ಈದ್ಗಾದಲ್ಲಿ ಧ್ವಜಾರೋಹಣ ಮಾತ್ರ, ಧಾರ್ಮಿಕ ಆಚರಣೆ ಇಲ್ಲ: ಜಮೀರ್ ಅಹಮದ್
ಎಲ್ಲರೂ ಸೇರಿಯೇ ಸ್ವಾಂತ್ರ್ಯ ದಿನಾಚರಣೆ ಮಾಡುತ್ತೇವೆ: ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್
ಬೆಂಗಳೂರು(ಆ.09): ಇದೇ ಮೊದಲ ಬಾರಿಗೆ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಆ.15ರಂದು ಅತ್ಯಂತ ಸಡಗರ, ಸಂಭ್ರಮದಿಂದ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವ ಆಚರಿಸಲಿದ್ದೇವೆ. ಆದರೆ, ಮೈದಾನದಲ್ಲಿ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ ಎಂದು ಶಾಸಕ ಜಮೀರ್ ಅಹಮದ್‌ಖಾನ್ ತಿಳಿಸಿದರು. ಸೋಮವಾರ ಚಾಮರಾಜಪೇಟೆಯ ಆಟದ ಮೈದಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮದ ಪೂರ್ವಸಿದ್ಧತೆ ಕುರಿತು ಅವರು ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಆಚರಣೆಯನ್ನು ಇನ್ನು ಮುಂದೆ ಪ್ರತಿ ವರ್ಷ ಈದ್ಗಾ ಮೈದಾನದಲ್ಲಿ ಆಚರಿಸುತ್ತೇವೆ. ಆದರೆ, ಯಾವುದೇ ಧಾರ್ಮಿಕ ಆಚರಣೆಗೆ ಇಲ್ಲಿ ಅವಕಾಶ ಇಲ್ಲ. ಎಷ್ಟುಜನ ಬೇಕಾದರೂ ಸೇರಲಿ. ಎಲ್ಲರೂ ಜೊತೆಯಾಗಿಯೇ ಸ್ವಾತಂತ್ರ್ಯ ದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತೇವೆ ಎಂದು ಹೇಳಿದರು.
‘ಬಿಬಿಎಂಪಿ ಮಾಜಿ ಸದಸ್ಯರಾದ ಬಿ.ವಿ.ಗಣೇಶ್, ಕೋಕಿಲ ಚಂದ್ರಶೇಖರ್ ಹಾಗೂ ಮತ್ತಿತರ ದೇವಸ್ಥಾನಗಳ ಸದಸ್ಯರು, ಮುಖಂಡರೊಂದಿಗೆ ಚರ್ಚಿಸಿ ಆ.15ರಂದು ಧ್ವಜಾರೋಹಣ ಕಾರ್ಯಕ್ರಮಕ್ಕಾಗಿ ಸ್ಥಳ ನಿಗದಿಪಡಿಸುತ್ತೇವೆ. 1999ಕ್ಕಿಂತ ಮೊದಲು ವಕ್ಫ್ ಮಂಡಳಿ ಹಾಗೂ ಮುಜರಾಯಿ ಇಲಾಖೆ ಎರಡೂ ಕಂದಾಯ ಇಲಾಖೆ ಅಧೀನದಲ್ಲಿ ಇದ್ದವು. ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ವಕ್ಫ್ ಮಂಡಳಿಯನ್ನು ಪ್ರತ್ಯೇಕಿಸಿದರು. ಮೈದಾನದ ವಿಚಾರವನ್ನು ವಕ್ಫ್ ಮಂಡಳಿಯವರು ನೋಡಿಕೊಳ್ಳುತ್ತಾರೆ. ಸದ್ಯ ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸುವ ತಯಾರಿಯಲ್ಲಿದ್ದೇವೆ’ ಎಂದರು.
ಈದ್ಗಾ ಮೈದಾನ ಬಿಬಿಎಂಪಿ ಸ್ವತ್ತು ಎಂದು ಘೋಷಿಸಲು ಮೀನಾಮೇಷ, ಜಮೀರ್ ಒತ್ತಡವಿದೆಯಾ.?
ಪಾಲಿಕೆ ಮಾಜಿ ಸದಸ್ಯ ಬಿ.ವಿ.ಗಣೇಶ್ ಮಾತನಾಡಿ, ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಲಾ ಮಕ್ಕಳಿಗೆ ಆಹ್ವಾನಿಸಿದ್ದೇವೆ ಎಂದು ತಿಳಿಸಿದರು.
ಈದ್ಗಾ ಮೈದಾನದಲ್ಲಿ ಈಗ ‘ಆಚರಣೆ’ ಗದ್ದಲ!
ಚಾಮರಾಜಪೇಟೆ ಆಟದ ಮೈದಾನ ಕಂದಾಯ ಇಲಾಖೆ ಸ್ವತ್ತು ಎಂದು ಘೋಷಣೆಯಾದರೂ ವಿವಾದ ಮಾತ್ರ ಮುಗಿಯುವಂತೆ ಕಾಣುತ್ತಿಲ್ಲ. ಇದೀಗ ಮೈದಾನದಲ್ಲಿ ಧಾರ್ಮಿಕ ಹಬ್ಬಗಳನ್ನು ಆಚರಿಸಬೇಕೋ, ಬೇಡವೋ ಎಂಬ ಹೊಸ ವಿವಾದ ಸೃಷ್ಟಿಯಾಗಿದೆ.
ಆಟದ ಮೈದಾನದಲ್ಲಿ ಈ ಬಾರಿ ಗೌರಿ, ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತೇವೆ. ಚಾಮರಾಜಪೇಟೆ ನಾಗರಿಕರ ಒಕ್ಕೂಟದಿಂದಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ ಎಂದು ಹಿಂದೂಪರ ಸಂಘಟನೆಗಳು ಪಟ್ಟು ಹಿಡಿವೆ. ಇದಕ್ಕೆ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವವನ್ನು ಬೇಕಾದರೆ ಆಚರಿಸಲಿ. ಧ್ವಜಾರೋಹಣ ಮಾಡಲಿ. ಆದರೆ ಯಾವುದೇ ಕಾರಣಕ್ಕೂ ಬೇರೆ ಧಾರ್ಮಿಕ ಹಬ್ಬಗಳ ಆಚರಣೆಗೆ ಅವಕಾಶ ಕೊಡಬಾರದೆಂದು ಮುಸ್ಲಿಂ ನಾಯಕರು ಆಗ್ರಹಿಸಿದ್ದಾರೆ. ಹೀಗಾಗಿ ಎರಡು ಕೋಮುಗಳ ನಡುವೆ ತಿಕ್ಕಾಟ ಆರಂಭಗೊಂಡಿದೆ.
ಚಾಮರಾಜಪೇಟೆ ಆಟದ ಮೈದಾನ ಸದ್ಯಕ್ಕೆ ಕಂದಾಯ ಇಲಾಖೆಯ ಆಸ್ತಿಯಾಗಿದೆ. ಇಲ್ಲಿ ಯಾವ ಕಾರ್ಯಕ್ರಮ ನಡೆಯಬೇಕು ಅಥವಾ ನಡೆಯಬಾರದು ಎಂಬುದರ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ. ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾವನ್ನು ಯಾರು ಹಾರಿಸುತ್ತಾರೆ ಮತ್ತು ಮೈದಾನದಲ್ಲಿ ಗಣೇಶ ಹಬ್ಬ ಆಚರಣೆ ಬಗ್ಗೆಯೂ ಸರ್ಕಾರದ ತೀರ್ಮಾನವೇ ಅಂತಿಮ. ಈ ಕುರಿತು ಈವರೆಗೂ ಇಲಾಖೆಗೆ ಯಾರೂ ಕೂಡ ಅರ್ಜಿಯನ್ನು ಸಲ್ಲಿಸಿಲ್ಲ. ಅರ್ಜಿ ಸಲ್ಲಿಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಕಂದಾಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಈದ್ಗಾ ಗೋಡೆ ನೆಲಸಮಕ್ಕೆ ಪಟ್ಟು
ಈ ನಡುವೆ ಈದ್ಗಾ ಮೈದಾನ ಕಂದಾಯ ಇಲಾಖೆ ಸ್ವತ್ತೆಂದ ಮೇಲೆ ಈದ್ಗಾ ಗೋಡೆಯನ್ನು ನೆಲಸಮ ಮಾಡಿ ಎಂದು ಕೆಲವು ಹಿಂದೂಪರ ಸಂಘಟನೆಗಳು ಪಟ್ಟು ಹಿಡಿವೆ. ಗೋಡೆ ನೆಲಸಮ ಮಾಡಬೇಕು, ಮೈದಾನದಲ್ಲಿ ಸಭೆ, ಸಮಾರಂಭ ನಡೆಸಲು ಅನುಮತಿ ನೀಡಬೇಕು. ಆಟದ ಮೈದಾನವನ್ನು ಪ್ರತಿಯೊಬ್ಬ ನಾಗರಿಕರು ಬಳಕೆ ಮಾಡಲು ಪಾಲಿಕೆ ಅನುಮತಿ ನೀಡಬೇಕು. ಅದನ್ನು ಬಿಟ್ಟು ಒಂದು ಸಮುದಾಯವನ್ನು ಮಾತ್ರ ಓಲೈಕೆ ಮಾಡಲು ಮುಂದಾದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕೆಲ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ವಕ್ಫ್ ಬೋರ್ಡ್‌ಗೆ ನೀಡಿದ್ದ ಕಾಲವಾಕಾಶ ಅಂತ್ಯ: ಈದ್ಗಾ ಮೈದಾನ ಬಿಬಿಎಂಪಿ ಸ್ವತ್ತು ಎಂದು ಘೋಷಣೆ?
ಪೊಲೀಸ್ ಬಂದೋಬಸ್ತ್
ಚಾಮರಾಜಪೇಟೆ ಆಟದ ಮೈದಾನದ ಆಸ್ತಿ ಕಂದಾಯ ಇಲಾಖೆಗೆ ಸೇರಿದ್ದು ಎಂದು ಘೋಷಣೆಯಾದ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್‌್ತ ಕೈಗೊಂಡಿದೆ. ಸ್ಥಳದಲ್ಲಿ ಕೆಎಸ್‌ಆರ್‌ಪಿ ತುಕಡಿ, ಮೂವರು ಪಿಎಸ್‌ಐ, ನಾಲ್ವರು ಎಸ್‌ಐ ಸಬ್‌ಇನ್‌ಸ್ಪೆಕ್ಟರ್, 10ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ತಂಡವು ಭದ್ರತೆ ಕೈಗೊಂಡಿದ್ದು, ಎರಡು ಹೊಯ್ಸಳ ವಾಹನಗಳನ್ನು ಗಸ್ತಿಗೆಂದು ನೇಮಕ ಮಾಡಲಾಗಿದೆ.
ಸದ್ಯ ಚಾಮರಾಜಪೇಟೆ ಆಟದ ಮೈದಾನದಲ್ಲಿ ಯಾವುದೇ ಆಚರಣೆಗೆ ಅವಕಾಶ ನೀಡಿಲ್ಲ. ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದ್ದು, ಗಲಾಟೆ, ಗದ್ದಲಗಳಿಗೆ ಅನುವು ಮಾಡಿಕೊಟ್ಟಿಲ್ಲ. ಪೊಲೀಸ್ ಅಧಿಕಾರಿ, ಸಿಬ್ಬಂದಿ ಭದ್ರತಾ ಕಾರ್ಯ ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಸ್ವಾತಂತ್ರ್ಯ ದಿನ ಸೇರಿದಂತೆ ಇತರೆ ಹಬ್ಬ, ಹರಿದಿನಗಳ ಆಚರಣೆ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ಬಿಬಿಎಂಪಿ ಮೂಲಗಳು ಮಾಹಿತಿ ನೀಡಿವೆ.