ಬೆಂಗಳೂರಿನಲ್ಲಿ ಚಂದ್ರಗ್ರಹಣದಂದು ಮೌಢ್ಯ ನಿವಾರಣೆಗೆ ವಿಶಿಷ್ಟ ಜಾಗೃತಿ ಕಾರ್ಯಕ್ರಮ. ಗ್ರಹಣದ ಸಮಯದಲ್ಲಿ ಆಹಾರ ಸೇವಿಸುವ ಮೂಲಕ 150ಕ್ಕೂ ಹೆಚ್ಚು ಜನರು ಮೂಢನಂಬಿಕೆ ವಿರುದ್ಧ ಸೆಟೆದು ನಿಂತರು. ವೈಜ್ಞಾನಿಕ ಚಿಂತನೆಗೆ ಉತ್ತೇಜನ ನೀಡುವ ಈ ಕಾರ್ಯಕ್ರಮ ಟೌನ್ ಹಾಲ್ ನಲ್ಲಿ ನಡೆಯಿತು.
ಬೆಂಗಳೂರು (ಸೆ.7): ಇಂದು ರಾಹುಗ್ರಸ್ತ ಚಂದ್ರಗ್ರಹಣ ಗೋಚರ ಹಿನ್ನೆಲೆ ನಗರದ ಟೌನ್ ಹಾಲ್ ಮುಂಭಾಗದಲ್ಲಿ 'ನಮ್ಮ ನಡಿಗೆ ವಿಜ್ಞಾನದೆಡೆಗೆ" ಶೀರ್ಷಿಕೆಯಡಿ ವಿಶಿಷ್ಟ ಜಾಗೃತಿ ಕಾರ್ಯಕ್ರಮ ನಡೆಯಿತು.
ಗ್ರಹಣದ ಸಮಯದಲ್ಲಿ ಆಹಾರ ಸೇವನೆ ನಿಷಿದ್ಧ ಎಂಬ ಮೂಢನಂಬಿಕೆಯನ್ನು ವಿರೋಧಿಸಿ, 150ಕ್ಕೂ ಹೆಚ್ಚು ಪ್ರಗತಿಪರರು ಒಟ್ಟುಗೂಡಿ ಬಿಸ್ಕೆಟ್, ಹಣ್ಣು-ಹಂಪಲು, ನೀರು ಮತ್ತು ತಿಂಡಿತಿನಿಸುಗಳನ್ನು ಸೇವಿಸುವ ಮೂಲಕ ವೈಜ್ಞಾನಿಕ ಚಿಂತನೆಗೆ ಸ್ವಾಗತ ಕೋರಿದರು.
ಇದನ್ನೂ ಓದಿ: ಚಂದ್ರ ಗ್ರಹಣದ ವೇಳೆ ಪ್ರಯಾಣ ಮಾಡಬಹುದಾ? ಶಾಸ್ತ್ರ-ವಿಜ್ಞಾನ ಹೇಳುವುದೇನು?
ಗ್ರಹಣದ ಸಮಯದಲ್ಲಿ ಆಹಾರ ಸೇವಿಸಬಾರದು ಎಂಬುದು ಕೇವಲ ಮೂಢನಂಬಿಕೆ. ಇದನ್ನು ತೊಡೆದುಹಾಕಲು ನಾವು ಈ ಅಭಿಯಾನವನ್ನು ಆಯೋಜಿಸಿದ್ದೇವೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಆಹಾರ ಸೇವನೆಯ ಮೂಲಕ ಮೌಢ್ಯಕ್ಕೆ ಸೆಡ್ಡು ಹೊಡೆದು, ಸಮಾಜದಲ್ಲಿ ವೈಜ್ಞಾನಿಕ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಮಾಡಿದರು.
ಜ್ಯೋತಿಷಿಗಳು ಮಾತಾಡೋದು ತಪ್ಪು: ಪ್ರಗತಿಪರ ಚಿಂತಕ ನರಸಿಂಹಮೂರ್ತಿ
ಗ್ರಹಣದ ವೇಳೆ ಊಟ ಮಾಡಬಾರದು ಎಂದು ನಂಬಿಕೆಯ ವಿಚಾರವಾಗಿ ಮಾತನಾಡಿದ ಪ್ರಗತಿಪರ ಚಿಂತಕ ವಕೀಲ ನರಸಿಂಹ ಮೂರ್ತಿ, ಚಂದ್ರಗ್ರಹಣ ಸೂರ್ಯಗ್ರಹಣ ಭೂಮಿ ಇರೋವರೆಗೂ ನಡೆಯುತ್ತಿರುತ್ತೆ. ಕೆಲ ವಿಷ ಕ್ರಿಮಿಗಳು ಊಟ ಮಾಡಬೇಡಿ, ಹೊರಗೆ ಬರಬೇಡಿ ಎಂದು ಹೆದರಿಸ್ತಾರೆ. ಗರ್ಭಿಣಿಯರಿಗೆ ನಾಲ್ಕು ಗೋಡೆ ಮಧ್ಯೆ ಇರಿ ಅಂತಾರೆ. ಊಟ ಮಾಡಿ, ಮಾಡಬೇಡಿ ಅನ್ನೋದು ವಿಜ್ಞಾನಿಗಳ ವಿಚಾರ. ಕಳೆದ 15 ವರ್ಷಗಳಿಂದ ನಾವು ಈ ಮೌಡ್ಯವನ್ನ ವಿರೋಧಿಸುತ್ತ ಬಂದಿದ್ದೇವೆ. ಈ ಬಾರಿ ಹೆಣ್ಣುಮಕ್ಕಳು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಜನರಿಗೆ ಒಳ್ಳೆಯ ಉದ್ದೇಶ ಕೊಡಬೇಕು. ಹಾಡನ್ನು ಹೇಳುತ್ತಾ ಊಟ ಮಾಡುತ್ತೇವೆ ಎಂದರು.
ಗ್ರಹಣ ಅನ್ನೋದು ವೈಜ್ಞಾನಿಕ ವಿಚಾರ: ಪ್ರಗತಿಪರ ಚಿಂತಕಿ ರಮ್ಯಾ
ಗ್ರಹಣ ಅನ್ನೋದು ವೈಜ್ಞಾನಿಕ ವಿಚಾರಕ್ಕೆ ಸಂಬಂಧಿಸಿದ್ದು. ವೈಜ್ಞಾನಿಕ ಹಿನ್ನೆಲೆಯಿಂದ ನೋಡಬೇಕು. ಊಟ ಮಾಡಬಾರದು, ಹೊರಗೆ ಹೋಗಬಾರದು ಅನ್ನುವವರ ವಿರುದ್ಧ ಸಾಂಕೇತಿಕ ಪ್ರತಿಭಟನೆ ನಡೆಸುವ ಮೂಲಕ ಉತ್ತರ ಕೊಡ್ತಿದ್ದೇವೆ. ನೈಸರ್ಗಿಕವಾಗಿ ನಡೆಯುವ ಘಟನೆ ಚಂದ್ರಗ್ರಹಣ ಸೂರ್ಯಗ್ರಹಣ ಊಟಕ್ಕೂ ಗ್ರಹಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಪ್ರಗತಿಪರ ಚಿಂತಕಿ ಸಿದ್ದರಾಮಯ್ಯ ಲಾ ಕಾಲೇಜು ಪ್ರಾಂಶುಪಾಲೆ ರಮ್ಯಾ ಹೇಳಿದರು.
