ಕೃಷಿ, ಶಾಲೆ- ಆಸ್ಪತ್ರೆ ಸೇರಿದಂತೆ ಮುಂತಾದ ವ್ಯವಸ್ಥೆಗಳಲ್ಲಿ ಹಿಂದುಳಿದಿರುವ ಯಾದಗಿರಿ ಜಿಲ್ಲೆ ದೇಶದ ಅತೀ ಹಿಂದುಳಿದಿರುವುದು ಅತ್ಯಂತ ದು:ಖಕರ ಸಂಗತಿ ಎಂದು ನಿರ್ಮಲಾ ಸೀತಾರಾಮನ್ ಬೇಸರ ವ್ಯಕ್ತಪಡಿಸಿದ್ದಾರೆ.

ಯಾದಗಿರಿ (ಜೂ.05): ಮಹಿಳಾ ಸಾಕ್ಷರತೆ, ಮೂಲಸೌಕರ್ಯಗಳ ಕೊರತೆ, ಕೃಷಿ, ಶಾಲೆ- ಆಸ್ಪತ್ರೆ ಸೇರಿದಂತೆ ಮುಂತಾದ ವ್ಯವಸ್ಥೆಗಳಲ್ಲಿ ಹಿಂದುಳಿದಿರುವ ಯಾದಗಿರಿ ಜಿಲ್ಲೆ ದೇಶದ ಅತೀ ಹಿಂದುಳಿದಿರುವುದು ಅತ್ಯಂತ ದು:ಖಕರ ಸಂಗತಿ ಎಂದು ಭಾರತ ಸರ್ಕಾರದ ಹಣಕಾಸು ಹಾಗೂ ಕಾರ್ಪೋರೇಟ್ ವ್ಯವಹಾರಗಳ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಬೇಸರ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಿಲ್ಲೆಯ ಗುರುಮಠಕಲ್ ತಾಲೂಕಿನ ಬದ್ದೇಪಲ್ಲಿ ಗ್ರಾಮದಲ್ಲಿ ನಬಾರ್ಡ್ ಸಹಯೋಗದೊಂದಿಗೆ ನಿರ್ಮಿಸಲಾದ ರೈತರ ತರಬೇತಿ ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರ (ಸಿ.ಎಫ್.ಸಿ) ಮತ್ತು ಶೇಂಗಾ ಸಂಸ್ಕರಣಾ ಘಟಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಯಾದಗಿರಿ ಜಿಲ್ಲೆ ಹಿಂದುಳಿದರುವುದು ನನಗೆ ತೀವ್ರ ದುಖಃ ತಂದಿದೆ ಎಂದರು.

ಜಿಲ್ಲೆಯಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣ ಶೇ.41 ರಷ್ಟಿದೆ, ನೀರಾವರಿ ಸೌಕರ್ಯ ಈ ಭಾಗದಲ್ಲಿ ಕಡಿಮೆಯಿದೆ, ರೈತರು ಉದ್ಯೋಗ ಅರಸಿ ಮಹಾನಗರಗಳಿಗೆ ಗುಳೇ ಹೋಗುತ್ತಿದ್ದಾರೆ. ಇಲ್ಲಿ ಉತ್ತಮ ರಸ್ತೆಗಳಿಲ್ಲ, ಶಾಲೆಗಳಿದ್ದರೆ ಶಿಕ್ಷಕರಿಲ್ಲ, ಆಸ್ಪತ್ರೆಗಳಿದ್ದರೆ ವೈದ್ಯರು-ಸಿಬ್ಬಂದಿಗಳಿಲ್ಲದಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಜಿಲ್ಲೆಯ ದುಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ನಿರ್ಮಲಾ ಸೀತಾರಾಮನ್‌, ಈ ಭಾಗವನ್ನು ದಶಕಗಳ ಕಾಲ ಪ್ರತಿನಿಧಿಸಿದ ರಾಜಕಾರಣಿಗಳು ಏನು ಕೆಲಸ ಮಾಡಿದ್ದಾರೆ ಎಂಬ ಪ್ರಶ್ನೆ ಮೂಡಿದೆ, ಇದು ನಮಗಷ್ಟೇ ಅಲ್ಲ ಈಗಿಲ್ಲಿ ಜನರ ಕಣ್ಣಿಗೂ ಕಾಣುತ್ತಿದೆ, ಜನರಿಗೂ ದಶಕಗಳ ಕಾಲ ಆಳಿದವರ ಬಗ್ಗೆ ಅರ್ಥವಾಗುತ್ತಿದೆ ಎಂದು ವ್ಯಂಗ್ಯವಾಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುರುಮಠಕಲ್‌ ಮತಕ್ಷೇತ್ರವನ್ನು ನಾಲ್ಕೈದು ದಶಕಗಳ ಕಾಲ ಪ್ರತಿನಿಧಿಸಿದ್ದವರು. ಪರೋಕ್ಷವಾಗಿ ಖರ್ಗೆಯವರ ಬಗ್ಗೆ ನಿರ್ಮಲಾ ಸೀತಾರಾಮನ್‌ ಮಾತು ಆಡಿದಂತಿತ್ತು. ದೇಶದ ವಿವಿಧ ರಾಜ್ಯಗಳಲ್ಲಿ ಹಿಂದುಳಿದ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು, ಅವುಗಳ ಅಭಿವೃದ್ಧಿಗೆ "ಹಿಂದುಳಿದ" ಎಂಬ ಹಣೆಪಟ್ಟಿ ನೀಡದೆ, "ಮಹತ್ವಾಕಾಂಕ್ಷಿ ಜಿಲ್ಲೆ" ಎಂಬ ಹೆಸರಿನೊಂದಿಗೆ ಅಭಿವೃದ್ಧಿಗೊಳಿಸಬೇಕು ಎಂಬ ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಫಲವಾಗಿ, ಕೇಂದ್ರ ಸರ್ಕಾರ ಇಂತಹ ಭಾಗಗಳಲ್ಲಿ ಎಲ್ಲ ಸ್ತರಗಳಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳು ಮಹತ್ವಾಕಾಂಕ್ಷಿ ಜಿಲ್ಲೆಗಳಾಗಿವೆ ಎಂದರು.

ಆರ್ಥಿಕ ಪ್ರಗತಿಗೆ ಹೊಸ ದಿಕ್ಕು

ಜಿಲ್ಲೆಯ ಮಾನವ ಅಭಿವೃದ್ಧಿ ಸೂಚ್ಯಂಕ (ಎಚ್‌ಡಿಆರ್), ಮಹಿಳಾ ಸಾಕ್ಷರತೆ ಹಾಗೂ ತಲಾವಾರು ಆದಾಯದ ಮಟ್ಟ ಇನ್ನೂ ತೃಪ್ತಿಕರವಾಗಿಲ್ಲ. ಈ ಅಂತರವನ್ನು ಕಡಿಮೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಬೇಕಿದೆ ಎಂದ ಅವರು, ಮಹತ್ವಾಕಾಂಕ್ಷಿ ಜಿಲ್ಲೆಯಾದ ಯಾದಗಿರಿಯನ್ನು ಕೃಷಿ ಆಧಾರಿತ ಕೈಗಾರಿಕೆಗಳ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ವಿಶೇಷ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ರೈತರ ಉತ್ಪನ್ನಗಳಿಗೆ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಮೂಲಕ ಜಿಲ್ಲೆಯ ಆರ್ಥಿಕ ಪ್ರಗತಿಗೆ ಹೊಸ ದಿಕ್ಕು ನೀಡಲಾಗುತ್ತಿದೆ ಎಂದರು.

ಬದ್ದೇಪಲ್ಲಿ ಮಹಿಳಾ ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ) ಸಂಪೂರ್ಣ ಮಹಿಳಾ ಸದಸ್ಯರಿಂದ ನಿರ್ವಹಿಸಲ್ಪಡುತ್ತಿರುವುದು ವಿಶೇಷ ಸಾಧನೆಯಾಗಿದೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿರುವ ಇಂತಹ ಘಟಕಗಳಲ್ಲಿ ಯಾದಗಿರಿಯ ಘಟಕ ಮಹಿಳೆಯರೇ ಮುನ್ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದ ಅವರು, ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಬೆಳೆಸಿಕೊಂಡು ಸ್ವಾವಲಂಬಿಗಳಾಗುವ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಬಹುದಾಗಿದೆ ಎಂದು ಹೇಳಿದರು.

ಯಾದಗಿರಿ ಜಿಲ್ಲೆಯು ಕೃಷಿ ಪ್ರಧಾನ ಪ್ರದೇಶವಾಗಿದ್ದು, ಒಟ್ಟು ಭೂಪ್ರದೇಶದ ಶೇ.75ರಷ್ಟು ಭಾಗ ಕೃಷಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಮತ್ತು ನ್ಯಾಯಯುತ ಬೆಲೆ ದೊರಕಿದಾಗ ಮಾತ್ರ ಜಿಲ್ಲೆಯ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ. ಯಾದಗಿರಿ ಜಿಲ್ಲೆಯಲ್ಲಿ ವರ್ಷಕ್ಕೆ 22,500 ಮೆಟ್ರಿಕ್ ಟನ್ ಶೇಂಗಾ ಉತ್ಪಾದನೆಯಾಗುತ್ತಿದ್ದು, ಅದರ ಸಂಪೂರ್ಣ ಲಾಭ ರೈತರಿಗೆ ದೊರಕುವಂತೆ ಶೇಂಗಾ ಹುರಿಯುವಿಕೆ, ಖಾದ್ಯ ತೈಲ, ಪೀನಟ್ ಬಟರ್ ಹಾಗೂ ಇತರೆ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ವಿಶೇಷ ಘಟಕವನ್ನು ಸ್ಥಾಪಿಸಲಾಗಿದೆ. ಈ ಘಟಕದಲ್ಲಿ ತಯಾರಾಗುವ ಉತ್ಪನ್ನಗಳಿಗೆ ಐಟಿಸಿ ಸೇರಿದಂತೆ ಪ್ರಮುಖ ಸಂಸ್ಥೆಗಳ ಮೂಲಕ ರಾಷ್ಟ್ರೀಯ ಮಟ್ಟದ ಮಾರುಕಟ್ಟೆ ಸಂಪರ್ಕ ಕಲ್ಪಿಸಲಾಗುವುದು. ರೈತರಿಂದ ನೇರ ಖರೀದಿ ವ್ಯವಸ್ಥೆ ಜಾರಿಗೊಳಿಸಿ ಮಧ್ಯವರ್ತಿಗಳ ಹಾವಳಿ ಕಡಿಮೆ ಮಾಡುವ ಗುರಿ ಹೊಂದಲಾಗಿದೆ.
-ನಿರ್ಮಲಾ ಸೀತಾರಾಮನ್‌, ಕೇಂದ್ರ ಹಣಕಾಸು ಸಚಿವೆ