ಗೋವಾದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಬೆಂಗಳೂರಿನ ಥಣಿಸಂದ್ರ ನಿವಾಸಿ ಇಶಾಕ್ (25) ಎಂಬ ಯುವಕ ಸಾವನ್ನಪ್ಪಿದ್ದಾನೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಇಶಾಕ್, ಹೊತ್ತಿಕೊಂಡಿದ್ದ ಬೆಂಕಿಯಿಂದ ಪಾರಾದ ನಂತರ ತನ್ನ ಮೊಬೈಲ್ ತರಲು ಒಳಗೆ ಹೋಗಿ ಸಜೀವ ದಹನವಾಗಿದ್ದಾನೆ.
ಬೆಂಗಳೂರು (ಡಿ.8): ಗೋವಾದಲ್ಲಿ ನಡೆದಿರುವ ಭೀಕರ ಅಗ್ನಿ ದುರಂತದಲ್ಲಿ ಒಬ್ಬ ಕನ್ನಡಿಗನೂ ಬಲಿಯಾಗಿದ್ದಾನೆ.
ದುರಂತದಲ್ಲಿ ಸುಮಾರು 25 ಮಂದಿ ಸಜೀವ ದಹನವಾಗಿದ್ದು, ಈ ಪೈಕಿ ಬೆಂಗಳೂರಿನ ಥಣಿಸಂದ್ರದ ಹೆಗಡೆನಗರದ ನಿವಾಸಿ ಇಶಾಕ್ (25) ಕೂಡ ಸಾವಿಗೀಡಾಗಿದ್ದಾನೆ. ಸದ್ಯ ಗೋವಾದಲ್ಲಿ ಮೃತದೇಹದ ಹಸ್ತಾಂತರ ಪ್ರಕ್ರಿಯೆ ನಡೆದಿದ್ದು, ಕುಟುಂಬಸ್ಥರು ನಗರಕ್ಕೆ ಮೃತದೇಹ ತರುವ ಪ್ರಯತ್ನದಲ್ಲಿದ್ದಾರೆ.
ಮೊಬೈಲ್ ತರಲು ಹೋಗಿ ಪ್ರಾಣ ಬಿಟ್ಟ:
ನಾಲ್ವರು ಸ್ನೇಹಿತರ ಜತೆ ಇಸಾಕ್ ಗೋವಾ ಟ್ರಿಪ್‌ಗೆ ಹೋಗಿದ್ದರು. ಶನಿವಾರ ಮಧ್ಯರಾತ್ರಿ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಸ್ನೇಹಿತರ ಜತೆ ಇಸಾಕ್ ಹೊರ ಬಂದಿದ್ದರು. ಆದರೆ ಮೊಬೈಲ್ ಟೇಬಲ್ ಮೇಲೆ ಬಿಟ್ಟು ಬಂದಿದ್ದೇನೆ ಅಂತ ಹೇಳಿ ಮತ್ತೆ ವಾಪಸ್ ಹೋಗಿದ್ದು, ಈ ವೇಳೆ ಬೆಂಕಿ ಕೆನ್ನಾಲಗೆಗೆ ಸಿಲುಕಿ ಪ್ರಾಣ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಗೋವಾ ಪಬ್ ದುರಂತಕ್ಕೆ ಕಾರಣವೇನು?
ಘಟನೆಯಲ್ಲಿ 6 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಈ ದುರ್ಘಟನೆಗೆ ಪಬ್‌ನೊಳಗೆ ಹಚ್ಚಿದ ಎಲೆಕ್ಟ್ರಿಕ್ ಪಟಾಕಿಯೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಪಬ್‌ನ ಮ್ಯಾನೇಜರ್ ಸೇರಿ ನಾಲ್ವರು ಸಿಬ್ಬಂದಿಗಳನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ಮಾಲೀಕರಾದ ಸೌರಭ್ ಮತ್ತು ಗೌರವ್ ಲೂತ್ರಾಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇನ್ನೊಂದೆಡೆ ಘಟನೆ ಕುರಿತು ತನಿಖೆಗೆ ಗೋವಾ ಸರ್ಕಾರ ಸಮಿತಿ ರಚಿಸಿದ್ದು, ವಾರದಲ್ಲಿ ವರದಿ ಸಲ್ಲಿಸಲು ಸೂಚಿಸಿದೆ.


