Chikkaballapur: ಲೈಬ್ರರಿ ಕಟ್ಟಡ ಕಟ್ಟಲು ಸಿಗದ ನರೇಗಾ ಆಸರೆ!
ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸ್ವಂತ ಕಟ್ಟಡ ಇಲ್ಲದ ಗ್ರಾಪಂಗಳ ಗ್ರಂಥಾಲಯಗಳ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ತಿರಸ್ಕರಿಸಿರುವುದು ಈಗ ಸಾರ್ವಜನಿಕ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕಾಗತಿ ನಾಗರಾಜಪ್ಪ
ಚಿಕ್ಕಬಳ್ಳಾಪುರ (ನ.03): ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸ್ವಂತ ಕಟ್ಟಡ ಇಲ್ಲದ ಗ್ರಾಪಂಗಳ ಗ್ರಂಥಾಲಯಗಳ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ತಿರಸ್ಕರಿಸಿರುವುದು ಈಗ ಸಾರ್ವಜನಿಕ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸ್ವಂತ ಕಟ್ಟಡ ಇಲ್ಲದ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮಗಾಂಧೀ ನರೇಗಾ ಯೋಜನೆ ಹಾಗೂ ಇತರೇ ಅನುದಾನಗಳ ಒಗ್ಗೂಡಿಸುವಿಕೆಯೊಂದಿಗೆ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೋರಿ ರಾಜ್ಯದ ರಾಮನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ ತಿರಸ್ಕರಿಸಿರುವುದು ಗ್ರಾಮೀಣ ಗ್ರಂಥಾಲಯಗಳು ಇನ್ನಷ್ಟು ಸೊರಗುವಂತಾಗಿದೆ.
ಪರಿಶಿಷ್ಟರ ಅಭಿವೃದ್ಧಿಗೆ ಬಿಜೆಪಿ ಕಂಕಣ ಬದ್ಧ: ಸಚಿವ ಸುಧಾಕರ್
ಶಾಲೆ, ಅಂಗನವಾಡಿಗೆ ಅವಕಾಶ: ಈಗಾಗಲೇ ನರೇಗಾ ಯೋಜನೆಯಡಿ ಇತರೇ ಅನುದಾನಗಳನ್ನು ಒಗ್ಗೂಡಿಸುವಿಕೆಯೊಂದಿಗೆ ಶಾಲಾ ತಡೆತೋಡೆ, ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ಸರ್ಕಾರ ಅವಕಾಶ ಕಲ್ಪಿಸಿದ್ದರೂ ಗ್ರಂಥಾಲಯ ಕಟ್ಟಡಗಳ ನಿರ್ಮಾಣಕ್ಕೆ ಆಸಕ್ತಿ ತೋರದಿರುವುದು ಸರ್ಕಾರದ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. ರಾಜ್ಯದಲ್ಲಿ ಈ ಮೊದಲು ಗ್ರಾಮೀಣ ಭಾಗದಲ್ಲಿ ಗ್ರಾಪಂಗೆ ಒಂದರಂತೆ ಕಾರ್ಯನಿರ್ವಹಿಸುತ್ತಿದ್ದ ಗ್ರಂಥಾಲಯಗಳು ಸಾರ್ವಜನಿಕ ಗ್ರಂಥಾಲಯ ಇಲಾಖೆ ವ್ಯಾಪ್ತಿಯಲ್ಲಿ ಇದ್ದವು.
ಹಲವು ವರ್ಷಗಳ ಹಿಂದೆಯೆ ಗ್ರಾಮೀಣ ಗ್ರಂಥಾಲಯಗಳ ನಿರ್ವಹಣೆಯನ್ನು ಗ್ರಾಪಂಗಳಿಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಆದರೆ ಇಲ್ಲಿವರೆಗೂ ಕೂಡ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಕಷ್ಟು ಗ್ರಂಥಾಲಯಗಳಿಗೆ ಸ್ವಂತ ಕಟ್ಟಡ ಇಲ್ಲದೇ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವಂತಾಗಿದೆ. ಇದರಿಂದ ಮಳೆಗಾಲದಲ್ಲಿ ಅಂತೂ ಗ್ರಂಥಾಲಯದಲ್ಲಿನ ಪುಸ್ತಕಗಳನ್ನು ಸಂರಕ್ಷಿಸುವುದು ಗ್ರಂಥಪಾಲಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಜೊತೆಗೆ ಓದಲು ಮೂಲ ಸೌಕರ್ಯ, ಕಟ್ಟಡ ಸೌಲಭ್ಯ ಮತ್ತಿತರ ಸೂಕ್ತ ವಾತಾವರಣ ಇಲ್ಲದೇ ಇರುವುದರ ಕಾರಣಕ್ಕೆ ಗ್ರಾಪಂ ಗ್ರಂಥಾಲಯಗಳು ಸಾಕಷ್ಟುನಿರ್ಲಕ್ಷ್ಯಕ್ಕೆ ಒಳಗಾಗಿ ಓದುಗರಿಂದ ದೂರವೇ ಉಳಿದಿವೆ.
ಕೋಟ್ಯಂತರ ರು.ಗಳ ವೆಚ್ಚ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಪ್ರತಿ ವರ್ಷ ಗ್ರಾಪಂ ಮಟ್ಟದಲ್ಲಿ ಕೊಟ್ಯಂತರ ರು, ವೆಚ್ಚದ ಅಭಿವೃದ್ದಿ ಕಾಮಗಾರಿಗಳು ಅದರಲ್ಲೂ ಸಮುದಾಯ ಆಧಾರಿತ ಕೃಷಿ, ಶಿಕ್ಷಣ, ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆ, ಆರೋಗ್ಯ ಕ್ಷೇತ್ರಗಳ ಮೂಲ ಸೌಕರ್ಯ ಪುನಶ್ಚೇತನಕ್ಕಾಗಿ ಸಾಕಷ್ಟು ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಆದರೆ ರಾಜ್ಯ ಸರ್ಕಾರ ಗ್ರಾಮ ಪಂಚಾಯತ್ ಗ್ರಂಥಾಲಯಗಳ ಕಟ್ಟಡಗಳ ನಿರ್ಮಾಣಕ್ಕೆ ನರೇಗಾ ಯೋಜನೆಯ ಮೂಲಕ ಅವಕಾಶ ಕಲ್ಪಿಸದೇ ಇರುವ ಕಾರಣ ಗ್ರಾಪಂ ವ್ಯಾಪ್ತಿಯಲ್ಲಿ ಜನರಲ್ಲಿನ ಅಕ್ಷರದ ಹಸಿವು ನೀಗಿಸುವ ಅದರಲ್ಲೂ ಕೃಷಿ, ಆರೋಗ್ಯ, ಪರಿಸರ, ನೈರ್ಮಲ್ಯ ಮತ್ತಿತರ ಮಹತ್ವಕಾಂಕ್ಷಿ ವಲಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಗ್ರಾಮೀಣ ಗ್ರಂಥಾಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಕನಸಿಗೆ ಭಂಗವಾಗಿದೆ.
ಅಮೃತ ನಗರೋತ್ಥಾನ ಹಂತ-4ಕ್ಕೆ 145 ಕೋಟಿ ಮಂಜೂರು: ಸಚಿವ ಎಂಟಿಬಿ ನಾಗರಾಜ್
ಆಯುಕ್ತರು ಹೇಳಿರುವುದೇನು?: ಗ್ರಂಥಾಲಯ ಕಟ್ಟಡ ನಿರ್ಮಾಣವು ನರೇಗಾ ಯೋಜನೆಯಡಿ ಅನುಮತಿಸಲ್ಪಟ್ಟ ಕಾಮಗಾರಿಗಳ ಪಟ್ಟಿಯಲ್ಲಿ ಸೇರಿರುವುದಿಲ್ಲ. ನರೇಗಾ ಯೋಜನೆಯಡಿ ಅನುಮತಿಸಲ್ಪಟ್ಟ ಕಾಮಗಾರಿಗಳನ್ನು ಮಾತ್ರ ನರೇಗಾ ಹಾಗೂ ಇತರೇ ಅನುದಾನಗಳೊಂದಿಗೆ ಒಗ್ಗೂಡಿಸುವಿಕೆಯೊಂದಿಗೆ ಅನುಷ್ಟಾನಗೊಳಿಸಲು ಅವಕಾಶ ಇದೆ. ಯೋಜನೆಯಡಿ ಅನುಮತಿಸಲ್ಪಟ್ಟ ಕಾಮಗಾರಿಗಳ ಪಟ್ಟಿಯನ್ನು ಪರಿಷ್ಕರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದ್ದು ರಾಜ್ಯ ಸರ್ಕಾರದ ಹಂತದಲ್ಲಿ ಯಾವುದೇ ಕಾಮಗಾರಿ ಸೇರ್ಪಡೆಗೆ ಅವಕಾಶ ಇರುವುದಿಲ್ಲ ಎಂದು ರಾಜ್ಯ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಆಯುಕ್ತರು ಸ್ಪಷ್ಟವಾಗಿ ಹೇಳಿದ್ದಾರೆ.