ಮೈಸೂರು : ಎಪಿಎಂಸಿ ಗೋದಾಮಿನಲ್ಲಿ ರಾಗಿ ಖರೀದಿ ಕೇಂದ್ರ ಆರಂಭ
ರೈತರು ಬೆಳೆದ ರಾಗಿಯನ್ನು ಮಧ್ಯವರ್ತಿಗಳ ಹಾವಳಿಗೆ ಸಿಲುಕಿಸದೆ, ನೇರವಾಗಿ ಎಪಿಎಂಸಿಗೆ ಮಾರಾಟ ಮಾಡುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಶಾಸಕ ಜಿ.ಡಿ. ಹರೀಶ್ ಗೌಡ ಹೇಳಿದರು.
ಹುಣಸೂರು : ರೈತರು ಬೆಳೆದ ರಾಗಿಯನ್ನು ಮಧ್ಯವರ್ತಿಗಳ ಹಾವಳಿಗೆ ಸಿಲುಕಿಸದೆ, ನೇರವಾಗಿ ಎಪಿಎಂಸಿಗೆ ಮಾರಾಟ ಮಾಡುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಶಾಸಕ ಜಿ.ಡಿ. ಹರೀಶ್ ಗೌಡ ಹೇಳಿದರು.
ಪಟ್ಟಣದ ಎಪಿಎಂಸಿ ಗೋದಾಮಿನಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಮುಂಗಾರು ಹಂಗಾಮಿನಲ್ಲಿ ರಾಗಿ ಬೆಳೆದ ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಮಾಡಲು ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ರೈತರಿಂದ ರಾಗಿಯನ್ನು ಪ್ರತಿ ಕ್ವಿಂಟಾಲ್ ರಾಗಿಗೆ ರು. 3846 ಗಳ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಇದುವರೆಗೆ 4,674 ರೈತರು ನೋಂದಾಯಿಸಿಕೊಂಡಿದ್ದು, 11,4472.50 ಕ್ವಿಂಟಾಲ್ ರಾಗಿ ಖರೀದಿಯಾಗುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ರಾಗಿ ಬೆಳೆದ ರೈತರು ಯಾವುದೇ ಮಧ್ಯವರ್ತಿಗಳಿಗೆ ರಾಗಿಯನ್ನು ನೀಡದೇ ನೇರವಾಗಿ ಖರೀದಿ ಕೇಂದ್ರಕ್ಕೆ ತರುವ ಮೂಲಕ ಬೆಂಬಲ ಬೆಲೆಯ ಲಾಭ ಪಡೆಯಬೇಕು. ಖರೀದಿ ಕೇಂದ್ರದ ಸಿಬ್ಬಂದಿ ನಿಯಮಾನುಸಾರ ರೈತರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಲು ಹಾಗೂ ಎಪಿಎಂಸಿ ಅವರು ಆಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡುವಂತೆ ಹೇಳಿದರು.
ತಾಲೂಕಿನ ರತ್ನಪುರಿ ರಾಗಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ಒಟ್ಟು ಎರಡು ಕೇಂದ್ರಗಳಲ್ಲಿ ಖರೀದಿಸಲಾಗುವುದು. ರೈತರು ಕೇಂದ್ರಕ್ಕೆ ತರುವಾಗ ಎಫ್ಎಕ್ಯೂ ಮಾದರಿ ರಾಗಿ ಗುಣಮಟ್ಟ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಶಾಸಕರು ಖರೀದಿ ಕೇಂದ್ರದ ಅಧಿಕಾರಿ ಮಂಜುನಾಥ್ ಅವರಿಗೆ ಎಪಿಎಂಸಿ ಗೋದಾಮು ಆವರಣದಲ್ಲೆ ಖರೀದಿ ಆಗಬೇಕು ರೈತರಿಂದ ಯಾವುದೇ ಹಣವನ್ನು ವಸೂಲಿ ಮಾಡಬಾರದು, ತೂಕದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಶಿಫಾರಸ್ಸು ಮಾಡಲಾಗುತ್ತದೆ ಎಂದರು.
ರೈತರು ಸಹ ಯಾವುದೇ ಕಾರಣಕ್ಕೂ ಹಣ ಕೊಡುವ ವ್ಯವಸ್ಥೆ ಪ್ರಾರಂಭ ಮಾಡಬಾರದು, ರೈತ ಸಂಘ ಎಚ್ಚರಿಕೆಯಿಂದ ಕೆಲಸ ಮಾಡಿ ಉತ್ತಮ ಖರಿದಿ ಕೇಂದ್ರ ಎಂಬ ಹೆಗ್ಗಳಿಕೆಗೆ ಕಾರಣವಾಗಬೇಕು ಎಂದು ಅವರು ತಿಳಿಸಿದರು
ರೈತ ಸಂಘದವರು ಮಾತನಾಡಿ, ಖರೀದಿ ಕೇಂದ್ರದಲ್ಲಿ ಹಲವು ನ್ಯೂನ್ಯತೆಗಳು ಕಂಡಿವೆ, ಇವುಗಳನ್ನು ಸರಿಪಡಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
ಎಪಿಎಂಸಿ ಕಾರ್ಯದರ್ಶಿ ಹಂಪಣ್ಣ, ಉಗ್ರಾಣ ಇಲಾಖೆಯ ಅಧಿಕಾರಿ ಜಗದೀಶ್, ಆಹಾರ ಇಲಾಖೆ ಸಹಾಯಕ ನಿರ್ದೇಶಕಿ ಲಕ್ಷ್ಮೀ, ಶಿರಸ್ತೆದಾರ್ ಶರವಣ ರಾಗಿ ಖರೀದಿ ಅಧಿಕಾರಿ ಮಂಜುನಾಥ್ ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರು ಬಸವರಾಜ್ಹಾಗೂ ರೈತ ಸಂಘದ ಪದಾಧಿಕಾರಿಗಳು ಮತ್ತು ರೈತರು ಇದ್ದರು.