ಮೈಸೂರು(ಸೆ.25): ದಸರಾ ಸಂದರ್ಭದಲ್ಲಿ ಸುರಕ್ಷತೆಯ ದೃಷ್ಟಿಯಿಂದ 11,917 ಕ್ಕೂ ಹೆಚ್ಚಿನ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ದಿನದ 24 ಗಂಟೆಯೂ ರೆಕಾರ್ಡ್‌ ಆಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಕೆ.ಟಿ. ಬಾಲಕೃಷ್ಣ ತಿಳಿಸಿದರು.

ದಸರಾ ಮಹೋತ್ಸವವು ಮೈಸೂರು ನಗರದಲ್ಲಿ ಸೆ.29 ರಿಂದ ಅ.8 ರವರೆಗೆ ಜರುಗಲಿದ್ದು, ನಗರದ ವಿವಿಧ ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಈ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

11ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾ:

ಖಾಯಂ ಸಿಸಿಟಿವಿ ಕ್ಯಾಮೆರಾಗಳು ಮತ್ತು ಕರ್ನಾಟಕ ಪಬ್ಲಿಕ್‌ ಸೇಫ್ಟಿ ಮೆಜರ್ಸ್ ಎನ್‌ಫೋರ್ಸ್‌ಮೆಂಟ್‌ ಆಕ್ಟ್- 2017 ಅಡಿ ನಗರದ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರು ಅಳವಡಿಸಿಕೊಂಡಿರುವ ಸುಮಾರು 11917 ಸಿಸಿಟಿವಿ ಕ್ಯಾಮರಾಗಳು ಸೇರಿದಂತೆ ದಸರಾ ಸಮಯದಲ್ಲಿ ಹೆಚ್ಚುವರಿಯಾಗಿ ಮೈಸೂರು ಅರಮನೆ, ಬನ್ನಿಮಂಟಪ ಮೈದಾನ, ಮೆರವಣಿಗೆ ಮಾರ್ಗ ಮತ್ತು ಇತರೇ ಪ್ರಮುಖ ಸ್ಥಳಗಳಲ್ಲಿ ಒಟ್ಟು 212 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ರೌಡಿ ಪರೇಡ್‌ ಮಾಡಿ, ನಗರದ ರೌಡಿಗಳಿಗೆ ದಸರಾ ವೇಳೆ ಯಾವುದೇ ಅಹಿತಕರ ಚಟುವಟಿಕೆಯಲ್ಲಿ ತೊಡಗದಂತೆ ಕಟ್ಟೆಚ್ಚರಿಕೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಮೈಸೂರು: ದಸರಾ ಹಿನ್ನೆಲೆ ಮಾರ್ಗ ಬದಲಾವಣೆ ಎಲ್ಲೆಲ್ಲಿ..?

ಪ್ರವಾಸಿಗರ ಸಹಾಯಕ್ಕಾಗಿ ನಗರದ 20 ಕಡೆಗಳಲ್ಲಿ ಪೊಲೀಸ್‌ ಸಹಾಯ ಕೇಂದ್ರಗಳನ್ನು ಆರಂಭಿಸಿ, ಪ್ರತಿ ಸಹಾಯ ಕೇಂದ್ರಕ್ಕೆ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಮಿತ್ರರು, ಪ್ರವಾಸೋದ್ಯಮ ವಿಭಾಗದ ವಿದ್ಯಾರ್ಥಿಗಳು, ಎನ್‌ಸಿಸಿ ವಿದ್ಯಾರ್ಥಿಗಳನ್ನು ನಿಯೋಜಿಸಲಾಗುವುದು. ಅ.5ರ ಸಂಜೆ 6 ರಿಂದ ರಾತ್ರಿ 8 ರವರೆಗೆ ಪೊಲೀಸ್‌ ವಾದ್ಯ ಮೇಳ ಕಾರ್ಯಕ್ರಮವನ್ನು ಅರಮನೆ ಆವರಣದಲ್ಲಿ ಆಯೋಜಿಸಲಾಗಿಗುವುದು ಎಂದರು.

ಬಾಡಿವೋರ್ನ್‌ ಕ್ಯಾಮೆರಾ ಬಳಕೆ:

ಮೊಬೈಲ್‌ ಕಮಾಂಡ್‌ ಸೆಂಟರ್‌ ಬಸ್ಸನ್ನು ಈ ಬಾರಿ ದಸರಾ ಮಹೋತ್ಸವದಲ್ಲಿ ಬಳಕೆ ಮಾಡಲಾಗುತ್ತಿದೆ. ಈ ಬಸ್ಸಿನಲ್ಲಿ ಸಿಸಿಟಿವಿ ವ್ಯವಸ್ಥೆ ಇದ್ದು, ಬಾಡಿ ವೋರ್ನ್‌ ಕ್ಯಾಮೆ ರಾಗಳು, ಲಾಂಗ್‌ ಡಿಸ್ಟೆನ್ಸ್‌ ವೀಡಿಯೋಗ್ರಫಿ ಮತ್ತು ಫೋಟೊಗ್ರಫಿಗಳನ್ನು ತೆಗೆಯುವ ವ್ಯವಸ್ಥೆ ಇರುತ್ತದೆ. ಅರಮನೆ ಮತ್ತು ಬನ್ನಿಮಂಟಪದ ಎಲ್ಲ ಪ್ರವೇಶ ದ್ವಾರಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಬಾಡಿವೋರ್ನ್‌ ಕ್ಯಾಮೆರಾ ವಿತರಿಸಲಾಗುತ್ತದೆ. ಅಲ್ಲಿನ ಸಂಪೂರ್ಣ ದೃಶ್ಯಾವಳಿ ಈ ಕ್ಯಾಮರಾಗಳಲ್ಲಿ ಮತ್ತು ಮೊಬೈಲ್‌ ಕಮಾಂಡ್‌ ಸೆಂಟರ್‌ನಲ್ಲಿ ರೆಕಾರ್ಡ್‌ ಆಗುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದರು.

ನುರಿತ ಅಧಿಕಾರಿಗಳ ನಿಯೋಜನೆ:

ಅಪರಾಧಗಳನ್ನು ತಡೆಗಟ್ಟಲು ಬೆಂಗಳೂರು ಸಿಸಿಬಿ ಪೊಲೀಸರ ತಂಡ ಹಾಗೂ ಸಿಐಡಿ ಮಾದಕ ದ್ರವ್ಯ ತಡೆ ತಂಡ ಸೇರಿದಂತೆ ಅಕ್ಕಪಕ್ಕದ ಜಿಲ್ಲೆ ಮತ್ತು ರಾಜ್ಯಗಳಿಂದ ನುರಿತ ಅಪರಾಧ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ವೃತ್ತಿನಿರತ ಹಳೆಯ ಪಿಕ್‌ಪಾಕೆಟ​ರ್ಸ್, ಬ್ಯಾಗ್‌, ಸೂಟ್‌ಕೇಸ್‌ ಲಿಫ್ಟರ್‌ ಹಾಗೂ ಇತರೇ ಕಳುವು ಪ್ರಕರಣಗಳ ಅಪರಾಧಿಗಳ ವಿರುದ್ಧ ಭದ್ರತಾ ಕಾಯ್ದೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಈ ಸರ್ಕಾರಿ ಕಂಪನಿ ಎಲ್ಲಾ ನೌಕರರಿಗೂ ದಸರಾಗೆ ತಲಾ 1 ಲಕ್ಷ ರು. ಬೋನಸ್‌!

ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಅಪರಾಧಗಳ ನಿಯಂತ್ರಣ ಸಂಬಂಧ ಸಾರ್ವಜನಿಕರು ಮಾಡಬೇಕಾದ ಮತ್ತು ಮಾಡಬಾರದ ಕಾರ್ಯಗಳ ಬಗ್ಗೆ ಕರಪತ್ರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ಹಂಚಲಾಗುತ್ತದೆ. ದಸರಾ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಲ್ಲಿ ತಕ್ಷಣ ಪೊಲೀಸ್‌ ವ್ಯವಸ್ಥೆ ಸ್ಥಳಕ್ಕೆ ತೆರಳಲು ಉತ್ತಮವಾದ ಗಸ್ತು ವಾಹನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿವಿಧ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಮುಂಚಿತವಾಗಿಯೇ 16 ಅಗ್ನಿ ಶಾಮಕ ದಳ ಮತ್ತು 16 ಆ್ಯಂಬು ಲೆನ್ಸ್‌ಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಅವರು ಹೇಳಿದರು. ಡಿಸಿಪಿಗಳಾದ ಎಂ. ಮುತ್ತುರಾಜು, ಬಿ.ಟಿ. ಕವಿತಾ, ಚನ್ನಯ್ಯ, ಅಶ್ವರೋಹಿ ದಳದ ಕಮಾಂಡೆಂಟ್‌ ನಾಗರಾಜು ಇದ್ದರು.

ಮೈಸೂರು ದಸರಾ: KSRTCಯಿಂದ ವಿಶೇಷ ಪ್ರವಾಸ ಪ್ಯಾಕೇಜ್..ಮಿಸ್ ಮಾಡ್ಕೊಬೇಡಿ