ಕಾಂಗ್ರೆಸ್ಗೆ ಹೊಸ ಅವಕಾಶ ಕಲ್ಪಿಸಿದ HDK: ಜೋಡೆತ್ತುಗಳ ನಡುವೆ ಭಾರೀ ಬಿರುಕು
ದಳಪತಿ ಎಚ್ ಡಿ ಕುಮಾರಸ್ವಾಮಿ ಇದೀಗ ಕಾಂಗ್ರೆಸ್ಗೆ ಹೊಸ ಅಸ್ತ್ರ ಒಂದನ್ನು ಒದಗಿಸಿಕೊಟ್ಟಿದ್ದಾರೆ.
ಎಂ.ಅಫ್ರೋಜ್ ಖಾನ್
ರಾಮನಗರ (ಅ.16): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಪರೋಕ್ಷವಾಗಿ ಟೀಕಿಸುವ ಭರದಲ್ಲಿ ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ನೀಡಿರುವ ‘ಸ್ಲೋ ಪಾಯಿಸನ್‘ ಹೇಳಿಕೆಯಿಂದ ನಿಟ್ಟುಸಿರು ಬಿಟ್ಟಿರುವ ಕಾಂಗ್ರೆಸ್ಸಿಗರಿಗೆ ದಳಪತಿಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಹೊಸ ಅಸ್ತ್ರ ಸಿಕ್ಕಿದಂತಾಗಿದೆ.
ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿ ಪಕ್ಷಗಳು. ಆದರೆ, ಡಿ.ಕೆ . ಶಿವಕುಮಾರ್ ಅವರು ಕುಮಾರಸ್ವಾಮಿ ಅವರೊಂದಿಗೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದರಿಂದ ಬೆರಳಣಿಕೆಯಷ್ಟುನಾಯಕರನ್ನು ಹೊರತುಪಡಿಸಿ ಉಭಯ ಪಕ್ಷದ ನಾಯಕರು ಪರಸ್ಪರ ಟೀಕೆ ಮಾಡುವ ಧೈರ್ಯ ತೋರುತ್ತಿರಲಿಲ್ಲ.
ಆದರೀಗ ಕುಮಾರಸ್ವಾಮಿ ಅವರೇ ಡಿ.ಕೆ. ಶಿವಕುಮಾರ್ ವಿರುದ್ಧ ‘ಸ್ಲೋ ಪಾಯಿಸನ್‘ ಪದ ಬಳಸುವ ಮೂಲಕ ಜೆಡಿಎಸ್ ಮೇಲೆ ಮುಗಿಬೀಳಲು ಕಾತುರರಾಗಿದ್ದ ಕಾಂಗ್ರೆಸ್ಸಿಗರಿಗೆ ಹೊಸದೊಂದು ಅಸ್ತ್ರ ನೀಡಿ ಅವಕಾಶ ಕಲ್ಪಿಸಿಕೊಟ್ಟಂತಾಗಿದೆ. ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ನಂತರ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ರಾಜಕೀಯ ವೈಷಮ್ಯ ಮರೆತು ಒಂದಾಗಿದ್ದರು. ಅಲ್ಲದೆ, ದೋಸ್ತಿ ಸರ್ಕಾರದಲ್ಲಿ ‘ಅಭಿವೃದ್ಧಿಯ ಜೋಡೆತ್ತುಗಳು‘ ಎಂದೇ ಕರೆಯಲ್ಪಟ್ಟರು.
ಕಗ್ಗಂಟಾದ ಶರತ್ ಬಚ್ಚೇಗೌಡ ರಾಜಕೀಯ : ಬಿತ್ತು ದೊಡ್ಡ ಬ್ರೇಕ್ ...
ಮೈತ್ರಿ ಸರ್ಕಾರ ಪತನವಾದ ನಂತರವೂ ಇಬ್ಬರು ನಾಯಕರು ಒಬ್ಬರನ್ನೊಬ್ಬರು ಟೀಕೆ ಮಾಡುವ ಗೋಜಿಗೆ ಹೋಗದೆ ಸ್ನೇಹ ಬಾಂಧವ್ಯವನ್ನು ಮತ್ತಷ್ಟುಬಿಗಿ ಮಾಡಿಕೊಂಡಿದ್ದರು. ರಾಜ್ಯಮಟ್ಟದಲ್ಲಿ ದೋಸ್ತಿ ಮುರಿದು ಬಿದ್ದರೂ ಜಿಲ್ಲೆಯಲ್ಲಿ ಮಾತ್ರ ಗೆಳೆತನ ಮುಂದುವರೆದಿತ್ತು. ಇದರ ಪರಿಣಾಮ ಕನಕಪುರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಧರ್ಮ ಪಾಲನೆ ಮಾಡಿದವು. ಆದರೆ, ಮಾಗಡಿ ಪುರಸಭೆಯಲ್ಲಿ ಅದು ಸಾಧ್ಯವಾಗಲಿಲ್ಲ. ಕನಕಪುರದ 31 ವಾರ್ಡುಗಳ ಪೈಕಿ 26ರಲ್ಲಿ ಕಾಂಗ್ರೆಸ್ ಸ್ಪರ್ಧಿಸಿದರೆ, ಕೇವಲ 5 ವಾರ್ಡುಗಳನ್ನು ಮಾತ್ರ ಜೆಡಿಎಸ್ ಗೆ ಬಿಟ್ಟುಕೊಡಲಾಗಿತ್ತು. ಇಲ್ಲಿ ಜೆಡಿಎಸ್ ನ ಆಕಾಂಕ್ಷಿತರು ಸ್ಪರ್ಧೆಯಿಂದ ವಂಚಿತರಾಗಿದ್ದರು.
ಆಕಾಂಕ್ಷಿತರಲ್ಲಿ ಖುಷಿಯೋ ಖುಷಿ:
ಈಗ ಜಿಲ್ಲೆಯಲ್ಲಿ ಗ್ರಾಪಂ, ರಾಮನಗರ ಮತ್ತು ಚನ್ನಪಟ್ಟಣ ನಗರಸಭೆ, ತಾಪಂ, ಜಿಪಂ ಸೇರಿದಂತೆ ಸಾಲು ಸಾಲು ಚುನಾವಣೆಗಳು ನಡೆಯಲಿವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಕಾರಣ ಇಲ್ಲಿಯೂ ಎಲ್ಲಿ ಕಾಂಗ್ರೆಸ್ - ಜೆಡಿಎಸ್ ನಡುವೆ ಸ್ಥಾನ ಹೊಂದಾಣಿಕೆ ಆಗುತ್ತದೆಯೋ ಎಂಬ ಚಿಂತೆ ಉಭಯ ಪಕ್ಷಗಳ ಆಕಾಂಕ್ಷಿತರನ್ನು ಕಾಡುತ್ತಿತ್ತು. ಅಲ್ಲದೆ, ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ ಕಾಂಗ್ರೆಸ್ ಜತೆಗಿನ ಮೈತ್ರಿ ಮುಂದುವರೆಸಿದರೆ ಜೆಡಿಎಸ್ಗೆ ದುಬಾರಿಯಾಗುವ ಸಾಧ್ಯತೆಯೂ ಇದೆ. ಡಿಕೆಶಿ ಕೂಡ ಒಕ್ಕಲಿಗ ಮತ ಬ್ಯಾಂಕ್ಗೆ ಕೈ ಹಾಕುವುದರಿಂದ ಜೆಡಿಎಸ್ ಗೆ ನೆಲೆ ಕಳೆದುಕೊಳ್ಳುವ ಭೀತಿಯಿದೆ.
ಈಗಾಗಲೇ ರಾಮನಗರ ತಾಪಂ, ಟಿಎಪಿಸಿಎಂಎಸ್ ಚುನಾವಣೆಯಲ್ಲಿಯೂ ಡಿಕೆ ಸಹೋದರರ ತಂತ್ರದ ಫಲವಾಗಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಜತೆಗೆ ದಳದ ನಿಷ್ಠಾವಂತ ಒಬ್ಬೊಬ್ಬ ನಾಯಕರನ್ನೇ ಕೈ ತೆಕ್ಕೆಗೆ ಸೆಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ವಿರುದ್ಧ ಯುದ್ಧ ಸಾರುವುದು ಅನಿವಾರ್ಯವಾಗಿರುವ ಕಾರಣ ಕುಮಾರಸ್ವಾಮಿ ಬಹಿರಂಗವಾಗಿಯೇ ಡಿಕೆಶಿ ವಿರುದ್ಧ ಸಿಡಿದೆದ್ದಿದ್ದಾರೆ.
ದೇವೇಗೌಡ ಮತ್ತು ಕುಮಾರಸ್ವಾಮಿ ಕುಟುಂಬದವರು ಉಪಕಾರ ಮಾಡಿದವರನ್ನೇ ಟೀಕಿಸುವ ಹಾಗೂ ದ್ರೋಹ ಬಗೆಯುವುದು ಹೊಸದೇನಲ್ಲ. ಡಿಕೆಶಿ ವಿಚಾರದಲ್ಲಿಯೂ ಅದೇ ಆಗಿದೆ. ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಡಿಕೆಶಿ ಮುಂಬೈಗೆ ಹೋಗಿ ಬೂಟಾಟಿಕೆ ಮಾಡಲಿಲ್ಲ. ಅಲ್ಲಿ ನಡುರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಕೇಸು ಹಾಕಿಸಿಕೊಂಡರು. ಈಗ ಅವರನ್ನೇ ಟೀಕಿಸುತ್ತಿರುವ ಕುಮಾರಸ್ವಾಮಿರವರ ಇನ್ನೊಂದು ಮುಖ ಜನರಿಗೆ ಗೊತ್ತಾಗುತ್ತಿದೆ.
- ಸಿ.ಎಂ.ಲಿಂಗಪ್ಪ, ಎಂಎಲ್ಸಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೆಡಿಎಸ್ - ಕಾಂಗ್ರೆಸ್ ದೋಸ್ತಿ ಸರ್ಕಾರ ಉಳಿಸಲು ನಡೆಸಿದ ಹೋರಾಟ, ರಾಮನಗರ ಕ್ಷೇತ್ರದಲ್ಲಿ ಅನಿತಾ ಅವರನ್ನು ಗೆಲ್ಲಿಸಿದ್ದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಸ್ಲೋ ಪಾಯಿಸನ್ ಘಟನೆಗಳಂತೆ ಕಂಡಿರಬೇಕು. ನಮ್ಮ ನಾಯಕ ಡಿಕೆಶಿ ನುಡಿದಂತೆ ನಡೆಯುವ, ನಡೆದಂತೆ ನುಡಿಯುವವರ ಸಾಲಿಗೆ ಸೇರಿದವರು.
-ಇಕ್ಬಾಲ್ ಹುಸೇನ್ , ಮಾಜಿ ಅಧ್ಯಕ್ಷರು, ಜಿಪಂ, ರಾಮನಗರ.