ಸ್ವಚ್ಛ ಸರ್ವೇಕ್ಷಣೆಯಲ್ಲಿ ನಂ.1 ಸ್ಥಾನ ಪಡೆಯಲು, ಮೈಸೂರು ಪಾಲಿಕೆಯು ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆಯಲು ಕನ್ನಡಿಗಳನ್ನು ಅಳವಡಿಸಿದೆ. ಆದರೆ, ಅಸ್ತಿತ್ವದಲ್ಲಿರುವ ಶೌಚಾಲಯಗಳಿಗೆ ಬೀಗ ಹಾಕಿ, ಈ ರೀತಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮೈಸೂರು: ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಂ.1 ಪಟ್ಟಕ್ಕೇರಲು ಹವಣಿಸುತ್ತಿರುವ ಮೈಸೂರು ಮಹಾನಗರ ಪಾಲಿಕೆ, ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜಿಸುವುದನ್ನು ತಡೆಗಟ್ಟಲು ನಗರದ ಗ್ರಾಮಾಂತರ ಬಸ್ ನಿಲ್ದಾಣದ ಎದುರಿನ ಮೋರಿ ಹಾಗೂ ಸರ್ಕಾರಿ ಅತಿಥಿಗೃಹದ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಪ್ರಾಯೋಗಿಕವಾಗಿ ಕನ್ನಡಿಯನ್ನು ಅಳವಡಿಸಿದ್ದು, ಇದಕ್ಕಾಗಿ ಲಕ್ಷಾಂತರ ರುಪಾಯಿ ವೆಚ್ಚವಾಗಿದೆಯಂತೆ!

ಇದರಿಂದಾಗಿ ಸಾರ್ವಜನಿಕರು ಮೂತ್ರ ವಿಸರ್ಜನೆಗೆ ನಿಂತರೆ ಮೂತ್ರ ವಿಸರ್ಜಿಸುವುದನ್ನು ತಾವೇ ನೋಡುವಂತಾಗುತ್ತದೆ. ಜೊತೆಗೆ, ರಸ್ತೆಯಲ್ಲಿ ಓಡಾಡುವ ಜನರಿಗೂ ಕಾಣುತ್ತದೆ. ಇದರಿಂದ ಅನೈರ್ಮಲ್ಯ ತಪ್ಪಿಸಬಹುದು ಎಂಬುದು ನಗರ ಪಾಲಿಕೆಯವರ ಯೋಚನೆ.
ಕನ್ನಡಿಯ ಕೆಳಗೆ ಎಲ್‌ಇಡಿ ಲೈಟ್ ಅಳವಡಿಕೆ
ಈ ಕನ್ನಡಿಯ ಕೆಳಗೆ ಎಲ್‌ಇಡಿ ಲೈಟುಗಳನ್ನು ಅಳವಡಿಸಿರುವುದರಿಂದ ರಾತ್ರಿ ವೇಳೆಯೂ ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸಬಹುದಂತೆ!. ಈ ಕಾರ್ಯ ಯಶಸ್ವಿಯಾದರೆ ನಗರದ ಇತರ ಕಡೆಗೂ ವಿಸ್ತರಿಸುವ ಯೋಚನೆಯಿದೆಯಂತೆ!
ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜಿಸುವವರಿಗೆ ಕನ್ನಡಿ ಹಿಡಿದರೆ ಆ ಜಾಗದಲ್ಲಿ ಮೂತ್ರ ವಿಸರ್ಜಿಸುವುದನ್ನು ಮಾತ್ರ ತಡೆಯಬಹುದೇ ಹೊರತು ಮೂತ್ರ ವಿಸರ್ಜಿಸುವ ಕ್ರಿಯೆಯನ್ನೇ ಬಂದ್ ಮಾಡಲಾಗದು. ಇದು ಪ್ರಕೃತಿ ನಿಯಮಕ್ಕೆ ವಿರುದ್ಧ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾರ್ವಜನಿಕ ಶೌಚಾಲಯಗಳಿಗಿಂತ ಮದ್ಯದಂಗಡಿಗಳ ಸಂಖ್ಯೆ ಹೆಚ್ಚಾಗಿದೆ. ಆಟೋ ಚಾಲಕರು, ಲಾರಿ ಚಾಲಕರು, ಟ್ಯಾಕ್ಸಿ ಚಾಲಕರು ಶೌಚಾಲಯಗಳನ್ನು ಹುಡುಕುತ್ತಾ ಅಲೆಯುವ ದೃಶ್ಯ ಮೈಸೂರಿನಲ್ಲಿ ಸರ್ವೇ ಸಾಮಾನ್ಯ.
ಪಾಲಿಕೆ ನಿರ್ಮಿಸಿರುವ ಬಹುತೇಕ ಶೌಚಾಲಯಗಳಿಗೆ ಬೀಗ ಹಾಕಲಾಗಿದೆ. ಶೌಚಾಲಯಗಳಿಗೆ ಬೀಗ ಹಾಕಿರುವ ಪಾಲಿಕೆ, ಸಾರ್ವಜನಿಕರು ಮೂತ್ರ ವಿಸರ್ಜಿಸುವುದನ್ನು ತಡೆಯಲು ಗೋಡೆಗಳಿಗೆ ಕನ್ನಡಿ ಅಳವಡಿಸಿರುವುದು ಮೂರ್ಖತನದ ಪರಮಾವಧಿ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಮೈಸೂರು ಮಹಾನಗರಪಾಲಿಕೆಯ ಆಯುಕ್ತರು ಹಾಗೂ ಅಧಿಕಾರಿಗಳ ಕೊಠಡಿಗೆ ಹೊಂದಿಕೊಂಡಂತೆ ಹವಾ ನಿಯಂತ್ರಿತ ಶೌಚಾಲಯಗಳಿರುತ್ತವೆ. ಈ ಶೌಚಾಲಯಗಳಿಗೆ ಬೀಗ ಜಡಿದು, ಆ ಜಾಗದಲ್ಲಿ ಕನ್ನಡಿ ಅಳವಡಿಸಿದರೆ ಪಾಲಿಕೆಯ ಅಧಿಕಾರಿಗಳ ಕತೆ ಏನಾಗಬಹುದು?. ಸಾರ್ವಜನಿಕ ಸ್ಥಳಗಳಲ್ಲಿ ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ಕನ್ನಡಿ ಅಳವಡಿಸುವ ಬದಲಾಗಿ ಅದೇ ಮೊತ್ತದಲ್ಲಿ ಅದೇ ಜಾಗದಲ್ಲಿ ಒಂದು ಶೌಚಾಲಯ ತೆರೆದರಾಗದೇ? ಎಂಬುದು ಸಾರ್ವಜನಿಕರ ಆಕ್ರೋಶ.
ಇಲ್ಲಿ ರಸ್ತೆಯೇ ಶೌಚಾಲಯ--
ಮೈಸೂರಿನ ಅಶೋಕಪುರಂ ಬಡಾವಣೆಯ ಡಾ। ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡಿಗೆ ಹೊಂದಿಕೊಂಡಂತೆ ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿದೆ.
ಈ ಶೌಚಾಲಯದ ದುಃಸ್ಥಿತಿ ಹೇಗಿದೆಯೆಂದರೆ ಇದರ ಒಳಗೆ ಪ್ರವೇಶಿಸಿದವರು ಜೀವನದ ಮೇಲೆ ಜಿಗುಪ್ಸೆ ಹೊಂದುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಈ ಶೌಚಾಲಯದ ಎದುರು ಸಂಚರಿಸಿದವರು ಮತ್ತೆಂದೂ ಈ ಭಾಗದ ಕಡೆ ತಲೆ ಹಾಕಿಯೂ ಮಲಗರಾರರು!. ಈ ಶೌಚಾಲಯದ ಒಳಗೆ ಪ್ರವೇಶಿಸಲು ಸಾಧ್ಯವಾಗದೇ ಇರುವುದರಿಂದ ಈ ರಸ್ತೆಯೇ ಶೌಚಾಲಯವಾಗಿ ಮಾರ್ಪಟ್ಟಿದೆ.
ಈ ರಸ್ತೆಯಲ್ಲಿ ಓಡಾಡುವ ವಿದ್ಯಾರ್ಥಿಗಳಿಗೆ ನಿತ್ಯ ಮುಜುಗರ ತಪ್ಪಿದ್ದಲ್ಲ. ಇನ್ನು, ಈ ಸರ್ಕಾರಿ ಶಾಲೆಯ ಮಕ್ಕಳ ಸ್ಥಿತಿ ಹೇಗಿದ್ದೀತು?. ಇಲ್ಲಿ ಮೂತ್ರ ವಿಸರ್ಜಿಸುವವರಿಗೆ ಕನ್ನಡಿ ಹಿಡಿಯಬೇಕಿಲ್ಲ, ಶಾಲೆಯ ಕಿಟಕಿ ತೆರೆದರೆ ಸಾಕು.
ನಮ್ಮ ಮೈಸೂರು ಮಹಾನಗರ ಪಾಲಿಕೆ ಸಾರ್ವಜನಿಕ ಶೌಚಾಲಯ ಮತ್ತು ಸರ್ಕಾರಿ ಶಾಲೆಗಳಿಗೆ ನೀಡುವ ಅಗೌರವಕ್ಕೆ ಇದೇ ಸಾಕ್ಷಿ!
ಇದನ್ನೂ ಓದಿ: ಮೈಸೂರು ಕನ್ನಡಿ ಗೋಡೆ: ಮೂತ್ರ ವಿಸರ್ಜನೆ ತಡೆ ಯೋಜನೆ ವಿಫಲ! ಕ್ಯಾರೇ ಅನ್ನದೆ ಕನ್ನಡಿ ಮುಂದೆ ನಿಂತೇ ಮೂತ್ರ ಮಾಡಿದ!
ಸಾರ್ವಜನಿಕ ಶೌಚಾಲಯಕ್ಕೆ ಭೇಟಿ
ನಂ.1 ಸ್ವಚ್ಛ ನಗರಿ ಎಂಬ ಬಿರುದು ಪಡೆಯಲು ಹಾತೊರೆಯುವ ನಮ್ಮ ನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಸಾರ್ವಜನಿಕ ಶೌಚಾಲಯಕ್ಕೆ ಭೇಟಿ ನೀಡಿದರೆ ನಂಬರ್ 2 ಮಾಡಿಕೊಳ್ಳುವುದಂತೂ ಖಚಿತ!. ಈ ವಿಚಾರವನ್ನು ಪಾಲಿಕೆಯ ಗಮನಕ್ಕೆ ತಂದೊಡನೆ ಇದನ್ನು ಸ್ವಚ್ಛಗೊಳಿಸುವ ಬದಲಾಗಿ ಶೌಚಾಲಯಕ್ಕೇ ಬೀಗ ಜಡಿಯಲಾಗಿದೆ. ಇದರಿಂದ ಆ ಭಾಗದಲ್ಲಿ ಬಯಲೇ ಶೌಚಾಲಯವಾಗಿದೆ. ಈ ಶೌಚಾಲಯ ಪಾಲಿಕೆಯ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿ.
- ಪಿ.ಜೆ.ರಾಘವೇಂದ್ರ ನ್ಯಾಯವಾದಿ, ಮೈಸೂರು.
ಇದನ್ನೂ ಓದಿ: Mysuru: ರಸ್ತೆಬದಿಯಲ್ಲಿ ಮೂತ್ರವಿಸರ್ಜನೆ ತಡೆಗೆ ಕಾಂಪೌಂಡ್‌ಗೆ ಕನ್ನಡಿಗಳ ಅಳವಡಿಕೆ


