ಈಗ ಮತಗಳ್ಳತನ ಆಗಿದೆ ಎಂದು ಚರ್ಚಿಸುವವರು ಘೋಷಣಾ ಪತ್ರಕ್ಕೆ ಏಕೆ ಸಹಿ ಹಾಕಿ ಚುನಾವಣಾ ಆಯೋಗಕ್ಕೆ ಸಲ್ಲಿಸಲಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.

ಬೆಂಗಳೂರು (ಆ.10): ರಾಹುಲ್ ಗಾಂಧಿ ಅವರ ಮತಗಳ್ಳತನ ಆರೋಪ ಹಿಟ್ ಆ್ಯಂಡ್‌ ರನ್ ಕೇಸ್ ರೀತಿಯದು. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚುನಾವಣಾ ಆಯೋಗ ಸ್ಪಷ್ಟವಾಗಿ ಹೇಳಿದೆ. ಆ ರೀತಿ ಏನಾದರೂ ಆಗಿದ್ದಲ್ಲಿ ಚುನಾವಣೆಯಾದ 45 ದಿನಗಳೊಳಗೆ ಪ್ರಶ್ನಿಸಬೇಕು.

ಈಗ ಮತಗಳ್ಳತನ ಆಗಿದೆ ಎಂದು ಚರ್ಚಿಸುವವರು ಘೋಷಣಾ ಪತ್ರಕ್ಕೆ ಏಕೆ ಸಹಿ ಹಾಕಿ ಚುನಾವಣಾ ಆಯೋಗಕ್ಕೆ ಸಲ್ಲಿಸಲಿಲ್ಲ ಎಂದು ಪ್ರಶ್ನಿಸಿದರು. ರಾಹುಲ್ ರಾಜ್ಯಕ್ಕೆ ಸುಮ್ಮನೆ ಬಂದು ಮಾತನಾಡಿ ಹೊರಟರು. ಮುಂದೆ ಬಿಹಾರ ಚುನಾವಣೆ ಗಮನದಲ್ಲಿಟ್ಟುಕೊಂಡು ಅಲ್ಲಿನ ಜನರ ದಿಕ್ಕು ತಪ್ಪಿಸಲು ಕಾಂಗ್ರೆಸ್‌ ನಾಯಕರು ಹುನ್ನಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ವೋಟರ್‌ ಐಡಿ ಆಧಾರ್‌ಗೆ ಲಿಂಕ್‌ ಮಾಡಿ: ಚುನಾವಣಾ ಆಯೋಗವನ್ನು ಏಜೆಂಟ್‌ ಆಗಿ ಬಿಜೆಪಿ ಬಳಸುತ್ತಿದೆ ಎಂಬದು ಕೇವಲ ಆರೋಪವಷ್ಟೇ. ಚುನಾವಣಾ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ಗೆ ಲಿಂಕ್‌ ಆಗಬೇಕು. ಕುಮಾರಣ್ಣ ಸಹ ಇದೇ ಸಲಹೆ ನೀಡಿದ್ದಾರೆ. ಹೀಗಾಗಿದ್ದಲ್ಲಿ ಚನ್ನಪಟ್ಟಣದಲ್ಲಿ ನಾನೂ ಸೋಲುತ್ತಿರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಬೇಕು: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ನಂಬಿದರೆ ಬದುಕಿಲ್ಲ. ಜನರಿಗೆ ತಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳು ಬೇಕು ಎಂದು ಹೇಳಿದರು. ಈ ವಿಚಾರವನ್ನು ಮುಂದಿಟ್ಟುಕೊಂಡು ನಿರೀಕ್ಷಿತ ಪಂಚಾಯಿತಿ, ತಾಪಂ, ಜಿಪಂ, ಚುನಾವಣೆಗಳಿಗೆ ಹೆಚ್ಚಿನ ಗೆಲುವಿಗಾಗಿ ಸಂಘಟನೆ ಮಾಡಿದರೆ ಅದು ಮುಂದಿನ ವಿಧಾನಸಭೆ ಚುನಾವಣೆಗೆ ಶಕ್ತಿಯಾಗಲಿದೆ. ಉತ್ತರ ಕನ್ನಡ ಜಿಲ್ಲೆಗೆ ಮತ್ತೆ ಮತ್ತೆ ಬರಲಿದ್ದೇನೆ. ಎಲ್ಲರೂ ಕೆಲಸ ಮಾಡುವ ಮೂಲಕ ನೂರಕ್ಕೆ ನೂರರಷ್ಟು ಗೆಲುವಿಗೆ ಕೈಜೋಡಿಸಬೇಕಿದೆ ಎಂದರು.

ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಾರರಿರುವ ಈ ಭಾಗದಲ್ಲಿ ಒಂದೇ ಒಂದು ಕೋಲ್ಡ್‌ ಸ್ಟೋರೇಜ್ ಇಲ್ಲ ಎಂದು ತಿಳಿಸಿದ್ದಾರೆ. ಸರ್ಕಾರ ಜನರ ಇಂಥ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಕಳೆದ ಬಾರಿ ಸೂರಜ ನಾಯ್ಕರ ಸೋಲನ್ನು ಸೋಲೆಂದು ಭಾವಿಸಬಾರದು. ಕ್ಷೇತ್ರದಲ್ಲಿ ಜನತಾದಳ ಗಟ್ಟಿಯಾಗಿದ್ದು ಗೆಲುವಿನ ಶಕ್ತಿಯಿದೆ. ಮುಂದಿನ ದಿನದಲ್ಲಿ ಹೆಚ್ಚಿನ ಸ್ಥಾನಮಾನಗಳನ್ನು ಗಳಿಸಬೇಕಿದೆ. ಕುಮಾರಸ್ವಾಮಿಯವರ ಇಚ್ಛೆಯೂ ಇದೇ ಆಗಿದೆ. ಇದಕ್ಕಾಗಿ ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಎಂದರು.