ಮಂಗಳೂರು ಬಾಂಬ್ ಸ್ಫೋಟ: ಲಷ್ಕರ್ ಸಂಪರ್ಕಿಸಿ ಎಕೆ47 ತರಿಸಲು ಶಾರೀಕ್ ಯತ್ನ..!
ಧರ್ಮ ದಂಗಲ್, ಹಿಜಾಬ್ ಘಟನೆ ಬಳಿಕ ಶಾರೀಕ್‌ಗೆ ಮಂಗಳೂರೇ ಟಾರ್ಗೆಟ್ ಆಗಿತ್ತು, ಪೊಲೀಸ್ ತನಿಖೆ
ಮಂಗಳೂರು(ನ.26): ಮಂಗಳೂರಿನಲ್ಲಿ ನ.19ರಂದು ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರೀಕ್, ಜಗತ್ತಿನ ಉಗ್ರ ಸಂಘಟನೆ ಲಷ್ಕರ್ ಇ ತೋಯ್ಬಾವನ್ನು ಸಂಪರ್ಕಿಸಲು ಯತ್ನಿಸಿದ್ದ. ಅವರ ಸಹಕಾರ ಪಡೆದು ಆಗಲೇ ದಾಳಿಗೆ ಸಂಚು ರೂಪಿಸಿದ್ದ. ಕರಾವಳಿಯಲ್ಲಿ ಹಿಂದು ಮುಖಂಡರನ್ನು, ಆರ್‌ಎಸ್‌ಎಸ್ ನಾಯಕರನ್ನು ಹಾಗೂ ಪೊಲೀಸರನ್ನು ಕೂಡ ಈತ ಟಾರ್ಗೆಟ್ ಮಾಡಿದ್ದ. ಇದಕ್ಕಾಗಿ ಎಕೆ 47 ನಂತಹ ಬಂದೂಕು ತರಿಸಲು ಯತ್ನಿಸಿದ್ದ ಎಂಬ ಅಂಶ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಹೀಗಾಗಿ, ಧರ್ಮ ದಂಗಲ್, ಹಿಜಾಬ್ ಘಟನೆ ಬಳಿಕ ಶಾರೀಕ್‌ಗೆ ಮಂಗಳೂರೇ ಟಾರ್ಗೆಟ್ ಆಗಿತ್ತು ಎಂಬ ಭಯಾನಕ ಅಂಶ ಬಯಲಾಗಿದೆ.
ತನಿಖೆ ವೇಳೆ ಪೊಲೀಸರಿಗೆ ಆತನ ಮೊಬೈಲ್‌ನಲ್ಲಿ ಝಾಕಿರ್ ನಾಯ್ಕ್‌ನ ಭಾಷಣದ ವಿಡಿಯೋಗಳು ಪತ್ತೆಯಾಗಿವೆ. ಹಲವು ಸೆಲ್ಫಿ ಫೋಟೋಗಳು, ಬಾಂಬ್ ತಯಾರಿಸುವ ವಿಡಿಯೋಗಳು ಕೂಡ ಪತ್ತೆಯಾಗಿವೆ. ಹೀಗಾಗಿ, ಆತನ ಭಾಷಣಗಳಿಂದ ಶಾರೀಕ್ ಪ್ರಭಾವಿತನಾಗಿದ್ದ. ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್(ಐಆರ್‌ಎಫ್) ಜತೆ ಸಂಪರ್ಕ ಹೊಂದಿದ್ದ. ಟೋರ್ ಬ್ರೌಸರ್ ಮೂಲಕ ಶಾರೀಕ್, ಡಾರ್ಕ್ ವೆಬ್ ಬಳಸುತ್ತಿದ್ದ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
Mangaluru Auto Blast: ಉಗ್ರ ಶಾರೀಕ್ ಬಳಸಿದ್ದ ಡಾರ್ಕ್‌ವೆಬ್!
ಉಗ್ರ ಕೃತ್ಯಕ್ಕೆ ಡಾರ್ಕ್ ವೆಬ್ ಬಳಕೆ:
ಇಂಟರ್‌ನೆಟ್ ಲೋಕದಲ್ಲಿ ಡಾರ್ಕ್ ವೆಬ್ ಎನ್ನುವುದು ಪ್ರಖ್ಯಾತಿಯ ಜತೆಗೆ ಕುಖ್ಯಾತಿಯನ್ನೂ ಪಡೆದಿದೆ. ಭಯೋತ್ಪಾದಕರಿಗೆ ಹಣಕಾಸಿನ ಪೂರೈಕೆಗೂ ಡಾರ್ಕ್ ವೆಬ್ ನೆರವು ನೀಡುವುದನ್ನು ಪತ್ತೆ ಮಾಡಲಾಗಿದೆ. ಟೋರ್ ಬ್ರೌಸರ್ ಮೂಲಕ ಶಾರೀಕ್ ಡಾರ್ಕ್ ವೆಬ್ ಬಳಸುತ್ತಿರುವುದು ಪತ್ತೆಯಾಗಿದೆ.
ಡಾರ್ಕ್ ವೆಬ್‌ಗೆ ಸಾಫ್‌್ಟವೇರ್ ಹಾಗೂ ಮೂಲಗಳನ್ನು ರಹಸ್ಯವಾಗಿರಿಸುವ ಸಾಮರ್ಥ್ಯ ಇದೆ. ಓಪನ್ ವೆಬ್, ಡೀಪ್ ವೆಬ್ ಹಾಗೂ ಡಾರ್ಕ್ ವೆಬ್ ಎಂಬ ಇಂಟರ್‌ನೆಟ್ ಗೇಮ್ ಇದೆ. ಬಳಕೆದಾರನ ನೈಜ ಐಪಿ ವಿಳಾಸವನ್ನೇ ಡಾರ್ಕ್ ವೆಬ್ ಅನಾಮಧೇಯವಾಗಿಸುತ್ತದೆ. ಡಾರ್ಕ್ ವೆಬ್ ಬಳಕೆಗೆ ಸಾಮಾನ್ಯವಾಗಿ ಪ್ರತ್ಯೇಕ ಸಾಫ್‌ವೇರ್ ಬಳಸುತ್ತಾರೆ. ಬಹುತೇಕವಾಗಿ ಟೋರ್ (ಟಿಓಆರ್- ದ ಆನಿಯನ್ ಬ್ರೌಸರ್) ಬ್ರೌಸರ್ ಬಳಕೆ ಮಾಡುತ್ತಾರೆ. ಬಳಕೆದಾರರು ಕಳುಹಿಸುವ ಸಂದೇಶಗಳನ್ನು ಎನ್ಕಿ್ರಪ್ಷನ್ ಮೂಲಕ ಗೌಪ್ಯವಾಗಿಡುತ್ತದೆ. ಆಯುಧ ಬಳಕೆ ಹಾಗೂ ಡ್ರಗ್‌್ಸ ಮಾರಾಟ ಚಟುವಟಿಕೆಗಳಿಗೆ ಇದನ್ನು ಬಳಸುತ್ತಾರೆ ಎನ್ನುತ್ತಾರೆ ಸೈಬರ್ ತಜ್ಞರು.
ಕುಕ್ಕರ್ ಬಾಂಬ್ ಸ್ಫೋಟಕ್ಕೆ ಐಸಿಸ್ ನಿರ್ದೇಶನ:
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಲು ನಿರ್ದೇಶನ ನೀಡಿದ್ದು ದುಬೈನಲ್ಲಿ ತರೆಮರೆಸಿರುವ ತೀರ್ಥಹಳ್ಳಿ ಮೂಲದ ಅರಾಫತ್ ಅಲಿ ಎಂಬ ಉಗ್ರ ಎಂಬ ಸಂಗತಿ ಕೂಡ ತನಿಖೆ ವೇಳೆ ಬಯಲಾಗಿದೆ. ಐಸಿಸ್ ಜತೆ ಸಂಪರ್ಕ ಹೊಂದಿರುವ ಅರಾಫತ್ ಅಲಿಯಿಂದ ಬಾಂಬ್ ಸ್ಫೋಟಿಸುವ ಬಗ್ಗೆ ಶಾರೀಕ್‌ಗೆ ನಿರ್ದೇಶನ ಇತ್ತು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ ಎಂದು ಮೂಲಗಳು ಹೇಳಿವೆ.
ಸಿಎಂ ಮಂಗಳೂರು ಭೇಟಿ ದಿನವೇ ಸ್ಫೋಟಕ್ಕೆ ಸಂಚು..!
ಕುಕ್ಕರ್ ಬಾಂಬ್ ಸ್ಫೋಟಿಸುವಂತೆ ಅರಾಫತ್ ಅಲಿಯೇ ಶಾರೀಕ್‌ಗೆ ನಿರ್ದೇಶನ ನೀಡಿದ್ದ. ಅದರಂತೆ ವಿಧ್ವಂಸಕ ಕೃತ್ಯ ಎಸಗಲು ಶಾರೀಕ್ ಕುಕ್ಕರ್ ಬಾಂಬ್‌ನ್ನು ಅಟೋದಲ್ಲಿ ತರುತ್ತಿರಬೇಕಾದರೆ ದಾರಿ ಮಧ್ಯೆ ಅಚಾನಕ್ ಆಗಿ ಸ್ಫೋಟಗೊಂಡಿತ್ತು. ಹೀಗಾಗಿ ಭಾರಿ ವಿಧ್ವಂಸಕ ಕೃತ್ಯ ಎಸಗುವ ಉಗ್ರರ ಸಂಚು ವಿಫಲಗೊಂಡಿತ್ತು. ಆದರೆ, ಈ ಸಂಚು ಎಲ್ಲಿ ಮತ್ತು ಹೇಗೆ ಎನ್ನುವುದು ಗಾಯಾಳುವಾಗಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್‌ನ ಬಾಯಿಬಿಡಿಸಿದಾಗಲೇ ಗೊತ್ತಾಗಬೇಕಿದೆ. ಇಲ್ಲವೇ ವಿದೇಶದಲ್ಲಿರುವ ಅರಾಫತ್ ಅಲಿಯನ್ನು ಪತ್ತೆ ಮಾಡಿ ಬಂಧಿಸಿ ಬಾಯಿಬಿಡಿಸಬೇಕಿದೆ.
ಕದ್ರಿ ದೇವಸ್ಥಾನದಿಂದ ಪೊಲೀಸ್ ದೂರು
ಮಂಗಳೂರು ಆಟೋ ರಿಕ್ಷಾ ಬಾಂಬ್ ಸ್ಫೋಟ ಘಟನೆಗೆ ಸಂಬಂಧಿಸಿ ಕದ್ರಿ ಮಂಜುನಾಥ ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿ ಜಯಮ್ಮ ಅವರು ಕದ್ರಿ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದಾರೆ. ಅಲ್ಲದೆ, ದೇವಾಲಯಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ.