Asianet Suvarna News Asianet Suvarna News

ಉತ್ತರ ಕನ್ನಡ ಜಿಲ್ಲೆಯ 222 ಝೋನ್‌ಗಳಲ್ಲಿ ನೆಟ್‌ವರ್ಕ್ ಇಲ್ಲ: ಪ್ರವಾಸಿಗರಿಗೂ ಸಮಸ್ಯೆ

ಉತ್ತರ ಕನ್ನಡ ಜಿಲ್ಲೆ ಪ್ರವಾಸಿಗರ ಅತ್ಯಂತ ನೆಚ್ಚಿನ ತಾಣ. ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ, ಇಲ್ಲಿನ ಸಾಕಷ್ಟು ಪ್ರದೇಶಗಳಿಗೆ ಜನರು ಭೇಟಿ ನೀಡಿದ್ರೆ ಫುಲ್ ನಾಟ್ ರೀಚೇಬಲ್. 

Network Problem in 222 Zones in Uttara Kannada District gvd
Author
Bangalore, First Published Jun 13, 2022, 12:10 AM IST

ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಜೂ.13): ಉತ್ತರ ಕನ್ನಡ ಜಿಲ್ಲೆ ಪ್ರವಾಸಿಗರ ಅತ್ಯಂತ ನೆಚ್ಚಿನ ತಾಣ. ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ, ಇಲ್ಲಿನ ಸಾಕಷ್ಟು ಪ್ರದೇಶಗಳಿಗೆ ಜನರು ಭೇಟಿ ನೀಡಿದ್ರೆ ಫುಲ್ ನಾಟ್ ರೀಚೇಬಲ್. ಯಾಕಂದ್ರೆ, ಜಿಲ್ಲೆಯ ಬಹುತೇಕ ಸ್ಥಳಗಳಲ್ಲಿ ನೆಟ್‌ವರ್ಕ್‌ ಇಲ್ಲ. ಈ ಸಮಸ್ಯೆ ಕೇವಲ ಪ್ರವಾಸಿಗರಿಗೆ ಮಾತ್ರವಲ್ಲದೇ, ಜಿಲ್ಲಾಡಳಿತಕ್ಕೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಳೆಗಾಲದಲ್ಲಂತೂ ಜಿಲ್ಲೆಯಲ್ಲಿ ಭಾರೀ ನೆರೆ ಕಾಟ ಉಂಟಾಗುವುದರಿಂದ ನೆಟ್‌ವರ್ಕ್ ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಜನರನ್ನು ಸಂಪರ್ಕ ಮಾಡಲೇ ಸಾಧ್ಯವಾಗುತ್ತಿಲ್ಲ. 

ಇದಕ್ಕಾಗಿ ಜಿಲ್ಲಾಡಳಿತ ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಲು ಮುಂದಾಗಿದೆ. ಅದೇನು ಅಂತೀರಾ. ಈ ಸ್ಟೋರಿ ನೋಡಿ.  ಉತ್ತರ ಕನ್ನಡ ಜಿಲ್ಲೆ ಅಂದ್ರೆ ಶೇ. 65ರಷ್ಟು ಅರಣ್ಯ, ಬೆಟ್ಟ ಗುಡ್ಡಗಳು, ಜಲಪಾತ ಹಾಗೂ ಹಲವು ಕಡಲತೀರಗಳನ್ನು ಹೊಂದಿರುವ ಜಿಲ್ಲೆ. ಈ ಜಿಲ್ಲೆಗೆ ಪ್ರತೀ ದಿನ ಸಾವಿರಾರು ಪ್ರವಾಸಿಗರು ದೇಶ- ವಿದೇಶಗಳಿಂದ ಭೇಟಿ ಕೊಡುತ್ತಾರೆ. ಆದರೆ, ಇಷ್ಟೊಂದು ಪ್ರಕೃತಿ ಶ್ರೀಮಂತ ಜಿಲ್ಲೆಯಲ್ಲಿ ಕಾಡುವ ಪ್ರಮುಖ ಸಮಸ್ಯೆಗಳಲ್ಲೊಂದು ನೆಟ್‌ವರ್ಕ್. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ನೆಟ್‌ವರ್ಕ್ ಸಿಗದೇ ಇರುವ ಕಾರಣ ಜಿಲ್ಲೆಯ ಜನರು, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಮಾತ್ರವಲ್ಲದೇ, ಜಿಲ್ಲಾಡಳಿತಕ್ಕೂ ಇದರ ಬಿಸಿ ತಟ್ಟುತ್ತಿದೆ. 

ಮಳೆ ಬಂದರೆ ಹೊರಸಂಪರ್ಕವೇ ಕಡಿತ: ವರ್ಷದಲ್ಲಿ 5 ತಿಂಗಳು ವಾಹನ ಸಂಚಾರ ವಂಚಿತ ಗ್ರಾಮಸ್ಥರು..!

ಉತ್ತರ ಕನ್ನಡ ಜಿಲ್ಲಾಡಳಿತ ಗುರುತಿಸಿದಂತೆ ಜಿಲ್ಲೆಯ 152 ಗ್ರಾಮಗಳು ಮತ್ತು 17 ನಗರ ಭಾಗದ ವಾರ್ಡ್‌ಗಳು ಪ್ರತೀ ಬಾರಿ ಮಳೆಗಾಲದಲ್ಲಿ ಪ್ರವಾಹದ ಸಮಸ್ಯೆ ಎದುರಿಸುತ್ತಿವೆ. ಆ ಸಂದರ್ಭದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರನ್ನು ಸಂಪರ್ಕಿಸಿ ಅವರನ್ನು ಸುರಕ್ಷಿತ ತಾಣಕ್ಕೆ ತರುವುದೇ ದೊಡ್ಡ ಹರಸಾಹಸ. ಈ ನಡುವೆ ಜಿಲ್ಲೆಯ ಸುಮಾರು 222 ಝೋನ್‌ಗಳು ಸಂಪೂರ್ಣ ನೆಟ್‌ವರ್ಕ್ ಸಮಸ್ಯೆಯಿಂದ ಕೂಡಿವೆ. ಕಿಂಚಿತ್ತೂ ನೆಟ್‌ವರ್ಕ್ ಇರದ ಪ್ರದೇಶಗಳಲ್ಲಿ ಪ್ರವಾಹ ಬಂದ್ರೆ ಜನರನ್ನು ಸಂಪರ್ಕ ಮಾಡುವುದೇ ದೊಡ್ಡ ಕಷ್ಟ. ಈ ಕಾರಣದಿಂದ ಈ ಪ್ರದೇಶಗಳ ಜನರನ್ನು ಹೇಗೆ ಸಂಪರ್ಕ ಮಾಡುವುದು? ಅವರನ್ನು ಹೇಗೆ ರಕ್ಷಣೆ ಮಾಡೋದು? ಅನ್ನೋದೇ ಜಿಲ್ಲಾಡಳಿತದ ಮುಂದಿರುವ ದೊಡ್ಡ  ಪ್ರಶ್ನೆ. 

ಈ ಸಮಸ್ಯೆಯ ಒಂದು ಹಂತದ ನಿವಾರಣೆಗಾಗಿ ಸ್ಯಾಟಲೈಟ್ ಫೋನ್, ವೈರ್ ಲೆಸ್ ಸಿಸ್ಟಮ್, ಮೊಬೈಲ್ ರೇಂಜ್, ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಚೆಕ್ ಪೋಸ್ಟ್‌ಗಳನ್ನು ಬಳಸಿಕೊಂಡು ಜಿಲ್ಲಾಡಳಿತ ಕಮ್ಯೂನಿಕೇಷನ್ ಪ್ಲ್ಯಾನ್ ಮಾಡಿಕೊಂಡಿದೆ. ಹೌದು! ಜಿಲ್ಲೆಯಲ್ಲಿ‌ ನೆಟ್‌ವರ್ಕ್ ರಹಿತ ಪ್ರದೇಶಗಳಲ್ಲಿ ಜನರ ರಕ್ಷಣೆಗಾಗಿ ಜಿಲ್ಲಾಡಳಿತ ವಿವಿಧ ರೀತಿಯ ಕಮ್ಯೂನಿಕೇಶನ್ ಪ್ಲ್ಯಾನ್‌ಗಳೊಂದಿಗೆ  ಆಪ್ತ ಮಿತ್ರ ಎಂಬ ಯೋಜನೆಯಡಿ ಗ್ರಾಮಗಳ ಯುವಕರಿಗೆ ಟ್ರೈನಿಂಗ್ ಕೊಟ್ಟು ಪ್ರವಾಹ ಸಂದರ್ಭದಲ್ಲಿ ರಕ್ಷಣಾ ತಂಡಗಳ ಜತೆ ಕೈ ಜೋಡಿಸುವಂತೆ ಮಾಡಲಾಗುತ್ತದೆ. 

ಸಾಧ್ಯವಾದಷ್ಟು ಪ್ರದೇಶಗಳಲ್ಲಿ ಸಿಬ್ಬಂದಿಗಳು ವಯರ್‌ಲೆಸ್ ಸಿಸ್ಟಂ ಬಳಸಿಕೊಂಡರೆ, ಎಲ್ಲಿ ವಯರ್‌ಲೆಸ್ ಹಾಗೂ ರೇಂಜ್ ದೊರೆಯುವುದಿಲ್ಲವೋ ಅಲ್ಲಿ ರನ್ನರ್ಸ್‌ಗಳ ನೇಮಕ ಮಾಡಲಾಗುತ್ತಿದೆ. ಈ ರನ್ನರ್ಸ್‌ಗಳು ಓಡಿಕೊಂಡೇ ಹೋಗಿ ವಯರ್‌ಲೆಸ್ ವ್ಯಾಪ್ತಿಯಲ್ಲಿ ಅಥವಾ ನೆಟ್‌ವರ್ಕ್ ದೊರೆಯುವ ಕಡೆ ತೆರಳಿ ಕರೆ ಮಾಡಿ ಮಾಹಿತಿ ನೀಡಿ, ತಮಗೆ ದೊರೆಯುವ ನಿರ್ದೇಶನವನ್ನು ಸಂಬಂಧಪಟ್ಟ ಸ್ಥಳಗಳಿಗೆ ತಲುಪಿಸುತ್ತಾರೆ. ಈ ತಿಂಗಳ ಒಳಗಾಗಿ ಈ ಎಲ್ಲಾ ಸಿಸ್ಟಂಗಳ ಕುರಿತಂತೆ ಜಿಲ್ಲಾಡಳಿತ ಅಣುಕು ಕಾರ್ಯಾಚರಣೆ ಮಾಡಿಸಲಿದ್ದು, ಈ ಮೂಲಕ ಕಮ್ಯುನಿಕೇಶನ್ ವ್ಯವಸ್ಥೆಯಲ್ಲಿ ಎಲ್ಲಿ ಕೊರತೆಯುಂಟಾಗುತ್ತದೆ, ಎಲ್ಲಿ ಸರಿಪಡಿಸಿಕೊಳ್ಳಬೇಕು ಅನ್ನೋ‌ ನಿರ್ಧಾರಕ್ಕೆ ಬರಲಿದೆ. 

Uttara Kannada: ಭೂ ಕುಸಿತದಂತಹ ಸಮಸ್ಯೆಗಳನ್ನು ನಿಭಾಯಿಸಲು ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಪ್ಲ್ಯಾನ್!

ಸದ್ಯಕ್ಕೆ ಜಿಲ್ಲಾಡಳಿತ ನೆಟ್‌ವರ್ಕ್ ಸಮಸ್ಯೆಯನ್ನು ಯಾವ‌ ರೀತಿಯಲ್ಲಿ ಎದುರಿಸಲಿದೆ ಅನ್ನೋ ಸವಾಲು ಜನರ ಮುಂದೆ ಇದೆಯಾದ್ರೂ, ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಡಳಿತ ಕೈಗೊಂಡಿರುವ ನಿರ್ಧಾರದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಪ್ರವಾಸಿಗರ ಸ್ವರ್ಗ ಎಂದೆನಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಟ್‌ವರ್ಕ್ ಸಮಸ್ಯೆ ಭಾರೀ ಕಾಡುತ್ತಿದ್ದು, ಮಳೆಗಾಲದ ಸಮಯದಲ್ಲಿ ಇದನ್ನು ಎದುರಿಸಲು ಜಿಲ್ಲಾಡಳಿತ ಕೆಲವು ಕ್ರಮಗಳನ್ನು ಕೈಗೊಂಡಿದೆ. ಆದರೆ, ಜನರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಈ ವ್ಯವಸ್ಥೆ ಸಫಲವಾಗುವ ರೀತಿಯಲ್ಲಿ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಈ ಬಾರಿಯೂ ಸಂಕಷ್ಟ ತಪ್ಪಿದ್ದಲ್ಲ. 

Follow Us:
Download App:
  • android
  • ios