ಮೈಸೂರು ಹನಿಟ್ರ್ಯಾಪ್ ದಂಧೆ, ₹10 ಲಕ್ಷ ಸುಲಿಗೆ ಯತ್ನ; ಪೊಲೀಸ್ ಪೇದೆ, ಯುವತಿ ಸೇರಿ ಐವರ ಬಂಧನ
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಪೊಲೀಸ್ ಪೇದೆಯೊಬ್ಬ ಹನಿಟ್ರ್ಯಾಪ್‌ನಲ್ಲಿ ಭಾಗಿಯಾಗಿ ವ್ಯಾಪಾರಿಯೊಬ್ಬರಿಂದ ₹10 ಲಕ್ಷ ಸುಲಿಗೆ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಒಬ್ಬ ಯುವತಿ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಮೈಸೂರು (ಜೂ.16): ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿರುವ ಹನಿಟ್ರ್ಯಾಪ್ ಪ್ರಕರಣದಿಂದ ಪೊಲೀಸ್ ಇಲಾಖೆಯೇ ಶಾಕ್ ಆಗಿದೆ. ಈ ಹನಿಟ್ರ್ಯಾಪ್ ಕೇಸ್‌ಗೆ ಸ್ವತಃ ಪೊಲೀಸ್ ಪೇದೆಯೇ ಸಾಥ್ ನೀಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಕಂಪಲಾಪುರದ ವ್ಯಾಪಾರಿ ದಿನೇಶ್ ಕುಮಾರ್‌ಗೆ ಲಕ್ಷಾಂತರ ರೂಪಾಯಿ ಸುಲಿಗೆ ನಡೆಸಲು ಪ್ರಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಪೊಲೀಸ್ ಸಿಬ್ಬಂದಿ ಶಿವಣ್ಣ ಕೂಡ ಸೇರಿದ್ದಾರೆ.
ಹನಿಟ್ರ್ಯಾಪ್‌ನ ಪೂರ್ಣ ವಿವರ:
ಕಂಪಲಾಪುರದ ದಿನೇಶ್ ಕುಮಾರ್ ಎಂಬವರು ತಮ್ಮ ಊರಿನಲ್ಲಿ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಅವರ ಅಂಗಡಿಗೆ ಬಂದಿದ್ದ ಯುವತಿಯೊಬ್ಬರು ಪರಿಚಯ ಬೆಳೆಸಿ, ಬಳಿಕ ಮೊಬೈಲ್ ನಂಬರ್ ಪಡೆದು ವಾಟ್ಸಾಪ್ ಚಾಟಿಂಗ್ ಮಾಡುತ್ತಿದ್ದರು. ನಿರಂತರವಾಗಿ ಸಲುಗೆಯನ್ನು ಬೆಳೆಸಿದ ನಂತರ, ಒಂದು ದಿನ ನಮ್ಮ ಮನೆಯಲ್ಲಿ ಯಾರೂ ಇಲ್ಲವೆಂದು ಹೇಳಿ ದಿನೇಶ್ ಅವರನ್ನು ಮನೆಗೆ ಆಹ್ವಾನ ನೀಡಿದ್ದಾಳೆ.
ಯುವತಿಯ ಮಾತಿನ ಮೇಲೆ ನಂಬಿಕೆ ಇಟ್ಟು ದಿನೇಶ್ ಆಕೆ ತಿಳಿಸಿದ್ದ ಮನೆಗೆ ಹೋಗುತ್ತಿದ್ದಂತೆ, ತಕ್ಷಣವೇ ಸ್ಥಳದಲ್ಲಿ ಇತರ ಇಬ್ಬರು ವ್ಯಕ್ತಿಗಳು ಹಾಗೂ ಪೊಲೀಸ್ ಪೇದೆ ಶಿವಣ್ಣ ಹಾಜರಾಗಿದ್ದಾರೆ. ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬಂತೆ ದಾಳಿ ನಡೆಸಿ ದಿನೇಶ್ ಅವರನ್ನು ಥಳಿಸಿ, ಅವರ ವಿಡಿಯೋ ಶೂಟ್ ಮಾಡಿದ್ದಾರೆ. ನಂತರ ದಿನೇಶದ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ₹10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಪೊಲೀಸರ ತಕ್ಷಣ ಕಾರ್ಯಚರಣೆ:
ಆಗ ದಿನೇಶ್ ಅವರು ತಮ್ಮ ಸಹೋದರನಿಗೆ ಕರೆ ಮಾಡಿ 10 ಲಕ್ಷ ರೂ. ಹಣವನ್ನು ತೆಗೆದುಕೊಂಡು ಹೇಳಿದ ಜಾಗಕ್ಕೆ ಬರುವಂತೆ ಸೂಚಿಸಿದ್ದಾರೆ. ಆಗ ಹಣವನ್ನು ತೆಗೆದುಕೊಂಡು ಹೋಗುವ ಮುನ್ನ ದಿನೇಶನ ಸಹೋದರ ಪೊಲೀಸ್ ಠಾಣೆಗೆ ದೂರು ನಿಡಿದ್ದಾರೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡ ನಂತರ ಈ ಪ್ರಕರಣದ ಕುರಿತು ಎಸ್ಪಿ ಮಟ್ಟದ ತನಿಖೆ ಆರಂಭಿಸಲಾಗಿದೆ.
ಪಿರಿಯಾಪಟ್ಟಣ ಇನ್ಸ್‌ಪೆಕ್ಟರ್ ದೀಪಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಪೋಲೀಸ್ ಪೇದೆ ಶಿವಣ್ಣ ಸೇರಿ ಆರೋಪಿಗಳಾದ ಮೂರ್ತಿ (A1), ಪೊಲೀಸ್ ಪೇದೆ ಶಿವಣ್ಣ (A2) ಹಾಗೂ ಇತರೆ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸ್ ಇಲಾಖೆ ಶಾಕ್:
ಈ ಪ್ರಕರಣದಿಂದ ಪೊಲೀಸ್ ಇಲಾಖೆಯ ನೈತಿಕತೆಗೆ ಹೊಡೆತ ಬಿದ್ದಿದೆ. ಸಾರ್ವಜನಿಕರಿಗೆ ಹನಿಟ್ರ್ಯಾಪ್ ಸೇರಿ ಇತರೆ ವಂಚನೆ ಪ್ರಕರಣಗಳನ್ನು ತಡೆದು, ಇದಕ್ಕೆ ಸಂಬಂಧಪಟ್ಟ ಆರೋಪಿಗಳನ್ನು ಬಂಧಿಸಿ ಶಿಕ್ಷೆ ಕೊಡಿಸಬೇಕಾದ ಪೊಲೀಸ್ ಇಲಾಖೆ ಸಿಬ್ಬಂದಿ ಶಿವಣ್ಣ ಎಂಬುವವರೇ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿ ಆಗಿರುವುದು ಆತಂಕಕಾರಿ ವಿಚಾರವಾಗಿದೆ. ಇನ್ನು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಾರಾಂಶ:
- ಘಟನೆ ಸ್ಥಳ: ಪಿರಿಯಾಪಟ್ಟಣ, ಮೈಸೂರು
- ಆರೋಪಿಗಳು: A1 ಮೂರ್ತಿ, A2 ಪೊಲೀಸ್ ಶಿವಣ್ಣ, ಮತ್ತಿತರ ಮೂವರು
- ಸಂತ್ರಸ್ತ: ದಿನೇಶ್ ಕುಮಾರ್ (ವ್ಯಾಪಾರಿ)
- ಘಟನೆ ವಿಧ: ಹನಿಟ್ರ್ಯಾಪ್ ಮೂಲಕ ₹10 ಲಕ್ಷಕ್ಕೆ ಸುಲಿಗೆ ಯತ್ನ
- ಪ್ರಕರಣ ದಾಖಲೆ: ಬೆಟ್ಟದಪುರ ಪೊಲೀಸ್ ಠಾಣೆ
- ಜವಾಬ್ದಾರಿ: ಇನ್ಸ್‌ಪೆಕ್ಟರ್ ದೀಪಕ್ ನೇತೃತ್ವದಲ್ಲಿ ಬಂಧನ