರಗಳನ್ನು ಟಾರ್ಗೆಟ್ ಮಾಡಿದ್ದ ಶಾರೀಕ್?

ಕುಕ್ಕರ್‌ ಬಾಂಬ್‌ ಸ್ಫೋಟದಲ್ಲಿ ಗಾಯಗೊಂಡಿರುವ ರಿಕ್ಷಾ ಚಾಲಕ ಪುರುಷೋತ್ತಮ ಅವರ ಚಿಕಿತ್ಸೆಯ ಪೂರ್ಣ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭ ಮಂಗಳೂರು ಮೇಯರ್‌ ಜಯಾನಂದ ಅಂಚನ್‌, ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌., ಪಾಲಿಕೆ ಸದಸ್ಯರಾದ ಸಂದೀಪ್‌ ಗರೋಡಿ, ಸುಧೀರ್‌ ಶೆಟ್ಟಿಕಣ್ಣೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಪ್ರಭಾ ಮಾಲಿನಿ, ಮಂಗಳೂರು ನಗರ ದಕ್ಷಿಣ ಅಧ್ಯಕ್ಷ ವಿಜಯ ಕುಮಾರ್‌ ಶೆಟ್ಟಿ, ಮುಖಂಡರಾದ ಚಂದ್ರಶೇಖರ್‌ ಉಚ್ಚಿಲ್‌, ವಿಶ್ವಹಿಂದೂ ಪರಿಷತ್‌ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌, ಗುರುಚರಣ್‌ ಇದ್ದರು.