ಕೋವಿಡ್‌ಗೆ ರಹದಾರಿ : ಗೋವಾದ ಸುಪ್ರಸಿದ್ಧ ಬೀಚ್‌ನಲ್ಲಿ ಜಾತ್ರೆಯಂತೆ ಸೇರಿದ ಜನ ಸಾಗರ
- ಗೋವಾದ ಪ್ರಸಿದ್ಧ ಬೀಚ್‌ನಲ್ಲಿ ಜನ ಸಾಗರ
- ಕೋವಿಡ್ ಆತಂಕ ಮರೆತು ಸೇರಿದ ಜನ
- ಬಾಗಾ ಬೀಚ್ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್
ಪಣಜಿ(ಡಿ.3): ಆತಂಕಕಾರಿಯಾದ ಕೋವಿಡ್ ಸೋಂಕಿನ ಹೆಚ್ಚಳದ ಹೊರತಾಗಿಯೂ ಗೋವಾದ ಜನಪ್ರಿಯ ಪ್ರವಾಸಿ ತಾಣದಲ್ಲಿ ಭಾರಿ ಜನಸಂದಣಿ ಕಂಡುಬಂದಿದೆ. ಪ್ರವಾಸಿಗರಿಗೆ, ಪ್ರೇಮಿಗಳಿಗೆ, ನವ ಜೋಡಿಗಳಿಗೆ ತಮ್ಮ ಖಾಸಗಿ ಕ್ಷಣಗಳನ್ನು ಎಂಜಾಯ್ ಮಾಡಲು ಹೇಳಿ ಮಾಡಿಸಿದಂತಹ ಜಾಗ ಗೋವಾ. ಆದರೆ ಕೋವಿಡ್ ಕಾರಣದಿಂದಾಗಿ ಇಲ್ಲಿ ಜನ ಸಂದಣಿ ಸೇರುವುದಕ್ಕೆ ನಿರ್ಬಂಧವಿದೆ. ಆದಾಗ್ಯೂ ಇಲ್ಲಿನ ಪ್ರಸಿದ್ಧ ಬೀಚ್‌ವೊಂದರಲ್ಲಿ ಸಾಮಾನ್ಯ ದಿನಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಜನ ಸೇರಿದಂತೆ ಲಕ್ಷಾಂತರ ಮಂದಿ ಸೇರಿದ್ದು, ಕೋವಿಡ್ ಸೋಂಕು ಹರಡಲು ರಹದಾರಿ ಮಾಡಿ ಕೊಟ್ಟಂತಾಗಿದೆ.
ಹೊಸ ವರ್ಷದ ಆಚರಣೆಗೆ ಗೋವಾಕ್ಕಿಂತ ಬೆಸ್ಟ್ ಎನಿಸುವ ಜಾಗ ಮತ್ತೊಂದಿಲ್ಲ. ಇದೇ ಕಾರಣಕ್ಕೆ ಅಲ್ಲಿನ ಬಾಗಾ ಬೀಚ್ (Baga Beach) ನಲ್ಲಿ ಲಕ್ಷಾಂತರ ಜನ ಸೇರಿದ್ದಾರೆ. ಟ್ವಿಟ್ಟರ್‌ನಲ್ಲಿ ಪೋಸ್ಟ್ ಆಗಿರುವ ವಿಡಿಯೋದಲ್ಲಿ ಕಾಣಿಸುವಂತೆ ರಸ್ತೆಯೊಂದರಲ್ಲಿ ಅತ್ತಿತ್ತ ದಾಟಿ ಹೋಗಲು ಸ್ವಲ್ಪವೂ ಸ್ಥಳಾವಕಾಶವಿಲ್ಲದಂತೆ ಜನ ಸೇರಿದ್ದಾರೆ. ಮಧ್ಯೆ ಮಧ್ಯೆ ಕೆಲವು ಕಾರುಗಳು ರಸ್ತೆಯಲ್ಲಿದ್ದು, ಜನ ಸಂದಣಿಯಿಂದಾಗಿ ಅತ್ತಿತ್ತ ಹೋಗಲಾಗದೇ ಮಧ್ಯದಲ್ಲೇ ಸ್ಟಕ್ ಆಗಿರುವಂತೆ ಕಾಣುತ್ತಿದೆ. ಇಡೀ ರಸ್ತೆಯುದ್ಧಕ್ಕೂ ಇದೇ ಸ್ಥಿತಿ ಇದ್ದು ಕೋವಿಡ್ ಹರಡಲು ಸುಲಭವಾಗಿ ದಾರಿ ಮಾಡಿ ಕೊಟ್ಟಂತಾಗಿದೆ.
ದಯವಿಟ್ಟು ಕೋವಿಡ್ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ಇದು ಗೋವಾದ ಬಾಗಾ ಬೀಚ್‌ನ ಕಳೆದ ರಾತ್ರಿಯ ಚಿತ್ರಣ. ಇದು ಕೋವಿಡ್ ಅಲೆಗೆ ರಾಜಾತಿಥ್ಯದ ಸ್ವಾಗತವಾಗಿದೆ. ಇಲ್ಲಿರುವ ಬಹುತೇಕರು ಪ್ರವಾಸಿಗರಾಗಿದ್ದಾರೆ ಎಂದು ಈ ವಿಡಿಯೋ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ @HermanGomes ಬರೆದುಕೊಂಡಿದ್ದಾರೆ.
ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಹಬ್ಬದ ಆಚರಣೆಗಾಗಿ ಈ ಕರಾವಳಿಯ ಪುಟ್ಟ ರಾಜ್ಯ (costal state)ಕ್ಕೆ ಡಿಸೆಂಬರ್‌ನಿಂದಲೇ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಆಗಿದೆ. ಪ್ರವಾಸಿಗರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಕೋವಿಡ್ ಪಾಸಿಟಿವ್ ದರದಲ್ಲೂ ಏರಿಕೆ ಆಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಭಾನುವಾರ ಇಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇಕಡಾ 10 ರಷ್ಟು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.
Udupi: ಅಪ್ಪು ಫೇವರೇಟ್ ಸ್ಪಾಟ್ ಮಲ್ಪೆ ಬೀಚ್‌ನಲ್ಲಿ ರೂಬಿಕ್ಸ್ ಕ್ಯೂಬ್ ಕಲಾಕೃತಿ
ಕಳೆದ 24 ಗಂಟೆಯಲ್ಲಿ ಒಟ್ಟು 388 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ ಎಂದು ಇಲ್ಲಿನ ಆರೋಗ್ಯ ಸಚಿವಾಲಯ (Health Ministry) ಮಾಹಿತಿ ನೀಡಿದೆ. ಈ ಹೊಸ ಪ್ರಕರಣಗಳ ಸೇರ್ಪಡೆ ಜೊತೆ ಕರಾವಳಿ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 1,81,570ಕ್ಕೆ ಏರಿಕೆ ಆಗಿದೆ.
Covid Crisis: ಟೂರ್ ಮುಗಿಸಿ ಗೋವಾದಿಂದ ವಾಪಸಾಗುವವರ ಮೇಲೆ ನಿಗಾ
ಕೊರೋನಾದ ಹೊಸ ರೂಪಾಂತರಿ ಒಮಿಕ್ರಾನ್‌ನಿಂದಾಗಿ ರಾಜ್ಯದಲ್ಲಿ ಹಲವು ಕಠಿಣ ಕೋವಿಡ್ ನಿಯಮಗಳನ್ನು ಜಾರಿಗೆ ತಂದ ಹೊರತಾಗಿಯೂ ಸಾವಿರಾರು ಜನ ದೇಶೀಯ ಪ್ರವಾಸಿಗರು ಗೋವಾದ ಬೀಚ್, ಪಬ್‌ಗಳು ಹಾಗೂ ನೈಟ್‌ಕ್ಲಬ್‌ಗಳಲ್ಲಿ ಸೇರಿ ಹೊಸ ವರ್ಷದ ಆಚರಣೆ ಮಾಡಿದ್ದರು. ಯೋಗ್ಯವಾದ ಲಸಿಕೆ ಪ್ರಮಾಣ ಪತ್ರಗಳನ್ನು ಹೊಂದಿರುವರರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡುವಂತೆ ರಾಜ್ಯ ಸರ್ಕಾರವೂ ಇಲ್ಲಿನ ಹೊಟೇಲ್, ರೆಸ್ಟೋರೆಂಟ್ ಹಾಗೂ ಕ್ಯಾಸಿನೋಗಳಿಗೆ ನಿರ್ದೇಶನ ನೀಡಿತ್ತು.