ಕೊರೋನಾ 3ನೇ ಅಲೆ ಬಗ್ಗೆ ಭಗವಂತನೇ ಹೇಳ್ಬೇಕು: ಸಚಿವ ನಾಗೇಶ್

*  ಕೋವಿಡ್ 3ನೇ ಅಲೆ ಎದುರಿಸಲು ಬಿಜೆಪಿ ಸರ್ಕಾರ ಸಕಲ ಸಿದ್ಧತೆ
*  ಕೋವಿಡ್ 3ನೇ ಅಲೆಯೂ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂಬುದರಲ್ಲಿ ದ್ವಂದ್ವ
*  ಕೊರೋನಾ ಬಂದಿದೆ ಅಂತಾನೂ ಹೇಳಲು ಸಾಧ್ಯವಿಲ್ಲ
 

Minister BC Nagesh Talks Over Covid 3rd Wave in Karnataka grg

ಸುರಪುರ(ಆ.09): ಕೋವಿಡ್ 3ನೇ ಅಲೆ ಬರುತ್ತೆ ಅಂತ ಆ ಭಗವಂತ ಬಿಟ್ಟರೆ ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಬಂದರೆ ತಡೆಯುವುದಕ್ಕಾಗಿಯೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲು ತಯಾರಿ ನಡೆಸಿದ್ದೇವೆ. ಮನುಷ್ಯನಿಂದ ಕೊರೋನಾ ನಿಯಂತ್ರಿಸುವ ಶಕ್ತಿಯಿದೆ ಎಂದು ಜಿಲ್ಲಾ ಉಸ್ತುವಾರಿ, ಪ್ರೌಢಶಾಲೆ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. 

ಭಾನುವಾರ ನಗರದ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೋನಾ ಬಂದಿದೆ ಅಂತಾನೂ ಹೇಳಲು ಸಾಧ್ಯವಿಲ್ಲ, ಬರುತ್ತದೆ ಅಂತಾನೂ ನುಡಿಯಲು ಆಗದು. ಆಕಸ್ಮಾತ್ ಬಂದರೆ ತಡೆಗೆ ಯತ್ನಿಸಲಾಗುವುದು. 2ನೇ ಅಲೆಯೂ ಮಹಾರಾಷ್ಟ್ರದಿಂದ ಆರಂಭವಾಗಿ ರಾಜ್ಯ ಪ್ರವೇಶಿಸಿ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. 3ನೇ ಅಲೆ ನಿಯಂತ್ರಿಸಲು ರಾಜ್ಯದ ಗಡಿಭಾಗಗಳಲ್ಲಿ ಕಟ್ಟುನಿಟ್ಟಿನ ಎಚ್ಚರ ವಹಿಸಲಾಗಿದೆ ಎಂದರು.

ಕೋವಿಡ್ 3ನೇ ಅಲೆ ಎದುರಿಸಲು ಬಿಜೆಪಿ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಪ್ರಸ್ತುತ ಮಾಡಿರುವ ವ್ಯಾಕ್ಸಿನೇಷನ್ ಪ್ರಮಾಣವನ್ನು ಶೇ. 10ರಷ್ಟು ಹೆಚ್ಚಿಸಬೇಕು. ಜಿಲ್ಲೆ ಎಲ್ಲ ಶಾಸಕರು, ಅಧಿಕಾರಿಗಳು ಕೊರೋನಾ ನಿಯಂತ್ರಿಸಲು ಚರ್ಚಿಸಲಾಗಿದೆ. ಗ್ರಾಮ ಪಂಚಾಯತಿಯಲ್ಲಿರುವ ಕಾರ್ಯಪಡೆಯನ್ನು ಇನ್ನಷ್ಟು ಸದೃಢ ಮತ್ತು ಚುರುಕುಗೊಳಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ಶಾಲೆ ಆರಂಭದ ರಿಸ್ಕ್ ತೆಗೆದುಕೊಳ್ಳಬೇಕು : ಸಚಿವ ನಾಗೇಶ್‌

ಈಗಾಗಲೇ ಜಿಲ್ಲೆಯಲ್ಲಿರುವ ಆಸ್ಪತ್ರೆಗಳಲ್ಲಿ 650 ಆಕ್ಸಿಜನ್ ಹಾಗೂ ಬೆಡ್‌ಗಳ ಇಟ್ಟುಕೊಳ್ಳಲಾಗಿದೆ. 1500 ಆಕ್ಸಿಜನ್ ಬೆಡ್‌ಗಳಿಗೆ ತಯಾರಿ ನಡೆದಿದೆ. 1 ನೇ ಅಲೆಯಲ್ಲಿ ಆದ ಸಮಸ್ಯೆಯನ್ನು ೨ನೇ ಅಲೆಯಲ್ಲಿ ಸರಿಪಡಿಸಲಾಗಿದೆ. 2ನೇ ಅಲೆಯಲ್ಲಿ ಉಂಟಾದ ತೊಂದರೆಯನ್ನು 3ನೇ ಅಲೆಯಲ್ಲಿ ಸರಿಪಡಿಸಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

ಕೋವಿಡ್ 3ನೇ ಅಲೆಯೂ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂಬುದರಲ್ಲಿ ದ್ವಂದ್ವವಿದೆ. ನೆರೆಯ ರಾಜ್ಯಗಳಲ್ಲಿ ಕೊರೋನಾ ಅಲೆಯ ಪ್ರಭಾವವಿದೆ. ಹೀಗಾಗಿ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯ ಲಾಕ್‌ಡೌನ್ ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲೂ ಮುನ್ನೆಚ್ಚರಿಕೆ ವಹಿಸಲಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಶೇ. 80 ರಷ್ಟು ವ್ಯಾಕ್ಸಿನ್ ಹಾಕಲಾಗಿದೆ. ಅಲ್ಲದೆ ಕೊರೋನಾ ಹಾವಳಿ ಮಾಡಿದರೆ 18 ವರ್ಷದೊಳಗಿನವರ ಮೇಲೆ ಆದರೆ, ಕಷ್ಟ ಅನ್ನೋ ಮಾತ್ರಕ್ಕೆ ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ವಹಿಸಲಾಗುತ್ತದೆ ಎಂದರು.

* ಶಾಲೆ ಆರಂಭಿಸಲು ನಿರ್ಣಯ: 

ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲು ನಿರ್ಣಯಕೈಗೊಳ್ಳಲಾಗಿದೆ. ತಾಂತ್ರಿಕ ಸಲಹಾ ಸಮಿತಿಯ ಒಪ್ಪಿಗೆಯೂ ಪಡೆಯಲಾಗಿದೆ. ಪ್ರಪಂಚದ ಎಲ್ಲ ಕಡೆ ಶಾಲೆ ಆರಂಭಿಸಲಾಗಿದೆ. ಇದರಿಂದ ಶಾಲೆ ಪ್ರಾರಂಭಿಸಿದರೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಶಿಕ್ಷಕರ ಕೊರತೆಯನ್ನು ನೀಗಿಸಲಾಗಿದೆ. ಇದಕ್ಕಾಗಿಯೇ 1000 ಶಿಕ್ಷಕರನ್ನು ತುಂಬಿಕೊಳ್ಳಲಾಗಿದೆ ಎಂದರು.

* ಪ್ರವಾಹಕ್ಕೆ ಶಾಶ್ವತ ಪರಿಹಾರ: 

ಪ್ರವಾಹದಿಂದ ಹಾನಿಯಾಗಿರುವುದಕ್ಕೆ ಪರಿಹಾರ ಘೋಷಿಸಲು ಅಧಿಕಾರಿಗಳಿಂದ ವರದಿ ತಯಾರಿಸುತ್ತಿದ್ದಾರೆ. ಆದ ತಕ್ಷಣ ಪರಿಹಾರ ಘೋಷಣೆಗೆ ವ್ಯವಸ್ಥೆ ಮಾಡಲಾಗುವುದು. ಈ ಭಾಗದಲ್ಲಿ ಪ್ರವಾಹ ಪ್ರತಿವರ್ಷ ಬರುತ್ತಿದೆ. ಇದರಿಂದ ಅಪಾರ ಹಾನಿ ಆಗುತ್ತಿದೆ. ಇದನ್ನು ತಡೆಯಲು ಶಾಶ್ವತ ಪರಿಹಾರ ಹುಡಕಬೇಕಿದೆ. ಈ ನಿಟ್ಟಿನಲ್ಲಿ ಈ ಭಾಗದ ಶಾಸಕರು, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.

ಜಲಾಶಯದಿಂದ ಯಾವ ಪ್ರಮಾಣದಲ್ಲಿ ನೀರು ಬಿಟ್ಟರೆ ಯಾವ ಸರ್ವೇ ನಂಬರ್‌ನಲ್ಲಿ ಹಾನಿಯಾಗುತ್ತದೆ ಎಂಬುದನ್ನು ಪರಿಶೀಲಿಸಲಾಗುವುದು. ತಾಲೂಕಿನಲ್ಲಿರುವ ಬಾವಿಗಳನ್ನು ಪ್ರವಾಹದ ನೀರಿನಿಂದಲೇ ತುಂಬಿಸಬಹುದು. ಇದಕ್ಕಾಗಿಯೇ ಶಾಸಕ ರಾಜೂಗೌಡ ಅವರು 290 ಕೋಟಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಿದ್ದಾರೆ. 

ಕೋವಿಡ್ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಶಿಕ್ಷಕರಿಗೆ 5 ಸಾವಿರ ರು.ಗಳು ಘೋಷಿಸಿದ ಹಿಂಪಡೆಯುವ ಪ್ರಮೇಯವೇ ಇಲ್ಲ. ಸ್ವಲ್ಪ ತಡವಾಗಬಹುದು. ಘೋಷಿಸಿದಂತೆ ಯಾರ್‍ಯಾರು ನಿಯಮಾನುಸಾರ ಅರ್ಜಿ ಸಲ್ಲಿಸಿದ್ದಾರೋ ಅವರಿಗೆ ಪರಿಹಾರ ಹಾಕಲಾಗುವುದು. ಶಾಲೆಗಳಿಗೆ ಮಕ್ಕಳು ಬರದೆ ಇರುವುದರಿಂದ 2019-2020ನೇ ಸಾಲಿನ 2ನೇ ಅವಧಿಯ ಸಮವಸ್ತ್ರ ವಿತರಿಸಿಲ್ಲ. ಮಕ್ಕಳು ಬಂದರೆ ಸಮವಸ್ತ್ರ ವಿತರಿಸಲಾಗುವುದು ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರೆಡ್ಡಿ ನಾಯ್ಕಲ್, ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ), ಜಿಲ್ಲಾಧಿಕಾರಿ ಡಾ. ಆರ್. ರಾಗಪ್ರಿಯಾ, ಜಿಪಂ ಸಿಇಒ ಶಿಲ್ಪಾ ಶರ್ಮಾ, ಡಿಹೆಚ್‌ಓ ಡಾ. ಇಂದುಮತಿ ಸೇರಿದಂತೆ ಇತರರಿದ್ದರು.
 

Latest Videos
Follow Us:
Download App:
  • android
  • ios