ಯಾರೋ ಬರುತ್ತಾರೆ ಅಂತ ನೆಚ್ಚಿಕೊಂಡು ಜೆಡಿಎಸ್‌ ಪಕ್ಷ ಉಳಿದಿಲ್ಲ. ಮುಂದೆಯೂ ಅಂತಹ ಸನ್ನಿವೇಶ ಸೃಷ್ಟಿಯಾಗುವುದಿಲ್ಲ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರು (ಏ.23): ಯಾರೋ ಬರುತ್ತಾರೆ ಅಂತ ನೆಚ್ಚಿಕೊಂಡು ಜೆಡಿಎಸ್‌ ಪಕ್ಷ ಉಳಿದಿಲ್ಲ. ಮುಂದೆಯೂ ಅಂತಹ ಸನ್ನಿವೇಶ ಸೃಷ್ಟಿಯಾಗುವುದಿಲ್ಲ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ. ಸಚಿವ ಜಮೀರ್‌ ಅಹಮ್ಮದ್ ಖಾನ್‌ ಅವರು ಜೆಡಿಎಸ್‌ ಸೇರ್ಪಡೆಯಾಗುವ ಕುರಿತ ವದಂತಿ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ.

Add Asianetnews Kannada as a Preferred SourcegooglePreferred

ಅವರೇ ಸ್ಟಷ್ಟೀಕರಣ ಕೊಟ್ಟಿದ್ದಾರೆ. ಕಾಂಗ್ರೆಸ್‌ ಪಕ್ಷ ಸ್ಥಾನಮಾನ ಕೊಟ್ಟು ಬೆಳೆಸಿದೆ ಎಂದು ಹೇಳಿದ್ದಾರೆ. ಹೀಗಾಗಿ ಅವರ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ ಎಂದರು. ನಮ್ಮ ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ. ನಾವು ಹೋರಾಡಲು ಸಿದ್ಧರಿದ್ದೇವೆ. ಯಾರೋ ಪಕ್ಷಕ್ಕೆ ಬರುತ್ತಾರೆ ಎಂದು ನೆಚ್ಚಿಕೊಂಡು ಪಕ್ಷ ಉಳಿದಿಲ್ಲ. ಇನ್ನು ಮುಂದೆಯೂ ಅದು ಆಗಲ್ಲ. ಪಕ್ಷದಲ್ಲಿ ಅಂತಹ ಸನ್ನಿವೇಶ ಸೃಷ್ಟಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಆಗ್ನೇಯ ಪದವೀಧರ ಬಿಜೆಪಿಯಿಂದ ಶೀಘ್ರ ಉತ್ತರ: ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಬಗ್ಗೆ ಬಿಜೆಪಿ ಕೇಂದ್ರದ ನಾಯಕರು ಶೀಘ್ರದಲ್ಲೇ ಉತ್ತರ ನೀಡಲಿದ್ದಾರೆ. ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರ ಸೇರಿ ಮೂರು ಕ್ಷೇತ್ರಗಳಿಗೆ ಮಿತ್ರ ಪಕ್ಷ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದೆ. ಈಗಾಗಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿ, ಗೃಹ ಸಚಿವ ಅಮಿತ್ ಶಾ, ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಆಗ್ನೇಯ ಪದವೀಧರ ಕ್ಷೇತ್ರದ ವಾಸ್ತವಾಂಶದ ಬಗ್ಗೆ ಚರ್ಚಿಸಿದ್ದಾರೆ. ಇದಕ್ಕೆ ಅತಿ ಶೀಘ್ರದಲ್ಲೇ ಉತ್ತರ ಸಿಗಲಿದೆ ಎಂದು ಜೆಡಿಎಸ್‌ ಕಾರ್ಯಕರ್ತರು ಕಾಯುತ್ತಿದ್ದೇವೆ ಎಂದು ಹೇಳಿದರು.

ಬಿಜೆಪಿ ಬಿಟ್ಟು ಕೊಡುತ್ತಾ?

ಒಟ್ಟು ವಿಧಾನಪರಿಷತ್ತಿನ ನಾಲ್ಕು ಕ್ಷೇತ್ರಗಳ ಪೈಕಿ ಬಿಜೆಪಿಯು ಮಿತ್ರ ಪಕ್ಷ ಜೆಡಿಎಸ್‌ಗೆ ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಬಿಟ್ಟು ಕೊಟ್ಟಿದೆ. ಆದರೆ, ಇದಕ್ಕೆ ಜೆಡಿಎಸ್‌ನಲ್ಲಿ ಸಹಮತ ವ್ಯಕ್ತವಾಗಿಲ್ಲ. ಈ ಕ್ಷೇತ್ರ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳನ್ನು ಒಳಗೊಂಡಿದೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಜೆಡಿಎಸ್‌ ಪಕ್ಷ ಸಂಘಟನೆ ಉತ್ತಮವಾಗಿದೆ. ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಜೆಡಿಎಸ್‌ಗೆ ಮತ ಬ್ಯಾಂಕ್‌ ಇದೆ.

ಹೀಗಾಗಿ ಈ ಆಗ್ನೇಯ ಪದವೀಧರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟರೆ ಗೆಲುವು ಸಿಗಲಿದೆ ಎಂಬ ಲೆಕ್ಕಾಚಾರ ಮುಂದಿಟ್ಟಿದೆ. ಈಗಾಗಲೇ ಬಿಜೆಪಿ ಆಗ್ನೇಯ ಪದವೀಧರ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನಾಗಿ ಕೆ.ಎಂ.ಸುರೇಶ್ ಅವರನ್ನು ಘೋಷಿಸಿದೆ. ಸುರೇಶ್ ಅವರು ಸಿದ್ಧತೆಯನ್ನೂ ಆರಂಭಿಸಿದ್ದಾರೆ. ಈ ಸನ್ನಿವೇಶದಲ್ಲಿ ಬಿಜೆಪಿ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಒಪ್ಪುವುದೇ ಎಂಬ ಕುತೂಹಲವಿದೆ.