Karwar: ಖಾಲಿಯಾದ ಸೂಪಾ ಜಲಾಶಯ: 40 ವರ್ಷಗಳಿಗೂ ಹಿಂದಿನ ಅವಶೇಷಗಳು ಪತ್ತೆ
ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಎತ್ತರದ ಡ್ಯಾಂ ಎಂದೆನಿಸಿಕೊಂಡಿರುವ ಸೂಪಾ ಡ್ಯಾಂನಲ್ಲಿ ಮುಕ್ಕಾಲು ಭಾಗಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ನೀರು ಖಾಲಿಯಾಗಿದೆ. ಇದರಿಂದಾಗಿ ಸಾವಿರಾರು ಎಕರೆ ಜಲಾಶಯ ಪ್ರದೇಶ ನೀರಿಲ್ಲದೇ ಸಂಪೂರ್ಣ ಖಾಲಿಯಾಗಿ ಭೂ ಭಾಗವೇ ಕಾಣಿಸತೊಡಗಿದೆ.
ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಕಾರವಾರ (ಜೂ.21): ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಎತ್ತರದ ಡ್ಯಾಂ ಎಂದೆನಿಸಿಕೊಂಡಿರುವ ಸೂಪಾ ಡ್ಯಾಂನಲ್ಲಿ ಮುಕ್ಕಾಲು ಭಾಗಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ನೀರು ಖಾಲಿಯಾಗಿದೆ. ಇದರಿಂದಾಗಿ ಸಾವಿರಾರು ಎಕರೆ ಜಲಾಶಯ ಪ್ರದೇಶ ನೀರಿಲ್ಲದೇ ಸಂಪೂರ್ಣ ಖಾಲಿಯಾಗಿ ಭೂ ಭಾಗವೇ ಕಾಣಿಸತೊಡಗಿದೆ. ಈ ನಡುವೆ ಜಲಾಶಯ ಭಾಗದಲ್ಲಿ 40 ವರ್ಷಗಳಿಗೂ ಹಿಂದಿನ ಜನ ಜೀವನದ ಅವಶೇಷಗಳು ಪತ್ತೆಯಾಗಿದ್ದು, ಇವುಗಳನ್ನು ನೋಡಲು ಸ್ಥಳೀಯರು ಹಾಗೂ ಪ್ರವಾಸಿಗರು ವಿವಿಧೆಡೆಯಿಂದ ಇಲ್ಲಿಗೆ ಆಗಮಿಸುತ್ತಿದ್ದಾರೆ. ಅಲ್ಲದೇ, ತಮ್ಮ ಅಜ್ಜ ಅಜ್ಜಿಯಂದಿರ, ಪೋಷಕರ ಕಾಲದ ನೆನಪುಗಳನ್ನು ಮತ್ತೆ ಮೆಲುಕು ಹಾಕುತ್ತಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ.
ಅವರು 40 ವರ್ಷಗಳ ಹಿಂದೆ ಕರ್ನಾಟಕದ ಅಭಿವೃದ್ಧಿಗಾಗಿ ತಮ್ಮ ಆಸ್ತಿ- ಪಾಸ್ತಿಗಳನ್ನು ತ್ಯಾಗ ಮಾಡಿ ಇನ್ನೆಲ್ಲೋ ನೆಲೆಯಾದವರು. ಕೆಲವರಿಗೆ ಸರಕಾರ ಉದ್ಯೋಗ, ಪರಿಹಾರ ನೀಡಿದರೂ, ಇನ್ನು ಕೆಲವರಿಗಂತೂ ಈವರೆಗೂ ಏನೂ ಒದಗಿಸಿಲ್ಲ. ಆದರೂ, ಅವರು ಬಿಟ್ಟು ಕೊಟ್ಟ ಸಾವಿರಾರು ಎಕರೆಗಟ್ಟಲೆ ಜಾಗದಲ್ಲಿ ರಾಜ್ಯ ಸರಕಾರ ಕುಡಿಯುವ ನೀರಿನ ಸಂಗ್ರಹಣಾ ಯೋಜನೆಯಾದ ಜಲಾಶಯವನ್ನು ನಿರ್ಮಾಣ ಮಾಡೋದ್ರೊಂದಿಗೆ ಇಡೀ ರಾಜ್ಯಕ್ಕೆ ಬೇಕಾಗುವ ವಿದ್ಯುತ್ ಉತ್ಪಾದನೆ ಕೂಡಾ ಮಾಡಿಕೊಂಡು ಬಂದಿದೆ. ಇದು ಉತ್ತರಕನ್ನಡ ಜಿಲ್ಲೆಯ ಸೂಪಾ ಅನ್ನೋ ತಾಲೂಕಿನಲ್ಲಿದ್ದ ಹಲವು ಗ್ರಾಮಗಳ ಜನರ ಸ್ಟೋರಿ. ಇಂದಿನ ಜೊಯಿಡಾ ತಾಲೂಕು 40 ವರ್ಷಗಳ ಹಿಂದೆ ಸೂಪಾ ತಾಲೂಕು ಎಂದೇ ಗುರುತಿಸಿಕೊಂಡಿತ್ತು.
ಶಾಲ್ಮಲಾ ನದಿಯಲ್ಲಿ ಕಾಣೆಯಾಗುತ್ತಿದೆ ಸಹಸ್ರಲಿಂಗಗಳು...!
ಆದರೆ, ಜಲಾಶಯ ನಿರ್ಮಾಣದೊಂದಿಗೆ ಈ ಹೆಸರು ಕೇವಲ ಡ್ಯಾಂಗೆ ಮಾತ್ರ ಸೀಮಿತವಾಗಿದೆ. ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿರೋದ್ರಿಂದ ಹಾಗೂ ಭಾರೀ ಪ್ರಮಾಣದಲ್ಲಿ ನೀರು ಹೊರಕ್ಕೆ ಬಿಟ್ಟಿರೋದ್ರಿಂದ ಜೊಯಿಡಾದ ಸೂಪಾ ಡ್ಯಾಂನಲ್ಲಿ ನೀರಿನ ಸಂಗ್ರಹ ಪ್ರಮಾಣ ಕೇವಲ ಕಾಲು ಭಾಗದಷ್ಟು ಮಾತ್ರವಿದ್ದು, ಇದರಿಂದಾಗಿ ನೀರು ಸಂಗ್ರಹವಾಗುತ್ತಿದ್ದ ಸುತ್ತಲಿನ ಸಾವಿರಾರು ಎಕರೆ ಪ್ರದೇಶ ಖಾಲಿಯಾಗಿ ನೆಲ ಮಾತ್ರ ಕಾಣುತ್ತಿದೆ. ಇಲ್ಲಿ ಭೂ ಭಾಗ ಕಾಣುವುದರೊಂದಿಗೆ 40 ವರ್ಷಗಳಿಗೂ ಹಿಂದೆ ಈ ಭಾಗದಲ್ಲಿ ಹಲವು ಗ್ರಾಮಗಳು ಅಳಿದು ಹೋದದ್ದಕ್ಕೆ ಕುರುಹು ಎಂಬಂತೆ ಪಾಳುಬಿದ್ದ ಮನೆ, ಬಾವಿ, ತುಂಡಾದ ಮಡಿಕೆಗಳು, ಕಲ್ಲಿನ ವಸ್ತುಗಳು, ಪಾಳುಬಿದ್ದ ದೇವಸ್ಥಾನ, ಬಸವನ ಮೂರ್ತಿ ಮುಂತಾದವುಗಳು ಕಾಣತೊಡಗಿವೆ.
ತಮ್ಮ ಅಜ್ಜಂದಿರ ಕಾಲದಲ್ಲಿ, ತಮ್ಮ ಪೋಷಕರ ಕಾಲದಲ್ಲಿ ಈ ಪ್ರದೇಶದಲ್ಲಿ ಕಳೆದುಕೊಂಡ ಆಸ್ತಿ-ಪಾಸ್ತಿಗಳ ಸ್ಥಳಗಳನ್ನು ನೋಡಲು ಜೊಯಿಡಾ, ರಾಮನಗರ, ದಾಂಡೇಲಿ ಮುಂತಾದೆಡೆಯಿಂದ ಜನರು ಆಗಮಿಸಿ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ. ಅಂದಹಾಗೆ, 1974ರಲ್ಲಿ ರಾಜ್ಯ ಸರಕಾರದ ನಿರ್ದೇಶನದಂತೆ ಹಿಂದೂಸ್ಥಾನ್ ಸ್ಟೀಲ್ ವರ್ಕ್ಸ್ ಕನ್‌ಸ್ಟ್ರಕ್ಷನ್ ಲಿಮಿಟೆಡ್ ಸೂಪಾ ಡ್ಯಾಂ ನಿರ್ಮಾಣ ಪ್ರಾರಂಭಿಸಿದ್ದು, 1987ರಲ್ಲಿ 564 ಮೀಟರ್ ಎತ್ತರದ ಡ್ಯಾಂ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿತ್ತು. ಇದಕ್ಕಾಗಿ ಸೂಪಾದಲ್ಲಿದ್ದ ಹಲವು ಗ್ರಾಮಗಳ ಜನರನ್ನು ರಾಮನಗರ, ಜೊಯಿಡಾ, ದಾಂಡೇಲಿ ಮುಂತಾದೆಡೆ ಸ್ಥಳಾಂತರಗೊಳಿಸಿ ಸಾವಿರಾರು ಎಕರೆ ಪ್ರದೇಶದ ಭೂ ಭಾಗವನ್ನು ಜಲಾಶಯಕ್ಕಾಗಿ ಬಳಸಲಾಗಿತ್ತು.
ಆದರೆ, ಈ ಬಾರಿ ಮಾತ್ರ ಜಲಾಶಯದ ನೀರು ನೆಲಮಟ್ಟಕ್ಕೆ ಬಂದಿರೋದ್ರಿಂದ ಈ ಹಿಂದೆ ಮುಳುಗಡೆಯಾಗಿದ್ದ ಆಸ್ತಿ- ಪಾಸ್ತಿಗಳು, ಧಾರ್ಮಿಕ ಕೇಂದ್ರಗಳು ಗೋಚರಿಸಲ್ಪಡುತ್ತಿವೆ. ಪೋಷಕರಿಂದ "ಸೂಪಾ ಅನ್ನೋ ಊರೊಂದಿತ್ತು.. ಅಲ್ಲಿ ನಾವು ನೆಲೆಸಿದ್ವಿ" ಅನ್ನೋ ಕಥೆಯನ್ನು ಕೇಳಿದ್ದ ಜನರು ಹಾಗೂ ಸಣ್ಣ ಪ್ರಾಯದಲ್ಲೇ ಸೂಪಾದಿಂದ ತೆರಳಿದ್ದ ಹಿರಿಯರು ಮತ್ತೆ ಈ ಸ್ಥಳಕ್ಕೆ ಭೇಟಿ ನೀಡಿ ಎಲ್ಲೆಡೆ ವೀಕ್ಷಿಸಿ ಭಾವುಕರಾಗುತ್ತಿದ್ದಾರೆ. ಅಲ್ಲದೇ ವಿವಿಧೆಡೆಯಿಂದ ಪ್ರವಾಸಿಗರು ಕೂಡಾ ಕುಟುಂಬಸ್ಥರೊಂದಿಗೆ, ಗೆಳೆಯರೊಂದಿಗೆ ಇಲ್ಲಿಗೆ ಭೇಟಿ ನೀಡಿ ಫೋಟೊ ಕ್ಲಿಕ್ಕಿಸಿ ತೆರಳುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ 222 ಝೋನ್‌ಗಳಲ್ಲಿ ನೆಟ್‌ವರ್ಕ್ ಇಲ್ಲ: ಪ್ರವಾಸಿಗರಿಗೂ ಸಮಸ್ಯೆ
ಸದ್ಯಕ್ಕೆ ಈ ಪ್ರದೇಶವಂತೂ ಪ್ರವಾಸಿಗರ ಫೇವರೇಟ್ ಸ್ಪಾಟ್ ಆಗಿದೆ. ಇನ್ನು ಇಲ್ಲಿ ದೊರಕುತ್ತಿರುವ ಹಳೇ ಕಾಲದ ವಸ್ತುಗಳನ್ನು ನೆನಪಿನ ರೂಪದಲ್ಲಿ ಪುರಾತತ್ವ ಇಲಾಖೆಯಲ್ಲಿ ಸಂಗ್ರಹ ಮಾಡುವ ವ್ಯವಸ್ಥೆಗಳನ್ನು ಕೂಡಾ ಕೈಗೊಳ್ಳಲಾಗುತ್ತಿದೆ. ಒಟ್ಟಿನಲ್ಲಿ ಸೂಪಾ ಡ್ಯಾಂನಲ್ಲಿ ನೀರು ಸಂಗ್ರಹ ಪ್ರಮಾಣ ಭಾರೀ ಕಡಿಮೆಯಾಗಿರೋದ್ರಿಂದ ತಮ್ಮ ಹಿರಿಯರ ಕಾಲದಲ್ಲಿ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡ ಜನರು ಇಲ್ಲಿಗೆ ಭೇಟಿ ನೀಡಿ ಹಳೇ ಕಥೆಗಳನ್ನು, ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ. ಅಲ್ಲದೇ, ಇಲ್ಲಿ ದೊರಕುವ ವಸ್ತುಗಳನ್ನು ಸಂಗ್ರಹಿಸಿಡುವಂತೆ ಕೋರಿಕೊಳ್ಳುತ್ತಿದ್ದಾರೆ.