ಮೈಸೂರಿನಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಕೇರಳದಲ್ಲಿ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಓರ್ವ ಪೊಲೀಸ್ ಪೇದೆಯೂ ಭಾಗಿಯಾಗಿದ್ದು, ಉದ್ಯಮಿಯೊಬ್ಬರನ್ನು ಗುರಿಯಾಗಿಸಿಕೊಂಡು ಹಣ ವಸೂಲಿ ಮಾಡಲಾಗಿತ್ತು.

ಮೈಸೂರು (ಜು.20): ಕಳೆದ ತಿಂಗಳು ಜಿಲ್ಲೆಯಲ್ಲಿ ನಡೆದಿದ್ದ ಹನಿಟ್ರ್ಯಾಪ್ ಪ್ರಕರಣವನ್ನ ಕಡೆಗೂ ಬೈಲಕುಪ್ಪೆ ಪೊಲೀಸರು ಭೇದಿಸಿದ್ದಾರೆ. ಜೂನ್ ತಿಂಗಳಲ್ಲಿ ಉದ್ಯಮಿ ಗುರಿಯಾಗಿಸಿಕೊಂಡು ನಡೆಸಿದ್ದ ಹನಿಟ್ರ್ಯಾಪ್ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಕೇರಳದಲ್ಲಿ ಆರೋಪಿಗಳ‌ ಹೆಡೆಮುರಿ ಕಟ್ಟಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಜೂನ್‌16 ರಂದು‌ ಬೆಳಕಿಗೆ ಬಂದಿದ್ದ ಹನಿಟ್ರ್ಯಾಪ್ ಪ್ರಕರಣ ಸಂಬಂಧ ಹನಿ ಟ್ರ್ಯಾಪ್ ಮಾಡಿ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಮೈಸೂರು ಜಿಲ್ಲೆಯ ಬೈಲಕುಪ್ಪೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯದ ಕಣ್ಣೂರಿನ ಲಾಡ್ಜ್ ಒಂದರಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಕವನ ಹಾಗೂ ಸೈಫ್ ಬಂಧಿತ ಆರೋಪಿಗಳು ಆಗಿದ್ದಾರೆ. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಒಂದು ತಿಂಗಳ ಹಿಂದೆ ನಡೆದಿದ್ದ ಹನಿಟ್ರ್ಯಾಪ್ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದ ಪೊಲೀಸ್ ಪೇದೆ:

ಸಮಾಜದಲ್ಲಿ ಎಲ್ಲರಿಗೂ ರಕ್ಷಣೆ ಕೊಡಬೇಕಾದ ಹಾಗೂ ನ್ಯಾಯ ಕೊಡಿಸಬೇಕಾದ ವ್ಯಕ್ತಿಗಳೆಂದರೆ ಅದು ಪೊಲೀಸರು ಮಾತ್ರ. ಆದರೆ, ಇಲ್ಲಿ ಪೊಲೀಸಪ್ಪನೇ ಮಹಿಳೆಯೊಬ್ಬರನ್ನು ಹನಿಟ್ರ್ಯಾಪ್‌ಗೆ ದೂಡಿ, ಸಮಾಜಬಾಹಿರ ಕೆಲಸ ಮಾಡುತ್ತಿದ್ದುದು ಪತ್ತೆಯಾಗಿದೆ. ಈ ಘಟನೆ ಪೊಲೀಸ್ ಇಲಾಖೆಯನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಅಸಲಿಗೆ ಪಿರಿಯಾಪಟ್ಟಣ ತಾಲೂಕು ಕಂಪಲಾಪುರದ ದಿನೇಶ್ ಕುಮಾರ್ ಎಂಬ ಉದ್ಯಮಿಯನ್ನು ಗುರಿಮಾಡಿಕೊಂಡು ಹನಿಟ್ರ್ಯಾಪ್ ಮಾಡಲಾಗಿತ್ತು. ಈ ಪ್ರಕರಣದಲ್ಲಿ A1 ಆರೋಪಿ ಮೂರ್ತಿ ಆದರೆ, A2 ಆರೋಪಿ ಪೊಲೀಸ್ ಪೇದೆ ಶಿವಣ್ಣ‌ ಆಗಿದ್ದರು.

ಮೈಸೂರು ಜಿಲ್ಲೆಯ ಬೈಲಕುಪ್ಪೆಯಲ್ಲಿ ಹನಿಟ್ರ್ಯಾಪ್ ಪ್ರಕರಣದ ಕುರಿತಾಗಿ ಕೇಸ್ ದಾಖಲಾಗುತ್ತಿದ್ದಂತೆ A2 ಆರೋಪಿ ಪೊಲೀಸ್ ಶಿವಣ್ಣನನ್ನು ಬಂಧನ ಮಾಡಲಾಗಿತ್ತು. ಆದರೆ, ಈ ಕೇಸಿನ ಇತರೆ ಆರೋಪಿಗಳಾದ ಆನಂದ್, ಮೂರ್ತಿ, ಸೈಫ್‌ ಹಾಗೂ ಹನಿಟ್ರ್ಯಾಪ್‌ ಕಿಂಗ್‌ಪಿನ್ ಕವನ ಸೇರಿ ನಾಲ್ವರೂ ತಲೆ ಮರೆಸಿಕೊಂಡಿದ್ದರು. ಇದೀಗ ಪೊಲೀಸರು ಒಂದು ತಿಂಗಳಿಂದ ತಲೆ ಮರೆಸಿಕೊಂಡಿದ್ದ ಕವನ ಹಾಗೂ ಸೈಫ್‌ನನ್ನು ನಿನ್ನೆ ಬಂಧಿಸಿದ್ದಾರೆ. ಇದೀಗ ಉಳಿದ ಮತ್ತಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ.

ಹನಿಟ್ರ್ಯಾಪ್ ಘಟನೆಯ ವಿವರ:

ಮೈಸೂರು ಜಿಲ್ಲೆಯಲ್ಲಿ ದಿನೇಶ್ ಬಟ್ಟೆ ಅಂಗಡಿ ಇಟ್ಟುಕೊಂಡು ಸ್ವಂತ ಉದ್ಯಮ ನಡೆಸುತ್ತಿದ್ದನು. ಈತನ ಉದ್ಯಮ ಚೆನ್ನಾಗಿ ನಡೆಯುತ್ತಿದ್ದರಿಂದ ಆತನನ್ನು ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡುವುದಕ್ಕೆ ಸೈಫ್, ಕವನ ಹಾಗೂ ಶಿವಣ್ಣ ಸೇರಿ 5 ಜನರ ಗ್ಯಾಂಗ್ ಯೋಜನೆ ರೂಪಿಸಿತ್ತು. ಈ ಹಿನ್ನೆಲೆಯಲ್ಲಿ ಕವನ ದಿನೇಶನ ಬಟ್ಟೆ ಅಂಗಡಿಗೆ ಹೋಗಿದ್ದಾಳೆ. ಅಲ್ಲಿ ಒಂದಷ್ಟು ಬಟ್ಟೆಗಳನ್ನು ಖರೀದಿ ಮಾಡಿದಂತೆ ಮಾಡಿ, ಫೋನ್‌ ನಂಬರ್ ಪಡೆದು ಚಾಟಿಂಗ್ ಮಾಡಿದ್ದಾಳೆ. ನಂತರ ಬಟ್ಟೆ ಅಂಗಡಿ ಮಾಲೀಕ ದಿನೇಶನನ್ನು ಮನೆಗೆ ಕಾಫಿಗಾಗಿ ಕರೆದಿದ್ದಾಳೆ.

ಕವನ ನಮ್ಮ ಮನೆಯಲ್ಲಿ ಯಾರೂ ಇಲ್ಲ ಬಂದು, ಕಾಫಿ ಕುಡಿದುಕೊಂಡು ಹೋಗಿ ಎಂದು ಹೇಳಿದ್ದರಿಂದ ಯುವತಿ ಆಹ್ವಾನದ ಮೇರೆಗೆ ದಿನೇಶ್ ಆಕೆಯ ಮನೆಗೆ ಹೋಗಿದ್ದಾನೆ. ಆಗ, ದಿನೇಶನ ಮುಂದೆ ವೈಯಾರ ಮಾಡುತ್ತಾ ಸಲುಗೆಯಿಂದ ನಡೆದುಕೊಳ್ಳುತ್ತಿರುವಾಗಲೇ ಏಕಾಏಕಿ ಮನೆಯೊಳಗೆ ನುಗ್ಗಿದ ಪೊಲೀಸ್ ಪೇದೆ ಶಿವಣ್ಣ, ಸೈಫ್, ಆನಂದ್ ಹಾಹೂ ಮೂರ್ತಿ ಎಲ್ಲರೂ ಒಳಗೆ ಬಂದಿದ್ದಾರೆ. ಜೊತೆಗೆ, ಇಬ್ಬರೂ ಒಟ್ಟಿಗೆ ಮನೆಯಲ್ಲಿ ಏಕಾಂತವಾಗಿರುವುದನ್ನು ವಿಡಿಯೋ ಮಾಡಿದ್ದಾರೆ. ವಿಡಿಯೋ ತೋರಿಸಿ ನಾಲ್ವರೂ ಸೇರಿ ದಿನೇಶನ ಮೇಲೆ ಹಲ್ಲೆ ಮಾಡಿದ್ದಾರೆ.

ಇಷ್ಟಕ್ಕೆ ಸುಮ್ಮನೆ ಬಿಡದೇ ತಮ್ಮ ಉದ್ದೇಶದಂತೆ ಉದ್ಯಮಿ ದಿನೇಶನ ಬಳಿ ₹10 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಇದರಿಂದ ಭಯಬಿದ್ದ ದಿನೇಶ್ ಒಂದಷ್ಟು ಹಣವನ್ನೂ ಕೂಡ ಕೊಟ್ಟಿದ್ದಾರೆ. ಇಲ್ಲಿ ಯಾವುದೇ ಅನೈತಿಕ ಕಾರ್ಯದಲ್ಲಿ ತೊಡಗದಿದ್ದರೂ ತಾನು ಹಣ ತೆತ್ತಿದ್ದನ್ನು ಮರು ಚಿಂತನೆ ಮಾಡಿದಾಗ, ತನ್ನನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂಬ ಸತ್ಯಾಂಶ ತಿಳಿದುಬಂದಿದೆ. ಕೂಡಲೇ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸಿದಾಗ ದಿನೇಶ್ ಹನಿಟ್ರ್ಯಾಪ್‌ಗೆ ಒಳಗಾಗಿರುವ ಸತ್ಯಾಂಶ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಖುದ್ದು ಸಮಾಜದ ಹಿತ ಕಾಯುವಂತಹ ಪೊಲೀಸ್ ಪೇದೆ ಶಿವಣ್ಣನೇ ಭಾಗಿ ಆಗಿರುವುದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿತ್ತು.

ಒಟ್ಟಾರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಪೊಲೀಸರೇ ಸೇರಿಕೊಂಡು ವೇಶ್ಯಾವಾಟಿಕೆ ಮತ್ತು ಹನಿಟ್ರ್ಯಾಪ್ ದಂದೆ ಮಾಡಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದ್ದರೆ, ಉಳಿದ ಆರೋಪಿಗಳು ಸಿಗೋದು ಯಾವಾಗ ಎಂಬ ಪ್ರಶ್ನೆ ಮೂಡಿದೆ.