ದೊಡ್ಡದಾಗಿ ಬೆಳೆದಿರುವ ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಚಿಂತನೆಯಾಗಬೇಕಿದೆ. ಸದ್ಯ ತಮ್ಮ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ವೀರಶೈವ ಮತ್ತು ಲಿಂಗಾಯತ ಒಂದೇ ಸಮಾಜ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಹುಬ್ಬಳ್ಳಿ (ಜೂ.01): ದೊಡ್ಡದಾಗಿ ಬೆಳೆದಿರುವ ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಚಿಂತನೆಯಾಗಬೇಕಿದೆ. ಸದ್ಯ ತಮ್ಮ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ವೀರಶೈವ ಮತ್ತು ಲಿಂಗಾಯತ ಒಂದೇ ಸಮಾಜ. ಇದರಲ್ಲಿ ಪ್ರತ್ಯೇಕ ವಿಷಯವೇ ಬರುವುದಿಲ್ಲ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರು ಇಲ್ಲಿನ ಸವಾಯಿ ಗಂಧರ್ವ ಸಭಾಭವನದಲ್ಲಿ ವೀರಶೈವ ಲಿಂಗಾಯತ ಸೇವಾ ಸಮಿತಿಯಿಂದ ನಡೆದ ವೀರಶೈವ ಲಿಂಗಾಯತ ಒಳಪಂಗಡಗಳ ಸಮಾಜದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದ ಮುಂಚೂಣಿ ನಾಯಕರನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ನಮ್ಮವರನ್ನೇ ಬಳಕೆ ಮಾಡಿಕೊಳ್ಳುತ್ತಿರುವುದು ದುರ್ದೈವದ ಸಂಗತಿ. ಹಾಗಾಗಿ, ಸಮಾಜ ಒಂದಾಗಿದ್ದರೆ ಮಾತ್ರ ಇದೆಲ್ಲವನ್ನೂ ಸಮರ್ಥವಾಗಿ ಮೆಟ್ಟಿ ನಿಲ್ಲಲು ಸಾಧ್ಯವಾಗಲಿದೆ. ಅಲ್ಲದೇ, ಸಾಮಾಜಿಕವಾಗಿ ಹಿಂದುಳಿದ ಸಮಾಜದ ಬಂಧುಗಳನ್ನು ಮೇಲೆತ್ತಲು ಸಾಧ್ಯವಾಗಲಿದೆ ಎಂದರು.

ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳ ಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಸಮಾಜದ ಬಂಧುಗಳು ಒಗ್ಗಟ್ಟಿನ ಹೋರಾಟದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವ ಪ್ರಯತ್ನ ಮಾಡಬೇಕಿದೆ. ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಸಮಾಜ ಸೇರ್ಪಡೆಯಾದರೆ ಹೆಚ್ಚಿನ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ ಎಂದರು.

ನಡೆದು ಬಂದ ದಾರಿ ಭಿನ್ನ

ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ವೀರಶೈವ ಲಿಂಗಾಯತ ಸಮಾಜ ಧರ್ಮಾಚರಣೆ, ನಡೆದು ಬಂದ ದಾರಿ ಭಿನ್ನವಾಗಿದೆ. ಬಸವಣ್ಣವರ ಹಾಕಿಕೊಟ್ಟು ತತ್ವಾದರ್ಶ, ಮಾರ್ಗದರ್ಶನದಲ್ಲಿ ಸಮಾಜ ಮುನ್ನಡೆದಿದೆ. ಬೇರೆ ಯಾವ ಸಮಾಜವನ್ನೂ ದ್ವೇಷ ಮಾಡದ ಸಮಾಜ ವೀರಶೈವ ಲಿಂಗಾಯತ ಸಮಾಜವಾಗಿದ್ದು, ಎಲ್ಲರೂ ನಮ್ಮವರು ಎಂದು ಸಮಾಜದಲ್ಲಿ ಸಹಬಾಳ್ವೆ ನಡೆಸುತ್ತಿದೆ ಎಂದರು.

ಸಮಾಜದ ಮಕ್ಕಳು ಎತ್ತರಕ್ಕೆ ಬೆಳೆಯಬೇಕು ಎಂಬ ಸುದುದ್ದೇಶದಿಂದ ಮಕ್ಕಳನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಸಮಾಜದ ಮಕ್ಕಳು ಮನೆ ಮತ್ತು ಸಮಾಜಕ್ಕೆ ಸೀಮಿತವಾಗದೇ, ಭಾರತ ಮಾತೆಯ ಮಕ್ಕಳಾಗಿ ಬೆಳೆಯಬೇಕು ಎಂದರು.

ವೀರಶೈವ ಲಿಂಗಾಯತ ಸೇವಾ ಸಮಿತಿಯ ಮಲ್ಲಿಕಾರ್ಜುನ ಸಾಹುಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮಾಜದ ಎಸ್‌ಎಸ್ಎಲ್‌ಸಿ ಹಾಗೂ ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೇ, ಬಿಲ್ಡರ್‌ ಆ್ಯಂಡ್‌ ಡೆವಲಪರ್‌ ವೀರೇಶ ಉಂಡಿ, ಸಿಪಿಐ ಮುರಗೇಶ ಚನ್ನಣ್ಣವರ, ಪತ್ರಕರ್ತ ಗಿರೀಶ ಪಟ್ಟಣಶೆಟ್ಟಿ, ಉದ್ಯಮಿ ನಾಗರಾಜ ಗೌರಿ, ನಾಗೇಶ ಅಣ್ಣಿಗೇರಿ, ಮಂಜುನಾಥ ಮುನವಳ್ಳಿ ಅವರನ್ನು ಸನ್ಮಾನಿಸಲಾಯಿತು.