Mysuru Cattle fest : ಪ್ರಸಿದ್ಧ ಜಾನುವಾರು ಜಾತ್ರೆ ಆರಂಭ
- ಉತ್ತಮ ತಳಿಯ ಹಳ್ಳಿಕಾರ್ ರಾಸುಗಳು ಸಿಗುವ ಜಾತ್ರೆ ಎಂದೇ ಹೆಸರುವಾಸಿಯಾಗಿರುವ ಮೈಸೂರು ಚುಂಚನಕಟ್ಟೆಯಲ್ಲಿ ಜಾನುವಾರು ಜಾತ್ರೆ
- ಚುಂಚನಕಟ್ಟೆಯಲ್ಲಿ ಜಾನುವಾರು ಜಾತ್ರೆ ಭರ್ಜರಿಯಾಗಿ ಆರಂಭ
ವರದಿ : ಕುಪ್ಪೆ ಮಹದೆವಸ್ವಾಮಿ
ಕೆ.ಆರ್. ನಗರ (ಜ.06): ಉತ್ತಮ ತಳಿಯ ಹಳ್ಳಿಕಾರ್ ರಾಸುಗಳು (Cow) ಸಿಗುವ ಜಾತ್ರೆ ಎಂದೇ ಹೆಸರು ವಾಸಿಯಾಗಿರುವ ಮೈಸೂರು (Mysuru) ಜಿಲ್ಲೆಯ ಭತ್ತದ ಕಣಜ ಕೆ.ಆರ್. ನಗರ ತಾಲೂಕು ಚುಂಚನ ಕಟ್ಟೆಯಲ್ಲಿ ಜಾನುವಾರು ಜಾತ್ರೆ (Cattle fest) ಭರ್ಜರಿಯಾಗಿ ಆರಂಭಗೊಂಡಿದ್ದು, ಜಾತ್ರೆಯ ಮಾಳದಲ್ಲಿ ಎಲ್ಲಿ ನೋಡಿದರೂ ಸಿಂಗಾರಗೊಂಡ ಜಾನುವಾರುಗಳ ಮೇಳ ಕಂಡು ಬರುತ್ತಿದೆ.
ಸುಗ್ಗಿಯ ನಂತರ ನಡೆಯುವ ಮತ್ತು ದಕ್ಷಿಣ ಭಾರತದಲ್ಲಿ (South India) ಅತ್ಯಂತ ಹೆಸರು ವಾಸಿಯಾದ ಚುಂಚನ ಕಟ್ಟೆ ಜಾತ್ರೆಯಲ್ಲಿ ಈಗ ಮೈಸೂರು ಜಿಲ್ಲೆ ಮಾತ್ರವಲ್ಲದೇ ಮಂಡ್ಯ, ಹಾಸನ (Hassan), ಚಾಮರಾಜನಗರ (Chamarajanagar), ರಾಮನಗರ, ತುಮಕೂರು, ಕೋಲಾರ, ಕೊಡಗು ಸೇರಿದಂತೆ ಇನ್ನಿತರ ಜಿಲ್ಲೆಗಳ ರೈತರು ತಮ್ಮ ರಾಸುಗಳನ್ನು ಜಾತ್ರೆಯ ಮಾಳಕ್ಕೆ ಕರೆತಂದಿದ್ದು, ನೋಡಲು ಜನ ಸಾಗರವೇ ಚುಂಚನಕಟ್ಟೆಗೆ ಹರಿದು ಬರುತ್ತಿದೆ.
ಸುಗ್ಗಿಯ ದಣಿವನ್ನು ತಣಿಸಿಕೊಳ್ಳಲು ರೈತರು (Farmers) ಜಾನುವಾರು ಜಾತ್ರೆಯತ್ತ ಮುಗಿಬೀಳುತ್ತಿದ್ದು, ಜ. 2ರಿಂದಲೇ ಭರ್ಜರಿಯಾಗಿ ಆರಂಭಗೊಂಡಿರುವ ಜಾನುವಾರು ಜಾತ್ರೆಯಲ್ಲಿ ರೈತರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರೀತಿಯಿಂದ ಸಾಕಿ ಬೆಳೆಸಿರುವ 30 ಸಾವಿರದಿಂದ ಆರಂಭಿಸಿ ಲಕ್ಷಕ್ಕೂ ಅಧಿಕ ಬೆಲೆ ಬಾಳುವ ದುಬಾರಿ ಜೊತೆ ಎತ್ತುಗಳು ಜಾತ್ರೆಯಲ್ಲಿ ಜನಾಕರ್ಷಣೆಯ ಕೇಂದ್ರ ಬಿಂದುವಾಗಿವೆ,
ಚುಂಚನಕಟ್ಟೆಯ ಜಾನುವಾರು ಜಾತ್ರೆಯಲ್ಲಿ ಸದ್ಯ ಸಾವಿರಾರು ಜೋಡಿ ಎತ್ತುಗಳು ಬಂದಿದ್ದು, ಇನ್ನೆರಡು ದಿನಗಳೊಳಗೆ ಜಾತ್ರಾಮಾಳ ಸಂಪೂರ್ಣವಾಗಿ ತುಂಬಲಿದ್ದು, ಕೆಲ ಶ್ರೀಮಂತ ರೈತರು ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ತಮ್ಮ ರಾಸುಗಳಿಗೆ ಬೃಹತ್ ಶಾಮಿಯಾನ ಮತ್ತು ಚಪ್ಪರಗಳನ್ನು ಹಾಕಿಸಿ ದೇಶಿ ತಳಿಯ ಗೋ (Cow) ಸಂಪತ್ತಿನ ರಾಜ ದರ್ಬಾರ್ ನಡೆಸುತ್ತಿರುವುದು ಅಕರ್ಷಣಿಯವಾಗಿದೆ.
ರಾಜ್ಯ (karnataka) ಮತ್ತು ಹೊರ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೆಸರು ಪಡೆದುಕೊಂಡಿರುವ ಪರಿಣಾಮ ಇಲ್ಲಿಗೆ ರಾಸುಗಳನ್ನು ಕೊಳ್ಳಲು ದೂರದ ಗದಗ, ಹುಬ್ಬಳಿ, ಧಾರವಾಡ, ಗುಲ್ಬರ್ಗ, ವಿಜಾಪುರ, ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಅಲ್ಲದೇ ಆಂಧ್ರ, ಮಹಾರಾಷ್ಟ್ರ (Maharashtra), ತಮಿಳುನಾಡು (Tamilnadu) ಸೇರಿದಂತೆ ಇನ್ನಿತರ ಕಡೆಯಿಂದ ರೈತರು ಬರುತ್ತಿದ್ದು, ಇದರಿಂದ ಕೋಟ್ಯಾಂತರ ರು. ಗಳ ವ್ಯವಹಾರದ ನಿರೀಕ್ಷೆ ಭಾಗವಹಿಸಿರುವ ರಾಸುಗಳ ರೈತರಲ್ಲಿ ಮನೆ ಮಾಡಿದೆ.
ಈ ಬಾರಿ ಬಿದ್ದ ಉತ್ತಮ ಮಳೆ (Rain) ಮತ್ತು ನಾಲೆಯಲ್ಲಿ ದೊರೆತ ನೀರಿನ ಹಿನ್ನೆಲೆ ಉತ್ತಮ ಪ್ರಮಾಣದಲ್ಲಿ ಭತ್ತ (Paddy) ಸೇರಿದಂತೆ ಇನ್ನಿತರ ಬೆಳೆಗಳನ್ನು ಸಂವೃದ್ದಿಯಾಗಿ ಬೆಳೆದಿರುವ ರೈತರು ವ್ಯವಸಾಯದಲ್ಲಿ ಲಾಭಗಳಿಸುವುದರ ಜತೆಗೆ ರಾಸುಗಳ ಕೊಳ್ಳುವುದು ಮತ್ತು ಮಾರುವುದರಲ್ಲೂ ಸಾಕಷ್ಟು ಲಾಭ ದೊರೆಯುವುದರಿಂದ ಮತ್ತು ಉತ್ತಮ ರಾಸುಗಳ ಕೊಳ್ಳುವಿಕೆಗೆ ಈ ಜಾತ್ರೆ ವೇದಿಕೆಯಾಗಿದ್ದು, ಜಾತ್ರೆಗೆ ಉತ್ತಮ ಆರಂಭ ದೊರೆಯುತ್ತಿದ್ದಂತೆಯೇ ಇಲ್ಲಿ ಹಾಕಲಾಗಿರುವ ವಿವಿಧ ಅಂಗಡಿಗಳು ಮತ್ತು ಹೋಟೆಲ್‌ಗಳಿಗೆ (Hotel) ಭರ್ಜರಿ ವ್ಯಾಪಾರ ಶುರುವಾಗಿದೆ.
ಜಾತ್ರಾ ವಿಶೇಷ
ಚುಂಚನಕಟ್ಟೆ ಜಾತ್ರೆಯ ರಾಸುಗಳಿಗೆ ರಾಜ್ಯದಲ್ಲಿಯೇ ಉತ್ತಮ ಹೆಸರಿದ್ದು, ಅಲ್ಲದೇ ಗಂಡು ಜಾತ್ರೆ ಎಂದೇ ಹೆಸರು ಪಡೆದಿರುವ ಈ ಜಾತ್ರೆಯ ವಿಶೇಷವೆಂದರೆ ಭಾಗಶಃ ಗಂಡು ಎತ್ತುಗಳೇ ಭಾಗವಹಿಸುವುದು ಮಾತ್ರವಲ್ಲದೇ ಬೀಜದ ಹೋರಿಗಳು ಮತ್ತು ಹೆಚ್ಚು ದುಡಿಮೆಗೆ ಒಗ್ಗುವ ಹಳ್ಳಿಕಾರ್ ತಳಿಯ ಎತ್ತುಗಳು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುವುದು ವಿಶೇಷವಾಗಿದೆ. ಅಲ್ಲದೇ ರೈತರನ್ನು ಸೆಳೆಯಲು ಬ್ಯಾಂಡ್ ಬಾರಿಸುತ್ತಾ, ಡ್ಯಾನ್ಸ್ ಮಾಡುತ್ತಾ ತಮ್ಮ ರಾಸುಗಳನ್ನು ರಸ್ತೆಯಲ್ಲಿ ಕ್ಯಾಟ್‌ವಾಟ್ ಮಾಡಿಸುವುದು ಮತ್ತೊಂದು ವಿಶೇಷವಾಗಿದೆ.