ಕೇರಳದ ನರ್ಸಿಂಗ್ ದಂಪತಿಗಳ ಜೀವನವನ್ನು ಬದಲಿಸಿದ ಆಹಾರ ಬಂಡಿ, ಸ್ವಂತ ದುಡಿಮೆಯ ಸುಖದ ಜೀವನ
ಕಡಿಮೆ ಆಸ್ಪತ್ರೆ ಸಂಬಳದಿಂದ ಬೇಸತ್ತ ದಂಪತಿಗಳು ನರ್ಸಿಂಗ್ ವೃತ್ತಿ ತ್ಯಜಿಸಿ ಚೆರ್ತಲಾದಲ್ಲಿ ಆಹಾರ ಬಂಡಿ ಆರಂಭಿಸಿದ್ದಾರೆ. ಸ್ಥಳೀಯರ ಬೆಂಬಲದೊಂದಿಗೆ ಯಶಸ್ವಿಯಾಗಿ ವ್ಯಾಪಾರ ನಡೆಸುತ್ತಿರುವ ಇವರು, ಕಷ್ಟದಿಂದ ಯಶಸ್ಸಿನತ್ತ ಸಾಗುತ್ತಿರುವ ಒಂದು ಸ್ಪೂರ್ತಿದಾಯಕ ಕಥೆ.

ಇತ್ತೀಚಿನ ವರ್ಷಗಳಲ್ಲಿ ಕೆಲಸದಿಂದ ವಜಾ, ವೇತನ ಕಡಿಮೆ, ಕ್ರಾಸ್ ಕಟ್ಟಿಂಗ್ ಹೀಗೆ ಹಲವು ಕಾರಣಗಳಿಂದ ತಾವು ಓದಿರುವ ಅರ್ಹತೆಗೆ ತಕ್ಕಂತೆ ಸಂಬಳ ಸಿಗದೆ. ಜೀವನ ನಿರ್ವಹಣೆ ಕಷ್ಟವಾಗುತ್ತಿದ್ದು ಕೆಲಸ ಸಿಗದೆ ಕಂಪೆನಿಗಳನ್ನು ಬಿಟ್ಟು ತಮ್ಮದೇ ಆದ ಸ್ವಂತ ಉದ್ಯಮ ಮಾಡುತ್ತಿದ್ದಾರೆ. ಅದರಲ್ಲಿ ಹೆಚ್ಚಿನವರು ಕಡಿಮೆ ಬಂಡವಾಳದ ಫುಡ್ ಬಿಸಿನೆಸ್ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಆಹಾರ ಉದ್ಯಮವು ಹಲವರಿಗೆ ಹೊಸ ಬಾಗಿಲು ತೆರೆದಿದೆ. ಅದೇ ರೀತಿಯಲ್ಲಿ, ಕೇರಳದ ಆಲಪ್ಪುಳ ಮೂಲದ ಡೆನ್ನಿ ಬೇಬಿ ಮತ್ತು ಪಾರ್ವತಿ ಜಯಕುಮಾರ್ ದಂಪತಿಗಳಿಗೂ ಹೊಸ ಬದುಕಿನ ದಾರಿ ತೋರಿಸಿದೆ. ನರ್ಸಿಂಗ್ ಕೆಲಸಗಳನ್ನು ತೊರೆದು, ಅವರು ಬಿಸಿ ಬಿಸಿ ಬಜ್ಜಿಗಳು, ಚಹಾ, ಕಾಫಿ ಮತ್ತು ವಿವಿಧ ಫ್ರೈಗಳನ್ನು ಮಾರಾಟ ಮಾಡುವ ಸಣ್ಣ ಆಹಾರ ಬಂಡಿಯನ್ನು ಆರಂಭಿಸಿದ್ದಾರೆ.
ಆಸ್ಪತ್ರೆಯ ಸಂಬಳದಿಂದ ಅಸಮಾಧಾನ
ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಅಧ್ಯಯನಗಳಲ್ಲಿ ಡಿಪ್ಲೊಮಾ ಪಡೆದಿದ್ದರೂ, ದಂಪತಿಗಳು ತಮ್ಮ ವೃತ್ತಿಜೀವನದಲ್ಲಿ ತೃಪ್ತಿ ಕಾಣಲಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ತಿಂಗಳಿಗೆ ಕೇವಲ ₹5,000 ಮಾತ್ರ ಸಂಬಳ ಸಿಗುತ್ತಿದ್ದ ಕಾರಣ ಜೀವನ ಸಾಗಿಸುವುದು ಕಷ್ಟವಾಗುತ್ತಿತ್ತು. ಹೈದರಾಬಾದ್‌ನಲ್ಲಿ ಕೆಲಸ ಮಾಡಿದರೂ ಸಂಬಳದ ಕೊರತೆಯಿಂದ ಬದುಕು ಸುಲಭವಾಗಲಿಲ್ಲ. ದಿನಗೂಲಿ ಕೆಲಸದಲ್ಲಿ ದಿನಕ್ಕೆ ₹1,000 ಗಳಿಸಬಹುದೆಂದು ಕಂಡ ಬಳಿಕ, ಆಸ್ಪತ್ರೆಯ ಕೆಲಸಗಳನ್ನು ತ್ಯಜಿಸಿ ಸ್ವಂತ ಉದ್ಯಮ ಪ್ರಾರಂಭಿಸುವ ನಿರ್ಧಾರಕ್ಕೆ ಬಂದರು.
ಚೆರ್ತಲಾದಲ್ಲಿ ಬಂಡಿ ಸ್ಥಾಪನೆ
ಒಂದು ತಿಂಗಳ ಹಿಂದೆ, ಚೆರ್ತಲಾದ ಎಕ್ಸ್-ರೇ ಜಂಕ್ಷನ್ ಬಳಿ ಸಣ್ಣ ಆಹಾರ ಬಂಡಿಯನ್ನು ಆರಂಭಿಸಿದ ದಂಪತಿಗಳು, ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಅಂಗಡಿಯನ್ನು ತೆರೆದಿಡುತ್ತಾರೆ. ಅವರ ಮನೆ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವುದರಿಂದ ಸಮಯ ನಿರ್ವಹಣೆ ಸುಲಭವಾಗಿದೆ. ಹತ್ತಿರದ ಅಂಗಡಿ ಮಾಲೀಕರು, ಲೋಡ್ ಕಾರ್ಮಿಕರ ಸಂಘದ ಸದಸ್ಯರು ಹಾಗೂ ಸ್ಥಳೀಯ ಗ್ರಾಹಕರು ಬಂಡಿ ಸ್ಥಾಪಿಸಲು ಹಾಗೂ ಅದನ್ನು ನಡೆಸಲು ಅಗತ್ಯ ಬೆಂಬಲ ನೀಡಿದರು. ಪಾರ್ವತಿ ಅವರು ಹೇಳುವಂತೆ “ಹತ್ತಿರದಲ್ಲೇ ಪಾನೀಯ ಮಳಿಗೆ ಇದ್ದರೂ, ನಮಗೆ ಯಾವುದೇ ತೊಂದರೆಯಾಗಿಲ್ಲ. ಎಲ್ಲರೂ ನಮ್ಮನ್ನು ಪ್ರೋತ್ಸಾಹಿಸಿ ಬೆಂಬಲಿಸಿದ್ದಾರೆ” ಎಂದು ಹೇಳಿದರು.
ಆರಂಭದ ಸವಾಲುಗಳು – ನಂತರದ ಯಶಸ್ಸು
ಸ್ನೇಹಿತರಿಂದ ₹50,000ಕ್ಕೆ ಬಂಡಿ ಖರೀದಿಸಿದ ದಂಪತಿಗಳು ಆರಂಭದಲ್ಲಿ ಅಡುಗೆ ಮಾಡುವಲ್ಲಿ ಕಷ್ಟ ಅನುಭವಿಸಿದರು. ಆದರೆ ಸ್ಥಳೀಯರಿಂದ ಬಂದ ಮಾರ್ಗದರ್ಶನ, ಪಾಕವಿಧಾನಗಳು ಹಾಗೂ ಸಲಹೆಗಳ ನೆರವಿನಿಂದ ಕ್ರಮೇಣ ಕೌಶಲ್ಯವನ್ನು ಹೆಚ್ಚಿಸಿಕೊಂಡರು. ಈಗ ಅವರು ಪ್ರತಿದಿನ ₹2,000ರಿಂದ ₹3,000 ವರೆಗೆ ಸಂಪಾದಿಸುತ್ತಿದ್ದಾರೆ.
ಡೆನ್ನಿ ಬೇಬಿಯವರ ಪ್ರಕಾರ, ನಮ್ಮ ಮೆನು ಈಗಾಗಲೇ ಜನಪ್ರಿಯವಾಗಿದೆ. ಮುಂದಿನ ದಿನಗಳಲ್ಲಿ ದೋಸೆಯಂತಹ ವಸ್ತುಗಳನ್ನು ಸೇರಿಸಲು ಬಯಸುತ್ತೇವೆ. ಆದರೆ ಅದಕ್ಕೆ ಹೆಚ್ಚಿನ ಸಹಾಯ ಹಾಗೂ ಸಮಯ ಬೇಕಾಗುತ್ತದೆ. ಜೊತೆಗೆ, ಹೆದ್ದಾರಿ ಅಭಿವೃದ್ಧಿ ಕಾರ್ಯ ನಡೆಯುತ್ತಿರುವುದರಿಂದ ಸ್ಥಳ ಬದಲಾಯಿಸಬೇಕೋ ಎಂಬ ಆತಂಕವೂ ಇದೆ. ಮಳೆಗಾಲದಲ್ಲಿ ವ್ಯವಹಾರ ನಿಧಾನಗೊಳ್ಳುತ್ತದೆ. ಆದರೆ ಈಗ ಮಾನ್ಸೂನ್ ಕಡಿಮೆಯಾಗುತ್ತಿರುವುದರಿಂದ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ ಎಂದರು.
ಪ್ರೇಮಕಥೆಯಿಂದ ಉದ್ಯಮದ ಹಾದಿ
ಡೆನ್ನಿ ಮತ್ತು ಪಾರ್ವತಿ ಅವರ ಜೀವನ ಪಯಣವು ನರ್ಸಿಂಗ್ ಶಾಲೆಯಲ್ಲಿಯೇ ಪ್ರಾರಂಭವಾಯಿತು. ಕೊಟ್ಟಾಯಂ ಜಿಲ್ಲೆಯ ಕುರುಪ್ಪಮ್ಥರದ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ಡಿಪ್ಲೊಮಾ ಓದುತ್ತಿದ್ದಾಗ ಇಬ್ಬರೂ ಭೇಟಿಯಾಗಿ ಪ್ರೀತಿಗೆ ಒಳಗಾದರು. ಅಧ್ಯಯನ ಪೂರ್ಣಗೊಳಿಸಿದ ಬಳಿಕ ಮದುವೆಯಾಗಲು ನಿರ್ಧರಿಸಿದರು. ಆರಂಭದಲ್ಲಿ ಕುಟುಂಬದಿಂದ ವಿರೋಧವಿದ್ದರೂ, ಕಾಲಕ್ರಮೇಣ ಸಂಬಂಧವನ್ನು ಒಪ್ಪಿಕೊಂಡರು.
ಡೆನ್ನಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ವೃತ್ತಿಜೀವನ ಪ್ರಾರಂಭಿಸಿದರೆ, ಪಾರ್ವತಿ ಮಲಪ್ಪುರಂನಲ್ಲಿ ತರಬೇತಿ ಮುಗಿಸಿ ನಂತರ ತೆಲಂಗಾಣಕ್ಕೆ ತೆರಳಿದರು. ಕೆಲವೇ ವರ್ಷಗಳಲ್ಲಿ, ಬದುಕಿನ ಹಾದಿ ಬದಲಾಗಿತ್ತು. ಇದೀಗ ತಮ್ಮದೇ ಫುಡ್‌ಟ್ರಕ್ ನಿಂದ ಜೀವನವನ್ನು ಕಟ್ಟಿಕೊಂಡಿರುವ ಅವರು, ಕಷ್ಟದ ಬದುಕಿನಿಂದ ಯಶಸ್ಸಿನತ್ತ ಸಾಗುತ್ತಿರುವ ಹಲವು ದಂಪತಿಗೆ ಉದಾಹರಣೆಯಾಗಿ ಬದುಕುತ್ತಿದ್ದಾರೆ.