ಹೊರರಾಜ್ಯದ ದೇಗುಲಗಳಿಗೆ ಬಸ್‌ ಸೇವೆ ನಿರ್ಬಂಧ ಓಂ ಶಕ್ತಿ ಯಾತ್ರೆಗೆ ತೆರಳಿದ್ದ 94ಕ್ಕೂ ಹೆಚ್ಚು ಮಂದಿಗೆ ಸೋಂಕು ಮುಂಗಡ ಬುಕ್ಕಿಂಗ್‌ ರದ್ದುಗೊಳಿಸುವಂತೆ ಸಾರಿಗೆ ಅಧಿಕಾರಿಗೆ ಡಿಸಿ ಎಸ್‌.ಅಶ್ವತಿ ಸೂಚನೆ

 ಮಂಡ್ಯ (ಜ.07):  ಹೊರ ರಾಜ್ಯದ ದೇವಸ್ಥಾನಗಳಿಗೆ (Temple) ತೆರಳುವವರಿಗೆ ಬಸ್‌ ಸೇವೆ ನಿರ್ಬಂಧಿಸುವಂತೆ ಹಾಗೂ ಓಂ ಶಕ್ತಿ ಯಾತ್ರೆಗೆ ಭಕ್ತರು ಮಾಡಿರುವ ಬುಕ್ಕಿಂಗ್‌ ರದ್ದುಗೊಳಿಸುವಂತೆ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿಗೆ ಜಿಲ್ಲಾಧಿಕಾರಿ ಎಸ್‌.ಅಶ್ವತಿ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಓಂ ಶಕ್ತಿ ಯಾತ್ರೆಗೆ ಹೋದವರಿಂದ ಜಿಲ್ಲೆಯಲ್ಲಿ ಕೊರೋನಾ (Corona) ಉಲ್ಬಣಿಸುತ್ತಿರುವ ಸಂಬಂಧ ಆರೋಗ್ಯ, ಕಂದಾಯ, ಸಾರಿಗೆ ಸೇರಿದಂತೆ ಇನ್ನಿತರ ಇಲಾಖೆ ಅಧಿಕಾರಿಗಳೊಂದಿಗೆ ತುರ್ತುಸಭೆ ನಡೆಸಿದರು.

94ಕ್ಕೂ ಹೆಚ್ಚು ಜನರಿಗೆ ಸೋಂಕು:

ತಮಿಳುನಾಡಿನ (Tamilnadu) ಓಂ ಶಕ್ತಿ ಯಾತ್ರೆಗೆ ಹೋಗಿ ಬಂದವರಿಂದ ಜಿಲ್ಲೆಯಲ್ಲಿ ಕೊರೋನಾ ಏರಿಕೆಯಾಗುತ್ತಿದೆ. ಈ ಯಾತ್ರೆಗೆ ಜಿಲ್ಲೆಯ ವಿವಿಧ ಗ್ರಾಮಗಳಿಂದ 2 ಸಾವಿರಕ್ಕೂ ಅಧಿಕ ಮಂದಿ ತೆರಳಿದ್ದು, ಈವರೆಗೆ 700ಕ್ಕೂ ಹೆಚ್ಚು ಮಂದಿ ವಾಪಸಾಗಿದ್ದು, ಅವರಲ್ಲಿ 94ಕ್ಕೂ ಹೆಚ್ಚು ಜನರಿಗೆ ಕೊರೋನಾ (Corona) ಸೋಂಕು ಹರಡಿದೆ. ಶ್ರೀರಂಗಪಟ್ಟಣದ 77, ಮಳವಳ್ಳಿಯ 10 ಹಾಗೂ ಮದ್ದೂರಿನ 7 ಜನರಿಗೆ ಕೊರೋನಾ ದೃಢಪಟ್ಟಿದೆ ಎಂದು ಹೇಳಿದರು.

ಬುಕ್ಕಿಂಗ್‌ ರದ್ದುಪಡಿಸಿ: ಓಂ ಶಕ್ತಿ ಯಾತ್ರಾರ್ಥಿಗಳಲ್ಲಿ ಸೋಂಕು ಪತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಯಾತ್ರೆ ಕೈಗೊಳ್ಳದಂತೆ ಕ್ರಮ ವಹಿಸಬೇಕು. ಯಾತ್ರೆಗೆ ಮುಂಗಡ ಬುಕ್ಕಿಂಗ್‌ ಆಗಿರುವ ಬಸ್‌ಗಳನ್ನು ಕೂಡಲೇ ರದ್ದುಗೊಳಿಸುವಂತೆ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಕಿರಣ್‌ಕುಮಾರ್‌ಗೆ ಸೂಚಿಸಿದರು. ಇದಕ್ಕೆ ಬುಕ್ಕಿಂಗ್‌ ಆಗಿರುವ ಬಸ್‌ಗಳನ್ನು ರದ್ದುಪಡಿಸಲು ಆಗುವುದಿಲ್ಲ ಎಂದಾಗ, ಏಕೆ ಆಗೋದಿಲ್ಲ. ಇದರಿಂದ ಕೊರೋನಾ ಹೆಚ್ಚಾದರೆ ಯಾರು ಜವಾಬ್ದಾರರು. ಈ ಬಗ್ಗೆ ನನಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡುವಂತೆ ಗದರಿದಾಗ ಅಧಿಕಾರಿ ಕಿರಣ್‌ಕುಮಾರ್‌ ಮೌನ ವಹಿಸಿದರು.

ಜಿಪಂ ಸಿಇಒ ದಿವ್ಯಪ್ರಭು, ಅಪರ ಜಿಲ್ಲಾಧಿಕಾರಿ ವಿ.ಆರ್‌.ಶೈಲಜಾ, ಡಿಎಚ್‌ಒ ಡಾ.ಟಿ.ಎನ್‌.ಧನಂಜಯ, ಆರ್‌ಸಿಹೆಚ್‌ ಡಾ.ಸೋಮಶೇಖರ್‌, ಜಿಪಂ ಉಪ ಕಾರ್ಯದರ್ಶಿ (ಆಡಳಿತ) ಎನ್‌.ಡಿ. ಪ್ರಕಾಶ್‌ ಸೇರಿದಂತೆ ಇತರರಿದ್ದರು.

ಸ್ಥಳದಲ್ಲೇ ಪರೀಕ್ಷೆ ಕಡ್ಡಾಯ: ಜಿಲ್ಲಾಧಿಕಾರಿ

ಹೊರ ರಾಜ್ಯದಿಂದ ಬಂದವರಿಗೆ ಕೊರೋನಾ ಪರೀಕ್ಷೆಯನ್ನು (Covid Test) ಕಡ್ಡಾಯವಾಗಿ ಮಾಡಬೇಕು. ಓಂ ಶಕ್ತಿ ಯಾತ್ರಾರ್ಥಿಗಳು ಹಿಂತಿರುಗಿದ ಕೂಡಲೇ ಸ್ಥಳದಲ್ಲೇ ಪರೀಕ್ಷೆ ಆಗಬೇಕು. ವರದಿ ಬರುವವರೆಗೂ ಅವರುಗೆ ಕ್ವಾರಂಟೈನ್‌ ಕಡ್ಡಾಯ ಮಾಡುವಂತೆ ಸೂಚಿಸಿದರು.

ತಮಿಳುನಾಡಿಗೆ (Tamilnadu) ಪ್ರವಾಸಕ್ಕೆ ಹೋಗಿ ವಾಪಸ್ಸು ಬಂದಿರುವವರ ಬಗ್ಗೆ ಮಾಹಿತಿ ಕಲೆ ಹಾಕಲು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸೂಚನೆ ನೀಡಿದ್ದೇನೆ. ಈಗಾಗಲೇ ಓಂ ಶಕ್ತಿ ದೇವಸ್ಥಾನಕ್ಕೆ 3 ಸಾವಿರಕ್ಕೂ ಹೆಚ್ಚು ಜನರು ಜಿಲ್ಲೆಯಿಂದ ಹೋಗಿದ್ದಾರೆ. ಹೋಗಿದ್ದವರು ಈಗ ವಾಪಸಾಗುತ್ತಿದ್ದಾರೆ. ಅವರೆಲ್ಲರ ಮಾಹಿತಿ ಕಲೆ ಹಾಕುತ್ತಿದ್ದೇವೆ. ಅವರು ಬಂದ ಕೊರೋನಾ ಪರೀಕ್ಷೆ ಮಾಡಿಸಿ ಕ್ವಾರಂಟೈನ್‌ ಒಳಪಡಿಸ್ತೇವೆ ಎಂದರು.

ನೆಗೆಟಿವ್‌ ಬಂದರೂ ಪರೀಕ್ಷೆ: ಯಾತ್ರೆ ಕೈಗೊಂಡವರಲ್ಲಿ ನೆಗೆಟಿವ್‌ (Covid Negetive) ಬಂದರೂ ಮತ್ತೆ 7 ನೇ ದಿನಕ್ಕೆ ಪರೀಕ್ಷೆಗೆ ಒಳಪಡಿಸುತ್ತೇವೆ. ಪ್ರವಾಸಿ ಕೇಂದ್ರ ಹಾಗೂ ದೇವಸ್ಥಾನಕ್ಕೆ ಹೋಗುವುದನ್ನು ನಿರ್ಬಂಧಿಸುವಂತೆ ಕೆಎಸ್‌ಆರ್‌ಟಿಸಿ (KSRTC) ಹಾಗೂ ಆರ್‌ಟಿಓ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದರಲ್ಲದೆ, ಸೋಂಕಿತರ ಗಂಟಲು ದ್ರವ ಮಾದರಿ ಜಿನೊಮಿಕ್‌ ಸಿಕ್ವೇನ್ಸಿಂಗ್‌ಗೆ ಕಳುಹಿಸುತ್ತಿದ್ದೇವೆ. ಇದುವರೆಗೆ ಜಿಲ್ಲೆಯಲ್ಲಿ ಯಾವುದೇ ಒಮಿಕ್ರಾನ್‌ ಕೇಸ್‌ ಪತ್ತೆಯಾಗಿಲ್ಲ ಎಂದು ಅಶ್ವತಿ ಸ್ಪಷ್ಟಪಡಿಸಿದರು.

ಇನ್ನೂ ಓಂ ಶಕ್ತಿ ಯಾತ್ರೆಗೆ 500 ಜನ ಬುಕ್ಕಿಂಗ್‌

ಜಿಲ್ಲೆಯಿಂದ ಓಂ ಶಕ್ತಿ ಯಾತ್ರೆಗೆ 10 ಬಸ್‌ಗಳನ್ನು ಬುಕ್ಕಿಂಗ್‌ ಮಾಡಿದ್ದು 500 ಜನರು ತೆರಳಲು ಸಿದ್ಧರಾಗಿದ್ದಾರೆ. ಜಿಲ್ಲಾಧಿಕಾರಿ ಸಭೆಯಲ್ಲಿ ನೀಡಿರುವ ಸೂಚನೆಯಂತೆ ಯಾತ್ರೆಗೆ ತೆರಳಲು ಒಪ್ಪಂದ ಮಾಡಿಕೊಂಡಿದ್ದ ಎಲ್ಲ ಸಾರಿಗೆ ಬಸ್‌ಗಳನ್ನು ರದ್ದುಪಡಿಸಲಾಗುತ್ತಿದೆ. ಮುಂಗಡ ಬುಕ್ಕಿಂಗ್‌ ಮಾಡಿದವರಿಗೆ ದೂರವಾಣಿ ಕರೆ ಮಾಡಿ ಹಣ ವಾಪಸ್‌ ತೆಗೆದುಕೊಂಡು ಹೋಗುವಂತೆ ತಿಳಿಸಲಾಗುತ್ತಿದೆ. ಒಪ್ಪಂದದ ಮೇರೆಗೆ ತೆರಳುವ ಬಸ್‌ಗಳನ್ನು ಹೊರತುಪಡಿಸಿ ಹೊರರಾಜ್ಯಗಳಿಗೆ ತೆರಳುವ ಬಸ್‌ಗಳಿಗೆ ಯಾವುದೇ ತಡೆ ಇಲ್ಲ.

- ಕಿರಣ್‌ಕುಮಾರ್‌, ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ