ರಾಜಧಾನಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ಗಳು ಪೂರೈಕೆ ಮಾಡುತ್ತಿರುವ ಆಹಾರದ ಬಗ್ಗೆ ನಗರ ಪಾಲಿಕೆ ಆಯುಕ್ತರ ಅಸಮಾಧಾನ ಮುಂದುವರಿದಿದ್ದು, ಪಶ್ಚಿಮ ನಗರ ಪಾಲಿಕೆ ಆಯುಕ್ತರ ಬಳಿಕ ಇದೀಗ ಉತ್ತರ ನಗರ ಪಾಲಿಕೆ ಆಯುಕ್ತರು ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರು : ರಾಜಧಾನಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ಗಳು ಪೂರೈಕೆ ಮಾಡುತ್ತಿರುವ ಆಹಾರದ ಬಗ್ಗೆ ನಗರ ಪಾಲಿಕೆ ಆಯುಕ್ತರ ಅಸಮಾಧಾನ ಮುಂದುವರಿದಿದ್ದು, ಪಶ್ಚಿಮ ನಗರ ಪಾಲಿಕೆ ಆಯುಕ್ತರ ಬಳಿಕ ಇದೀಗ ಉತ್ತರ ನಗರ ಪಾಲಿಕೆ ಆಯುಕ್ತರು ಅಸಮಾಧಾನ ಹೊರಹಾಕಿದ್ದಾರೆ.

ಬಡವರಿಗೆ, ಮಧ್ಯಮ ವರ್ಗ ಹಾಗೂ ಶ್ರಮಿಕ ವರ್ಗಕ್ಕೆ ಅತಿ ಕಡಿಮೆ ದರದಲ್ಲಿ ಆಹಾರ ನೀಡುವ ಉದ್ದೇಶದಿಂದ ಆರಂಭಿಸಲಾದ ಇಂದಿರಾ ಕ್ಯಾಂಟೀನ್‌ಗಳು, ನಿರ್ವಹಣೆ ಕೊರತೆ ಹಾಗೂ ಕಳಪೆ ಗುಣಮಟ್ಟದ ಆಹಾರ ಪೂರೈಕೆಯಿಂದ ಮನ್ನಣೆ ಕಳೆದುಕೊಳ್ಳುತ್ತಿವೆ.

ನೂತನವಾಗಿ ರಚನೆಯಾದ ಐದು ಪಾಲಿಕೆ ಆಯುಕ್ತರು ಪ್ರತಿ ದಿನ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಇಂದಿರಾ ಕ್ಯಾಂಟೀನ್‌ಗಳಿಗೆ ಭೇಟಿ ನೀಡಿ ಕ್ಯಾಂಟೀನ್‌ ಸ್ವಚ್ಛತೆ, ಆಹಾರದ ಗುಣಮಟ್ಟ ಪರಿಶೀಲನೆಯನ್ನು ನಡೆಸುತ್ತಿರುವುದರಿಂದ ಸ್ವತಃ ಆಯುಕ್ತರೇ ಅಸಮಾಧಾನ ಹೊರ ಹಾಕುತ್ತಿದ್ದು, ಕ್ಯಾಂಟೀನ್‌ಗೆ ಆಹಾರ ಪೂರೈಕೆ ಮಾಡುತ್ತಿರುವ ಗುತ್ತಿಗೆ ಸಂಸ್ಥೆಗಳಿಗೆ ನೋಟಿಸ್‌ ಜಾರಿಗೊಳಿಸುತ್ತಿದ್ದಾರೆ.

ಶುಕ್ರವಾರ ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ‌ ಸುನೀಲ್ ಕುಮಾರ್, ನಾಗವಾರದ ಇಂಡಿಯಾ ಸೊಸೈಟಿ ಲೇಔಟ್‌ನ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲನೆ ವೇಳೆ ಇಂದಿರಾ ಕ್ಯಾಂಟೀನ್ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಈ ಕುರಿತು ಎರಡು ದಿನದಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಜತೆಗೆ, ಇಂದಿರಾ ಕ್ಯಾಂಟೀನ್‌ ಪುಸಕ್ತದಲ್ಲಿ ತಮ್ಮ ಅಸಮಾಧಾನವನ್ನು ದಾಖಲಿಸಿದ್ದಾರೆ. ಎಲ್ಲಾ ಕ್ಯಾಂಟೀನ್‌ ವರದಿ ಸಿದ್ಧಪಡಿಸಿ, ಕ್ಯಾಂಟೀನ್‌ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶ ಸ್ವಚ್ಛಪಡಿಸಬೇಕು. ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಎಂಜಿನಿಯರಿಂಗ್‌ ವಿಭಾಗಕ್ಕೆ ನಿರ್ದೇಶಿಸಿ, ಮಾರ್ಷಲ್‌ ಸಕ್ರಿಯವಾಗಿ ನಿಗಾವಹಿಸಲು ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವರದಿ ಪರಿಣಾಮ

ಸೆ.9ರಂದು ಪಶ್ಚಿಮ ನಗರ ಪಾಲಿಕೆ ಆಯುಕ್ತರು ಎಚ್‌ಎಂಟಿ ವಾರ್ಡ್‌ನ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ವೇಳೆ ಆಹಾರ ಸೇವಿಸಿ ಕ್ಯಾಂಟೀನ್‌ ಪುಸಕ್ತದಲ್ಲಿ ರಬ್ಬರನಂಥ ಇಡ್ಲಿ, ತರಕಾರಿ ಇಲ್ಲದ ಸಾಂಬಾರ್‌, ನೀರಾಗಿರುವ ಚಟ್ನಿ ಎಂದೆಲ್ಲಾ ಷರಾ ಬರೆದಿದ್ದರು. ಈ ಕುರಿತು ಕನ್ನಡಪ್ರಭ ಸೆ.10 ರಂದು ವಿಶೇಷ ವರದಿ ಪ್ರಕಟಿಸಿತ್ತು.

ತದ ನಂತರ ಇನ್ನುಳಿದ ನಗರ ಪಾಲಿಕೆ ಆಯುಕ್ತರು, ಪ್ರತಿ ದಿನ ಬೆಳಗ್ಗೆ ವಿವಿಧ ಸ್ಥಳದ ಪರಿಶೀಲನೆ ವೇಳೆ ಹತ್ತಿರದ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲನೆಯನ್ನು ರೂಢಿಸಿಕೊಂಡಿದ್ದಾರೆ. ಹೀಗಾಗಿ, ಪರಿಶೀಲನೆ ವೇಳೆ ಅಧಿಕಾರಿಗಳಿಗೆ ಇಂದಿರಾ ಕ್ಯಾಂಟೀನ್‌ನಲ್ಲಿಯೇ ಉಪಾಹಾರ ಎಂಬಂತಾಗಿದೆ.