ಮೈಸೂರಿನ ಕೆ.ಆರ್. ನಗರದಲ್ಲಿ ನಡೆದ ಹಜರತ್ ಖಾದರ್ ಲಿಂಗವಲ್ಲಿ ಉರುಸ್ ಆಚರಣೆಗೆ ಬಂದಿದ್ದ ಒಂದೇ ಕುಟುಂಬದ ಆರು ಮಂದಿ ಕಾವೇರಿ ನದಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೈಸೂರು (ಏ.19): ಸಂಭ್ರಮದ ಉರುಸ್ ಆಚರಣೆಗೆ ಬಂದಿದ್ದ ಕುಟುಂಬಗಳಲ್ಲಿ ಈಗ ನೀರವ ಮೌನ ಆವರಿಸಿದೆ. ಮೈಸೂರು ಜಿಲ್ಲೆಯ ಕೃಷ್ಣರಾಜನಗರ (ಕೆ.ಆರ್. ನಗರ) ತಾಲೂಕಿನಲ್ಲಿ ಇಂದು ಭೀಕರ ದುರಂತವೊಂದು ಸಂಭವಿಸಿದ್ದು, ಕಾವೇರಿ ನದಿಯಲ್ಲಿ ಈಜಲು ಹೋದ ಒಂದೇ ಕುಟುಂಬದ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹಜರತ್ ಖಾದರ್ ಲಿಂಗವಲ್ಲಿ ಉರುಸ್ ವೀಕ್ಷಿಸಲು ಬಂದಿದ್ದ ಸಂಬಂಧಿಕರು ವಿಧಿಯ ಆಟಕ್ಕೆ ಬಲಿಯಾಗಿದ್ದಾರೆ.
ಘಟನೆ ಹಿನ್ನೆಲೆ:
ಕೆ.ಆರ್. ನಗರ ಪಟ್ಟಣದ ಹೊರವಲಯದ ಹಳೆ ಎಡತೊರೆ ಅಥವಾ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಸಮೀಪ ಈ ದುರ್ಘಟನೆ ನಡೆದಿದೆ. ಇಲ್ಲಿ ನಡೆಯುತ್ತಿದ್ದ ಹಜರತ್ ಖಾದರ್ ಲಿಂಗವಲ್ಲಿ ಉರುಸ್ ಅನ್ನು ವೀಕ್ಷಿಸಲು ಬೆಂಗಳೂರು, ಮೈಸೂರು ಮತ್ತು ತಮಿಳುನಾಡಿನ ಊಟಿಯಿಂದ ಸಂಬಂಧಿಕರು ಆಗಮಿಸಿದ್ದರು. ಇಂದು ಮಧ್ಯಾಹ್ನ ಸುಮಾರು ಎಂಟು ಮಂದಿ ದೇವಸ್ಥಾನದ ಬಳಿ ಹರಿಯುವ ಕಾವೇರಿ ನದಿಯಲ್ಲಿ ಈಜಲು ಮತ್ತು ಆಟವಾಡಲು ಇಳಿದಿದ್ದಾರೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಒಬ್ಬರು ಮುಳುಗಲಾರಂಭಿಸಿದ್ದು, ಅವರನ್ನು ರಕ್ಷಿಸಲು ಹೋದ ಉಳಿದವರು ಕೂಡ ಒಬ್ಬೊಬ್ಬರಾಗಿ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.
ಮೃತರ ವಿವರ:
ಮೃತಪಟ್ಟ ಆರು ಮಂದಿಯೂ ಹತ್ತಿರದ ಸಂಬಂಧಿಕರಾಗಿದ್ದಾರೆ. ಮೃತರ ಹೆಸರು ಮತ್ತು ವಿಳಾಸ ಈ ಕೆಳಗಿನಂತಿದೆ:
ಫಾತಿಮಾ (42): ಇಸ್ಮಾಯಿಲ್ ಅವರ ಪತ್ನಿ, ಮೂಲತಃ ಮೈಸೂರಿನ ಉದಯಗಿರಿಯವರು, ಪ್ರಸ್ತುತ ಊಟಿಯಲ್ಲಿ ವಾಸವಾಗಿದ್ದರು.
ಮಹಮ್ಮದ್ ಯಾಸೀನ್ (23): ಬೆಂಗಳೂರಿನ ಎಸ್ ಬಿ ಆರ್ ಲೇಔಟ್ ನಿವಾಸಿ, ಆಟೋ ಚಾಲಕ.
ನೇಹಾ ಕೌಸರ್ (19): ಮಹಮ್ಮದ್ ಯಾಸೀನ್ ಅವರ ಪತ್ನಿ, ಬೆಂಗಳೂರು.
ಎಮ್ಮೆ ಐಮಾನ್ (13): ಆರೀಫ್ ಅವರ ಮಗಳು, ಕಾಡಗೌಡನಹಳ್ಳಿ, ಬೆಂಗಳೂರು.
ಅಫೀಫ್ ಅಹಮದ್ (13): ರಿಯಾಜ್ ಪಾಷಾ ಅವರ ಮಗ, 7ನೇ ತರಗತಿ ವಿದ್ಯಾರ್ಥಿ, ಕೆ.ಆರ್. ನಗರ.
ಉಜೇರ್ (5): ಸಾಧಿಕ್ ಅವರ ಮಗ, ಉದಯಗಿರಿ, ಮೈಸೂರು.
ಪೊಲೀಸ್ ವರಿಷ್ಠಾಧಿಕಾರಿಗಳ ಹೇಳಿಕೆ:
ಘಟನಾ ಸ್ಥಳಕ್ಕೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮಲ್ಲಿಕಾರ್ಜುನ ಬಾಲದಂಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, "ಎಂಟು ಮಂದಿ ಈಜಲು ನದಿಗೆ ಇಳಿದಿದ್ದರು. ಈ ವೇಳೆ ಆರು ಮಂದಿ ಮೃತಪಟ್ಟಿದ್ದು, ಇಬ್ಬರನ್ನು ಸ್ಥಳೀಯರು ಸಮಯಪ್ರಜ್ಞೆ ಮೆರೆದು ರಕ್ಷಿಸಿದ್ದಾರೆ. ಇದೊಂದು ಅತ್ಯಂತ ದುರದೃಷ್ಟಕರ ಘಟನೆ. ಘಟನೆ ಹೇಗೆ ಸಂಭವಿಸಿತು ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನದಿಯ ದಂಡೆಗಳಲ್ಲಿ ಎಚ್ಚರಿಕೆ ಫಲಕ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.
ಮೂವರ ಸ್ಥಿತಿ ಗಂಭೀರ:
ನದಿಯಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದ ಸಲ್ಮಾ ಬಾನು (50), ಆಸೀಯಾ (20) ಮತ್ತು ಜುಬೇದಾ (40) ಅವರನ್ನು ಕೂಡಲೇ ಮೈಸೂರಿನ ಕೆ.ಆರ್. ಆಸ್ಪತ್ರೆ ಮತ್ತು ಜಯದೇವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಮೃತದೇಹಗಳನ್ನು ಕೆ.ಆರ್. ನಗರದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಪಟ್ಟಣದಲ್ಲಿ ಶೋಕದ ಛಾಯೆ ಆವರಿಸಿದೆ.


