ಕಲಬುರಗಿ: ರೈಲ್ವೆ ವಿಭಾಗೀಯ ಕಚೇರಿ ಸಮಾಧಿಗೆ ಹುನ್ನಾರ?
ಕಲಬುರಗಿ ಮಂದಿ ’ರೈಲ್ವೆ ವಿಭಾಗೀಯ ಕಚೇರಿ’ ಕನಸು ಹೊಸಕಿ ಹಾಕಲು ಸಿದ್ಧತೆ ಸಾಗಿದೆಯೆ?| ಪೂರ್ವ ಕರಾವಳಿ ರೈಲ್ವೆ ವಲಯದ ರಾಯಗಡ ಹೊಸ ವಿಭಾಗ ಆರಂಭಕ್ಕೆ ಹಸಿರು ನಿಶಾನೆ| 2014 ರಲ್ಲೇ ಮಂಜೂರಾದ ಕಲಬುರಗಿ ರೈಲ್ವೆ ವಿಭಾಗ ಕಚೇರಿ ರಚನೆಗೆ ತೀವ್ರ ನಿರ್ಲಕ್ಷ| ರೈಲ್ವೆ ಸಚಿವ ಪಿಯೂಷ್ ಗೋಯಲ್ ಕಲಬುರಗಿ ವಿಭಾಗೀಯ ಕಚೇರಿಗೆ ಮೌನ ಯಾಕೆ?|
ಶೇಷಮೂರ್ತಿ ಅವಧಾನಿ
ಕಲಬುರಗಿ(ಮಾ.13): ಸಣ್ಣ ಉತ್ಪಾದಕರಿಂದ ಇಕ್ವಿಟಿ ಶೇರು ಸಂಗ್ರಹಿಸಲಾಗಲಿಲ್ಲವೆಂದು ಕಲಬುರಗಿಗೆ 2011ರಲ್ಲೇ ಮಂಜೂರಗಿದ್ದ ಟೆಕ್ಸಟೈಲ್ ಪಾರ್ಕ್ ಯೋಜನೆಯನ್ನು ಜವಳಿ ಇಲಾಖೆ 8 ವರ್ಷಗಳ ನಂತರ (2019ರಲ್ಲಿ ) ಕೈಬಿಟ್ಟಂತೆ, 2014 ರಲ್ಲೇ ಮಂಜೂರಾಗಿರುವ ರೈಲ್ವೆ ವಿಭಾಗೀಯ ಕಚೇರಿ ಕಾರ್ಯಸಾಧುವಲ್ಲ ಎಂದು ಅದೆಲ್ಲಿ ಈ ಯೋಜನೆಯೂ ಯೂ ಕೈತಪ್ಪುವುದೋ ಎಂಬ ಆತಂಕ ಮೂಡಿದೆ.
ಕಳೆದ 7 ವರ್ಷಗಳ ಹಿಂದೆಯೇ ಕಲಬುರಗಿಗೆ ಮಂಜೂರಾಗಿದ್ದ ’ರೈಲ್ವೆ ವಿಭಾಗೀಯ ಕಚೇರಿ’ ಯೋಜನೆಗೆ ಈಗಿರುವ ಕೇಂದ್ರ ಸರ್ಕಾರವೇ ಸಮಾಧಿ ಮಾಡಲು ಹೊರಟಿದೆಯೆ? ಎಂಬ ಪ್ರಶ್ನೆ ಕಲ್ಯಾಣ ನಾಡಿನ ಜನರನ್ನು ಕಾಡಲಾರಂಭಿಸಿದೆ.
2014ರಲ್ಲೇ ಕಲಬುರಗಿಗೆ ಮಂಜೂರಾದ ವಿಭಾಗೀಯ ಕಚೇರಿ ಬಗ್ಗೆ ಚಕಾರ ಎತ್ತದ ರೇಲ್ವೆ ಸಚಿವಾಲಯ ಯಾವುದೂ ಹೊಸ ವಿಭಾಗೀಯ ಕಚೇರಿ ರಚಿಸೋದಿಲ್ಲವೆಂದು ಹೇಳುತ್ತಲೇ ಇದೀಗ ಪೂರ್ವ ಕರಾವಳಿ ರೈಲ್ವೆ ವಲಯದಡಿಯಲ್ಲಿ ರಾಯಗಡ ವಿಭಾಗೀಯ ಕಚೇರಿ ರಚನೆಗೆ ಹಸಿರು ನಿಶಾನೆ ತೋರಿದ್ದು ಬಜೆಟ್ಟಲ್ಲಿ 170 ಕೋರು ಅನುದಾನ ನೀಡಿದೆ!
ಬಹುಕೋಟಿ ಅನುದಾನದ ಜೊತೆಗೇ ಪೂರ್ವ ಕರಾವಳಿ ರೈಲ್ವೆ ವಲಯದ ಮುಖ್ಯ ಸಾರಿಗೆ ಯೋಜನಾಧಿಕಾರಿಯನ್ನೇ ರಾಯಗಡ ವಿಭಾಗೀಯ ಕಚೇರಿ ಅನುಷ್ಠಾನಕ್ಕಾಗಿ ನೋಡಲ್ ಅಧಿಕಾರಿ ಎಂದು ನೇಮಕ ಮಾಡಿ ವಿಭಾಗ ಆರಂಭದ ಬಗ್ಗೆ ನೀಲನಕಾಶೆ ರೂಪಿಸಿ ಪೂರ್ವಭಾವಿ ಕೆಲಸಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿದೆ.
ಲೋಕಸಭೆಯಲ್ಲಿ ಈ ಬಗ್ಗೆ ಸಂಸದ ಸಪ್ತಗಿರಿ ಶಂಕರ್ ಉಬಾಕ್ ಕೇಳಿದ್ದ ಪ್ರಶ್ನೆಗಳಿಗೆ ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ಅವರೇ ಉತ್ತರ ನೀಡಿದ್ದಾರೆ.ಆದರೆ 7 ವರ್ಷಗಳ ಹಿಂದೆಯೇ ಅನುಮೋದನೆಗೊಂಡಿರುವ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಯೋಜನೆ ಬಗ್ಗೆ ಗೋಯಲ್ ತಾಳಿರುವ ’ಮಹಾ ಮೌನ’ ಈ ಭಾಗದ ಜನರನ್ನ ಕೆರಳಿಸಿದೆ.
ಕಲಬುರಗಿ: ಸಂಸದ ಡಾ.ಜಾಧವ್‌ಗೆ ಪ್ರಿಯಾಂಕ್ ಖರ್ಗೆ ತಿರುಗೇಟು
ಹಿಂದಿನ ಯೋಜನೆ ಮೂಲೆಗುಂಪು:
ಹಿಂದಿನ ಯುಪಿಎ 2 ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಕಲಬುರಗಿ ಸಂಸದ ಡಾ. ಮಲ್ಲಿಕಾರ್ಜುನ ಖರ್ಗೆ ಕಲಬುರಗಿಗೆ ರೈಲ್ವೆ ವಿಭಾಗೀಯ ಕಚೇರಿ ಮಂಜೂರು ಮಾಡಿದ್ದರು. ಅದಕ್ಕಾಗಿ 60 ಲಕ್ಷ ರು. ಬಜೆಟ್‌ನಲ್ಲಿ ಇಟ್ಟಿದ್ದಲ್ಲದೆ ಕಲಬುರಗಿಯಲ್ಲಿ ಕಚೇರಿಗಾಗಿ ಸ್ವಾಧೀನವಾಗಿರುವ ಭೂಮಿಗೆ ಬೇಲಿ ಸಹ ಅಳವಡಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ತಂತಿ ಬೇಲಿಯಲ್ಲೇ ವಿಭಾಗೀಯ ಕಚೇರಿ ಯೋಜನೆ ಬಂಧಿಯಾಗಿ ಬಿಟ್ಟಿದೆ! ಯೋಜನೆ ಕೈಗೂಡದಿರಲು ಇರುವ ಪ್ರಮುಖ ಕಾರಣಗಳಲ್ಲಿ ರಾಜಕೀಯವೂ ಸೇರಿಕೊಂಡಿದ್ದರಿಂದ ಯೋಜನೆ ತ್ರಿಶಂಕು ಆಗಿದೆ. 1, 300 ಕಿಮೀ ಉದ್ದ ರೈಲು ಮಾರ್ಗ ವ್ಯಾಪ್ತಿಯೊಂದಿಗೆ ರೇಲ್ವೆ ಬೋರ್ಡ್ ಅನುಮೋದಿತ ವಿಸ್ತೃತ ಯೋಜನಾ ವರದಿ (ಡಿಪಿಆರ್) ರೇಲ್ವೆ ಸಚಿವಾಲಯದಲ್ಲಿದ್ದರೂ ಯಾರೊಬ್ಬರೂ ಕ್ಯಾರೆ ಎನ್ನುತ್ತಿಲ್ಲ!
ಕಾಲಹರಣದಿಂದ ಯೋಜನೆಗೆ ಗ್ರಹಣ:
2014 ರಲ್ಲಿ ಮಂಜೂರಾದ ರೈಲ್ವೆ ವಿಭಾಗೀಯ ಕಚೇರಿ ಯೋಜನೆ ವ್ಯವಸ್ಥಿತವಾಗಿ ಕೈಬಿಡುವ ಹುನ್ನಾರ ಸಾಗಿರುವ ಶಂಕೆ ಬಲಗೊಳ್ಳುತ್ತ ಸಾಗಿದೆ. ಸದರಿ ಯೋಜನೆಗೆ ಬಜೆಟ್ಟಿನಲ್ಲಿ ನಯಾಪೈಸೆ ನೀಡದ ಕೇಂದ್ರ ರೇಲ್ವೆ ಸಚಿವಾಲಯ ಏಕಾಏಕಿ 2019 ರಲ್ಲಿ ಈ ಯೋಜನೆಯ ಕಾರ್ಯಸಾಧುತ್ವ ಪರಿಶೀಲನೆಗೆ ತಜ್ಞರ ಸಮೀತಿ ರಚಿಸಿತ್ತು, ಈ ವರದಿಗೆ ಕಲ್ಯಾಣ ಭಾಗದಲ್ಲಿ ತೀವ್ರ ವಿರೋಧ ವ್ಯಕ್ತವಾದರೂ ಸಹ ಇಂದಿಗೂ ಸದರಿ ಸಮೀತಿ ನೀಡಿರುವ ವರದಿಯಾದರೂ ಏನೆಂಬುದು ಇಂದಿಗೂ ಗುಟ್ಟಾಗಿದೆ. ಕಾಲಹರಣ ಮಾಡುತ್ತ, ತಾಂತ್ರಿಕ ಕಾರಣ ಮುಂದೊಡ್ಡಿ ಮಂಜೂರಾದ ಯೋಜನೆ ಕೈಬಿಡುವ ಸುಲಭದ ವಿಧಾನ ರೇಲ್ವೆ ಸಚಿವಾಲಯ ಕಲಬುರಗಿ ವಿಭಾಗೀಯ ಕಚೇರಿ ವಿಚಾರದಲ್ಲಿ ಅನುಸರಿಸುತ್ತಿರುವಂತಿದೆ.
'ಬಿಜೆಪಿ ಸರ್ಕಾರದ ಭ್ರಷ್ಟ ಆಡಳಿತದಿಂದ ಕಲಬುರಗಿ ಅಕ್ರಮ ಚಟುವಟಿಕೆಗಳ ತಾಣ'
ಸಣ್ಣ ಉತ್ಪಾದಕರಿಂದ ಇಕ್ವಿಟಿ ಶೇರು ಸಂಗ್ರಹಿಸಲಾಗಲಿಲ್ಲವೆಂದು ಕಲಬುರಗಿಗೆ 2011 ರಲ್ಲೇ ಮಂಜೂರಗಿದ್ದ ಟೆಕ್ಸಟೈಲ್ ಪಾರ್ಕ್ ಯೋಜನೆಯನ್ನು ಜವಳಿ ಇಲಾಖೆ 2019 ರಲ್ಲಿ ಕೈಬಿಟ್ಟಂತೆ ಅದೆಲ್ಲಿ ವಿಭಾಗೀಯ ಕಚೇರಿ ಕೈತಪ್ಪುವುದೋ ಎಂಬ ಆತಂಕ ಮೂಡಿದೆ. ಟ್ಟರು, ಇದೇ ದಾರಿಯಲ್ಲಿಯೇ ರೈಲ್ವೆ ವಿಭಾಗೀಯ ಕಚೇರಿ ಯೋಜನೆ ಸಾಗುತ್ತಿದ್ದು ಹಿಂದುಳಿದ ನೆಲದಲ್ಲಿ ರೈಲ್ವೆ ಸವಲತ್ತು ಹೆಚ್ಚಿಸುವ ಮಹತ್ವಾಕಾಂಕ್ಷಿ ಯೋಜನೆ ರಾಜಕೀಯ ಇಚ್ಚಾಶಕ್ತಿ ಬರ, ಸೇಡಿನ ರಾಜಕಾರಣ, ಅಂತರಾಜ್ಯ ಸ್ವಾರ್ಥತನದಿಂದಾಗಿ ಅನುಷ್ಠಾನಗೊಳ್ಳದೆ ಡೋಲಾಯಮಾನ ಹಂತ ತಲುಪಿರೋದು ದುರಂತ.
ರೈಲ್ವೆ ಸಚಿವರಾಗಿ ರಾಜ್ಯದವರೇ ಆಗಿದ್ದ ಬೆಳಗಾವಿ ಸಂಸದ ಸುರೇಶ ಅಂಗಡಿ ಇದ್ದಾಗ ಈ ಯೋಜನೆ ಜೀವಂತವಾಗಿತ್ತು. ಅಂಗಡಿ ಸಾಹೇಬರು ಈ ಬಗ್ಗೆ ಪಕ್ಕಾ ಭರವಸೆ ನೀಡಿದ್ದರು. ಅವರ ನಿಧನಾನಂತರ ಸದರಿ ಯೋಜನೆಗೆ ತೀವ್ರ ಹಿನ್ನೆಡೆಯಂತೂ ಆಗಿದೆ. ಹಾಗಂತ ಯೋಜನೆ ಸಾಕಾರಗೊಳಿಸುವ ನನ್ನ ಪ್ರಯತ್ನ ಕೈಬಿಟ್ಟಿಲ್ಲ. ಹೊಸ ವಿಭಾಗ ರಚನೆ ಇಲ್ಲವೆæನ್ನಲಾಗಿತ್ತು. ಆದರೀಗ ರಾಯಗಡ ವಿಭಾಗ ರಚನೆಗೇ ಹಣ ನೀಡಲಾಗಿದೆ ಎಂಬ ಉತ್ತರ ರೈಲ್ವೆ ಸಚಿವರೇ ಲೋಕಸಭೆಯಲ್ಲಿ ನೀಡಿದ್ದಾರೆಂಬ ಸಂಗತಿ ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸುವೆ ಎಂದು ಸಂಸದ ಡಾ. ಉಮೇಶ ಜಾಧವ ತಿಳಿಸಿದ್ದಾರೆ.
ಕಲ್ಯಾಣ ನಾಡಿನಿಂದ ಜನ ಉಮೇದಿನಿಂದ ಮತ ಹಾಕಿ 5 ಬಿಜೆಪಿ ಸಂಸದರನ್ನ ಕಳುಹಿಸಿದ್ದರೂ ನಮ್ಮ ಗೋಳು ದೂರವಾಗಲಿಲ್ಲ. ಮತ ಪಡೆಯುವಾಗ ಸಿಹಿ ಮಾತನ್ನಾಡುತ್ತ ಬಂದು ಹೋಗುವ ಸಂಸದರು ಮಂಜೂರಾದ ಯೋಜನೆಗಳೇ ಕೈಬಿಟ್ಟು ಹೋಗುವ ಆತಂಕದಲ್ಲಿರುವಾಗ ಮೌನವಾಗಿದ್ದಾರೆ. ರಾಜ್ಯದಲ್ಲೂ ಬಿಜೆಪಿ, ಕೇಂದ್ರದಲ್ಲೂ ಬಿಜೆಪಿ, ಡಬ್ಬಲ್ ಇಂಜಿನ್ ಸರ್ಕಾರ ಎಂದು ಹೇಳಲಾಗುತ್ತಿದ್ದರೂ ಕಲ್ಯಾಣದ ಪಾಲಿಗೆ ಡಬ್ಬಲ್ ಇಂಜಿನ್ ಸರ್ಕಾರ ನಿಷ್ಪ್ರಯೋಜಕವಾಗಿದೆ ಎಂದು ಕಲಬುರಗಿ ಸಾಮಾಜಿಕ ಕಾರ್ಯಕರ್ತ ಆನಂದ ದೇಶಪಾಂಡೆ ಹೇಳಿದ್ದಾರೆ.