ಮೈಸೂರಲ್ಲಿ 93 ದೇವಾಲಯ ತೆರವು : ಚರ್ಚ್ ಮತ್ತು ಮಸೀದಿ ಇಲ್ಲವೆ ಎಂದು ಸಿಂಹ ಆಕ್ರೋಶ
- ಮೈಸೂರಿನಲ್ಲಿ 93 ದೇವಾಲಯಗಳ ತೆರವಿಗೆ ನೀಡಿದ ಸುಪ್ರೀಂಕೋರ್ಟ್ ಆದೇಶ
- ಆದೇಶದ ವಿರುದ್ಧ ಸಂಸದ ಪ್ರತಾಪ್ ಸಿಂಹ ಅಸಮಾಧಾನ
ಮೈಸೂರು (ಸೆ.12): ಮೈಸೂರಿನಲ್ಲಿ 93 ದೇವಾಲಯಗಳ ತೆರವಿಗೆ ನೀಡಿದ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"
ಮೈಸೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ ದೇವಸ್ಥಾನಗಳಿಗೆ ಎದುರಾಗಿರುವ ಕಂಟಕ ನಿವಾರಣೆ ಮಾಡುವಂತೆ ದೇವರನ್ನು ಬೇಡಿರುವೆ. 101 ಗಣಪತಿ ದೇವಸ್ಥಾನದ ಪ್ರತೀಕ. ಈ ತಿಂಗಳ 21 ರಂದು ನೆಲಸಮ ಮಾಡುತ್ತೇವೆ ಅಂತ ನೋಟಿಸ್ ನೀಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
1955 ರಲ್ಲಿ 101 ಗಣಪತಿ ದೇವಸ್ಥಾನ ನಿರ್ಮಾಣವಾಗಿದೆ. ಮಾತೆತ್ತಿದ್ದರೆ ಸುಪ್ರೀಂ ಕೋರ್ಟ್ ಆರ್ಡರ್ ಅಂತಾರೆ. ನಮ್ಮ ಹತ್ತಿರವು ಸುಪ್ರೀಂ ಕೋರ್ಟ್ ಆರ್ಡರ್ ಇದೆ. ಸುಪ್ರೀಂ ಕೋರ್ಟ್ 2009 ರಲ್ಲಿ ಮಧ್ಯಂತರ ಆದೇಶ ನೀಡಿದೆ. ಎಂಟು ವಾರದೊಳಗೆ ತೀರ್ಪು ಅನುಷ್ಠಾನದ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದೆ ಎಂದರು.
ಮೈಸೂರು : ಚಾಮುಂಡೇಶ್ವರಿ ಸೇರಿ 93 ದೇವಾಲಯ ನೆಲಸಮಕ್ಕೆ ಸುಪ್ರೀಂ ಆದೇಶ
2009 ಕ್ಕೆ ದೇವಸ್ಥಾನ, ಮಸೀದಿ ಮತ್ತು ಚರ್ಚ್ ಗಳನ್ನು ತಲೆ ಎತ್ತಲು ಬಿಡಬೇಡಿ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮೈಸೂರಿನ ಕ್ಯಾತಮಾರನ ಹಳ್ಳಿಯಲ್ಲಿ ಮಸೀದಿ ತಲೆ ಎತ್ತಲು ಹೇಗೆ ಬಿಟ್ಟಿದ್ದೀರಾ ? ಅದರಿಂದ ರಾಜು ಮರ್ಡರ್ ಆಯಿತು ಎಂದು ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನ ಸುಮಾರು 90ರಷ್ಟು ದೇವಸ್ಥಾನ ನೆಲಸಮ ಮಾಡುತ್ತಾರಂತೆ. ಬರೀ ಹಿಂದೂ ದೇವಸ್ಥಾನ ಮಾತ್ರ ಟಾರ್ಗೆಟ್ ಮಾಡುತ್ತಿದ್ದೀರಾ ಏಕೆ? ಯಾಕೆ ದೇವಸ್ಥಾನ ಮಾತ್ರ ಇರೋದಾ, ಚರ್ಚ್ ಮತ್ತು ಮಸೀದಿ ಇಲ್ಲವೆ ಎಂದು ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಮತ್ತೊಮ್ಮೆ ದೇವಾಲಯಗಳ ಪಟ್ಟಿ ಪರೀಲನೆ ಮಾಡಬೇಕು. 2010ರ ರಾಜ್ಯ ಸರ್ಕಾರದ ಆದೇಶವನ್ನ ತಕ್ಷಣ ವಾಪಸ್ ಪಡೆಯಬೇಕು. ಮತ್ತೊಮ್ಮೆ ಸುಪ್ರೀಂಕೋರ್ಟ್ ಮುಂದೆ ಪರಿಷ್ಕೃತ ಪಟ್ಟಿ ಸಲ್ಲಿಸಬೇಕು. ಸಾರ್ವಜನಿಕವಾಗಿ ತೊಂದರೆಯಾಗುವ ದೇವಾಲಯ, ಮಸೀದಿ ಹಾಗೂ ಚರ್ಚ್‌ಗಳನ್ನು ಪ್ರತ್ಯೇಕ ಪ್ರಕರಣವಾಗಿ ಪರಿಗಣಿಸಿ. ಸ್ಥಳಿಯರೊಂದಿಗೆ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳಿ. ಇಲ್ಲವಾದರೆ ರಾಜ್ಯಾದ್ಯಂತ ದೇವಾಲಯಗಳನ್ನು ಉಳಿಸಿ ಎಂಬ ಅಭಿಯಾನ ಮಾಡಬೇಕಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದರು.
ಅನಧಿಕೃತ ಪ್ರಾರ್ಥನಾ ಮಂದಿರಗಳ ತೆರವು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪನ್ನು ನಾನು ಮೈಸೂರಿಗೆ ಮಾತ್ರ ಸೀಮಿತಗೊಳಿಸಿ ಮಾತನಾಡುತ್ತಿಲ್ಲ. ಇಡೀ ದೇಶಕ್ಕೆ ಅನ್ವಯವಾಗುವಂತೆ ಮಾತನಾಡುತ್ತಿದ್ದೇನೆ. ಯಾವುದೇ ಪೂರ್ವಾಪರಗಳನ್ನು ಪರಿಶೀಲಿಸದೇ ಏಕಾಏಕಿ ದೇಗುಲಗಳ ನೆಲಸಮ ಮಾಡುವುದು ಸರಿಯಲ್ಲ. ಇಂತಹ ಘಟನೆಗಳನ್ನು ಯಾವುದೇ ನಾಗರೀಕ ಸಮಾಜ ಒಪ್ಪುವುದಿಲ್ಲ ಎಂದರು.
ಯಾವುದೇ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸುವ ಮುನ್ನ ಮೊದಲು ಅಲ್ಲಿನ ಸ್ಥಳೀಯ ನಿವಾಸಿಗಳೊಂದಿಗೆ ಚರ್ಚಿಸಬೇಕು. ಪ್ರಾರ್ಥನಾ ಮಂದಿರವನ್ನು ಉಳಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆಯೇ? ಅಥವಾ ಸ್ಥಳಾಂತರ ಮಾಡಲು ಸಾಧ್ಯವಿದೆಯೇ? ಎಂಬೆಲ್ಲಾ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಅನಿವಾರ್ಯ ಪರಿಸ್ಥಿತಿ ಇದ್ದರೆ ಮಾತ್ರ ಅಂತಹ ಪ್ರಾರ್ಥನಾ ಮಂದಿರಗಳನ್ನು ಮಾತ್ರ ತೆರವು ಮಾಡಿ. ಸ್ಥಳೀಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ತೆರವುಗೊಳಿಸಿ. ಇದಲ್ಲದೆ ಜನರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಯಾವುದೇ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸಬಾರದು ಎಂದು ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದರು.