ಕಲಬುರಗಿ(ಮಾ.07): ಕಲಬುರಗಿಯಲ್ಲೇ ಹೆಚ್ಚು ಗಾಂಜಾ ಮಾರಾಟ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ ಬೆನ್ನಲ್ಲೇ ಆಡಳಿತ ವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್‌ ಖರ್ಗೆ ಅವರು, ಬಿಜೆಪಿ ಸರ್ಕಾರದ ಭ್ರಷ್ಟ ಆಡಳಿತ ಫಲವಾಗಿ ಕಲಬುರಗಿ ಇಂದು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಟೀಕಿಸಿ, ಇದು ಆಘಾತಕಾರಿ ವಿಷಯ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಕೊರೋನಾ ಆತಂಕದ ನಡುವೆಯೆ ಹಾಗೂ ಲಾಕ್‌ಡೌನ್‌ ಸಂದರ್ಭದಲ್ಲಿ 91.84 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಪ್ರಮಾಣದ ಗಾಂಜಾ ಮೌಲ್ಯವೇ ಇಷ್ಟಿರುವಾಗ ಅಕ್ರಮವಾಗಿ ಮಾರಾಟವಾದ ಗಾಂಜಾ ಎಷ್ಟಿರಬಹುದು ಎಂಬುದೇ ಊಹಿಸಲಸಾಧ್ಯ ಎಂದಿದ್ದಾರೆ.

ಮೊನ್ನೆ ಪಾಸಿಟಿವ್‌, ನಿನ್ನೆ ನೆಗೆಟಿವ್‌: ವಿದ್ಯಾರ್ಥಿ-ಶಿಕ್ಷಕರಿಗಿಲ್ಲ ಕೊರೋನಾ ಸೋಂಕು..!

ಗೃಹ ಸಚಿವರ ಹೇಳಿಕೆ ಪ್ರಸ್ತಾಪಿಸಿರುವ ಪ್ರಿಯಾಂಕ್‌ ಖರ್ಗೆ ಅವರು ಐಪಿಎಲ್‌ ಬೆಟ್ಟಿಂಗ್‌, ಮಟ್ಕಾ ಹಾವಳಿಗೆ ಇಂದಿನ ಯುವಕರು ಬಲಿಯಾಗತೊಡಗಿದ್ದಾರೆ. ಇಂತಹ ಅಕ್ರಮ ಚಟುವಟಿಕೆಗಳು ಅನಾಯಾಸವಾಗಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇವೆ. ಬಿಜೆಪಿ ಸರ್ಕಾರದಲ್ಲೇ ಹೆಚ್ಚಾಗಲು ಕಾರಣಗಳೇನು? ಇದರಲ್ಲಿ ಯಾರ ಕೈವಾಡವಿದೆ? ಸಿಎಂ ಯಡಿಯೂರಪ್ಪ ನವರು ಹಾಗೂ ಗೃಹ ಸಚಿವರು ಇದುವರೆಗೆ ಯಾವ ಕ್ರಮ ಕೈಗೊಳ್ಳದಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ಸರ್ಕಾರ ನಮ್ಮ ಜಿಲ್ಲೆಯಲ್ಲಿ ಇದ್ದ ಹಾಗೂ ಬರಬೇಕಿದ್ದ ಎಲ್ಲಾ ಸಂಪನ್ಮೂಲಗಳನ್ನು ಕಸಿದುಕೊಂಡಿದೆ. ಇದು ಹೀಗೆ ಮುಂದುವರೆದರೆ ನಮ್ಮ ಜಿಲ್ಲೆಯ ಬೆಳವಣಿಗೆಗೆ ಇರುವ ಏಕೈಕ ಸಂಪತ್ತಾಗಿರುವ ಯುವ ಜನರನ್ನೂ ನಾವು ಕಳೆದುಕೊಳ್ಳಲಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರ ಕೃಪಾಪೋಷಿತ ಅಕ್ರಮ ಚಟುವಟಿಕೆಗಳ ರೇಟ್‌ ಕಾರ್ಡ್‌ ಜಿಲ್ಲೆಯನ್ನೇ ಆಹುತಿ ಪಡೆಯುತ್ತಿದೆ. ಈ ಕುರಿತು ನಾನು ಕಳೆದ ಹಲವು ತಿಂಗಳುಗಳಿಂದ ಪ್ರತಿಪಾದಿಸುತ್ತಾ ಬಂದಿದ್ದೆ ಎಂದು ತಮ್ಮ ಹೇಳಿಕೆಯನ್ನು ಪ್ರಸ್ತಾಸಿರುವ ಪ್ರಿಯಾಂಕ್‌ ಖರ್ಗೆ ಅವರು ನನ್ನ ಮಾತುಗಳನ್ನೇ ಇಂದು ಸರ್ಕಾರ ಒಪ್ಪಿಕೊಂಡಿದೆ ಎಂದು ಒತ್ತಿ ಹೇಳಿದ್ದಾರೆ.