3ನೇ ಅಲೆ ಭೀತಿ: ಯಾದಗಿರಿಯ ಮೈಲಾಪೂರಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ
* ಅಮವಾಸ್ಯೆ, ಶ್ರಾವಣ ಹಿನ್ನೆಲೆಯಲ್ಲಿ ಆಗಮಿಸಿದ ಸಾವಿರಾರು ಭಕ್ತರ ಪರದಾಟ
* ಜಿಲ್ಲಾಡಳಿತ ವಿರುದ್ಧ ಭಕ್ತರ ಆಕ್ರೋಶ, ಪೂಜಾರಿಗಳ ಅಸಮಾಧಾನ
* ದೇವಸ್ಥಾನ ಪ್ರವೇಶದಲ್ಲಿಯೇ ತೆಂಗು ಒಡೆದು ಪೂಜೆ ಸಲ್ಲಿಸಿ ವಾಪಸ್ಸಾದ ಭಕ್ತರು
ಯಾದಗಿರಿ(ಆ.09): ಕಲ್ಯಾಣ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ, ತಾಲೂಕಿನ ಮೈಲಾಪೂರದ ಶ್ರೀಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಕಾಲ ಭಕ್ತರ ಪ್ರವೇಶ ನಿಷೇಧಿಸಿ, ಜಿಲ್ಲಾಡಳಿತ ಶನಿವಾರ ಸಂಜೆ ಆದೇಶ ಹೊರಡಿಸಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರ ಸೇರುವಿಕೆಯಿಂದ ಕೋವಿಡ್-19 ಮೂರನೆಯ ಅಲೆ ಮತ್ತಷ್ಟೂ ಹರಡುವ ಭೀತಿ ಎದುರಾಗಿದ್ದರಿಂದ ಆಡಳಿತ ಈ ಕ್ರಮಕ್ಕೆ ಮುಂದಾಗಿದೆ. ಆದರೆ, ಆಡಳಿತದ ಈ ಕ್ರಮ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಶ್ರಾವಣಮಾಸದ ಈ ಅವಧಿಯಲ್ಲಿ ಪ್ರತಿ ಭಾನುವಾರ ಮತ್ತು ಸೋಮವಾರ ದೇವಸ್ಥಾನ ಮುಚ್ಚಲು ಆದೇಶ ನೀಡಿ, ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಈ ಅವಧಿಯಲ್ಲಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಮೈಲಾಪೂರಕ್ಕೆ ಆಗಮಿಸುತ್ತಾರೆ. ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ಭಾನುವಾರ ಅಮವಾಸ್ಯೆಯ ನಿಮಿತ್ತ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಇತ್ತ, ನೆರೆಯ ರಾಜ್ಯಗಳಲ್ಲಿ ಕೋವಿಡ್ ಮೂರನೆ ಅಲೆಯ ವ್ಯಾಪಿಸತೊಡಗಿದ್ದರಿಂದ, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಂಟು ಕಡೆಗಳಲ್ಲಿ ಚೆಕ್ಪೋಸ್ಟ್ ನಿರ್ಮಾಣ ಮಾಡಿದೆ. ವಿವಿಧೆಡೆ ಬಿಗಿ ಕ್ರಮಗಳನ್ನು ಕೈಗೊಂಡಿದೆ.
ಕೊರೋನಾ 3ನೇ ಅಲೆ ಬಗ್ಗೆ ಭಗವಂತನೇ ಹೇಳ್ಬೇಕು: ಸಚಿವ ನಾಗೇಶ್
ಮೈಲಾಪೂರದಲ್ಲೂ ಸಹ ಮುಖ್ಯರಸ್ತೆಯಲ್ಲಿ ಮಣ್ಣು ಹಾಕಿ ವಾಹನಗಳ ಓಡಾಟಕ್ಕೆ ನಿರ್ಬಂಽಸಲಾಗಿದ್ದು, ಬಿಗಿ ಪೊಲೀಸ್ ಕಾವಲು ಹಾಕಲಾಗಿದೆ. ಈ ಮಧ್ಯೆ, ಜಿಲ್ಲಾಡಳಿತದ ಆದೇಶದ ಬಗ್ಗೆ ಮಾಹಿತಿಯಿರದ ಅನೇಕ ಭಕ್ತರು ಬೆಳಿಗ್ಗೆಯಿಂದಲೇ ಮೈಲಾಪೂರಕ್ಕೆ ಆಗಮಿಸಿದ್ದಾದರೂ, ದೇವರ ದರುಶನಕ್ಕೆ ಅವಕಾಶ ಸಿಗದಿದ್ದರಿಂದ ಬೇಸರಗೊಂಡರು. ಆಡಳಿತದ ದಿಢೀರ್ ನಿರ್ಧಾರ ಅನೇಕ ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ದೇವಸ್ಥಾನ ಮುಚ್ಚಿ, ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಿರುವುದರಿಂದ ಭಕ್ತರು ದೇವಸ್ಥಾನ ಕೆಳಗಿರುವ ಪಾದಗಟ್ಟೆಗೆ ತೆಂಗಿನಕಾಯಿ ಒಡೆದು, ಭಂಡಾರ ಹಚ್ಚಿಕೊಂಡು ದರ್ಶನ ಪಡೆಯದೇ ನಿರಾಶೆಯಿಂದ ಮರಳಿ ತಮ್ಮ ಗ್ರಾಮಗಳಿಗೆ ತೆರಳಿದರು. ಭಕ್ತರನ್ನು ನಿಯಂತ್ರಿಸಲು ಪೊಲೀಸರೂ ಸಹ ಹರಸಾಹಸ ಪಡುವಂತ ಸ್ಥಿತಿ ನಿರ್ಮಾಣವಾಗಿತ್ತು. ದೇವಸ್ಥಾನದ ಅರ್ಚಕ ಮಂಡಳಿಗಳಲ್ಲಿ ಆಡಳಿತದ ಈ ನಿರ್ಧಾರ ಬೇಸರ ಮೂಡಿಸಿದೆ ಎನ್ನಲಾಗಿದೆ. ಜಿಲ್ಲೆಗೆ ಆದಾಯ ನೀಡುವ ದೇಗುಲಗಳ ಪೈಕಿ ಮೈಲಾಪೂರದ ಮಲ್ಲಯ್ಯ ದೇವಸ್ಥಾನಕ್ಕೆ ಹೆಚ್ಚಿನ ಆದ್ಯತೆಯಿದೆ.
ಕೋವಿಡ್-19 ಮೂರನೇ ಅಲೆ ಹಿನ್ನೆಲೆಯಲ್ಲಿ ದೇವಸ್ಥಾನ ಪ್ರವೇಶಕ್ಕೆ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ಯಾದಗಿರಿ ತಹಸೀಲ್ದಾರ್ ಚೆನ್ನಮಲ್ಲಪ ಘಂಟಿ ತಿಳಿಸಿದ್ದಾರೆ.
ಆಡಳಿತ ಹೀಗೆ ಏಕಾಏಕಿ ಮಾಡಿದರೆ ಹೇಗೆ ? ಶ್ರಾವಣ ಮಾಸದಲ್ಲಿ ನಾವು ದೇವರ ದರುಶನಕ್ಕೆಂದು ಅನೇಕರು ಆಗಮಿಸುತ್ತಾರೆ ಎಂದು ಭಕ್ತರಾದ ದೇವೇಂದ್ರ, ಮಲ್ಲಯ್ಯ ಹೇಳಿದ್ದಾರೆ.