ಬೆಂಗಳೂರಿನ ಇನ್ಫೋಸಿಸ್ ಉದ್ಯೋಗಿ ವಿಘ್ನೇಶ್ (25) ಎಂಬುವವರು ಶ್ರೀರಂಗಪಟ್ಟಣದ ಎಡಮುರಿ ಪ್ರವಾಸಿ ತಾಣದಲ್ಲಿ ಕಾವೇರಿ ನದಿಗೆ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಅವರು, ನೀರಿನ ಹರಿವಿನ ಅಂದಾಜು ಸಿಗದೆ ದುರಂತ ಅಂತ್ಯ ಕಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಿದ್ದು, ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಇನ್ಫೋಸಿಸ್‌ ಉದ್ಯೋಗೊಯೊಬ್ಬ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ಪ್ರವಾಸಿತಾಣವಾದ ಎಡಮುರಿ ಕಾವೇರಿ ನದಿಯಲ್ಲಿ ಈ ದುರಂತ ಸಂಭವಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ಫೋಸಿಸ್‌ ಉದ್ಯೋಗಿ

ಮೃತ ಯುವಕನನ್ನು ಬೆಂಗಳೂರು ನಗರದ ರಾಮಮೂರ್ತಿನಗರ ನಿವಾಸಿ ವಿಘ್ನೇಶ್ (25) ಎಂದು ಗುರುತಿಸಲಾಗಿದೆ. ಅವರು ಬೆಂಗಳೂರಿನ ಖ್ಯಾತ ಐಟಿ ಸಂಸ್ಥೆ ಇನ್ಫೋಸಿಸ್‌ನಲ್ಲಿ ಉದ್ಯೋಗಿಯಾಗಿದ್ದು, ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕಾಗಿ ಮಂಡ್ಯ ಜಿಲ್ಲೆಗೆ ಆಗಮಿಸಿದ್ದರು. ಒಟ್ಟು ನಾಲ್ವರು ಸ್ನೇಹಿತರೊಂದಿಗೆ ಬಲಮುರಿ–ಎಡಮುರಿ ಪ್ರದೇಶಕ್ಕೆ ಭೇಟಿ ನೀಡಿದ್ದ ವಿಘ್ನೇಶ್, ಪ್ರಕೃತಿಯ ಸೌಂದರ್ಯವನ್ನು ಸವಿಯುವ ವೇಳೆ ಕಾವೇರಿ ನದಿಗೆ ಈಜಲು ಇಳಿದಿದ್ದನು.

ಗೆಳೆಯರ ಎದುರೇ ಜಲಸಮಾಧಿಯಾದ ವಿಘ್ನೇಶ್

ಈ ವೇಳೆ ಅಚಾನಕ್ ನೀರಿನ ಹರಿವು ಹೆಚ್ಚಾದುದರಿಂದ ಅಥವಾ ಆಳದ ಬಗ್ಗೆ ಅಂದಾಜು ತಪ್ಪಿದ ಪರಿಣಾಮ ವಿಘ್ನೇಶ್ ನೀರಿನಲ್ಲಿ ಮುಳುಗಿ ಜಲಸಮಾಧಿಯಾದ. ಸ್ನೇಹಿತರು ತಕ್ಷಣವೇ ಸಹಾಯಕ್ಕಾಗಿ ಕೂಗಿಕೊಂಡಿದ್ದು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯ್ತು.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿ, ಕೆಲ ಸಮಯದ ಬಳಿಕ ವಿಘ್ನೇಶ್ ಅವರ ಮೃತದೇಹವನ್ನು ನದಿಯಿಂದ ಹೊರತೆಗೆಯಲಾಯ್ತು. ಈ ಸಂಬಂಧ ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಪ್ರವಾಸಿತಾಣಗಳಲ್ಲಿ ಈಜುವ ವೇಳೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂಬುದಕ್ಕೆ ಈ ಘಟನೆ ಮತ್ತೊಮ್ಮೆ ಎಚ್ಚರಿಕೆಯ ಕರೆಗಂಟೆಯಾಗಿದೆ.