ಯಾದಗಿರಿ ಜಿಲ್ಲೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ಒದಗಿಸುತ್ತಿದ್ದ ಮ್ಯಾನ್ ಪವರ್ ಏಜೆನ್ಸಿಗಳು ಎಸಗಿದ್ದ ಕೋಟ್ಯಂತರ ರೂಪಾಯಿ ಇಪಿಎಫ್ ಮತ್ತು ಇಎಸ್‌ಐ ವಂಚನೆ ಬಯಲಾಗಿದೆ. ಜಿ.ಪಂ. ಸಿಇಒ ಲವೀಶ್ ಒರಡಿಯಾ ಅವರು ಈ ಅಕ್ರಮದ ವಿರುದ್ಧ ಕಾನೂನು ಸಮರ ಸಾರಿದ್ದು, ತಪ್ಪಿತಸ್ಥ ಏಜೆನ್ಸಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಮತ್ತು ಬಡ್ಡಿ ಸಮೇತ ಹಣ ವಸೂಲಿ ಮಾಡಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಯಾದಗಿರಿ: ಜಿಲ್ಲೆಯಲ್ಲಿ ಬಾಹ್ಯ ಗುತ್ತಿಗೆ (ಹೊರಗುತ್ತಿಗೆ) ಆಧಾರದ ಮೇಲೆ ವಿವಿಧ ಸರ್ಕಾರಿ ಇಲಾಖೆಗಳಿಗೆ ಕಾರ್ಮಿಕರನ್ನು ಒದಗಿಸುವ ಟೆಂಡರ್ ಪಡೆದು, ನಂತರ ಕೋಟ್ಯಂತರ ರೂಪಾಯಿ ಆರ್ಥಿಕ ಅಕ್ರಮ ಎಸಗಿದ್ದ ಮಾನವ ಸಂಪನ್ಮೂಲ ಸಂಸ್ಥೆಗಳ (ಮ್ಯಾನ್ ಪವರ್ ಏಜೆನ್ಸಿ) ವಿರುದ್ಧ ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಲವೀಶ್ ಒರಡಿಯಾ ಅವರು ಭರ್ಜರಿ ಕಾನೂನು ಸಮರ ಸಾರಿದ್ದಾರೆ. ಕಾರ್ಮಿಕರ ಶೋಷಣೆ ಹಾಗೂ ಅವರಿಗೆ ಶಾಸನಬದ್ಧವಾಗಿ ಸಿಗಬೇಕಿದ್ದ ನಿಧಿಯನ್ನು ದುರುಪಯೋಗಪಡಿಸಿಕೊಂಡ ಗಂಭೀರ ಆರೋಪದಡಿ, ಹತ್ತಕ್ಕೂ ಹೆಚ್ಚು ಏಜೆನ್ಸಿಗಳ ಮಾಲೀಕರು ಹಾಗೂ ನಿರ್ದೇಶಕರ ವಿರುದ್ಧ ವೈಯಕ್ತಿಕವಾಗಿ ಎಫ್‌ಐಆರ್ (FIR) ದಾಖಲಿಸಲು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ಬೃಹತ್ ಆರ್ಥಿಕ ವಂಚನೆಯ ಹಿನ್ನೆಲೆಯಲ್ಲಿ ಸಿಇಒ ಲವೀಶ್ ಒರಡಿಯಾ ಅವರು ಕಲಬುರಗಿಯಲ್ಲಿರುವ ಇಎಸ್‌ಐ ಜಂಟಿ ನಿರ್ದೇಶಕರು, ಇಪಿಎಫ್ ಆಯುಕ್ತರು ಹಾಗೂ ಉಪ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಗಳಿಗೆ ವಿವರವಾದ ಪತ್ರಗಳನ್ನು ಬರೆದು ತಕ್ಷಣದ ಕ್ರಮಕ್ಕೆ ಕೋರಿದ್ದಾರೆ. ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿ, ಕಾರ್ಮಿಕರ ಹಕ್ಕುಗಳಿಗೆ ದ್ರೋಹ ಬಗೆದ ಏಜೆನ್ಸಿಗಳ ಸಂಪೂರ್ಣ ಪಟ್ಟಿಯನ್ನು ಸಿದ್ಧಪಡಿಸಿ ಈ ಬಿಸಿ ಮುಟ್ಟಿಸಲಾಗಿದೆ.
ಮುಖ್ಯ ಲೆಕ್ಕಾಧಿಕಾರಿಗಳ ತನಿಖೆಯಿಂದ ಬಯಲಾದ ದಶಕದ ಆರ್ಥಿಕ ಹಗರಣ
ಮ್ಯಾನ್ ಪವರ್ ಏಜೆನ್ಸಿಗಳು ಕಾರ್ಮಿಕರ ಭವಿಷ್ಯ ನಿಧಿ (EPF) ಹಾಗೂ ಕಾರ್ಮಿಕರ ರಾಜ್ಯ ವಿಮೆ (ESI) ಹಣವನ್ನು ಸರಿಯಾಗಿ ಪಾವತಿಸುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಜಿ.ಪಂ. ಸಿಇಒ ಲವೀಶ್ ಒರಡಿಯಾ ಅವರು 2010 ರಿಂದ 2020 ರವರೆಗಿನ ಹತ್ತು ವರ್ಷಗಳ ಅವಧಿಯ ನಿಧಿ ಪಾವತಿಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದರು. ಅದರಂತೆ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಗಳ ನೇತೃತ್ವದ ಉನ್ನತ ಮಟ್ಟದ ಸಮಿತಿಯು ತನಿಖೆ ನಡೆಸಿ ವರದಿ ಸಲ್ಲಿಸಿದ್ದು, ಈ ವರದಿಯಲ್ಲಿ ಏಜೆನ್ಸಿಗಳು ನಡೆಸಿರುವ ಆಘಾತಕಾರಿ ಆರ್ಥಿಕ ಅಕ್ರಮದ ಸಂಪೂರ್ಣ ಕರಾಳ ಮುಖ ಬಯಲಾಗಿದೆ.
ಕೋಟ್ಯಂತರ ರೂಪಾಯಿ ಪಿಎಫ್ ಮತ್ತು ಇಎಸ್‌ಐ ಹಣದ ಇಂಗು ತಿನ್ನಿ
ವರದಿಯ ಪ್ರಕಾರ, 2010 ರಿಂದ 2020 ರವರೆಗಿನ ಅವಧಿಯಲ್ಲಿ ಸರ್ಕಾರದಿಂದ ವಿವಿಧ ಮ್ಯಾನ್ ಪವರ್ ಏಜೆನ್ಸಿಗಳಿಗೆ ಕಾರ್ಮಿಕರ ವೇತನ ಮತ್ತು ಭತ್ಯೆಗಾಗಿ ಒಟ್ಟು 23 ಕೋಟಿ 32 ಲಕ್ಷ 45 ಸಾವಿರದ 939 ರೂಪಾಯಿಗಳನ್ನು ಪಾವತಿಸಲಾಗಿತ್ತು. ನಿಯಮಗಳ ಪ್ರಕಾರ, ಈ ಮೊತ್ತದಲ್ಲಿ ಒಟ್ಟು 3 ಕೋಟಿ 71 ಲಕ್ಷ 93 ಸಾವಿರದ 909 ರೂಪಾಯಿಗಳನ್ನು ಇಪಿಎಫ್ (PF) ಖಾತೆಗೆ ಜಮೆ ಮಾಡಬೇಕಾಗಿತ್ತು. ಆದರೆ, ಕಾರ್ಮಿಕರ ಹೊಟ್ಟೆ ಹೊಡೆದ ಏಜೆನ್ಸಿಗಳು ಕೇವಲ 83 ಲಕ್ಷ 31 sಾವಿರದ 018 ರೂಪಾಯಿಗಳನ್ನು ಮಾತ್ರ ಪಾವತಿಸಿ, ಬರೋಬ್ಬರಿ 2 ಕೋಟಿ 88 ಲಕ್ಷ 62 ಸಾವಿರದ 891 ರೂಪಾಯಿಗಳ ಬೃಹತ್ ಮೊತ್ತವನ್ನು ಬಾಕಿ ಉಳಿಸಿಕೊಂಡು ದುರುಪಯೋಗಪಡಿಸಿಕೊಂಡಿದ್ದವು.
ಇದೇ ರೀತಿ ಕಾರ್ಮಿಕರ ಆರೋಗ್ಯ ಸುರಕ್ಷತೆಯ ಇಎಸ್‌ಐ (ESI) ಪಾವತಿಯಲ್ಲೂ ಭಾರಿ ವಂಚನೆ ಎಸಗಲಾಗಿದೆ. ನಿಯಮಾವಳಿಗಳ ಅನ್ವಯ ಒಟ್ಟು 62 ಲಕ್ಷ 10 ಸಾವಿರದ 087 ರೂಪಾಯಿಗಳನ್ನು ಇಎಸ್‌ಐ ಖಾತೆಗೆ ತುಂಬಬೇಕಿದ್ದ ಜಾಗದಲ್ಲಿ, ಏಜೆನ್ಸಿಗಳು ಕೇವಲ 11 ಲಕ್ಷ 47 ಸಾವಿರದ 614 ರೂಪಾಯಿಗಳನ್ನು ಮಾತ್ರ ಪಾವತಿಸಿದ್ದವು. ಈ ಮೂಲಕ 50 ಲಕ್ಷ 62 ಸಾವಿರದ 473 ರೂಪಾಯಿಗಳ ಇಎಸ್‌ಐ ಹಣವನ್ನು ಬಾಕಿ ಉಳಿಸಿಕೊಳ್ಳಲಾಗಿತ್ತು. ಇಪಿಎಫ್ ಮತ್ತು ಇಎಸ್‌ಐ ಎರಡೂ ಸೇರಿ ಆರಂಭಿಕ ಹಂತದಲ್ಲೇ ಅಂದಾಜು 3.39 ಕೋಟಿ ರೂಪಾಯಿಗಳ ಅಸಲು ಮೊತ್ತದ ನೇರ ಬಾಕಿ ಕಂಡುಬಂದಿದೆ.
ವಾರ್ಷಿಕ ಶೇಕಡಾ 12 ರ ಬಡ್ಡಿ ಸೇರಿ 8 ಕೋಟಿ ರೂಪಾಯಿ ಜಪ್ತಿಗೆ ಆದೇಶ
ಕಾರ್ಮಿಕರ ಹಣವನ್ನು ತಮ್ಮ ಸ್ವಂತ ಲಾಭಕ್ಕೆ ಬಳಸಿಕೊಂಡಿರುವ ಏಜೆನ್ಸಿಗಳಿಗೆ ಸಿಇಒ ಲವೀಶ್ ಅವರು ಕಾನೂನಿನ ಸರಿಯಾದ ಪಾಠ ಕಲಿಸಲು ಮುಂದಾಗಿದ್ದಾರೆ. ಇಪಿಎಫ್ ಕಾಯ್ದೆಯ ಸೆಕ್ಷನ್ 7-ಕ್ಯು ಅಡಿಯಲ್ಲಿ, ಬಾಕಿ ಉಳಿಸಿಕೊಂಡ ದಿನಾಂಕದಿಂದ ಅಂದರೆ ಕಳೆದ 14 ವರ್ಷಗಳಿಗೂ ಹೆಚ್ಚಿನ ಅವಧಿಗೆ ವಾರ್ಷಿಕ ಶೇಕಡಾ 12 ರಷ್ಟು ಚಕ್ರಬಡ್ಡಿ ದರವನ್ನು ವಿಧಿಸಲಾಗುತ್ತಿದೆ. ಈ ಬಡ್ಡಿಯ ಲೆಕ್ಕಾಚಾರವನ್ನು ಒಳಗೊಂಡರೆ ಒಟ್ಟು ವಸೂಲಾತಿ ಮೊತ್ತವೇ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿ ಬರೋಬ್ಬರಿ 8 ಕೋಟಿ ರೂಪಾಯಿಗಳಿಗೂ ಹೆಚ್ಚಾಗಲಿದೆ.
ಈ ಹಿನ್ನೆಲೆಯಲ್ಲಿ ಕೇವಲ 7 ದಿನಗಳ ಅಂತಿಮ ಗಡುವನ್ನು ನೀಡಿರುವ ಸಿಇಒ, ಅಷ್ಟರೊಳಗೆ ಏಜೆನ್ಸಿಗಳು ಬಾಕಿ ಮೊತ್ತವನ್ನು ಸಂಪೂರ್ಣವಾಗಿ ಸರ್ಕಾರಿ ಖಜಾನೆಗೆ ಜಮೆ ಮಾಡಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಒಂದು ವೇಳೆ ಈ ವಸೂಲಾತಿ ಪ್ರಕ್ರಿಯೆಗೆ ತಪ್ಪಿದ್ದಲ್ಲಿ, ಮ್ಯಾನ್ ಪವರ್ ಏಜೆನ್ಸಿಗಳ ಮಾಲೀಕರು ಹಾಗೂ ನಿರ್ದೇಶಕರುಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 316 ರ ಅಡಿಯಲ್ಲಿ 'ಕ್ರಿಮಿನಲ್ ನಂಬಿಕೆ ದ್ರೋಹ' (Criminal Breach of Trust) ಆರೋಪದ ಮುಖದ್ದಮೆ ಹೂಡಿ ವೈಯಕ್ತಿಕವಾಗಿ ಎಫ್‌ಐಆರ್ ದಾಖಲಿಸಲು ಕಟ್ಟುನಿಟ್ಟಾಗಿ ತಿಳಿಸಲಾಗಿದೆ.
ಭ್ರಷ್ಟರ ವಿರುದ್ಧ ನಿರಂತರ ಸಮರ ಸಾರಿರುವ ಯಾದಗಿರಿ ಸಿಇಒ ಲವೀಶ್
ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಲವೀಶ್ ಒರಡಿಯಾ ಅವರು ಭ್ರಷ್ಟಾಚಾರ ಮತ್ತು ನಿಯಮ ಉಲ್ಲಂಘನೆಗಳ ವಿರುದ್ಧ ಸರಣಿ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದಾರೆ. ಇತ್ತೀಚೆಗಷ್ಟೇ ಸಾಕ್ಷಿ ಪುರಾವೆಗಳಿಲ್ಲದೆ, ಕೇವಲ ಸ್ವಾರ್ಥ ಹಾಗೂ ದುರುದ್ದೇಶಪೂರಿತವಾಗಿ ಸರ್ಕಾರಿ ಅಧಿಕಾರಿಗಳ ಮೇಲೆ ಸುಳ್ಳು ದೂರುಗಳನ್ನು ಸಲ್ಲಿಸಿ, ನಂತರ ತಪ್ಪು ತಿಳಿವಳಿಕೆ ಅಥವಾ ವೈಯಕ್ತಿಕ ಕಾರಣಗಳನ್ನು ನೀಡಿ ದೂರನ್ನು ಹಿಂಪಡೆಯುವ ಬ್ಲ್ಯಾಕ್‌ಮೇಲ್ ಪ್ರವೃತ್ತಿಯ ಕೆಲವು ಸಂಘಟನೆಗಳು ಹಾಗೂ ನಕಲಿ ಪತ್ರಕರ್ತರು ಸೇರಿದಂತೆ ಒಟ್ಟು 24 ಜನರ ವಿರುದ್ಧ ವಸೂಲಾತಿ ನೋಟಿಸ್ ಜಾರಿ ಮಾಡಿ ಇಡೀ ರಾಜ್ಯದ ಗಮನ ಸೆಳೆದಿದ್ದರು. ಇದರ ಬೆನ್ನಲ್ಲೇ, ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ನಕಲಿ ಬಯೋಮೆಟ್ರಿಕ್ ಹಾಜರಾತಿ ಸೃಷ್ಟಿಸಿ ಸರ್ಕಾರಕ್ಕೆ ವಂಚಿಸುತ್ತಿದ್ದ ಜಿಲ್ಲೆಯ 80 ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (PDO) ನೋಟಿಸ್ ನೀಡಿ ಶಿಸ್ತುಕ್ರಮ ಜರುಗಿಸಿದ್ದರು.
ತನಿಖೆಯ ಮುಂದಿನ ಹಂತ ಮತ್ತು ಕಪ್ಪು ಪಟ್ಟಿ ಭೀತಿ
ಈ ಇಡೀ ಆಡಳಿತಾತ್ಮಕ ಮತ್ತು ಕಾನೂನು ಮುನ್ನಡೆಯ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿರುವ ಸಿಇಒ ಲವೀಶ್ ಒರಡಿಯಾ ಅವರು, 2010 ರಿಂದ 2020 ರವರೆಗಿನ ಮೊದಲ ಹಂತದ ತನಿಖೆ ಈಗ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಇಲಾಖೆಗಳಿಗೆ ಪತ್ರ ಬರೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದರ ಮುಂದುವರಿದ ಭಾಗವಾಗಿ, 2020 ರಿಂದ ಪ್ರಸ್ತುತ 2026 ರವರೆಗಿನ ಇತ್ತೀಚಿನ ಅವಧಿಯಲ್ಲೂ ಮ್ಯಾನ್ ಪವರ್ ಏಜೆನ್ಸಿಗಳು ನಡೆಸಿರುವ ವ್ಯವಹಾರಗಳ ಬಗ್ಗೆ ಎರಡನೇ ಹಂತದ ತನಿಖೆ ಪ್ರಗತಿಯಲ್ಲಿದೆ. ಈ ತನಿಖಾ ವರದಿಯು ಕೈಸೇರಿದ ತಕ್ಷಣವೇ, ಇಪಿಎಫ್ ಹಾಗೂ ಇಎಸ್‌ಐ ಪಾವತಿಸದ ಮತ್ತು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಂಡ ಎಲ್ಲಾ ಗುತ್ತಿಗೆ ಸಂಸ್ಥೆಗಳನ್ನು ಕಾಯಂ ಆಗಿ 'ಕಪ್ಪು ಪಟ್ಟಿ'ಗೆ (Blacklist) ಸೇರಿಸಲಾಗುವುದು ಹಾಗೂ ಅವರ ವಿರುದ್ಧವೂ ಕ್ರಿಮಿನಲ್ ಎಫ್‌ಐಆರ್ ದಾಖಲಿಸಿ ಜೈಲಿಗಟ್ಟುವ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು ಎಂದು ಅವರು ಭ್ರಷ್ಟ ಏಜೆನ್ಸಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.


